Homeಕರ್ನಾಟಕಹಳೇ ಮೈಸೂರು ಪ್ರಾಂತ್ಯದಲ್ಲಿ ಬೀಸಿದ ಕಾಂಗ್ರೆಸ್ ಅಲೆ

ಹಳೇ ಮೈಸೂರು ಪ್ರಾಂತ್ಯದಲ್ಲಿ ಬೀಸಿದ ಕಾಂಗ್ರೆಸ್ ಅಲೆ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿ, ಸರ್ಕಾರ ರಚಿಸಲು ಮುಂದಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದರ ಜೊತೆಗೆ ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರಿನಲ್ಲಿಯೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ಪರಿಣಾಮ ಬಹುಮತಕ್ಕಿಂತ 22 ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದೆ.

ಸಾಮಾನ್ಯವಾಗಿ ಜೆಡಿಎಸ್-ಕಾಂಗ್ರೆಸ್ ನೆಲೆಯಾಗಿದ್ದ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಹಿಡಿತ ಕಳೆದುಕೊಳ್ಳುತ್ತಿದೆ. ಅಲ್ಲಿ ಈ ಬಾರಿ ಕಾಂಗ್ರೆಸ್ ಪಾರಮ್ಯ ಮೆರೆದರೆ, ಬಿಜೆಪಿ ಧೂಳೀಪಟವಾಗಿದೆ ಎಂಬುದನ್ನು 2023ರ ವಿಧಾನಸಭಾ ಫಲಿತಾಂಶಗಳು ಸ್ಪಷ್ಟಪಡಿಸುತ್ತಿವೆ.

ಕೊಡಗು 2, ಮೈಸೂರು 11, ಚಾಮರಾಜನಗರ 4, ಮಂಡ್ಯ 7, ಹಾಸನ 7, ರಾಮನಗರ 4, ಕೋಲಾರ 6, ಚಿಕ್ಕಬಳ್ಳಾಪುರ 5, ತುಮಕೂರಿನ 11 ಕ್ಷೇತ್ರಗಳು ಸೇರಿ ಹಳೇ ಮೈಸೂರು ಪ್ರಾಂತ್ಯವು 9 ಜಿಲ್ಲೆಗಳ 57 ಕ್ಷೇತ್ರಗಳನ್ನು ಹೊಂದಿದೆ. ಇಲ್ಲಿ ಈ ಬಾರಿ ಕಾಂಗ್ರೆಸ್ 36 ಸ್ಥಾನಗಳನ್ನು ಗೆದ್ದುಕೊಂಡರೆ, ಜೆಡಿಎಸ್ 14 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಸರ್ವೋದಯ ಕರ್ನಾಟಕ ಒಂದು ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಗಿಂತ 19 ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದೆ. ಜೆಡಿಎಸ್ 13 ಸ್ಥಾನ ಕಳೆದುಕೊಂಡರೆ, ಬಿಜೆಪಿ ಆರು ಸ್ಥಾನ ಕಳೆದುಕೊಂಡಿದೆ.

ಸದ್ಯ ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷಗಳ ಬಲಾಬಲ

 

ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕೈ ಹಿಡಿದ ಅಹಿಂದ ಮತಗಳು

ಈ ಮೊದಲು ಒಕ್ಕಲಿಗ ಸಮುದಾಯದ ಅರ್ಧದಷ್ಟು ಮತಗಳು, ಮುಸ್ಲಿಂ, ದಲಿತ ಸಮುದಾಯದ ಒಂದಷ್ಟು ಮತಗಳನ್ನು ಜೆಡಿಎಸ್ ಬಾಚಿಕೊಳ್ಳುತ್ತಿತ್ತು. ಹಾಗಾಗಿ ಕಳೆದ ಮೂರು ಚುನಾವಣೆಗಳಲ್ಲಿ ಅದು ಸಾಕಷ್ಟು ಸ್ಥಾನಗಳನ್ನು ಗಳಿಸಿತ್ತು. 2018ರಲ್ಲಂತೂ ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗಬೇಕೆಂಬ ಪ್ರಬಲ ಒಕ್ಕಲಿಗರ ಅಲೆ ಬೀಸಿತ್ತು. ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಎಂಬ ಕಥನ ಹರಿದಾಡಿತ್ತು. ಇದೆಲ್ಲದರ ಪರಿಣಾಮ ಜೆಡಿಎಸ್ 27 ಸ್ಥಾನಗಳಲ್ಲಿ ಗೆಲುವು ಕಂಡರೆ ಕಾಂಗ್ರೆಸ್ 17 ಸ್ಥಾನಗಳಿಗೆ ಕುಸಿದಿತ್ತು. ಆದರೆ ಎಚ್.ಡಿ ಕುಮಾರಸ್ವಾಮಿಯವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಆಡಳಿತಾರೂಢ ಬಿಜೆಪಿಗಿಂತಲೂ ಕಾಂಗ್ರೆಸ್‌ಅನ್ನು ಟೀಕಿಸುವಲ್ಲಿ ಹೆಚ್ಚಿನ ಸಮಯ ಕಳೆದುಬಿಟ್ಟರು. ಬಿಜೆಪಿಯ ಜನವಿರೋಧಿ ಭೂಸುಧಾರಣೆ ಕಾಯ್ದೆಗೆ ಪರಿಷತ್‌ನಲ್ಲಿ ಜೆಡಿಎಸ್ ಬೆಂಬಲ ನೀಡಿತು. ಕಾಂಗ್ರೆಸ್‌ನ ಸಭಾಪತಿಯನ್ನು ಇಳಿಸಲು ಪರೋಕ್ಷ ಸಹಾಯ ಮಾಡಿತು. ಇದರಿಂದ ಬಿಜೆಪಿ ಪಕ್ಷ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸಾಧ್ಯವಾಯಿತು. ಬಿಜೆಪಿಯು ನಂದಿನಿ ಮುಳುಗಿಸಲು ಪ್ರಯತ್ನಿಸಿದ್ದು, ಉರಿಗೌಡ-ನಂಜೇಗೌಡ ಸುಳ್ಳು ತಂದಿದ್ದನ್ನು ಕುಮಾರಸ್ವಾಮಿಯವರು ಟೀಕಿಸಿದರಾದರೂ, ಚುನಾವಣೆ ಸಮಯದಲ್ಲಿ ಅತಂತ್ರ ಫಲಿತಾಂಶ ಬಂದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತದೆ ಎಂಬ ಗುಲ್ಲಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ಅದೇ ಸಮಯದಲ್ಲಿ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ದುರಾಡಳಿತದ ವಿರುದ್ಧ ಕಾಂಗ್ರೆಸ್ ದೊಡ್ಡ ದನಿಯೆತ್ತಿತ್ತು. ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಪ್ರಣಾಳಿಕೆಯಲ್ಲಿ ಬಡವರ ಪರವಾದ ಭರವಸೆಗಳನ್ನು ರೂಪಿಸಿತ್ತು. ಬಿಜೆಪಿಯ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳ ಹಸಿ ಸುಳ್ಳಿನ ವಿರುದ್ಧ ತೊಡೆತಟ್ಟಿತು. ವಿಧಾನಪರಿಷತ್ ಗೆಲುವಿನ ನಂತರ ಪಕ್ಷ ಸಂಘಟನೆಯನ್ನು ಸದೃಢಗೊಳಿಸಿತ್ತು. ಸಿದ್ದರಾಮಯ್ಯನವರು ಸಿಎಂ ಆಗುತ್ತಾರೆ ಎಂಬ ಅಲೆ ಕಂಡು ಬಂತು. ಈ ಎಲ್ಲಾ ಕಾರಣಗಳಿಂದ ಒಂದಷ್ಟು ಒಕ್ಕಲಿಗ ಮತಗಳ ಜೊತೆಗೆ ಬಹುತೇಕ ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗದ ಕುರುಬ ಮತಗಳು ದಕ್ಕಿದವು. ಮುಸ್ಲಿಂ ಸಮುದಾಯದ ಶೇ.88, ದಲಿತ ಸಮುದಾಯದ ಶೇ.60 ಮತ್ತು ಕುರುಬ ಸಮುದಾಯದ ಶೇ.63 ರಷ್ಟು ಮತಗಳು ಕಾಂಗ್ರೆಸ್ ಪಾಲಾಗಿವೆ ಎಂಬ ಅಂದಾಜಿದೆ. ಅದರಿಂದಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.

