Homeಕರ್ನಾಟಕಕಾರ್ಮಿಕ ಕಾಯಿದೆಗಳ ರದ್ದು ಎಷ್ಟು ಸರಿ? - ಡಾ.ಚಂದ್ರಪೂಜಾರಿ

ಕಾರ್ಮಿಕ ಕಾಯಿದೆಗಳ ರದ್ದು ಎಷ್ಟು ಸರಿ? – ಡಾ.ಚಂದ್ರಪೂಜಾರಿ

- Advertisement -
- Advertisement -

ಗತಿಯಿಲ್ಲದ ಕುಟುಂಬಗಳು ತಾವು ಬದುಕಿ ಉಳಿಯಲು ತಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟಂತೆ ಸರಕಾರಗಳು ತಮ್ಮ ದುಡಿಯುವ ತಳಸ್ತರದ ಜನರ ಭವಿಷ್ಯವನ್ನು ಬಲಿ ಕೊಡುತ್ತಿವೆ. ಕಾರ್ಮಿಕ ಕಾಯ್ದೆಗಳ ರದ್ದು ಮಾಡುತ್ತಿರುವ ಸರ್ಕಾರದ ನಡೆಯನ್ನು ವಿಶ್ಲೇಷಿಸಿದ್ದಾರೆ ಚಿಂತಕ ಚಂದ್ರ ಪೂಜಾರಿ

ಕಾರ್ಮಿಕ ಕಾಯಿದೆಗಳನ್ನು ರದ್ದುಗೊಳಿಸುವುದರ ಸರಿ ತಪ್ಪುಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ಈ ಸಮಸ್ಯೆಗೆ ಎರಡುಮೂರು ಆಯಾಮಗಳಿವೆ. ಒಂದು, ಕಾಯಿದೆಗಳು ರದ್ದುಗೊಂಡ ಸಂದರ್ಭ. ಎರಡು, ಪರಿಣಾಮಗಳು ಮತ್ತು ಮೂರು, ಕಾಯಿದೆಗಳನ್ನು ರದ್ದುಗೊಳಿಸಲು ನೀಡಿರುವ ಕಾರಣಗಳು. 1897ರಲ್ಲಿ ಮುಂಬಯಿಯಲ್ಲಿ ಪ್ಲೇಗ್ ಶುರುವಾಯಿತು. ಇದು ಬೇರೆ ಪ್ರದೇಶಗಳಿಗೆ ಹರಡದಂತೆ ತಡೆಗಟ್ಟಬೇಕಾಗಿತ್ತು. ಸಾರ್ವಜನಿಕ ಸಭೆಗಳನ್ನು, ಸಂಸ್ಥೆಗಳನ್ನು, ವ್ಯಾಪಾರ, ಉದ್ದಿಮೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದೇ ಉತ್ತಮ ಮಾರ್ಗವೆಂದು ಬ್ರಿಟಿಷ್ ಸರಕಾರ ನಿರ್ಧರಿಸಿತು. ಸಾರ್ವಜನಿಕ ವ್ಯವಹಾರಗಳನ್ನು ರದ್ದುಗೊಳಿಸಲು ಅಧಿಕಾರ ನೀಡುವ ದಿ ಎಪಿಡಮಿಕ್ ಡಿಸೀಸ್ ಆಕ್ಟ್‍ನ್ನು ಬ್ರಿಟಿಷ್ ಸರಕಾರ 1897ರಲ್ಲಿ ಜಾರಿಗೆ ತಂದಿದೆ. ಇದೇ ಕಾಯಿದೆಯನ್ನು ಮತ್ತು ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005ಗಳನ್ನು ಬಳಸಿಕೊಂಡು ಮಾರ್ಚ್ 24ರಿಂದ ಕೇಂದ್ರ ಸರಕಾರ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿದೆ. ಸ್ಥಳೀಯ ಮಟ್ಟದಲ್ಲಿ ಸಮಸ್ಯೆಯನ್ನು ನಿಭಾಯಿಸಲು ಅವಶ್ಯವಿರುವ ತಿದ್ದುಪಡಿಯನ್ನು ಮಾಡಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಅವಕಾಶ ನೀಡಿದೆ. ಈ ಕಾಯಿದೆಗಳು ಜಾರಿಗೊಂಡ ನಂತರ ಸಾಮಾನ್ಯ ಸಂದರ್ಭದಲ್ಲಿರುವ ಹಲವು ಹಕ್ಕುಗಳು ಕಾಣೆಯಾಗಿವೆ.

ಪ್ಲೇಗ್ ತಡೆಗಟ್ಟಲು ಜಾರಿಗೆ ತಂದ ಕಾಯಿದೆಯನ್ನು ಬಳಸಿಕೊಂಡು ಬ್ರಿಟಿಷ್ ಸರಕಾರ ಸ್ವಾತಂತ್ರ್ಯ ಹೋರಾಟಗಾರರನ್ನೂ ಜೈಲಿಗೆ ಅಟ್ಟಲು ಮರೆಯಲಿಲ್ಲ. ಈಗಲೂ ಈ ಕಾಯಿದೆ ಜಾರಿಗೊಂಡ ಸಂದರ್ಭದಲ್ಲೇ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರುದ್ದ ಹೋರಾಡಿದವರನ್ನು ಗುರುತಿಸಿ ಬಂಧಿಸಲಾಗುತ್ತಿದೆ. ಸರಕಾರದ ಪಾಲಿಸಿಗಳನ್ನು ಟೀಕಿಸುವವರನ್ನು ಬಂಧಿಸಲಾಗುತ್ತಿದೆ. ಸಾರ್ವಜನಿಕ ಪ್ರತಿಭಟನೆ ಕಾರಣಕ್ಕೆ ಹಿಂದೆ ಅನುಷ್ಠಾನಗೊಳ್ಳದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಮಿಕ ಕಾಯಿದೆ ರದ್ದುಗೊಳಿಸುವುದು ಕೂಡ ಇದೇ ಸಾಲಿನಲ್ಲಿ ಬರುವ ಕ್ರಮ. ಮೂಲಭೂತ ಹಕ್ಕುಗಳು ಜಾರಿಯಲ್ಲಿರುವ ಸಂದರ್ಭದಲ್ಲಿ ಕಾರ್ಮಿಕ ಕಾಯಿದೆಗಳನ್ನು ರದ್ದುಗೊಳಿಸುವ ಕ್ರಮ ದೊಡ್ಡ ವಿರೋಧವನ್ನು ಎದುರಿಸುತ್ತಿತ್ತು. ಆದರೆ ಈಗ ಕಾರ್ಮಿಕ ಸಂಘಟನೆಗಳು, ಸಾರ್ವಜನಿಕರು ಸಭೆ ಸೇರಿ ಪ್ರತಿಭಟಿಸುವ ಸ್ಥಿತಿಯಲ್ಲಿ ಇಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಕಾಯಿದೆಗಳನ್ನು ರದ್ದುಪಡಿಸಲಾಗಿದೆ. ಈ ಕ್ರಮದ ಸರಿ ತಪ್ಪುಗಳನ್ನು ಮತ್ತು ಪರಿಣಾಮಗಳನ್ನು ಚರ್ಚಿಸುವ ಮುನ್ನ ಎಲ್ಲದಕ್ಕೂ ಕಾರಣವಾಗಿರುವ ಲಾಕ್‍ಡೌನ್‍ನ್ನು ಪುನರ್ ಪರಿಶೀಲಸಬೇಕಾಗಿದೆ. ಏಕೆಂದರೆ ಸಮಷ್ಠಿ ಕಲ್ಯಾಣದ ಹೆಸರಲ್ಲಿ ತಳಸ್ತರದ ಜನರನ್ನು ಬೇಕಾಬಿಟ್ಟಿ ನಡೆಸಿಕೊಂಡ ಕತೆಯನ್ನು ಲಾಕ್‍ಡೌನ್ ಬಿಚ್ಚಿಡುತ್ತಿದೆ.

