Homeಮುಖಪುಟವೈದಿಕ ಗ್ರಂಥಗಳಲ್ಲಿನ ಖಗೋಳ ವಿಜ್ಞಾನದ ಮಾಹಿತಿ ನಿಖರವಾದುದೇ?

ವೈದಿಕ ಗ್ರಂಥಗಳಲ್ಲಿನ ಖಗೋಳ ವಿಜ್ಞಾನದ ಮಾಹಿತಿ ನಿಖರವಾದುದೇ?

- Advertisement -
- Advertisement -

“ತಮ್ಮ ದೇಶಕ್ಕಿಂತ ಮಿಗಿಲಾದ ಮತ್ತೊಂದು ದೇಶವಿಲ್ಲ, ತಮ್ಮ ರಾಷ್ಟ್ರದಂತಹ ರಾಷ್ಟ್ರ ಮತ್ತೊಂದಿಲ್ಲ, ತಮ್ಮ ರಾಜರಂತಹ ರಾಜರು ಬೇರೆಲ್ಲೂ ಇಲ್ಲ, ತಮ್ಮ ಧರ್ಮದಂತಹ ಧರ್ಮ ಬೇರಾವುದೂ ಇಲ್ಲ, ತಮ್ಮ ವಿಜ್ಞಾನದಂತಹ ವಿಜ್ಞಾನ ಮತ್ತೊಂದಿಲ್ಲ ಎಂದು ಹಿಂದೂಗಳು ನಂಬುತ್ತಾರೆ. ತಮಗೆ ಗೊತ್ತಿರುವುದನ್ನು ಇತರರಿಗೆ ತಿಳಿಸುವಲ್ಲಿ ಅವರು ಅತ್ಯಂತ ಜಿಪುಣರು, ಹಾಗೂ ತಮ್ಮವರೇ ಆದ ಆದರೆ ಬೇರೆ ಜಾತಿಯೊಂದರ ವ್ಯಕ್ತಿಗೆ ಅದು ತಿಳಿಯದಿರುವಂತೆ ಏನೆಲ್ಲ ಪ್ರಯತ್ನ ಮಾಡಬೇಕೋ ಮಾಡುತ್ತಾರೆ, ವಿದೇಶೀಯರೊಂದಿಗೆ ಹಂಚಿಕೊಳ್ಳುವಲ್ಲಿಯಂತೂ ಇನ್ನೂ ಜಿಪುಣತನ ತೋರಿಸುತ್ತಾರೆ” ಎನ್ನುತ್ತಾನೆ ಹತ್ತನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಪ್ರಸಿದ್ಧ ಅರಬ್ಬೀ ಪಂಡಿತ ಅಲ್ ಬರುನಿ.

ಆದರೆ ಇವರ ಆಷಾಢಭೂತಿತನವನ್ನು 17ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರವಾಸ ಮಾಡಿದ ಇಟಲಿಯ ಪ್ರವಾಸಿ ನಿಕೊಲಾಒ ಮನುಕ್ಕಿ ತನ್ನ ಪ್ರವಾಸ ಕಥನ ’ಸ್ಟೊರಿಯಾ ದೆ ಮೊಗೋರ್’ನಲ್ಲಿ (ಸಂಪುಟ 3 ಪುಟ 61) ಚೆನ್ನಾಗಿ ವಿವರಿಸುತ್ತಾನೆ. “ಬ್ರಾಹ್ಮಣರ ನಡವಳಿಕೆ ಮತ್ತು ಅವರ ಹೆಮ್ಮೆ ಅವರ ಮೂರ್ಖತನಕ್ಕೆ ಸಮಾನವಾಗಿದೆ. ಏಕೆಂದರೆ ಅವರು ತಾವೇ ದೇವರುಗಳೆಂದು ಯಾವ ಸಂಕೋಚವಿಲ್ಲದೇ ಕೊಚ್ಚಿಕೊಳ್ಳುತ್ತಾರೆ ಮತ್ತು ಆ ಕಾರಣದಿಂದ ಬೇರೆ ಎಲ್ಲಾ ಜಾತಿಗಳು ಅವರನ್ನು ಗೌರವಿಸಬೇಕು ಮತ್ತು ಆರಾಧಿಸಬೇಕು ಎಂದು ಒತ್ತಾಯಿಸುತ್ತಾರೆ. ಆದರೆ ಅವರ ಈ ಆಡಂಬರ ಖಂಡಿತವಾಗಿಯೂ ಸಮರ್ಥನೀಯವಲ್ಲ. ಏಕೆಂದರೆ ಎಲ್ಲರಲ್ಲೂ ಕೆಲವು ದುಷ್ಟ ಲಕ್ಷಣಗಳಿದ್ದರೂ, ಉಳಿದ ಎಲ್ಲ ಲಕ್ಷಣಗಳೂ ಒಳ್ಳೆಯ ಲಕ್ಷಣಗಳಾಗಿರುತ್ತವೆ. ಆದರೆ ಬ್ರಾಹ್ಮಣರಲ್ಲಿ ಮಾತ್ರ ನಿಸ್ಸಂದೇಹವಾಗಿ ಸ್ವಲ್ಪವಾದರೂ ಒಳ್ಳೆಯ ಲಕ್ಷಣಗಳಿರದೇ ಅವರಲ್ಲಿ ದುಷ್ಟತನವಲ್ಲದೇ ಬೇರೇನೂ ದೊರಕುವುದಿಲ್ಲ.”