ಜೆಡಿಎಸ್ ಕುಸಿತಕ್ಕೆ ಕಾರಣಗಳು

ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣವೂ ಮೈಸೂರು ಪ್ರಾಂತ್ಯದ ಜನರಲ್ಲಿ ಬೇಸರ ಮೂಡಿಸಿದೆ. ಅವರ ಕುಟುಂಬ ಕನಿಷ್ಟ 8 ಜನ ಅಧಿಕಾರದಲ್ಲಿರುವುದು, ಮಂಡ್ಯ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸಿದ್ದು, ಅಲ್ಲಿ ಸೋತ ನಂತರ ವಿಧಾನಸಭಾ ಚುನಾವಣೆಗೆ ರಾಮನಗರಕ್ಕೆ ತಂದಿದ್ದು, ಟಿಕೆಟ್ ಹಂಚಿಕೆಯಲ್ಲಿಯೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದದ್ದು ಜೆಡಿಎಸ್‌ಗೆ ಮುಳುವಾಯಿತು. ಇದರಿಂದಾಗಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕೂಡ ಸೋಲುವ ಪರಿಸ್ಥಿತಿ ಉಂಟಾಯಿತು.

2017ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಚಲುವರಾಯಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ ಮತ್ತು ಎಚ್.ಸಿ ಬಾಲಕೃಷ್ಣರವರು 2018ರ ಚುನಾವಣೆಯಲ್ಲಿ ಜೆಡಿಎಸ್ ಎದುರು ಸರಾಸರಿ 50,000 ಮತಗಳ ಬೃಹತ್ ಅಂತರದಲ್ಲಿ ಸೋಲು ಕಂಡಿದ್ದರು. ಅಷ್ಟರಮಟ್ಟಿಗೆ ಈ ಪಕ್ಷಾಂತರಿಗಳು ದೇವೇಗೌಡರ ಕುಟುಂಬಕ್ಕೆ ಮತ್ತು ಒಕ್ಕಲಿಗರಿಗೆ ದ್ರೋಹ ಮಾಡಿದರು ಎಂಬ ಕಥನ ಸೃಷ್ಟಿಸಲಾಗಿತ್ತು. ಆದರೆ ಐದು ವರ್ಷಗಳ ಒಳಗೆ ಅದೆಲ್ಲ ಸುಳ್ಳು, ಬದಲಿಗೆ ದೇವೇಗೌಡರ ಕುಟುಂಬವು ನಮಗೆ ಸ್ವಾತಂತ್ರ್ಯ ನೀಡುತ್ತಿಲ್ಲ, ನಮಗೆ ಬೆಲೆ ಕೊಡುತ್ತಿಲ್ಲ ಎಂದು ಜನರ ಮನವೊಲಿಸಲು ಸಫಲವಾದರು. ಹಾಗಾಗಿ ಈ ಚುನಾವಣೆಯಲ್ಲಿ ಆ ಮೂವರು ಜೆಡಿಎಸ್ ಎದುರು ಗೆಲುವು ಸಾಧಿಸಿದ್ದಾರೆ. ಪರಿಣಾಮವಾಗಿ ಮಂಡ್ಯದಲ್ಲಿ ಜೆಡಿಎಸ್ 6 ಕ್ಷೇತ್ರ ಕಳೆದುಕೊಂಡರೆ, ರಾಮನಗರದಲ್ಲಿ ಎರಡು ಸ್ಥಾನ ಕಳೆದುಕೊಂಡಿತು. ಮೈಸೂರು, ತುಮಕೂರಿನಲ್ಲಿಯೂ ಕೇವಲ ಎರಡೆರಡು ಸ್ಥಾನಗಳಿಗೆ ಸೀಮಿತವಾಗಿದೆ.

ಜಾತಿ ಆಧಾರದಲ್ಲಿ ನೋಡುವುದಾದರೆ ಶೇ.46 ರಷ್ಟು ಒಕ್ಕಲಿಗ ಮತಗಳನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾದರೂ ಸಹ ದಲಿತರ (ಕೇವಲ 14%) ಮತ್ತು ಮುಸ್ಲಿಮರ (ಕೇವಲ 8%) ಮತಗಳನ್ನು ಮಾತ್ರ ಪಡೆದಿದೆ ಎಂದು ಅಂದಾಜಿಸಲಾಗಿದೆ.