ಜನವರಿಯಿಂದಲೇ ನಮ್ಮ ನೆರೆ ರಾಷ್ಟ್ರ ಚೀನಾ ಕೊರೋನ ಸಮಸ್ಯೆಯಿಂದ ಪರದಾಡುತ್ತಿತ್ತು. ಆ ಸಂದರ್ಭದಲ್ಲೇ ಪರದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ಪರೀಕ್ಷೆ ಮಾಡಿ ಕ್ವಾರಂಟೀನ್ ಮಾಡುತ್ತಿದ್ದರೆ, 130 ಕೋಟಿಯಷ್ಟು ಜನರನ್ನು ಲಾಕ್‍ಡೌನ್ ಹೆಸರಲ್ಲಿ ಕೂಡಿಹಾಕುವ ಅನಿವಾರ್ಯತೆ ಸೃಷ್ಟಿಯಾಗುತ್ತಿರಲಿಲ್ಲ. ಒಂದು ವೇಳೆ ಲಾಕ್‍ಡೌನ್ ಮಾಡುವುದು ಅನಿವಾರ್ಯವಾದರೂ ಇಡೀ ದೇಶವನ್ನೇ ಲಾಕ್‍ಡೌನ್ ಮಾಡುವುದು ಎಷ್ಟು ಸರಿ. ಇದೊಂದು ಬಗೆಯಲ್ಲಿ ಕೆರೆಯಲ್ಲಿರುವ ಒಂದೆರಡು ಮೀನುಗಳನ್ನು ಹಿಡಿಯಲು ಇಡೀ ಕೆರೆಯನ್ನೇ ಬತ್ತಿಸಿದಂತಲ್ಲವೇ? ಸೋಂಕಿತರು ಹೆಚ್ಚಿರುವ ಪ್ರದೇಶವನ್ನು ಲಾಕ್‍ಡೌನ್ ಮಾಡಿ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಮುಂದುವರಿಸಬಹುದಿತ್ತು. ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದರೆ ತಳಸ್ತರದ ಜನರು ದುಡಿದು ತಮ್ಮ ಊಟ ಗಳಿಸುತ್ತಿದ್ದರು. ರೋಗದ ಲಕ್ಷಣ ಇರುವವರನ್ನು ಪರೀಕ್ಷಿಸುವ ಕ್ರಮದ ಬದಲು ರ್ಯಾಂಡಮ್ ಪರೀಕ್ಷೆ ಮಾಡಿ ಸೋಂಕಿತರನ್ನು ಗುರುತಿಸಬೇಕಿತ್ತು. ಸೋಂಕಿತರನ್ನು ಗುರುತಿಸದೆ ಇಡೀ ಪ್ರದೇಶವನ್ನು ಲಾಕ್‍ಡೌನ್ ಮಾಡುವುದರಿಂದ ತಳಸ್ತರದ ಜನರು ಹೆಚ್ಚು ನಷ್ಟ ಅನುಭವಿಸುವಂತಾಯಿತು. ಏಕೆಂದರೆ ಕೆಲವು ಚದರ ಅಡಿ ಮನೆಯಲ್ಲಿ ಏಳೆಂಟು ಮಂದಿ ವಾಸಿಸುವ ಇವರು ಫಿಸಿಕಲ್ ಡಿಸ್ಟೆನ್ಸ್ ಕಾಪಾಡುವುದು ಅಸಾಧ್ಯವಾಗಿತ್ತು. ಸೋಂಕಿತರು ಇತರರಿಗೆ ರೋಗ ಹಬ್ಬಿಸುವುದು ಸುಲಭವಾಯಿತು. ಇಂತಹ ಸಾಮಾನ್ಯ ಸಂಗತಿಗಳನ್ನೂ ಆಲೋಚಿಸದೆ ಲಾಕ್‍ಡೌನ್ ಘೋಷಿಸಿದ್ದು ಯಾರು? ಕಾರ್ಮಿಕರೇ? ನಾಯಕರೇ…? ನಾಯಕರ ಅಯೋಜಿತ, ಅಸೂಕ್ಷ್ಮ ಲಾಕ್‍ಡೌನ್ ತೀರ್ಮಾನಗಳಿಗೆ ಇವತ್ತು ಕಾರ್ಮಿಕರು ಬೆಲೆ ತೆರುವಂತಾಗಿದೆ.