ಪ್ರಾಚೀನ ಭಾರತದ ಹಿಂದೂ ಗ್ರಂಥಗಳಲ್ಲಿ ಹೇರಳವಾದ ವಿಜ್ಞಾನ ತುಂಬಿಕೊಂಡಿದೆ ಎಂದೆಲ್ಲ ಹಿಂದೂ ಮತಾಂಧರು ವಾದಿಸುತ್ತಾರೆ. ರೈಟ್ ಸಹೋದರರಿಗಿಂತ ಮೊದಲು ಭಾರತದಲ್ಲಿ ವಿಮಾನವನ್ನು ತಯಾರಿಸಿ ಹಾರಿಸಲಾಗಿತ್ತು ಎಂದು ಹಲವರು ಹೇಳಿದರೆ ಇನ್ನೂ ಹಲವರು ನಮ್ಮ ಪ್ರಾಚೀನ ಋಷಿಗಳೇ ಮೊದಲಿಗೆ ವಿದ್ಯುತ್ತನ್ನು ಕಂಡುಹಿಡಿದಿದ್ದರು ಎಂದೂ ಹೇಳುತ್ತಾರೆ. ಇವೆಲ್ಲವುಗಳಿಗೆ ಕಳಶಪ್ರಾಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಾಚೀನ ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿ ಪ್ರಚಲಿತದಲ್ಲಿತ್ತು, ಇದಕ್ಕೆ ಗಣೇಶನ ಶರೀರಕ್ಕೆ ಆನೆಯ ಮುಖವನ್ನು ಜೋಡಿಸಿದ್ದೇ ಉದಾಹರಣೆ ಎಂದು ಹೇಳಿ ನಗೆಪಾಟಲಾಗುತ್ತಾರೆ. ಯಾಕೆಂದರೆ ಇಂಥ ಶಸ್ತ್ರಚಿಕಿತ್ಸೆಗೆ ಪ್ಲಾಸ್ಟಿಕ್ ಸರ್ಜರಿ ಅನ್ನುವುದಿಲ್ಲ, ’ಕಸಿ ಮಾಡುವುದು’ (transplant) ಎನ್ನುತ್ತಾರೆ. ಅದೂ ಕೂಡ ಇತ್ತೋ ಇಲ್ಲವೋ? ಆದರೆ ಇವರ ಹತ್ತಿರ ಪ್ರಮಾಣಗಳನ್ನು ಮಾತ್ರ ಕೇಳಬೇಡಿ. ಕೇಳಿದರೆ ನೀವು ಹಿಂದೂಗಳನ್ನು ದ್ವೇಷಿಸುವ, ಭಾರತದ ಪ್ರಾಚೀನ ಶ್ರೇಷ್ಠತೆಯ ಬಗ್ಗೆ ಹೆಮ್ಮೆಯಿಲ್ಲದ ’ರಾಷ್ಟ್ರದ್ರೋಹಿ’ ಎಂದು ನಿಮ್ಮನ್ನೇ ಹೀಗಳೆದುಬಿಡುತ್ತಾರೆ. ಆದರೆ ಒರೆಗೆ ಹಚ್ಚಿ ನೋಡಿದಾಗ ಈ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳು ಎನ್ನುವುದು ಗೊತ್ತಾಗುತ್ತದೆ.

ವಿಜ್ಞಾನದ ಮಾತು ಹಾಗಿರಲಿ, ನಮ್ಮ ಜಗತ್ತಿನ ಬಗ್ಗೆ ಪ್ರಾಚೀನ ಹಿಂದೂಗಳಲ್ಲಿ ಎಷ್ಟು ’ಜ್ಞಾನ’ವಿತ್ತು ಎನ್ನುವುದನ್ನು ಮೊದಲು ನೋಡಬಹುದು. ಮನುಷ್ಯನಿಗೆ ತಿಳಿವಳಿಕೆ ಬಂದ ನಂತರ ಆತ ಆಕಾಶದ ಕಡೆಗೆ ನೋಡಿ ಅದರ ಮರ್ಮವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಯಾವ ವೈಜ್ಞಾನಿಕ ಸಲಕರಣೆಗಳೂ ಇಲ್ಲದ ಕಾಲದಲ್ಲಿ ಆತ ಹಲವು ತಪ್ಪುಗಳನ್ನು ಮಾಡಿರಬಹುದು. ಆದರೆ ಈ ಸತ್ಯವನ್ನು ಒಪ್ಪಿಕೊಂಡರೆ ಭಾರತದ ಹಿಂದೂಗಳ ಘನತೆಗೆ ಅವಮಾನವಾಗುತ್ತದೆ ಎಂದು ಭಾವಿಸಿ ಯಾವ ವೈಜ್ಞಾನಿಕ ಸಲಕರಣೆಗಳೂ ಇಲ್ಲದ ಕಾಲದಲ್ಲಿಯೂ ಪ್ರಾಚೀನ ಭಾರತದ ಋಷಿಗಳು ತಮ್ಮ ’ಧ್ಯಾನ ಶಕ್ತಿ’ಯಿಂದ ಜಗತ್ತಿನ ಸತ್ಯವನ್ನು ತಿಳಿದುಕೊಂಡಿದ್ದರು ಎಂದು ಈ ಹಿಂದೂ ಮತಾಂಧರು ಹೇಳಿಕೊಳ್ಳುತ್ತಾರೆ. ಅವರ ಈ ಪ್ರತಿಪಾದನೆಯಲ್ಲಿರುವ ಸತ್ಯಾಸತ್ಯತೆಯನ್ನು ಹಲವು ಹಿಂದೂ ಗ್ರಂಥಗಳಲ್ಲಿ ಬರುವ ಖಗೋಳ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳ ಮೂಲಕ ತಿಳಿದುಕೊಳ್ಳಬಹುದು.

ಹಿಂದೂ ಗ್ರಂಥಗಳಲ್ಲಿ ಸೂರ್ಯ ಹಾಗೂ ಚಂದ್ರ

ಋಗ್ವೇದದಲ್ಲಿ ಸೂರ್ಯ ಹಾಗೂ ಚಂದ್ರರ ಪ್ರಸ್ತಾಪವಿದೆ. ಪುರುಷ ಸೂಕ್ತದ ಪ್ರಕಾರ ವಿರಾಟನ ಮನಸ್ಸಿನಿಂದ ಚಂದ್ರನೂ, ಕಣ್ಣುಗಳಿಂದ ಸೂರ್ಯನೂ ಹುಟ್ಟಿದರಂತೆ. ಅದರೆ ಋಗ್ವೇದದಲ್ಲಿ ಸೂರ್ಯ ಹಾಗೂ ಚಂದ್ರರನ್ನು ಹೊರತುಪಡಿಸಿ ಗ್ರಹಗಳೂ ನಕ್ಷತ್ರಗಳೂ ಸೇರಿದಂತೆ ಬೇರೆ ಯಾವುದೇ ಆಕಾಶಕಾಯದ ಪ್ರಸ್ತಾಪವೇ ಇರುವುದಿಲ್ಲ. ಅಂದರೆ ಋಗ್ವೇದದ ಕಾಲದಲ್ಲಿ ’ಬ್ರಹ್ಮಾಂಡದ ಬಗ್ಗೆ ಜ್ಞಾನ ಹೊಂದಿದ್ದರು’ ಎನ್ನಲಾಗುವ ಋಷಿಗಳಿಗೆ ಗ್ರಹ-ನಕ್ಷತ್ರಗಳ ಬಗ್ಗೆಯೂ ಗೊತ್ತಿರಲಿಲ್ಲ ಎಂದಾಯಿತಲ್ಲವೇ? ಯಜುರ್ವೇದದಲ್ಲಿ ನಕ್ಷತ್ರಗಳ ಹೆಸರುಗಳಿದ್ದರೂ ನವಗ್ರಹಗಳ ಪ್ರಸ್ತಾಪವೇ ಇಲ್ಲ.

