ನಿನ್ನೆ(ಫೆ.15) ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆಯ ಮೂಲಕ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) 6,566 ಕೋಟಿ ರೂ.ಗಳನ್ನು ಗಳಿಸಿತ್ತು ಎಂದು ತಿಳಿದು ಬಂದಿದೆ. ಮತದಾರರ ಮಾಹಿತಿ ಹಕ್ಕಿನ ಉಲ್ಲಂಘನೆಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಬರೆದ ಪ್ರತ್ಯೇಕ ತೀರ್ಪಿನಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಹಣದ ವಿವರಗಳು ಬೆಳಕಿಗೆ ಬಂದಿವೆ.
ಬಿಜೆಪಿಯ ಚುನಾವಣಾ ಬಾಂಡ್ ಗಳಿಕೆಯು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬಾಂಡ್‌ಗಳ ಮೂಲಕ ಗಳಿಸಿದ್ದಕ್ಕಿಂತ ಸುಮಾರು ಆರು ಪಟ್ಟು ಹೆಚ್ಚಿದೆ. ಕಾಂಗ್ರೆಸ್ ಕೇವಲ 1,123 ಕೋಟಿ ರೂ. ಗಳಿಸಿತ್ತು ಎಂದು ವರದಿಗಳು ತಿಳಿಸಿವೆ. ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ದಾವೆ ಹೂಡಿದ್ದ ಸಿಪಿಎಂ ಪಕ್ಷ ಮಾತ್ರ ಬಾಂಡ್‌ಗಳ ಮೂಲಕ ಒಂದು ರೂಪಾಯಿಯನ್ನು ಕೂಡ ಸ್ವೀಕರಿಸಿಲ್ಲ ಎಂಬ ಮಾಹಿತಿ ದೊರೆತಿದೆ.
ಸಂಸತ್ತಿನಲ್ಲಿ ನೀಡಲಾದ ಅಂಕಿ ಅಂಶಗಳ ಪ್ರಕಾರ, ಇದುವರೆಗೆ 16,518 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಪ್ರತಿ ಪಕ್ಷಗಳು ಎಷ್ಟು ಪಡೆದಿವೆ ಎಂಬ ವಿವರಗಳನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಿರಲಿಲ್ಲ. ಆಗ ಮಾಹಿತಿ ಈಗ ಸುಪ್ರೀಂ ಕೋರ್ಟ್‌ನ ತೀರ್ಪಿನ ಮೂಲಕ ಹೊರಬಿದ್ದಿದೆ.
ಇದುವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದವರ ಮಾಹಿತಿ ಸಿಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಾರ್ಚ್ ಒಳಗೆ ಆ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ. ಚುನಾವಣಾ ಆಯೋಗ ಮಾರ್ಚ್ 13ರ ಒಳಗೆ ಆ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಬೇಕು. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ, 2017 ರಿಂದ 2023 ರ ಅವಧಿಯಲ್ಲಿ ಬಿಜೆಪಿಗೆ ಬಂದಿರುವ ದೇಣಿಗೆ 6,566 ಕೋಟಿ ತಲುಪಿದೆ ರೂಪಾಯಿ. ಚುನಾವಣಾ ಬಾಂಡ್‌ಗಳಿಂದ ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಹೆಚ್ಚು ಲಾಭ ಪಡೆದಿವೆ ಎಂದು ತಿಳಿದುಬಂದಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಇತರ ಪಕ್ಷಗಳ ಗಳಿಕೆ:
ತೃಣಮೂಲ ಕಾಂಗ್ರೆಸ್ : 1,092 ಕೋಟಿ ರೂ
ಬಿಜು ಜನತಾ ದಳ : 774 ಕೋಟಿ ರೂ
ಡಿಎಂಕೆ : 616 ಕೋಟಿ ರೂ
ಭಾರತ್ ರಾಷ್ಟ್ರ ಸಮಿತಿ (ಹಳೆಯ ಟಿಆರ್‌ಎಸ್) : 386 ಕೋಟಿ ರೂ
ವೈಎಸ್ಆರ್ ಕಾಂಗ್ರೆಸ್ : 382 ಕೋಟಿ ರೂ
ಟಿಡಿಪಿ : 146 ಕೋಟಿ ರೂ
ಶಿವಸೇನೆ : 101.38 ಕೋಟಿ ರೂ
ಆಮ್ ಆದ್ಮಿ ಪಕ್ಷ: 94.28 ಕೋಟಿ ರೂ
ಮಾರ್ಚ್ ನಂತರ ಪ್ರಸಕ್ತ ಹಣಕಾಸು ವರ್ಷದ ಅಂಕಿ ಅಂಶಗಳನ್ನು ಆಡಿಟ್ ಮಾಡಿದಾಗ ಈ ಅಂಕಿ ಅಂಶಗಳು ಮತ್ತೆ ಏರಿಕೆಯಾಗಲಿವೆ. ಶೇ. 92.45 ರಷ್ಟು ಚುನಾವಣಾ ಬಾಂಡ್‌ಗಳ ಮೌಲ್ಯವು 1 ಕೋಟಿ ರೂ. 1 ಸಾವಿರ ಮೌಲ್ಯದ ಕೇವಲ 99 ಬಾಂಡ್‌ಗಳನ್ನು ಮಾತ್ರ ನೀಡಲಾಗಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಸಾಂವಿಧಾನಿಕ ಪೀಠದ ಮುಂದೆ ಮಂಡಿಸಲಾಗಿದ್ದ ಪ್ರಮುಖ ವಾದಗಳಲ್ಲಿ ದೇಣಿಗೆಯ ಹೆಚ್ಚಿನ ಭಾಗವು ಕೇಂದ್ರದಲ್ಲಿ ಆಡಳಿತ ಪಕ್ಷಕ್ಕೆ ಹೋಗುತ್ತಿದೆ ಎಂಬುದಾಗಿತ್ತು. ಈ ಆತಂಕವು ಸರಿಯಾಗಿದೆ ಎಂದು ಮೇಲಿನ ದತ್ತಾಂಶ ಬಹಿರಂಗಪಡಿಸಿದೆ.
2014-15ರಿಂದ 2016-17ರ ಅವಧಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅಪರಿಚಿತ ಮೂಲಗಳಿಂದ ಬಂದಿದ್ದ ದೇಣಿಗೆಯ ಪಾಲು ಶೇ.66ರಿಂದ 2018-19ರಿಂದ 2021-22ರ ಅವಧಿಯಲ್ಲಿ ಶೇ.72ಕ್ಕೆ ಏರಿಕೆಯಾಗಿದೆ.
2014-15ರಿಂದ 2016-17ರ ಅವಧಿಯಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಒಟ್ಟು ಆದಾಯ ₹3,864 ಕೋಟಿಗಳಿಂದ 2018-19ರಿಂದ 2021-22ರ ಅವಧಿಯಲ್ಲಿ ₹11,829 ಕೋಟಿಗೆ ಏರಿದೆ.
ಒಟ್ಟಾರೆಯಾಗಿ, 2018-19 ರಿಂದ 2021-22 ರ ನಡುವೆ ಚುನಾವಣಾ ಬಾಂಡ್ ಯೋಜನೆಯಿಂದ ಬಂದ ಆದಾಯವು ರಾಷ್ಟ್ರೀಯ ರಾಜಕೀಯ ಪಕ್ಷಗಳ ಒಟ್ಟು ಆದಾಯದ ಶೇಕಡಾ 58 ರಷ್ಟಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ ಯೋಜನೆ ರದ್ದು: ಹೋರಾಟಗಾರರು, ಕಾನೂನು ತಜ್ಞರು ಏನಂದ್ರು?