ಅಂದು ‘ಆರೋಗ್ಯ ಮುಖ್ಯ, ಬದುಕಿ ಉಳಿದರೆ ಆರ್ಥಿಕತೆ ಬಗ್ಗೆ ಆಲೋಚಿಸಬಹುದು’ ಎನ್ನುವ ವಾದ ಮುಂದಿಟ್ಟು ಅವೈಜ್ಞಾನಿಕ ಲಾಕ್‍ಡೌನ್‍ನ್ನು ಸಮರ್ಥಿಸಿಕೊಳ್ಳಲಾಯಿತು. ಇಂದು ‘ಆರ್ಥಿಕ ಆರೋಗ್ಯ ಸುಧಾರಿಸದಿದ್ದರೆ ಕೊರೋನಕ್ಕಿಂತಲೂ ಹೆಚ್ಚಿನ ಆಪಾಯ ಎದುರಿಸಬೇಕಾಗಬಹುದು’ ಎನ್ನುವ ವಾದ ಮುಂದಿಟ್ಟು ಲಾಕ್‍ಡೌನ್ ಲಿಫ್ಟ್ ಮಾಡಲು ತಯಾರಿ ನಡೆದಿದೆ. ಅಂದು ಆರೋಗ್ಯವೇ ಮುಖ್ಯ ಎನ್ನುವಾಗ ಯಾರ ಆರೋಗ್ಯ ಎನ್ನುವ ಪ್ರಶ್ನೆ ಕೇಳಲಿಲ್ಲ. ಇಂದು ಆರ್ಥಿಕ ಆರೋಗ್ಯ ಎನ್ನುವಾಗ ಯಾರ ಆರ್ಥಿಕ ಆರೊಗ್ಯ ಎನ್ನುವ ಪ್ರಶ್ನೆ ಕೇಳಿ ಬರುತ್ತಿಲ್ಲ. ಎಲ್ಲರ ಆರೋಗ್ಯವೇ ಮುಖ್ಯವಾಗುತ್ತಿದ್ದರೆ ಲಾಕ್‍ಡೌನ್ ಮುನ್ನ ದಿನದಿನದ ದುಡಿತದಿಂದ ಉಸಿರಾಡುವ ಕಾರ್ಮಿಕರ ಆರೋಗ್ಯದ ಪ್ರಶ್ನೆ ಮುಂಚೂಣಿಗೆ ಬರಬೇಕಿತ್ತು. ದೂರದ ಊರಲ್ಲಿ ದುಡಿಯುವ ಕಾರ್ಮಿಕರ ಸ್ಥಿತಿ ಕಾಡಬೇಕಿತ್ತು. ಊರಿಗೆ ಹೋಗಲು ಬಯಸುವ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕಿತ್ತು. ವಾಪಸ್ಸು ಹೋಗಲು ಇಚ್ಚಿಸದವರಿಗೆ ಊಟ, ವಸತಿ, ಉದ್ಯೋಗಗಳನ್ನು ಕಲ್ಪಿಸಬೇಕಿತ್ತು. ಈ ಎರಡನ್ನೂ ಮಾಡದೇ ಲಾಕ್‍ಡೌನ್ ಘೋಷಿಸಲಾಯಿತು.

ಲಾಕ್‍ಡೌನ್ ಘೋಷಣೆ ಆದ ಹಲವು ದಿನಗಳ ನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೇಶನ್ ಕೊಡಲು ಆರಂಭಿಸಿದವು. ಆದರೆ ವಸತಿ, ವಿಳಾಸ ಇಲ್ಲದ ವಲಸೆ ಕಾರ್ಮಿಕರಿಗೆ ಈ ರೇಶನ್ ತಲುಪಲೇ ಇಲ್ಲ. ಸರಕಾರೇತರ ಸಂಸ್ಥೆಗಳು, ದಾನಿಗಳು ಕೆಲವು ದಿನ ಊಟ ಕೊಟ್ಟರು. ಇವೆಲ್ಲ ಲೋಕಲ್ ಟಿವಿ ಚ್ಯಾನಲ್‍ಗಳಲ್ಲಿ, ಪತ್ರಿಕೆಗಳಲ್ಲಿ ಸುದ್ದಿ ಆದವು. ಈ ಸುದ್ದಿಗಳು ಅನುಕೂಲಸ್ಥರ ಪಾಪ ಪ್ರಜ್ಞೆಯನ್ನು ಕಡಿಮೆ ಮಾಡಲು ಬಳಕೆ ಆದಷ್ಟು ವಲಸೆ ಕಾರ್ಮಿಕರ ಊಟದ ಸಮಸ್ಯೆಯನ್ನು ಪರಿಹರಿಸಲಿಲ್ಲ. ಒಂದು ವೇಳೆ ಅವರ ಸಮಸ್ಯೆ ಪರಿಹರಿಸುತ್ತಿದ್ದರೆ ಅವರು ತಮ್ಮ ಊರಿಗೆ ಹೋಗಲು ಹಪಹಪಿಸುತ್ತಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕೆಲವು ತಿಂಗಳು ದುಡಿಯದಿದ್ದರೂ ಊಟಕ್ಕೆ ಸಮಸ್ಯೆ ಇಲ್ಲದವರ ಆರೋಗ್ಯ ಲಾಕ್‍ಡೌನ್‍ನಿಂದ ರಕ್ಷಣೆಯಾಗಿರಬಹುದು. ಆದರೆ ಬದುಕಿ ಉಳಿಯಲು ದುಡಿತವನ್ನೇ ನಂಬಿದ್ದ ಬಡ ಜನರ ಆರೋಗ್ಯಕ್ಕೆ ಲಾಕ್‍ಡೌನ್‍ನಿಂದ ಅನುಕೂಲವಾಗಿಲ್ಲ.