ಮಹಾಭಾರತದ ಅನುಶಾಸನ ಪರ್ವದ 14ನೆಯ ಅಧ್ಯಾಯದಲ್ಲಿ, ಇಂದ್ರನ ಮುಂದೆ ಶಿವನನ್ನು ಹೊಗಳುತ್ತ ಉಪಮನ್ಯು ಹೀಗೆ ಹೇಳುತ್ತಾನೆ: “ಪರ್ವತಾನಾಂ ಮಹಾಮೇರುರ್ನಕ್ಷತ್ರಾಣಾಮ್ ಚ ಚಂದ್ರಮಾಃ, ವಶಿಷ್ಠಸ್ತ್ವಮೃಷೀಣಾಮ್ ಚ ಗ್ರಹಾಣಾಮ್ ಸೂರ್ಯ ಉಚ್ಯತೆ” ಅಂದರೆ, ನೀವು ಪರ್ವತಗಳಲ್ಲಿ ಮೇರು, ನಕ್ಷತ್ರಗಳಲ್ಲಿ ಚಂದ್ರ, ಋಷಿಮುನಿಗಳಲ್ಲಿ ವಶಿಷ್ಠ ಮತ್ತು ಗ್ರಹಗಳಲ್ಲಿ ಸೂರ್ಯನಿದ್ದಂತೆ ಎಂದು. ಮಹಾಭಾರತದ ಪ್ರಕಾರ ಚಂದ್ರ ಒಂದು ನಕ್ಷತ್ರವಾದರೆ ಸೂರ್ಯ ಒಂದು ಗ್ರಹ ಮಾತ್ರ. ಇದು ಮಹಾಭಾರತ ರಚಿಸಿದ, 18 ಮಹಾಪುರಾಣಗಳನ್ನೂ, 18 ಉಪಪುರಾಣಗಳನ್ನೂ ರಚಿಸಿದ ವ್ಯಾಸ ’ಮಹರ್ಷಿ’ಗೆ ಸೂರ್ಯ ಚಂದ್ರರ ಬಗ್ಗೆ ಇದ್ದ ’ಜ್ಞಾನ’. ಜೊತೆಗೆ ಮಹಾಭಾರತವನ್ನು ರಚಿಸುವ ಕಾಲಘಟ್ಟದಲ್ಲಿ ನಕ್ಷತ್ರ ಹಾಗೂ ಗ್ರಹಗಳಲ್ಲಿರುವ ವ್ಯತ್ಯಾಸ ಗೊತಾಗಿತ್ತು ಎಂದುಕೊಂಡರೂ ಚಂದ್ರನನ್ನು ನಕ್ಷತ್ರವೆಂದೂ ಸೂರ್ಯನನ್ನು ಗ್ರಹವೆಂದೂ ಹೇಳಿರುವುದನ್ನು ನೋಡಿದರೆ ಈ ವ್ಯತ್ಯಾಸವೂ ಸರಿಯಾಗಿ ಗೊತ್ತಿರಲಿಲ್ಲ ಎಂದಾಗುತ್ತದೆ.

ಇದನ್ನೂ ಓದಿ: ವಿಜ್ಞಾನಿಗಳ ನಿದ್ದೆಗೆಡಿಸಿರುವ ರೇಡಿಯೋ ತರಂಗ ಸೂಸುವ ಅಪರಿಚಿತ ಶಕ್ತಿಪುಂಜ

ಬೇರೆ ಹಲವು ಹಿಂದೂ ಗ್ರಂಥಗಳ ಪ್ರಕಾರ ಸೂರ್ಯ ಹಾಗೂ ಚಂದ್ರ, ನಕ್ಷತ್ರ ಮತ್ತು ಉಪಗ್ರಹವಲ್ಲ. ಯಾಜ್ಞವಲ್ಕ್ಯ ’ಮಹರ್ಷಿ’ ತನ್ನ ಸ್ಮೃತಿಯ ಮೊದಲ ಅಧ್ಯಾಯದ 296ನೆಯ ಶ್ಲೋಕದಲ್ಲಿ “ಸೂಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತಿಃ, ಶುಕ್ರಃ ಶನೈಶ್ಚರೊ ರಾಹುಃ ಕೇತಶ್ಚೇತಿ ಗ್ರಹಾ ಸ್ಮೃತಾಃ” ಎಂದು ಹೇಳುವ ಮೂಲಕ ಸೂರ್ಯ ಹಾಗೂ ಚಂದ್ರರನ್ನು ಇತರ ಗ್ರಹಗಳ ಜೊತೆಗೆ ಸೇರಿಸಿ ಅವುಗಳನ್ನೂ ಗ್ರಹಗಳೆಂದು ಹೇಳುತ್ತಾನೆ. ಜೊತೆಗೆ ಅದೇ ಶ್ಲೋಕದಲ್ಲಿ ಸೂರ್ಯ, ಸೋಮ (ಚಂದ್ರ), ಮಹೀಪುತ್ರ (ಭೂಮಿಯ ಮಗ – ಮಂಗಳ ಗ್ರಹ), ಸೋಮಪುತ್ರ (ಚಂದ್ರನ ಮಗ ಬುಧ ಗ್ರಹ), ಬೃಹಸ್ಪತಿ, ಶುಕ್ರ, ಶನೀಚರ, ರಾಹು ಮತ್ತು ಕೇತು ಇವುಗಳನ್ನು ಗ್ರಹಗಳೆಂದು ಸ್ಮರಿಸಲಾಗಿದೆ ಎಂದು ಹೇಳುತ್ತಾನೆ.

ಯಾರು ಈ ರಾಹು-ಕೇತುಗಳು?

ಯಾಜ್ಞವಲ್ಕ್ಯ ಋಷಿ ತನ್ನ ಈ ಶ್ಲೋಕದಲ್ಲಿ ಗ್ರಹಗಳ ಪಟ್ಟಿಗೆ ಸೇರಿಸುವ ಈ ರಾಹು ಹಾಗೂ ಕೇತು ಯಾವುವು? ಹಲವು ಹಿಂದೂ ಪಂಡಿತರು ಇವುಗಳು ಚಂದ್ರನ ಏರು ಸಂಪಾತ (ascending node) ಹಾಗೂ ಇಳಿ ಸಂಪಾತಗಳೆಂದು (descending node) ವಿವರಿಸುತ್ತಾರೆ. ಆದರೆ ಈ ಪ್ರತಿಪಾದನೆಗೆ ಹಿಂದೂ ಗ್ರಂಥಗಳಲ್ಲಿ ನನ್ನ ಸೀಮಿತ ಜ್ಞಾನದ ಪ್ರಕಾರ ಯಾವ ಸಮರ್ಥನೆಯೂ ಸಿಕ್ಕುವುದಿಲ್ಲ.