ಜೆಡಿಎಸ್ ಪಕ್ಷವು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡಲೇ ಇಲ್ಲ. ಕುಮಾರಸ್ವಾಮಿಯವರನ್ನು ಬಿಟ್ಟರೆ ಉಳಿದ ಸಮರ್ಥ ನಾಯಕರನ್ನು ಬೆಳೆಸದಿರುವುದು, ವಿರೋಧ ಪಕ್ಷವಾಗಿ ವರ್ತಿಸುವ ಬದಲು ಬಿಜೆಪಿಯ ಸ್ನೇಹಿತನಂತೆ ಹಲವು ಬಾರಿ ವರ್ತಿಸಿದ್ದು ಅದಕ್ಕೆ ಮುಳುವಾಯಿತು.

ನಡೆಯದ ಬಿಜೆಪಿ ಆಟಗಳು

ಬಿಜೆಪಿ ಪಕ್ಷವು ಬೇರೆ ಕಡೆಯಂತೆ ಇಲ್ಲಿಯೂ ಹಿಂದುತ್ವ ಪ್ರಯೋಗದ ಮೂಲಕ ಗೆಲ್ಲಲು ಹವಣಿಸಿತು. ಇಲ್ಲಿಯೂ ಹಿಂದು-ಮುಸ್ಲಿಂ ರಾಜಕಾರಣ ಮಾಡಲು ಮುಂದಾಯಿತು. ಹಾಗಾಗಿ ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಯತ್ನಿಸಿತು. ಟಿಪ್ಪು ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ ಎಂಬಂತಹ ಟಿಪ್ಪು ಸುಲ್ತಾನ್ ವಿರುದ್ಧದ ಸಲ್ಲದ ಅಪಪ್ರಚಾರಗಳನ್ನು ನಿರಂತರವಾಗಿ ನಡೆಸಿತು. ಟಿಪ್ಪು ಒಕ್ಕಲಿಗರಿಗೆ ಕಿರುಕುಳ ನೀಡಿದನೆಂದೂ, ಟಿಪ್ಪುವನ್ನು ಕೊಂದಿದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಒಕ್ಕಲಿಗ ಯೋಧರೆಂದೂ ಕಲ್ಪಿತ ಕತೆಗಳನ್ನು ಸೃಷ್ಟಿಸಿ ಒಕ್ಕಲಿಗರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡಿತು. ರಾಮನಗರದ ರಾಮದೇವರಬೆಟ್ಟದಲ್ಲಿ ದಕ್ಷಿಣದ ಅಯೋಧ್ಯೆಯನ್ನು ನಿರ್ಮಿಸುತ್ತೇವೆ ಎಂದು ಬೊಬ್ಬಿರಿಯಿತು. ಸಿ.ಎನ್ ಅಶ್ವತ್ಥ ನಾರಾಯಣ್, ಆರ್ ಅಶೋಕ್‌ರಂತಹ ಒಕ್ಕಲಿಗ ಸಚಿವರು ಇಂತಹ ಮಾತುಗಳನ್ನಾಡಿಕೊಂಡು ತುಂಬಾ ಓಡಾಡಿದರು. ಆದರೆ ಇವೆಲ್ಲವೂ ಬಿಜೆಪಿಗೆ ಉಲ್ಟಾ ಹೊಡೆದವು. ಜನರ ದೈನಂದಿನ ವಿಷಯಗಳನ್ನು ಮರೆಮಾಚಿ ಸುಳ್ಳುಗಳನ್ನು ಹೇಳಲು ಹೊರಟ ಬಿಜೆಪಿಗೆ ಮುಳುವಾದವು.