ಇನ್ನು ಕೆಲವು ದಿನಗಳಲ್ಲಿ ಎರಡು ತಿಂಗಳ ಲಾಕ್‍ಡೌನ್ ಪೂರ್ಣಗೊಳ್ಳುತ್ತದೆ. ಕೊರೊನ ಸಮಸ್ಯೆ ಪರಿಹಾರವಾಗಿಲ್ಲ. ಹಾಗೆಂದು ಸರಕಾರಗಳು ಲಾಕ್‍ಡೌನ್ ಮುಂದುವರಿಸಲು ಇಚ್ಚಿಸುತ್ತಿಲ್ಲ. ಇವತ್ತು ಅರ್ಥಿಕ ಆರೋಗ್ಯ ಸುಧಾರಿಸದಿದ್ದರೆ ಕೊರೊನಕ್ಕಿಂತಲೂ ಹೆಚ್ಚಿನ ಆಪಾಯ ಎದುರಿಸಬೇಕೆಂದು ಲಾಕ್‍ಡೌನ್ ಲಿಫ್ಟ್ ಮಾಡಲು ತಯಾರಿ ನಡೆದಿದೆ. ಇಂದು ಕೂಡ ಯಾರ ಆರ್ಥಿಕ ಆರೋಗ್ಯ ಸುಧಾರಿಸದಿದ್ದರೆ ಆಪಾಯ ಇದೆ ಎನ್ನುವ ಪ್ರಶ್ನೆ ಕೇಳುತ್ತಿಲ್ಲ. ಜನಸಾಮಾನ್ಯರ ಆರೋಗ್ಯ/ಆರ್ಥಿಕ ಆರೋಗ್ಯದ ಕಾಳಜಿಯನ್ನು ಖಜಾನೆ ತುಂಬಿಸಲು ಅಬಕಾರಿ ಇಲಾಖೆಯನ್ನು ಬಳಸಿಕೊಂಡ ನಿರ್ಧಾರದಲ್ಲಿ ಕಾಣಲು ಸಾಧ್ಯವೇ? ಈ ನಿರ್ಧಾರದಿಂದ ಜನ ವೈನ್ ಸ್ಟೋರ್‍ಗಳ ಮುಂದೆ ಕ್ಯೂ ನಿಂತರು. ಒಂದೆರಡು ದಿನಗಳಲ್ಲೇ ನೂರಾರು ಕೋಟಿಯಷ್ಟು ಮೊತ್ತವನ್ನು ಸರಕಾರದ ಬೊಕ್ಕಸಕ್ಕೆ ತುಂಬಿದರು. ಕಾರ್ಮಿಕ ಕಾಯಿದೆಗಳನ್ನು ರದ್ದುಗೊಳಿಸುವ ಕೆಲವು ರಾಜ್ಯಗಳ ನಿರ್ಧಾರವನ್ನು ಇದೇ ಸಾಲಿನಲ್ಲಿ ನೋಡಬಹುದು. ಕಾಯಿದೆ ರದ್ದುಗೊಳಿಸುವ ಉದ್ದೇಶ ಸರಳವಾಗಿದೆ. ಕೆಲವು ಬಡ ಕುಟುಂಬಗಳು ಬದುಕಲು ಬೇರೆ ದಾರಿ ಇಲ್ಲದೆ ತಮ್ಮ ಮಕ್ಕಳನ್ನು ಉಳ್ಳವರ ಮನೆಯಲ್ಲಿ ದುಡಿಯಲು ಬಿಡುತ್ತಿದ್ದರು. ಮಕ್ಕಳನ್ನು ಉಳ್ಳವರು ಬೇಕಾಬಿಟ್ಟಿ ದುಡಿಸಿಕೊಳ್ಳುತ್ತಾರೆ. ಹಾಗೆಂದು ಪೋಷಕರು ಉಳ್ಳವರನ್ನು ದೂರುವುದಿಲ್ಲ. ಬದಲು ಮಕ್ಕಳಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಸಲಹೆ ನೀಡುತ್ತಾರೆ. ಗತಿಯಿಲ್ಲದ ಕುಟುಂಬಗಳು ತಾವು ಬದುಕಿ ಉಳಿಯಲು ತಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಟ್ಟಂತೆ ಸರಕಾರಗಳು ತಮ್ಮ ದುಡಿಯುವ ತಳಸ್ತರದ ಜನರ ಭವಿಷ್ಯವನ್ನು ಬಲಿ ಕೊಡುತ್ತಿವೆ.