ನಾವು ಚಿಕ್ಕವರಿದ್ದಾಗ ಅಂದಿನ ದೊಡ್ಡವರು ನಮಗೆ ಈ ರಾಹುಕೇತುಗಳು ಸೂರ್ಯಚಂದ್ರರನ್ನು ನುಂಗಿ ಹಾಕುವುದೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎಂದು ಹೇಳುತ್ತಿದ್ದುದು ಜ್ಞಾಪಕವಿದೆಯೇ? ಇದಕ್ಕೆ ಮಹಾಭಾರತದಲ್ಲಿ ಹಲವಾರು ಉಲ್ಲೇಖಗಳಿವೆ. ಅರಣ್ಯ ಪರ್ವದ ಕಿರ್ಮಿರವಧ ಉಪಪರ್ವದಲ್ಲಿ ರಾಹು ಸೂರ್ಯನನ್ನು ನುಂಗಿಹಾಕುತ್ತಾನೆ: “ಸಂನಿಹಿತ್ಯಾಮುಪಸ್ಪೃಶ್ಯ ರಾಹುಗ್ರಸ್ತೆ ದಿವಾಕರೆ” ಎಂದು ಹೇಳಲಾಗಿದೆ. ಹಾಗೆಯೇ ಅರಣ್ಯ ಪರ್ವದಲ್ಲಿ, (65.12) “ಪೌರ್ಣಮಾಸೀಮಿವ ನಿಶಾಂ ರಾಹುಗ್ರಸ್ತನಿಶಾಕರಾಮ್,” ಅಂದರೆ ರಾಹು ಚಂದ್ರನನ್ನೂ ನುಂಗುತ್ತಾನೆ ಎಂದು ಹೇಳಲಾಗಿದೆ.

ಮಹಾಭಾರತದ ಆದಿ ಪರ್ವದಲ್ಲಿ ಬರುವ ಅಮೃತ ಮಂಥನದ ಕಥೆಯಲ್ಲಿ ದೇವತೆಗಳ ಕಣ್ಣು ತಪ್ಪಿಸಿ ಅಮೃತವನ್ನು ಕುಡಿಯಲು ಪ್ರಯತ್ನಿಸುತ್ತಿದ್ದ ದಾನವನ ಹೆಸರು ರಾಹು. ಅವನ ಈ ಕಳ್ಳತನವನ್ನು ಸೂರ್ಯ ಹಾಗೂ ಚಂದ್ರರು ಗಮನಿಸಿ ದೇವತೆಗಳಿಗೆ ಹೇಳಿದರಂತೆ. ಇದರಿಂದ ಕೋಪಗೊಂಡ ನಾರಾಯಣ ಅವನ ರುಂಡವನ್ನು ಚೆಂಡಾಡಿಬಿಟ್ಟನಂತೆ. ಆದುದರಿಂದ ಮಹಾಭಾರತದ ಕರ್ಣ ಪರ್ವದಲ್ಲಿ ’ಕೇತು’ವನ್ನು ’ತಲೆಯಿಲ್ಲದ’ ಅಥವಾ ’ರುಂಡವಿಲ್ಲದ’ ಗ್ರಹ ಎಂದು ಹೇಳಲಾಗಿದೆ. ಈ ಕಾರಣದಿಂದ ರಾಹುವಿಗೆ ಸೂರ್ಯಚಂದ್ರರನ್ನು ಕಂಡರೆ ಆಗುವುದಿಲ್ಲ. ಆದುದರಿಂದ ರಾಹು ಅವರಿಬ್ಬರನ್ನು ನುಂಗಲು ಪ್ರಯತ್ನಿಸುತ್ತಾನೆ, ಇದನ್ನೇ ಗ್ರಹಣ ಎನ್ನಲಾಗುತ್ತದೆ. ಸೂರ್ಯ ಹಾಗೂ ಚಂದ್ರರನ್ನು ಮುಕ್ತಗೊಳಿಸಿದ ನಂತರ ರಾಹು ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತದೆ ಮಹಾಭಾರತ. ರಾಹು, ಸೂರ್ಯ ಚಂದ್ರರಿಬ್ಬರನ್ನೂ ಒಂದೇ ಸಮಯಕ್ಕೆ ನುಂಗಿದನೆಂದೂ ಮಹಾಭಾರತ ಹೇಳುತ್ತದೆ.

ಋಗ್ವೇದದ ಮೊದಲ ಮಂಡಲದ ಆರನೇ ಸೂಕ್ತದ ಮೂರನೆಯ ಮಂತ್ರದಲ್ಲಿ ’ಕೇತು’ ಶಬ್ದದ ಪ್ರಯೋಗವಾಗಿದ್ದರೂ ಅದು ಕೇತು ಗ್ರಹದ ಸಂಕೇತವಾಗಿರುವುದಿಲ್ಲ. “ಕೇತುಂ ಕೃಣ್ವನ್ನಕೇತವೇ ಪೀಶೋ ಮರ್ಯಾ ಅಪೆಶಸೇ, ಸಮುಷದ್ಭಿರಜಾಯಥಾಃ||”; ’ಕೇತುಂ’ ಈ ಶಬ್ದಕ್ಕೆ ನಿರುಕ್ತದಲ್ಲಿ ’ಪ್ರಜ್ಞೆ’ ಎಂಬ ಅರ್ಥವನ್ನೂ, ತೈತ್ತರೀಯ ಬ್ರಾಹ್ಮಣದಲ್ಲಿ ’ಧ್ವಜ’ ಎಂಬ ಅರ್ಥವನ್ನೂ ನೀಡಲಾಗಿದೆ ಎಂದು ಋಗ್ವೇದವನ್ನು ಕನ್ನಡಕ್ಕೆ ಭಾಷಾಂತರಿಸಿರುವ ವಿದ್ವಾನ ಎಚ್.ಪಿ.ವೆಂಕಟರಾಯರು ಹೇಳುತ್ತಾರೆ. ಇಲ್ಲಿ ’ಕೇತುಂ’ ಎಂಬ ಶಬ್ದವನ್ನು ಬಳಸಲಾಗಿರುವುದರಿಂದ ಈ ಮಂತ್ರವನ್ನು ಗೃಹಪ್ರವೇಶ ಮೊದಲಾದ ಕರ್ಮಗಳಲ್ಲಿ ನವಗ್ರಹ ಶಾಂತಿಯನ್ನು ಮಾಡುವಾಗ ಉಪಯೋಗಿಸುತ್ತಾರೆ. ಆದರೆ ಇಲ್ಲಿ ಕೇತು ಗ್ರಹದ ವಿಷಯವೇ ಇಲ್ಲ ಎನ್ನುತ್ತಾರೆ ವೆಂಕಟರಾಯರು. ಋಗ್ವೇದಕ್ಕೆ ಭಾಷ್ಯ ಬರೆದಿರುವ ಸಾಯಣ, ಪ್ರೊ. ಗ್ರಿಫ್ಫಿಥ್, ಪ್ರೊ. ಎಚ್.ಎಚ್.ವಿಲ್ಸನ್, ಪದ್ಮವಿಭೂಷಣ ಡಾ. ಶ್ರೀಪಾದ ದಾಮೋದರ ಸಾತವಲೇಕರ, ದಯಾನಂದ ಸರಸ್ವತಿ ಹಾಗೂ ನನಗೆ ತಿಳಿದ ಮಟ್ಟಿಗೆ ಬೇರೆ ಯಾರೂ ಈ ಮಂತ್ರವನ್ನು ವ್ಯಾಖ್ಯಾನಿಸುವಾಗ ಈ ಶಬ್ದಕ್ಕೆ ಕೇತು ಗ್ರಹದ ಅರ್ಥವನ್ನು ನೀಡುವುದಿಲ್ಲ.

