Homeಕರ್ನಾಟಕ‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

- Advertisement -
- Advertisement -

ನಾನು ಆರನೇ ತರಗತಿಯಲ್ಲಿದ್ದಾಗ ಶುರುವಾದ ಆರೆಸ್ಸೆಸ್‌ನ ಒಡನಾಟ ಮೊದಲನೇ ಪಿ.ಯು.ಸಿ. ಓದುವಾಗ ಕೊನೆಯಾಯಿತು. ಒಂದು ದಿನ ಬಾಬರಿ ಮಸೀದಿ-ರಾಮಮಂದಿರ ವಿವಾದದ ಕುರಿತು ಮೊತ್ತಮೊದಲಿಗೆ ಶಾಖೆಯಲ್ಲಿ ಕೇಳಿದೆ. ಅಂದಿನ ಶಾಖೆಯಲ್ಲಿ ವಾತಾವರಣ ಎಂದಿನಂತೆ ಇರಲಿಲ್ಲ. ಶಾಖೆಯಲ್ಲಿ ಏನೋ ವಿಶೇಷ ’ಸಂಭ್ರಮ’, ’ಉತ್ಸಾಹ’ ಇದ್ದಂತೆ ನನಗೆ ಕಂಡಿತು. ನನ್ನ ಜೀವನಾನುಭವ, ಕುಟುಂಬದ ಆರ್ಥಿಕ ಸಮಸ್ಯೆಗಳು ಅದಕ್ಕಿಂತಲೂ ಮುಖ್ಯವಾಗಿ ಪಠ್ಯಪುಸ್ತಕಗಳ ಹೊರತಾದ ಓದು, ಓದಿನಿಂದ ಪಡೆದ ಅರಿವು ವಿವೇಕ – ಈ ಎಲ್ಲ ಕಾರಣಗಳಿಂದ ನಾನು ರಾಮಮಂದಿರದ ವಿಷಯದಲ್ಲಿ ಎಲ್ಲರಂತೆ ಸಂಭ್ರಮ ಪಡುವ ಮನಸ್ಥಿತಿಯಲ್ಲೇನು ಇರಲಿಲ್ಲ. ಜೊತೆಗೆ ಬೆಟ್ಟದಂತೆ ಬೆಳೆದಿದ್ದ ಕುಟುಂಬ ಸಾಲದ ಹೊರೆ ಇಳಿಸುವ ಚಿಂತೆ ನನ್ನ ಮನಸ್ಸನ್ನು ಆವರಿಸುತ್ತಿತ್ತು.

ಇದರ ಜೊತೆಗೇ ’ದೇಶಪ್ರೇಮ’ ಎಂದರೆ ಹಸಿವಿನಿಂದ ನರಳುತ್ತಿರುವ ದೇಶದ ಕೋಟಿಕೋಟಿ ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದು, ನಿರುದ್ಯೋಗ, ಬಡತನ, ಅಸ್ಪೃಶ್ಯತೆ-ಜಾತಿತಾರತಮ್ಯಗಳನ್ನು ನಿವಾರಿಸುವುದು ಎಂಬ ಕಣ್ಣೋಟ ನನ್ನಲ್ಲಿ ಆಗಲೇ ಸ್ಪಷ್ಟವಾಗುತ್ತಿತ್ತು. ಅರ್ಥವೇ ಗೊತ್ತಿಲ್ಲದೇ ಮಂತ್ರ ಹೇಳುವ ಪುರೋಹಿತರಂತೆ ದಿನವೂ ಶಾಖೆಯಲ್ಲಿ ’ದೇಶಪ್ರೇಮ’, ’ರಾಷ್ಟ್ರಭಕ್ತಿ’, ’ಭಾರತೀಯ ಸಂಸ್ಕೃತಿ’, ‘ಸನಾತನ ಸಂಸ್ಕೃತಿ’ ’ಸನಾತನ ಧರ್ಮ’ ಮುಂತಾದ ದೊಡ್ಡ ದೊಡ್ಡ ಪದಪುಂಜಗಳನ್ನು ಎಲ್ಲರೂ ಉದುರಿಸುತ್ತಿದ್ದರೂ ಸಹ ದೇಶ ಸುಡುತ್ತಿರುವ ಹಸಿವು, ಅಪಮಾನ, ದೌರ್ಜನ್ಯಗಳ ಬಗೆಗೆ ಯಾರೂ ಕಣ್ಣೆತ್ತಿ ನೋಡಲು ತಯಾರಿಲ್ಲ ಎಂಬುದು ನನಗೆ ಸ್ಪಷ್ಟವಾಯಿತು.