ಉತ್ತರ ಪ್ರದೇಶ ಜಾರಿಯಲ್ಲಿದ್ದ 38 ಕಾರ್ಮಿಕ ಕಾಯಿದೆಗಳಲ್ಲಿ 35ನ್ನು 3 ವರ್ಷಗಳ ಅವಧಿಗೆ ರದ್ದುಗೊಳಿಸಿದೆ. ಈ ಕೆಳಗಿನ ಮೂರು ಕಾಯಿದೆಗಳು ಮಾತ್ರ ಜೀವಂತ ಇವೆ. ಬಿಲ್ಡ್‍ಂಗ್ ಅಂಡ್ ಅದರ್ ಕನ್‍ಸ್ಟ್ರಕ್ಷನ್ ವಕ್ರ್ಸ್ ಆಕ್ಟ್, 1996, ವರ್ಕ್‍ಮೆನ್ ಕಾಂಪನ್‍ಸೇಷನ್ ಆಕ್ಟ್, 1923, ಬಾಂಡೆಡ್ ಲೇಬರ್ಸ್ ಆಕ್ಟ್, 1976 ಮತ್ತು ಸೆಕ್ಷನ್ 5 ಆಫ್ ಪೇಮೆಂಟ್ಸ್ ಆಫ್ ವೇಜಸ್ ಆಕ್ಟ್ 1936. ರದ್ದುಗೊಂಡ ಪ್ರಮುಖ ಕಾಯಿದೆಗಳು ಇಂತಿವೆ. ಫ್ಯಾಕ್ಟರೀಸ್ ಆಕ್ಟ್, ಇಂಡಸ್ಟ್ರಿಯಲ್ ಡಿಸ್ಪ್ಯುಟ್ ಆಕ್ಟ್, ಟ್ರೇಡ್ ಯೂನಿಯನ್ ಆಕ್ಟ್, ಇನ್‍ಡಸ್ಟ್ರಿಯಲ್ ಸೇಫ್ಟಿ, ಹೆಲ್ತ್, ವರ್ಕಿಂಗ್ ಕಂಡಿಶನ್, ಪೇಮೆಂಟ್ ಆಫ್ ಮಿನಿಮಮ್ ವೇಜಸ್ ಆಕ್ಟ್, ಪೇಮೆಂಟ್ ಆಫ್ ಬೋನಸ್ ಅಂಡ್ ಪ್ರೊವಿಡೆಂಡ್ ಫಂಡ್ ಮುಂತಾದ ಕಾಯಿದೆಗಳು ರದ್ದುಗೊಂಡಿವೆ. ಕೆಲಸದ ಅವಧಿ, ರಜೆ, ಕ್ಯಾಂಟೀನ್, ಕೆಲಸಗಾರರ ಆರೋಗ್ಯ, ಭದ್ರತೆ, ಅವಘಡದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಫ್ಯಾಕ್ಟರಿಯಲ್ಲಿರಬೇಕಾದ ಕನಿಷ್ಠ ಸವಲತ್ತು ಮುಂತಾದವುಗಳನ್ನು ಪ್ಯಾಕ್ಟರೀಸ್ ಆಕ್ಟ್ 1987 ಒಳಗೊಂಡಿದೆ. ಕಾರ್ಮಿಕರು ಮತ್ತು ಮ್ಯಾನೇಜ್‍ಮೆಂಟ್ ನಡುವಿನ ತಕರಾರುಗಳನ್ನು ಪರಿಹರಿಸುವ ಮೆಕಾನಿಸಂ ಅನ್ನು ಇಂಡಸ್ಟ್ರಿಯಲ್ ಡಿಸ್ಪ್ಯುಟ್ ಆಕ್ಟ್ 1947 ನೀಡುತ್ತದೆ. 100ಕ್ಕಿಂತ ಹೆಚ್ಚಿನ ಕೆಲಸಗಾರರು ದುಡಿಯುವ ಫ್ಯಾಕ್ಟರಿ ಮುಚ್ಚುವ ಮುನ್ನ ಸರಕಾರದ ಒಪ್ಪಿಗೆ ಪಡೆಯಬೇಕೆಂದು ಈ ಕಾಯಿದೆ ಆದೇಶಿಸುತ್ತದೆ. ಕಾನೂನುಬಾಹಿರವಾಗಿ ಪ್ಯಾಕ್ಟರಿ ಮುಚ್ಚಿದರೆ ಅಥವಾ ಕೆಲಸದಿಂದ ತೆಗೆದರೆ ಕೆಲಸಗಾರರಿಗೆ ಪರಿಹಾರ ಕೊಡಬೇಕೆಂದು ಕಾಯಿದೆ ಸೂಚಿಸುತ್ತದೆ, ಕೆಲಸದ ಸಂದರ್ಭದಲ್ಲಿ ತಮಗಾಗುವ ಅನ್ಯಾಯವನ್ನು ಪ್ರಶ್ನಿಸಲು ಮತ್ತು ನ್ಯಾಯಕ್ಕಾಗಿ ಸಂಘಟಿತರಾಗಿ ಹೊರಾಡಲು ಟ್ರೇಡ್ ಯೂನಿಯನ್ ಆಕ್ಟ್ ಅವಕಾಶ ಕಲ್ಪಿಸುತ್ತದೆ. ಕನಿಷ್ಠ ಏಳು ಅಥವಾ ಅದಕ್ಕಿಂತ ಹೆಚ್ಚಿನ ಕೆಲಸಗಾರರು ಸೇರಿಕೊಂಡು ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳಬಹುದೆಂದು ಟ್ರೇಡ್ ಯೂನಿಯನ್ ಆಕ್ಟ್ 1947 ಹೇಳುತ್ತದೆ. ಊಟ, ವಸತಿ, ಶಿಕ್ಷಣ, ಆರೋಗ್ಯ ಇತ್ಯಾದಿ ಮೂಲಸೌಕರ್ಯಗಳನ್ನು ಖರೀದಿಸುವ ಶಕ್ತಿ ನೀಡುವ ಕನಿಷ್ಠ ವೇತನವನ್ನು ಕೆಲಸಗಾರರಿಗೆ ನೀಡಬೇಕೆಂದು ಮಿನಿಮಮ್ ವೇಜಸ್ ಆಕ್ಟ್ 1948 ಹೇಳುತ್ತದೆ. ಮಾಲೀಕರು, ಕೆಲಸಗಾರರು ಮತ್ತು ಸರಕಾರದ ಪ್ರತಿನಿಧಿಗಳನ್ನು ಇರುವ ವೇಜ್ ಬೋರ್ಡ್‍ನ್ನು ಸರಕಾರ ನೇಮಿಸುತ್ತದೆ.ಈ ಬೋರ್ಡ್ ಕಾಲಕಾಲಕ್ಕೆ ನೀಡಬೇಕಾದ ಕನಿಷ್ಠ ವೇತನವನ್ನು ನಿರ್ಧರಿಸುತ್ತದೆ.