ರಾಮಾಯಣದ ಸುಂದರ ಕಾಂಡದ 19ನೆಯ ಅಧ್ಯಾಯದ ಶ್ಲೋಕ 9ರಲ್ಲಿ ಕೇತು ಶಬ್ದವನ್ನು ’ಧೂಮ’ದ ಜೊತೆಗೆ ಬಳಸಿ ಹೀಗೆ ಹೇಳಿದೆ: “ಚೇಷ್ಟಮಾನಾಂ ತಥಾವಿಷ್ಟಾಂ ಪನ್ನಗೇನ್ದ್ರವಧೂಮಿವ, ಧೂಪ್ಯಮಾನಾಮ್ ಗ್ರಹೆಣೇವ ರೊಹಿಣೀಂ ಧೂಮಕೇತುನಾ” ಅಂದರೆ “ಸೀತೆಯು ಮಂತ್ರದ ಪ್ರಭಾವದಿಂದ ತಿರುಚಿಕೊಳ್ಳುತ್ತಿರುವ ಹೆಣ್ಣು-ಹಾವಿನ ಹಾಗೆ ಆಗಿದ್ದಳು. ಅವಳು ಧೂಮ-ಬಣ್ಣದ ಕೇತು ಹೆಸರಿನ ಗ್ರಹದ ಹೊಗೆಯಿಂದ ಧೂಸರಗೊಂಡ ರೋಹಿಣಿಯಂತಾಗಿದ್ದಳು” ಎನ್ನಲಾಗಿದೆ. (ಆದರೆ ಇತ್ತೀಚೆಗೆ ’ಧೂಮಕೇತು’ವಿನ ಅರ್ಥ ಬದಲಾಗಿದೆ).

ಗ್ರಹಗಳ ಮಕ್ಕಳು

ಯಾಜ್ಞವಲ್ಕ್ಯ ಋಷಿಯ ಮೇಲೆ ಹೇಳಲಾದ ಶ್ಲೋಕದಲ್ಲಿ ಸೂರ್ಯ ಹಾಗೂ ಚಂದ್ರರನ್ನು ಗ್ರಹಗಳೆಂದು ಹೇಳುವುದರ ಜೊತೆಗೆ ಮಂಗಳ ಗ್ರಹವನ್ನು ಭೂಮಿಯ ಪುತ್ರನೆಂದೂ, ಬುಧನನ್ನು ಚಂದ್ರನ ಪುತ್ರನೆಂದೂ ಹೇಳಲಾಗಿದೆ. ಇದನ್ನು ಏನೆಂದು ಅರ್ಥಮಾಡಿಕೊಳ್ಳಬೇಕು? ಭೂಮಿಯಿಂದ ಬೇರೆಯಾಗುವ ಮೂಲಕ ಮಂಗಳ ಗ್ರಹ ಹುಟ್ಟಿದೆಯೆಂದೂ, ಚಂದ್ರನಿಂದ ಬೇರೆಯಾಗುವ ಮೂಲಕ ಬುಧ ಗ್ರಹ ಹುಟ್ಟಿದೆಯೆಂದೂ ಭಾವಿಸಬೇಕೆ?

ಶಿವಪುರಾಣದ ಪ್ರಕಾರ ಒಂದು ಸಲ ಶಂಕರನ ಬೆವರು ಭೂಮಿಯ ಮೇಲೆ ಬಿದ್ದಿತಂತೆ, ಅದು ಮಗುವಾಯಿತಂತೆ. ಅಳಲು ಪ್ರಾರಂಭಿಸಿತಂತೆ. ಆಗ ಭೂಮಿತಾಯಿ ಬಂದು ಅದಕ್ಕೆ ತನ್ನ ಮೊಲೆಹಾಲು ಕುಡಿಸಿದಳಂತೆ. ಆದುದರಿಂದ ಅದು ಭೂಮಿಯ ಪುತ್ರವಂತೆ. ಈ ಬಗ್ಗೆ ಶಿವ ಪುರಾಣದ ರುದ್ರ ಸಂಹಿತೆಯ ಪಾರ್ವತೀ ಖಂಡದ ಶ್ಲೋಕ 26-27 ಹೀಗೆ ಹೇಳುತ್ತವೆ: “ಸ ಬಾಲೋ ಭೌಮ ಇತ್ಯಾಖ್ಯಾಂ ಪ್ರಾಪ್ಯ ಭೂತ್ವಾ ಯುವಾ ದ್ರುತಂ, ತಸ್ಯಾಂ ಕಾಶ್ಯಾಂ ಚಿರಂ ಕಾಲಂ ಸಿಷೇವೆ ಶಂಕರಂಪ್ರಭು, ವಿಶ್ವೇಶ್ವರಪ್ರಸಾದೇನ ಗ್ರಹತ್ವಂ ಪ್ರಾಪ್ಯ ಭೂಮಿಜಃ, ದಿವ್ಯಂ ಲೋಕಂ ಜಗಾಮಾಶು ಶುಕ್ರಲೋಕಾತ್ಪರಂ ವರಂ.” ಅಂದರೆ “ಆ ಶಂಕರನ ಬೆವರಿನಿಂದ ಜನಿಸಿದ ಶಿಶುವು ಯುವಕನಾಗಿ ’ಭೌಮ’ (ಅಂಗಾರಕ-ಕುಜ) ಎಂಬ ಹೆಸರನ್ನು ಪಡೆದು ಕಾಶಿಯಲ್ಲಿ ಬಹಳ ಕಾಲ ಶಂಕರನನ್ನು ಸೇವಿಸಿದನು. ಅಲ್ಲಿ ವಿಶ್ವೇಶ್ವರನ ಪ್ರಸಾದವನ್ನು ಪಡೆದು ಅವನ ಅನುಗ್ರಹದಿಂದ ನವಗ್ರಹಗಳಲ್ಲಿ ಒಬ್ಬನಾಗಿ ಶುಕ್ರಲೋಕಕ್ಕಿಂತಲೂ ಮೇಲಿರುವ ದೇವಲೋಕಕ್ಕೆ ತೆರಳಿದನು”. ಆದರೆ ಅಂಗಾರಕ ಶಿವನ ಪುತ್ರನೋ ಭೂದೇವಿಯ ಪುತ್ರನೋ ಎಂಬ ಪ್ರಶ್ನೆಯನ್ನು ಮಾತ್ರ ಕೇಳಬೇಡಿ. ಇನ್ನು ಚಂದ್ರನ ಮಗ ಹೇಗೆ ಹುಟ್ಟಿದನೋ?