ಅದು 1985ರ ಕೊನೆ ಅಥವಾ 1986ರ ಆರಂಭ ಇರಬಹುದು. ಅಂದು ಶಾಖೆಯಲ್ಲಿ ಅಯೋಧ್ಯೆ-ರಾಮಮಂದಿರದ ಚಳವಳಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದೂ, ಈಗ ಇಡೀ ದೇಶ ಸಂಘದ ಕಡೆ ನೋಡುತ್ತಿದೆ ಎಂದು ನಮಗೆ ಹೇಳಲಾಯಿತು. ನನಗೆ ತೀವ್ರವಾದ ನಿರಾಶೆಯಾಯಿತು. ಅದೇ ಕೊನೆ ನಾನು ಶಾಖೆಗೆ ಹೋಗುವುದನ್ನು ನಿಲ್ಲಿಸಿದೆ.

ಆಮೇಲೆ ಮುಂದುವರಿಯದ ಓದು, ಉದ್ಯೋಗಕ್ಕಾಗಿ ಹುಡುಕಾಟ, ನಿರಾಶೆ, ಬದುಕಿನ ಬಂಡಿಯನ್ನು ಎಳೆಯುವ ಸಲುವಾಗಿ ಚಿಕ್ಕಾಸಿಗಾಗಿ ನಡುಮುರಿಯುಂವಂತಹ ದುಡಿಮೆಯ ನೊಗಕ್ಕೆ ಕೊರಳೊಡ್ಡಿ ನಿಂತದ್ದು – ಹೀಗೆ ಬದುಕು ಏನೇನೋ ತಿರುವುಗಳನ್ನ ಪಡೆದುಕೊಂಡು ಹರಿಯುತ್ತಿತ್ತು.

ಇಂತಹ ಒಂದು ದಿನ… ಅದು ಸೆಪ್ಟೆಂಬರ್ 5, 1987ರಂದು ರಾಜಸ್ತಾನದ ಒಂದು ಆಘಾತಕಾರಿ ಸುದ್ದಿಯನ್ನು ಪತ್ರಿಕೆಯಲ್ಲಿ ಓದಬೇಕಾಗಿ ಬಂತು. ರಾಜಸ್ತಾನದ ರಾಜಧಾನಿ ಜೈಪುರಕ್ಕೆ ಸುಮಾರು 70 ಕಿ.ಮೀ. ದೂರದ ದೇವರಾಲು ಎಂಬ ಗ್ರಾಮದಲ್ಲಿ ರೂಪ್ ಕನ್ವರ್ ಎಂಬ 18ರ ಹರೆಯದ ಯುವತಿ ಸತ್ತ ತನ್ನ ಗಂಡನ ಚಿತೆಯೇರಿ ‘ಸತಿ ಹೋದ’ ಸುದ್ದಿ ಅದು. ರೂಪಳನ್ನು ಬಲಾತ್ಕಾರವಾಗಿ ಚಿತೆಗೆ ತಳ್ಳಲಾಯಿತು ಎಂಬುದು ಒಂದು ವರದಿಯಾದರೆ, ಆಕೆಯ ಗಂಡನ ಚಿತೆಗೆ ಆಕೆಯೇ ಸ್ವಯಂಪ್ರೇರಿತಳಾಗಿ ಹೋಗಿಬಿದ್ದಳು ಎಂಬುದು ಮತ್ತೊಂದು ವರದಿ. ಈ ದೃಶ್ಯವನ್ನು ಸುತ್ತ ನೂರಾರು ಜನರು ನಿಂತು ನೋಡುತ್ತಿದ್ದರಂತೆ. ಬಾಳಿಬದುಕಬೇಕಾದ ಒಂದು ಹೆಣ್ಣು ಗಂಡನ ಚಿತೆಯ ಮೇಲೆ ಬಿದ್ದು ಜ್ವಾಲೆಯಲ್ಲಿ ಜೀವಂತ ಸುಟ್ಟುಕೊಂಡು ನರಳಿನರಳಿ ಸಾಯುವುದೆಂದರೇನು? ಅದನ್ನು ನೂರಾರು ಜನರು ನೋಡುತ್ತಾ, ಬೆಂಬಲಿಸುತ್ತಾ ನಿಲ್ಲುವುದೆಂದರೇನು?

ಬಹಳ ಹಿಂದೆ ಹೀಗೆ ಸತಿ ಹೋಗುವ ಮಹಿಳೆಯರು ಬೆಂಕಿಯಲ್ಲಿ ಬೇಯುವಾಗ ಉರಿ ತಾಳಲಾಗದೇ ಚೀರಿಕೊಂಡು ಚಿತೆಯಿಂದ ಹೊರಕ್ಕೆ ನೆಗೆದರೆ ಸುತ್ತ ನಿಂತ ಜನರು ಉದ್ದನೆಯ ಬಡಿಗೆಗಳಿಂದ ಬಡಿದು ಮತ್ತೆ ಬೆಂಕಿಗೆ ತಳ್ಳುತ್ತಿದ್ದರಂತೆ. ಪತ್ರಿಕೆಗಳಲ್ಲಿ ರೂಪ್ ಕನ್ವರ್ ಘಟನೆಯ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾದವು. ಸತಿ ಪದ್ಧತಿಯನ್ನು ಎಂದೋ ನಿಷೇಧಿಸಿದ್ದಾಗಿತ್ತು. ಆದರೆ ಸತಿ ಪದ್ಧತಿಯನ್ನು ವೈಭವೀಕರಿಸುವುದನ್ನು ನಿಷೇಧಿಸುವ ಕಾಯ್ದೆ ತರಬೇಕು ಎಂದೂ ವ್ಯಾಪಕ ಚರ್ಚೆಯಾಯಿತು ಎಂದು ನೆನಪು.