ಕೆಲಸಗಾರರಿಗೆ ಬಲ ನೀಡುವ ಕಾಯಿದೆಗಳನ್ನು ರದ್ದುಗೊಳಿಸುವ ಮೂಲಕ ಹಲವು ಸಂದೇಶಗಳನ್ನು ಸರಕಾರ ರವಾನಿಸುತ್ತಿದೆ. ಕ್ಯಾಂಟೀನ್, ಶೌಚಾಲಯ, ಗಾಳಿ, ಬೆಳಕುಗಳಿಲ್ಲದ ನರಕಸದೃಶ್ಯ ಸ್ಥಳಗಳಲ್ಲಿ ಕೆಲಸ ಮಾಡಲು ರೆಡಿ ಆಗಿ ಎನ್ನುವ ಸಂದೇಶ. ಆಪಾಯಕಾರಿ ಮೆಶಿನ್‍ಗಳಲ್ಲಿ ಕೆಲಸ ಮಾಡುವವರು ಗ್ಲೌಸ್, ಹೆಲ್ಮಟ್ ಇತ್ಯಾದಿ ರಕ್ಷಾ ಕವಚಗಳನ್ನು ನಿರೀಕ್ಷಿಸಬೇಡಿ ಎನ್ನುವ ಸಂದೇಶ. ಕೆಲಸದ ಅವಧಿ 8ರಿಂದ 12 ಗಂಟೆಗಳಿಗೆ ವಿಸ್ತರಿಸಬಹುದು. ಹಾಗೆಂದು ಹೆಚ್ಚಿನ ಅವಧಿಗೆ ಹೆಚ್ಚಿನ ಸಂಬಳ ನಿರೀಕ್ಷಿಸಬೇಡಿ ಎನ್ನುವ ಸಂದೇಶ. ವಾರಕ್ಕೊಂದು ರಜೆ, ಹಬ್ಬ ಹರಿದಿನಗಳಿಗೆ ರಜೆ ಇದೆ ಎನ್ನುವ ಭ್ರಮೆ ಇಟ್ಟುಕೊಳ್ಳಬೇಡಿ. ಕೆಲಸ ಸಂದರ್ಭದಲ್ಲಿ ಅವಘಡ ಆಗಿ ಕಾರ್ಮಿಕರು ಗಾಯಗೊಂಡರೆ ಅವರ ಕುಟುಂಬದವರೇ ನೋಡಿಕೊಳ್ಳಬೇಕು. ರಜೆ, ಸಂಬಳ, ಸವಲತ್ತು ಎಲ್ಲವೂ ಕಡಿತಗೊಂಡಿದೆ ಎಂದು ಸಂಘ ಕಟ್ಟಿಕೊಂಡು ಪ್ರತಿಭಟಿಸಲು ನಿಂತರೆ ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ. ಮಾಲೀಕನ ಕೆಟ್ಟ ನಿರ್ಧಾರಗಳಿಂದ ಉದ್ದಿಮೆ ಸೋತರೆ ಫ್ಯಾಕ್ಟರಿ ಮುಚ್ಚುವುದು ಗ್ಯಾರಂಟಿ. ಮಾಲೀಕರ ತಪ್ಪಿಗೆ ಕೆಲಸ ಕಳೆದುಕೊಂಡ ಕಾರ್ಮಿಕರು ಪರಿಹಾರ ನಿರೀಕ್ಷಿಸುವ ಅಭ್ಯಾಸದಿಂದ ಹೊರಬರಬೇಕು. ಕೆಲಸಕ್ಕೆ ಎಷ್ಟು ಸಂಬಳ ಕೊಡಬೇಕೆಂದು ಮಾಲೀಕ ತೀರ್ಮಾನಿಸುತ್ತಾನೆ. ಅವನು ಕೊಡುವ ಸಂಬಳ ಶ್ರಮಿಕರ ಊಟ, ವಸತಿ, ಶಿಕ್ಷಣ, ಆರೋಗ್ಯ ಖರ್ಚುಗಳನ್ನು ಭರಿಸದಿದ್ದರೂ ಶ್ರಮಿಕರು ಸುಮ್ಮನಿರಬೇಕು. ಅಂದರೆ ಕಾರ್ಮಿಕ ಕಾಯಿದೆಗಳನ್ನು ರದ್ದುಗೊಳಿಸಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಇದು.

ಕಾಯಿದೆ ರದ್ದುಪಡಿಸಲು ರಾಜ್ಯ ಸರಕಾರಗಳು ನೀಡುವ ಕಾರಣ ಸರಳವಾಗಿದೆ. ಕೊರೊನದಿಂದ ಆ ರಾಜ್ಯಗಳ ಆರ್ಥಿಕ ಸ್ಥಿತಿ ಕುಸಿದಿದೆ. ಕುಸಿದ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಉದ್ದಿಮೆಗಳು ಬಂಡವಾಳ ಹೂಡಬೇಕು. ಬಿಗಿ ಕಾರ್ಮಿಕ ಕಾಯಿದೆಗಳಿದ್ದರೆ ಉದ್ದಿಮೆಗಳು ಬಂಡವಾಳ ಹೂಡುವುದಿಲ್ಲ. ಕಾರ್ಮಿಕ ಕಾಯಿದೆಗಳು ಸಡಿಲಗೊಂಡರೆ ಬಂಡವಾಳ ಹರಿದು ಬರುತ್ತದೆ ಎನ್ನುವುದು ಮೊದಲ ಕಾರಣ. ಬೇರೆ ರಾಜ್ಯಗಳಿಗೆ ಉದ್ಯೋಗ ನಿಮಿತ್ತ ವಲಸೆ ಹೋದ ಕಾರ್ಮಿಕರು ಕೊರೊನ ಸಮಸ್ಯೆಯಿಂದ ಹಿಂದಕ್ಕೆ ಬರುತ್ತಿದ್ದಾರೆ. ಇವರಿಗೆಲ್ಲ ಉದ್ಯೋಗ ಸೃಷ್ಟಿಸುವುದು ರಾಜ್ಯ ಸರಕಾರದ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ಬಿಗಿ ಕಾರ್ಮಿಕ ಕಾಯಿದೆಗಳು ಅಡ್ಡಿಯಾಗುತ್ತಿವೆ. ಆದುದರಿಂದ ಅವುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಬೇಕೆನ್ನುವುದು ಎರಡನೇ ಕಾರಣ. ಮೂರನೇ ಕಾರಣ ಸ್ವಲ್ಪ ಸಂಕೀರ್ಣವಾಗಿದೆ. ಕೊರೊನ ಸಮಸ್ಯೆ ಚೀನಾದಿಂದಲೇ ಆರಂಭವಾಗಿದೆ ಎಂದು ಅಮೆರಿಕಾ ಆರೋಪಿಸುತ್ತಿದೆ. ಚೀನಾದ ನಿರಾಕರಣೆಯ ನಡುವೆಯೂ ಪಶ್ಚಿಮದ ರಾಷ್ಟ್ರಗಳು ಚೀನಾವನ್ನು ಸಂದೇಹದಿಂದ ನೋಡುವುದು ಕಡಿಮೆಯಾಗಿಲ್ಲ. ಇದೇ ಜಗಳದ ಕಾರಣಕ್ಕೆ ಅಮೆರಿಕಾ ಮತ್ತು ಪಶ್ಚಿಮ ರಾಷ್ಟ್ರಗಳ ಬಹುರಾಷ್ಟ್ರೀಯ ಕಂಪೆನಿಗಳು ಚೀನಾದಿಂದ ತಮ್ಮ ಉದ್ದಿಮೆಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನುವ ಊಹೆ ಚಲಾವಣೆಯಲ್ಲಿದೆ. ಒಂದು ವೇಳೆ ಈ ಊಹೆ ನಿಜವಾದರೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಆಕರ್ಷಿಸಲು ಭಾರತ ರೆಡಿ ಇರಬೇಕಾಗುತ್ತದೆ. ಅಂದರೆ ಬಂಡವಾಳ ಬಯಸುವ ರೂಪದಲ್ಲಿ ನಮ್ಮ ಸಂಪನ್ಮೂಲವನ್ನು ಬಳಸಬಹುದೆನ್ನುವ ಸಂದೇಶ ನೀಡಬೇಕು. ಈ ಊಹೆಯ ಭಾಗವಾಗಿ ಕಾರ್ಮಿಕ ಕಾಯಿದೆಗಳು ರದ್ದುಗೊಂಡಿವೆ ಎನ್ನುವುದು ಮೂರನೇ ಕಾರಣ.