ಬುಧ ಗ್ರಹವನ್ನು ಸೋಮಪುತ್ರ ಎಂದು ಹೇಳಲಾಗಿದೆ. ಬುಧ ಗ್ರಹ ಹೇಗೆ ಚಂದ್ರನ, ಒಂದು ಉಪಗ್ರಹದ, ಮಗುವಾಯಿತು? ಪದ್ಮ ಪುರಾಣದ ಉತ್ತರ ಖಂಡದಲ್ಲಿ ಚಂದ್ರನಿಗೆ ಬುಧ ಹೇಗೆ ಹುಟ್ಟಿದ ಎಂಬ ಬಗ್ಗೆ ವಿವರಗಳಿವೆ. ಚಂದ್ರ ಬೃಹಸ್ಪತಿಯ ಹೆಂಡತಿ ತಾರೆಯನ್ನು ಅಪಹರಿಸಿಕೊಂಡು ಹೋಗಿ ಬಹಳ ಕಾಲ ಅವಳೊಡನೆ ರಮಿಸಿದನಂತೆ. ಬೃಹಸ್ಪತಿ ಅವಳನ್ನು ಮರಳಿ ಕೊಡುವಂತೆ ಕೇಳಿದಾಗ ಚಂದ್ರ ಕೊಡದೇ ಇದ್ದುದರಿಂದ ಬೃಹಸ್ಪತಿ ಅವನ ಮೇಲೆ ಯುದ್ಧಕ್ಕೆ ಬಂದನಂತೆ. ಯುದ್ಧವನ್ನು ಬ್ರಹ್ಮ ತಡೆದು ಬುದ್ಧಿ ಹೇಳಿದಾಗ ಚಂದ್ರ ತಾರೆಯನ್ನು ಮರಳಿ ಕೊಟ್ಟನಂತೆ. ಆದರೆ ಆಗಲೇ ಅವಳು ಬಸುರಿಯಾಗಿದ್ದಳಂತೆ. ಅವಳ ಮಗ ಯಾರಿಂದ ತಾನು ಹುಟ್ಟಿದೆ ಎಂದು ಕೇಳಿದಾಗ ಅವಳು ಚಂದ್ರ ಅವನ ತಂದೆ ಎಂದು ಹೇಳಿದಳಂತೆ. ನಂತರ ಬೃಹಸ್ಪತಿ ತಾರೆಯನ್ನೂ ಚಂದ್ರ ತನ್ನ ಮಗ ಬುಧನನ್ನೂ ತಮ್ಮೊಂದಿಗೆ ಕರೆದುಕೊಂಡು ಹೋದರಂತೆ. ಆದುದರಿಂದ ಬುಧನನ್ನು ’ಕುಂಡ’ನೆಂದೂ ಹೇಳುತ್ತಾರೆ, ಅಂದರೆ ಗಂಡ ಬದುಕಿರುವಾಗ ಹೆಂಡತಿಯ ಹಾದರದಿಂದ ಹುಟ್ಟಿದವ ಎಂದರ್ಥ.

ಆಕಾಶಕಾಯಗಳ ದೂರ-ಗಾತ್ರಗಳು

ಇನ್ನು ಸೂರ್ಯ, ಚಂದ್ರ ಹಾಗೂ ಇತರ ಗ್ರಹಗಳ ಗಾತ್ರ ಹಾಗೂ ದೂರ ಮೊದಲಾದವುಗಳ ಬಗ್ಗೆ ಹಿಂದೂ ಋಷಿಗಳ ಜ್ಞಾನವನ್ನು ಸ್ವಲ್ಪ ನೋಡೋಣ.

ಎಲ್ಲಾ ಪುರಾಣಗಳನ್ನು ವ್ಯಾಸ ಮಹರ್ಷಿಯೇ ಬರೆದಿರುವುದಾಗಿ ಹಿಂದೂ ಪಂಡಿತರು ಹೇಳುತ್ತಾರೆ. ಮತ್ಸ್ಯ ಪುರಾಣದ ಪ್ರಕಾರ ಚಂದ್ರ ಸೂರ್ಯನಿಗಿಂತ ದೊಡ್ಡದು. ಪುರಾಣದ ಶ್ಲೋಕ 124.8 ಹೀಗೆ ಹೇಳುತ್ತದೆ: “ವಿಷ್ಕಮ್ ಭಾನ್ಮಂಡಲಾಚ್ಚೈವ ಭಾಸ್ಕರಾದ್ವಿಗುಣಃ ಶಶೀ, ಆತಃ ಪೃಥಿವ್ಯಾ ವಕ್ಷಾಮಿ ಪ್ರಮಾಣಮ್ ಯೋಜನೈ ಪುನಃ”. ಅಂದರೆ ಚಂದ್ರನ ವ್ಯಾಸ ಹಾಗೂ ಸುತ್ತಳತೆಗಳು ಸೂರ್ಯನ ವ್ಯಾಸ ಹಾಗೂ ಸುತ್ತಳತೆಗಳಿಗಿಂತ ಎರಡು ಪಾಲು ಹೆಚ್ಚಿಗಿರುತ್ತವೆ. ಅದೇ ಪುರಾಣದ ಶ್ಲೋಕ 124.6ಹೀಗೆ ಹೇಳುತ್ತದೆ: “ಅಸ್ಯ ಭಾರತವರ್ಷಸ್ಯ ವಿಷ್ಕಂಭಾತ್ತುಲ್ಯವಿಸ್ತೃತಮ್. ಮಂಡಲಮ್ ಭಾಸ್ಕರಸ್ಯಾಥ ಯೋಜನೈಸ್ತನ್ನಿಬೋಧತ”; ಅಂದರೆ ಈ ಭಾರತ ವರ್ಷದ ವ್ಯಾಸವು ಸೂರ್ಯನ ವ್ಯಾಸದಷ್ಟೇ ಇರುತ್ತದೆ. ರಾಹು ಒಬ್ಬ ಅಸುರನೆಂದೂ ಅವನ ಗಾತ್ರ ಸೂರ್ಯನಿಗಿಂತ ದೊಡ್ಡದೆಂದೂ ಭಾಗವತ ಮಹಾಪುರಾಣ ಹೇಳುತ್ತದೆ.