ಹಳೇ ಮೈಸೂರು ಭಾಗದ 9 ಜಿಲ್ಲೆಗಳ ಪೈಕಿ ಚಾಮರಾಜನಗರ, ಕೊಡಗು, ಮಂಡ್ಯ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿ 6 ಜಿಲ್ಲೆಗಳಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ಮೈಸೂರಿನ 11 ಸ್ಥಾನಗಳ ಪೈಕಿ ಬಿಜೆಪಿ ಒಂದರಲ್ಲಿ ಮಾತ್ರ ಗೆಲುವು ಕಾಣಲು ಸಾಧ್ಯವಾಗಿದೆ. ವಿ.ಸೋಮಣ್ಣ ಎರಡೂ ಕಡೆ ಸೋಲು ಕಂಡರು. ಬಿಜೆಪಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದು ಅವರ ದುರಾಡಳಿತಕ್ಕೆ ಸಾಕ್ಷಿ ಎನ್ನಬಹುದು. ಇನ್ನು ಹಾಸನದಲ್ಲಿ ಅಹಂಕಾರದ ಮಾತುಗಳನ್ನಾಡಿದ ಪ್ರೀತಂ ಗೌಡರನ್ನು ಜನ ಮನೆಗೆ ಕಳಿಸಿದರು. ಆಪರೇಷನ್ ಕಮಲದ ಬಲೆಗೆ ಬಿದ್ದಿದ್ದ ಕೆ.ಆರ್ ಪೇಟೆಯ ನಾರಾಯಣಗೌಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಆದರೆ ಬಿಜೆಪಿ ಪಕ್ಷ ಕಳೆದ ಚುನಾವಣೆಗಿಂತ 6 ಸ್ಥಾನ ಕಡಿಮೆ ಪಡೆದರೂ ಸಹ ತನ್ನ ವೋಟ್ ಶೇರ್‌ಅನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಮುಖ್ಯವಾಗಿ ಮಂಡ್ಯ ಜಿಲ್ಲೆಯಲ್ಲಿ ಇದ್ದ ಏಕೈಕ ಸ್ಥಾನ ಕಳೆದುಕೊಂಡರೂ, 5 ಕ್ಷೇತ್ರಗಳಲ್ಲಿ ಸರಾಸರಿ 30,000 ದಷ್ಟು ಮತಗಳನ್ನು ಪಡೆದುಕೊಂಡಿದೆ. ಹಾಸನದಲ್ಲಿ ಎರಡು ಸ್ಥಾನ ಗೆದ್ದುಕೊಂಡಿದೆ. ತುಮಕೂರಿನಲ್ಲಿ ಎರಡು ಸ್ಥಾನದೊಂದಿಗೆ ಮತಗಳನ್ನು ಹೆಚ್ಚಿಸಿಕೊಂಡಿದೆ. ಇದು ಬಿಜೆಪಿಗೆ ಬಂದ ಮತಗಳು ಎನ್ನುವುದಕ್ಕಿಂತ ಅಭ್ಯರ್ಥಿಗಳ ವರ್ಚಸ್ಸಿನ ಮೇಲೆಯೂ ಮತ ಪಡೆದಿದ್ದಾರೆ. ಬಿಜೆಪಿ ಲಿಂಗಾಯಿತ ಸಮುದಾಯದ 64% ರಷ್ಟು ಮತಗಳು, ಒಬಿಸಿಯಿಂದ 45% ಮತ್ತು ಒಕ್ಕಲಿಗ ಸಮುದಾಯದ 25% ರಷ್ಟು ಮತಗಳನ್ನು ಪಡೆದುಕೊಂಡಿದೆ ಎಂದು ಅಂದಾಜಿಸಲಾಗುತ್ತಿದೆ. ಹಾಗಾಗಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಏನಾದರೂ ಕಮಾಲ್ ಮಾಡಲು ಯತ್ನಿಸುತ್ತಿದೆ. ಆದರೆ ಮುಂದಿನ ಬಾರಿಯೂ ಅದು ಜನರ ಸಮಸ್ಯೆಗಳನ್ನು ಹೊರತುಪಡಿಸಿ ದ್ವೇಷದ ಅಜೆಂಡಾಗಳನ್ನೇ ಇಟ್ಟುಕೊಂಡು ಹೋದಲ್ಲಿ ನಿರಾಸೆ ಮತ್ತೆ ಕಟ್ಟಿಟ್ಟಬುತ್ತಿ ಎಂಬುದನ್ನು ಈ ಫಲಿತಾಂಶ ತೋರಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...