ಈ ಮೂರು ಕಾರಣಗಳು ಕೂಡ ವಾಸ್ತವಕ್ಕೆ ದೂರವಾಗಿವೆ. ಕಾಯಿದೆ ರದ್ದು ಪಡಿಸಿದ ರಾಜ್ಯ ಮಾತ್ರವಲ್ಲ ಇಡೀ ದೇಶದ ಆರ್ಥಿಕ ಸ್ಥಿತಿ ಕೊರೊನ ಸಮಸ್ಯೆಗೆ ಮುನ್ನವೇ ಪಾತಾಳ ಸೇರಿತ್ತು. ದೇಶ ಏಕೆ ಆರ್ಥಿಕ ಕುಸಿತ ಕಂಡಿದೆ ಎನ್ನುವ ಚರ್ಚೆ ಇಲ್ಲಿ ಬೇಡ. ಐವತ್ತರ ದಶಕದಿಂದಲೇ ಉತ್ತರದ ದೊಡ್ಡ ರಾಜ್ಯಗಳ ಆರ್ಥಿಕ ಸ್ಥಿತಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿನಲ್ಲಿ ಇರಲೇ ಇಲ್ಲ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶಗಳನ್ನು ಹಿಂದಿಯಲ್ಲಿ ಬೀಮಾರು (ರೋಗಗ್ರಸ್ಥ) ರಾಜ್ಯಗಳೆಂದು ಗುರುತಿಸಲಾಗುತ್ತಿತ್ತು. ಇವನ್ನು ಬೀಮಾರು ಮಾಡಿದ್ದು ಕಾರ್ಮಿಕರಲ್ಲ. ಇವು ಕೂಡ ಇತರ ರಾಜ್ಯಗಳಂತೆ ಜನಪ್ರತಿನಿಧಿಗಳನ್ನು ಹೊಂದಿದ್ದವು. ಜಾತಿ, ಧರ್ಮ, ದುಡ್ಡಿನ ಬಲದಲ್ಲಿ ಅಲ್ಲಿನ ಅನುಕೂಲಸ್ಥರು ಜನಪ್ರತಿನಿಧಿಗಳಾಗುತ್ತಿದ್ದರು. ಇವರು ರಾಜ್ಯದ ಕೃಷಿ, ವ್ಯಾಪಾರ, ಉದ್ದಿಮೆ, ಕಾರ್ಮಿಕ, ಶಿಕ್ಷಣ, ಆರೋಗ್ಯ ಕಾಯಿದೆಗಳನ್ನು ಮಾಡುತ್ತಿದ್ದರು. ಈ ಕಾಯಿದೆಗಳನ್ನು ಅಲ್ಲಿನ ನೌಕರಶಾಹಿ ಜಾರಿಗೆ ತರುತ್ತಿತ್ತು. ಹಲವು ದಶಕಗಳ ಕಾಲ ಅಲ್ಲಿನ ಮೇಲ್ಜಾತಿಗಳೇ ನೌಕರಶಾಹಿಯಲ್ಲಿ ತುಂಬಿದ್ದರು. ನಂತರದ ದಿನಗಳಲ್ಲಿ ಹಿಂದುಳಿದ ಜಾತಿಗಳಿಂದಲೂ ನೌಕರಶಾಹಿ ಬಂದಿದೆ. ಹಾಗೆಂದು ಇವರು ಭ್ರಷ್ಟಾಚಾರದಲ್ಲಿ ಮೇಲ್ಜಾತಿಗಳು ಹಾಕಿಕೊಟ್ಟ ಮಾದರಿಯನ್ನು ಮೀರಲಿಲ್ಲ. ಹೀಗೆ ಲಂಚ, ಭ್ರಷ್ಟಾಚಾರಗಳು ಬೇರೆ ರಾಜ್ಯಗಳಲ್ಲಿ ಸುದ್ದಿ ಮಾಡುವ ಮೊದಲೇ ಈ ರಾಜ್ಯಗಳಲ್ಲಿ ಕಾರುಬಾರು ಮಾಡುತ್ತಿದ್ದವು. ಮಾಧ್ಯಮ ಮತ್ತು ನ್ಯಾಯಾಂಗ, ಜನಪ್ರತಿನಿಧಿಗಳು ಮತ್ತು ನೌಕರಶಾಹಿಗಿಂತ ವಿಶೇಷ ಭಿನ್ನ ಇರಲಿಲ್ಲ. ಇವರೆಲ್ಲ ಸೇರಿ ಈ ರಾಜ್ಯಗಳನ್ನು ಬೀಮಾರು ರಾಜ್ಯ ಮಾಡಿದ್ದಾರೆ.