ವಿಷ್ಣು ಪುರಾಣದ 2ನೆಯ ಅಂಶದ 7ನೆಯ ಅಧ್ಯಾಯದ ಪ್ರಕಾರ “ಭೂಮಿಗೆ ಲಕ್ಷ ಯೋಜನ ದೂರದಲ್ಲಿ ಸೂರ್ಯಮಂಡಲ, ಸೂರ್ಯನಿಂದ ಲಕ್ಷ ಯೋಜನ ದೂರದಲ್ಲಿ ಚಂದ್ರಮಂಡಲ, ಚಂದ್ರನಿಂದ ಲಕ್ಷ ಯೋಜನ ದೂರದಲ್ಲಿ ನಕ್ಷತ್ರಮಂಡಲ, ನಕ್ಷತ್ರಮಂಡಲದಿಂದ ಎರಡು ಲಕ್ಷ ಯೋಜನ ದೂರದಲ್ಲಿ ಬುಧಗ್ರಹ ಇರುತ್ತವೆ. ನಂತರ ಪರಸ್ಪರ ಎರಡು ಲಕ್ಷ ಯೋಜನೆಗಳ ದೂರದಲ್ಲಿ ಶುಕ್ರ, ಅಂಗಾರಕ, ಗುರು ಹಾಗೂ ಶನಿ ಗ್ರಹಗಳು ಇರುತ್ತವೆ. ಶನಿಯಿಂದ ಅಷ್ಟೇ ದೂರದಲ್ಲಿ ಸಪ್ತರ್ಷಿ ಮಂಡಲ ಇರುತ್ತದೆ.” (ಭೂಮೇರ್ಯೋಜನಲಕ್ಷೇ ತು ಮೈತ್ರೇಯ ರವಿಮಂಡಲಂಲಕ್ಷೇ ದಿವಾಕರಸ್ಯಾಪಿ ಮಂಡಲಂ ಶಶಿನಃ ಸ್ಥಿತಂ. ಪೂರ್ಣೇ ಶತಸಹಸ್ರೇ ತು ಯೋಜನಾನಾಂ ನಿಶಾಕರಾತ್ ನಕ್ಷತ್ರಮಂಡಲಂ ಕೃತ್ಸಂ ಉಪರಿಷ್ಟಾತ್ಪ್ರಕಾಶತೇ. ದ್ವೇ ಲಕ್ಷೇ ಚೋಪರಿ ಬ್ರಹ್ಮನ್ ಬುಧೋ ನಕ್ಷತ್ರಮಂದಲಾತ್ ತಾವತ್ಪ್ರಮಾಣಭಾಗೇ ತು ಬುಧಸ್ಯಾಪ್ಯುಶನಾಸ್ಥಿತಃ.) ಅಗ್ನಿ ಪುರಾಣವೂ ಈ ದೂರಗಳನ್ನೇ ಪುನರುಚ್ಚರಿಸುತ್ತದೆ. ಅಂದರೆ ಭೂಮಿ ಈ ಬ್ರಹ್ಮಾಂಡದ ಕೇಂದ್ರದಲ್ಲಿದೆ ಎಂದಹಾಗಾಯಿತು. ಈ ಪುರಾಣದ ಪ್ರಕಾರ ಭೂಮಿಯಿಂದ ನಾವು ಆಕಾಶದಲ್ಲಿ ಪ್ರವಾಸ ಹೊರಟರೆ ನಮಗೆ ಮೊದಲು ಸಿಕ್ಕುಹುದು ಸೂರ್ಯ. ನಂತರ ಚಂದ್ರ, ನಂತರ ಸಪ್ತರ್ಷಿಗಳನ್ನು ಹೊರತುಪಡಿಸಿ ನಕ್ಷತ್ರಗಳು, ಈ ನಕ್ಷತ್ರಗಳನ್ನು ದಾಟಿದ ನಂತರ ನಮಗೆ ಸಿಕ್ಕುವುದು ಬುಧ, ನಂತರ ಶುಕ್ರ, ಮಂಗಳ, ಗುರು ಹಾಗೂ ಶನಿ ಗ್ರಹಗಳು! ಇದು ಸೌರಮಂಡಲದ ಇಂದಿನ ತಿಳಿವಳಿಕೆಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ಈ ಹಿಂದೂ ಗ್ರಂಥಗಳಲ್ಲಿ ಯುರೆನಸ್ ಹಾಗೂ ನೆಪ್ಚೂನ್ ಗ್ರಹಗಳ ಬಗ್ಗೆ ಆಗಲೀ, ಕ್ಷುದ್ರ ಗ್ರಹಗಳ ಬಗ್ಗೆ ಆಗಲೀ ಯಾವುದೇ ಪ್ರಸ್ತಾಪ ಸಿಕ್ಕುವದಿಲ್ಲ.

ಪುರಾಣಗಳೆಲ್ಲ ವಿಶ್ವಾಸನೀಯ ಗ್ರಂಥಗಳಲ್ಲ ಎಂದು ಹಲವು ಹಿಂದೂ ಪಂಡಿತರು ವಾದಿಸುತ್ತಾರೆ. ಆದರೆ ಅಥರ್ವವೇದ (11.7.24) “ಋಚಃ ಸಾಮನಿ ಛಂದೌಸಿ ಪುರಾಣಂ ಯಜುಷಾ ಸಹ, ಉಚ್ಛಿಷ್ಟಾಜ್ಞಿರೆ ಸರ್ವೆ ದಿವಿ ದೇವಾ ದಿವಿಶ್ರಿತಃ” ಎಂದು ಹೇಳುವ ಮೂಲಕ ಪುರಾಣಗಳನ್ನು ವೇದಗಳ ಸ್ಥಾನದಲ್ಲಿಯೇ ಸ್ಥಾಪಿಸುತ್ತದೆ. ವೇದಗಳಲ್ಲಿ ಬರೆದಿರುವುದು ’ವೇದ ವಾಕ್ಯ’ ಎಂದು ಹೇಳುವ ಪಂಡಿತರು ಇದರಿಂದಾಗಿ ಬಹಳ ಮುಜುಗರಕ್ಕೊಳಗಾಗುತ್ತಾರೆ. ಆದರೂ ಕೂಡ ಪುರಾಣಗಳನ್ನು ಬದಿಗಿಟ್ಟು ಖಗೋಳಶಾಸ್ತ್ರದ ಬಗ್ಗೆ ಇರುವ ಹಿಂದೂಗಳ ಗ್ರಂಥವನ್ನೇ ಪರಿಗಣಿಸೋಣ.