ಹಾಗೆಂದು ಜನಪ್ರತಿನಿಧಿಗಳ, ನೌಕರಶಾಹಿಯ, ನ್ಯಾಯಾಂಗದ ಸಂಬಳ, ಪಿಂಚಣಿ, ಸಾರಿಗೆ, ಸಂಪರ್ಕ ಇತ್ಯಾದಿ ಸವಲತ್ತುಗಳನ್ನು ರದ್ದುಗೊಳಿಸುವ ಕಾಯಿದೆಗಳನ್ನು ಈ ರಾಜ್ಯಗಳು ಜಾರಿಗೆ ತರಲಿಲ್ಲ. ಅಷ್ಟು ಮಾತ್ರವಲ್ಲ ರಾಜ್ಯದ ಅಭಿವೃದ್ಧಿ ನೀತಿಯನ್ನು ರೂಪಿಸುವವರ, ಅನುಷ್ಠಾನಗೊಳಿಸುವವರ, ನ್ಯಾಯ ತೀರ್ಮಾನ ಮಾಡುವವರ ಕೆಲಸದ ಅವಧಿ ಕೂಡ ವಿಸ್ತರಣೆಗೊಂಡಿಲ್ಲ. ನೀತಿ ನಿರೂಪಣೆ, ಅನುಷ್ಠಾನ ಮಾಡುವವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ತಿದ್ದುಪಡಿಗಳನ್ನು ಈ ರಾಜ್ಯಗಳು ಮಾಡಿಲ್ಲ. ಆದರೆ ಆರ್ಥಿಕ ನೀತಿ ರೂಪಿಸುವಲ್ಲಿ, ಅನಷ್ಠಾನಗೊಳಿಸುವಲ್ಲಿ, ಸರಿತಪ್ಪುಗಳನ್ನು ತೀರ್ಮಾನಿಸುವಲ್ಲಿ ಏನೇನೂ ಪಾತ್ರ ಇಲ್ಲದ ಕಾರ್ಮಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಕಾರ್ಮಿಕರು ಆದೇಶ ನೀಡುವುದಿಲ್ಲ. ಮೇಲಿನವರ ಆದೇಶವನ್ನು ಪಾಲಿಸುವ ಕೆಲಸವನ್ನು ಮಾತ್ರ ಅವರು ಮಾಡುವುದು. ಆದೇಶ ಪಾಲನೆಯಿಂದ ಅನುಕೂಲವಾದರೆ ಎಲ್ಲ ಮಾನಸಮ್ಮಾನಗಳು ಮೇಲಿನವರಿಗೆ ಹೋಗುತ್ತವೆ. ಒಂದು ವೇಳೆ ಆದೇಶ ಪಾಲನೆಯಿಂದ ನಷ್ಟವಾದರೆ ಎಲ್ಲ ದೋಷಗಳು ಕೆಳಗಿನವರ ಅನುಭವಿಸಬೇಕಾಗುತ್ತದೆ. ಇದನ್ನೇ ಫ್ಯೂಡಲ್ ಮಾನಸಿಕ ಸ್ಥಿತಿ ಎನ್ನುವುದು. ಇಂತಹ ಮಾನಸಿಕ ಸ್ಥಿತಿ ಇಡೀ ದೇಶದಲ್ಲಿ ಇದೆ. ಆದೇಶ ಮಾಡುವವರ ತಪ್ಪನ್ನು ಆದೇಶ ಪಾಲಿಸುವವರ ಮೇಲೆ ಹೊರಿಸುವುದು ಸಾಮಾನ್ಯವಾಗಿದೆ. ಯೋಗ್ಯತೆ ಬದಲು ಜಾತಿ, ಧರ್ಮ, ಲಿಂಗ, ವರ್ಗ ಇತ್ಯಾದಿ ಚಾರಿತ್ರಿಕ ಅನುಕೂಲದಿಂದ ಅಧಿಕಾರಕ್ಕೆ ಏರುವವರ ಸಂಖ್ಯೆ ಹೆಚ್ಚಾದಂತೆ ಎಲ್ಲ ದೋಷಗಳಿಗೆ ಕೆಳಗಿನವರನ್ನು ಕಾರಣ ಮಾಡುವುದು ಹೆಚ್ಚಾಗುತ್ತದೆ.

ಈ ರಾಜ್ಯಗಳ ಆರ್ಥಿಕ ದುಃಸ್ಥಿತಿಗೆ ಅಲ್ಲಿನ ಜನಪ್ರತಿನಿಧಿಗಳು, ನೌಕರಶಾಹಿ, ನ್ಯಾಯಾಂಗ, ಮಾಧ್ಯಮಗಳು ಕಾರಣ. ಇವು ಸುಧಾರಿಸದಿದ್ದರೆ ಅಲ್ಲಿನ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲ. ಇವನ್ನು ಸುಧಾರಿಸುವ ಒಂದೂ ಕ್ರಮವು ಕಾಣುತ್ತಿಲ್ಲ. ಅದರ ಬದಲು ರಾಜ್ಯದ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಏನೇನೂ ಪಾತ್ರ ಇಲ್ಲದ ಕಾರ್ಮಿಕರ ಕಾಯಿದೆಗಳನ್ನು ರದ್ದುಗೊಳಿಸಿ ಹೊಸ ಹೂಡಿಕೆ ನಿರೀಕ್ಷಿಸುವುದು ಬಂಡವಾಳಿಗರಿಗೆ ಮಾಡುವ ಅವಮಾನ. ಬಂಡವಾಳ ಹೂಡುವವರು ಮೂರ್ಖರಲ್ಲ. ಅವರಿಗೆ ಸಡಿಲ ಕಾರ್ಮಿಕ ಕಾಯಿದೆ ಜೊತೆಗೆ ಒಪ್ಪಂದಗಳನ್ನು ಜಾರಿಗೊಳಿಸುವ ಕಾನೂನು ವ್ಯವಸ್ಥೆ, ಖಾಸಗಿ ಆಸ್ತಿ ಮತ್ತು ಜೀವದ ಭದ್ರತೆ, ಅಚ್ಚುಕಟ್ಟಾದ ಸಾರಿಗೆ ಸಂಪರ್ಕ, ನುರಿತ ಮಾನವ ಸಂಪನ್ಮೂಲ, ಭ್ರಷ್ಟಾಚಾರರಹಿತ ಆಡಳಿತ ಇವೆಲ್ಲ ಮುಖ್ಯ. ಇವುಗಳ ಸುಧಾರಣೆ ಇಲ್ಲದೆ ಕಾರ್ಮಿಕ ಕಾಯಿದೆಗಳನ್ನು ರದ್ದುಗೊಳಿಸುವುದರಿಂದ ಆ ರಾಜ್ಯಗಳ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲ. ಇವೆಲ್ಲ ಸುಧಾರಣೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಬಯಸುತ್ತವೆ. ಆದುದರಿಂದ ಇತರ ಸುಧಾರಣೆಗಳಿಲ್ಲದೆ ಕೇವಲ ಕಾರ್ಮಿಕ ಕಾಯಿದೆಗಳನ್ನು ರದ್ದುಪಡಿಸಿ ಬಹುರಾಷ್ಟ್ರೀಯ ಕಂಪೆನಿಗಳ ಹೂಡಿಕೆ ನಿರೀಕ್ಷಿಸುವುದು ಹಗಲು ಕನಸು ಕಾಣುವುದಕ್ಕೆ ಸಮ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...