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಸೂರ್ಯ ಸಿದ್ಧಾಂತ ಹಿಂದೂಗಳ ಖಗೋಳದ ಬಗೆಗಿನ ಶಾಸ್ತ್ರ ಎಂದು ಹೇಳಲಾಗುತ್ತದೆ. ಸೂರ್ಯ ಸಿದ್ಧಾಂತದ ಮೊದಲನೆ ಅಧ್ಯಾಯದ 11ನೆಯ ಶ್ಲೋಕ ಹೀಗೆ ಹೇಳುತ್ತದೆ: “ಅತೋ ಧನಣಂ ಸುಮಹತ್ತೇಷಾಂ ಗತಿವಶಾದ್ಭವೇತ್, ಆಕೃಷ್ಯಮಾಣಾಸ್ತೈರೆವಂ ವ್ಯೋಮ್ನಿ ಯಾನ್ತ್ಯನಿಲಾಹತಾಃ”. ಅಂದರೆ ಅವುಗಳ ಚಲನೆಯ ಪ್ರಮಾಣಕ್ಕನುಸಾರವಾಗಿ ಇವುಗಳ ಧನ ಹಾಗೂ ಋಣಗಳು ಅತ್ಯಂತ ಹೆಚ್ಚಾಗಿರುತ್ತದೆ. ಇದರಿಂದಾಗಿ ಅವುಗಳಿಂದ ಆಕರ್ಷಿತವಾಗುವ ಈ ಗ್ರಹಗಳು ಆಕಾಶದಲ್ಲಿ ಗಾಳಿಯ ಮೂಲಕ ಚಲಾಯಮಾನವಾಗುತ್ತವೆ. ಬರಿ ಗ್ರಹಗಳು ಮಾತ್ರವಲ್ಲ, ನಕ್ಷತ್ರಗಳು ಕೂಡ ಗಾಳಿಯ ಮೂಲಕ ಚಲಾಯಮಾನವಾಗುತ್ತವೆ ಎಂದು ಅದೇ ಅಧ್ಯಾಯದ 73ನೆಯ ಶ್ಲೋಕ ಹೇಳುತ್ತದೆ. “ಸಚ ಧುವಯೋವದ್ಧಮಾಕಂಪಿತಂ ಪ್ರವಹಾನಿರೆ ಪಯತ್ಯಜಲ್ ತನ್ನದಾ ಯಟ ಕಷಾ ಯಥಾಕ್ರಮಮ್”. ಇದು ಶೋಧನೆಯ ದಾರಿಯಲ್ಲಿ ಅತಿ ಪ್ರಾಥಮಿಕ ತಪ್ಪು ತಿಳಿವಳಿಕೆ ಎಂದುಕೊಂದು ಮುಂದೆಹೋಗಬಹುದೇ?

ಮೊದಲು ಜನ ಭೂಮಿಯೇ ಸೌರಮಂಡಲದ ಕೇಂದ್ರ ಎಂದೂ, ಸೂರ್ಯ, ಚಂದ್ರ ಹಾಗೂ ಇತರೆ ಗ್ರಹ ನಕ್ಷತ್ರಗಳು ಭೂಮಿಯ ಸುತ್ತ ಪ್ರದಕ್ಷಿಣೆ ಮಾಡುತ್ತವೆ ಎಂದೂ ಅಂದುಕೊಂಡಿದ್ದರು. ನಂತರ ಸೂರ್ಯನೇ ಸೌರ ಮಂಡಲದ ಕೇಂದ್ರವೆಂದೂ, ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳು ಸೂರ್ಯನ ಸುತ್ತ ಪ್ರದಕ್ಷಿಣೆ ಮಾಡುತ್ತವೆ ಎಂದೂ ಕಂಡುಕೊಂಡರು. ಆದರೆ ಸೂರ್ಯ ಕೇಂದ್ರಿತ ಸೌರಮಂಡಲದ ಪರಿಕಲ್ಪನೆ ಹಿಂದೂ ಋಷಿಗಳಿಗೆ ಮೊದಲಿನಿಂದಲೂ ಗೊತ್ತಿತ್ತು ಎಂದು ಹಿಂದೂ ಪಂಡಿತರು ಹೇಳಿಕೊಳ್ಳುತ್ತಾರೆ. ಆದರೆ ಸೂರ್ಯ ಸಿದ್ಧಾಂತದ 12ನೆಯ ಅಧ್ಯಾಯದ 32ನೆಯ ಶ್ಲೋಕ ಭೂಮಿಯನ್ನು ಬರಿ ಸೌರಮಂಡಲದ ಕೇಂದ್ರವನ್ನಾಗಿ ಅಲ್ಲ, ಇಡೀ ಬ್ರಹ್ಮಾಂಡದ ಕೇಂದ್ರವನ್ನಾಗಿ ಪರಿಕಲ್ಪಿಸುತ್ತದೆ: “ಮಧ್ಯೆ ಸಮನ್ತಾದಂಡಸ್ಯ ಭೂಗೋಲೋ ವ್ಯೊಮ್ನಿ ತಿಷ್ಟತಿ”.

ಹಿಂದೂಗಳ ಪ್ರಾಚೀನ ಋಷಿಗಳಲ್ಲಿ ಆಕಾಶಕಾಯಗಳ ಬಗ್ಗೆ ಇಷ್ಟೊಂದು (ಅ)’ಜ್ಞಾನ’ವಿದ್ದರೂ ’ನಮ್ಮ ವಿಜ್ಞಾನದಂತಹ ವಿಜ್ಞಾನ ಮತ್ತೊಂದಿಲ್ಲ’ ಎಂದು ಈ ಹಿಂದೂ ಮತಾಂಧರು ಕೊಚ್ಚಿಕೊಳ್ಳುವುದೇನೂ ಕಡಿಮೆಯಾಗಿಲ್ಲ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...