1988 ಜೂನ್‌ನಲ್ಲಿ ನಾನು ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಕಲಾ ವಿಭಾಗಕ್ಕೆ ಸೇರಿದೆ. ನಾನು ಆ ಹೊತ್ತಿಗಾಗಲೇ ಸಂಘದಲ್ಲಿ ಸಕ್ರಿಯವಾಗಿರಲಿಲ್ಲ. ಸಂಘವು ದೇಶದ ಮುಂದೆ ತಂದಿಟ್ಟ ವಿಷಯಗಳು ರಾಷ್ಟ್ರೀಯ ಚರ್ಚೆಯ ವಿಷಯವಾಗಿಬಿಟ್ಟಿದ್ದವು. 1949ರಲ್ಲಿ ಡಿಸೆಂಬರ್ 22-23ರ ನಡುರಾತ್ರಿಯಲ್ಲಿ ಬಾಬರಿ ಮಸೀದಿಯೊಳಕ್ಕೆ ಕಳ್ಳತನದಲ್ಲಿ ರಾಮ-ಸೀತೆ-ಲಕ್ಷಣರ ವಿಗ್ರಹಗಳನ್ನು ಕೊಂಡೊಯ್ದು ಇರಿಸಿದ ಮೇಲೆ, ನೆಹರು ಅವರ ಆಡಳಿತ ಕಾಲದಲ್ಲಿ ಬೀಗಹಾಕಿ ಮುಚ್ಚಲಾಗಿತ್ತು. ಆದರೆ ಬಾಬರಿ ಮಸೀದಿಯ ಬೀಗ ತೆರೆದು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲು ರಾಜೀವ್ ಗಾಂಧಿಯವರು 1986ರಲ್ಲಿ ಅವಕಾಶ ನೀಡಿದ್ದರು. ಇದಲ್ಲದೇ ಸಂಘಪರಿವಾರದಿಂದ ರಾಮಮಂದಿರಕ್ಕಾಗಿ ರಾಮಜ್ಯೋತಿ, ಇಟ್ಟಿಗೆ ಯಾತ್ರೆಗಳು ನಡೆದಿದ್ದವು. ನಾನು ಈ ಬೆಳವಣಿಗೆಗಳೆಲ್ಲವನ್ನು ಗಮನಿಸುತ್ತಲಿದ್ದೆ.

ರೂಪ ಕನ್ವರ್ ಸತಿ ಪ್ರಕರಣ ವರದಿಯಾದ ನಂತರ ಸತಿ ಪದ್ಧತಿಯ ಬಗೆಗೆ ಆರೆಸ್ಸೆಸ್‌ನ ನಿಲುವು ಏನಿರಬಹುದು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಎದ್ದಿತು. ಆರೆಸ್ಸೆಸ್ ಸತಿ ಪದ್ಧತಿಯನ್ನು ಬೆಂಬಲಿಸಬಹುದು ಎಂಬ ಗುಮಾನಿಯೂ ನನ್ನ ಮನಸ್ಸಿನಲ್ಲಿತ್ತು. ಸ್ವಲ್ಪ ದಿನಗಳ ನಂತರ ನನಗೆ ಈ ಪ್ರಶ್ನೆಗೆ ಖಚಿತ ಉತ್ತರವೂ ಸಿಕ್ಕಿತು. ರಾಜಾಸ್ತಾನದ ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರು ರೂಪ ಕನ್ವರ್ ಸತಿ ಹೋದದ್ದನ್ನು ವೈಭವೀಕರಿಸಿ ಆಕೆಗೆ ದೇಗುಲ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆಂಬ ಟೀಕೆಗಳು ಮಾಧ್ಯಮಗಳಲ್ಲಿ ಕೇಳಿಬಂದವು. ನೋಡನೋಡುತ್ತಲೇ ರೂಪಾ ಕನ್ವರ್‌ಗೆ ಒಂದು ದೇಗುಲ ಕಟ್ಟಬೇಕೆಂಬ ಚಳವಳಿ ಆರಂಭವಾಯಿತು. ಅದರ ನೇತೃತ್ವ ವಹಿಸಿದ್ದವರು ರಾಜಮಾತಾ ವಿಜಯರಾಜೇ ಸಿಂಧಿಯಾ. ಯಾರು ಈ ವಿಜಯರಾಜೇ ಸಿಂಧಿಯ? ಆರೆಸ್ಸೆಸ್‌ನ ಮಹಿಳಾ ಘಟಕ-‘ರಾಷ್ಟ್ರೀಯ ಸೇವಿಕಾ ಸಮಿತಿ’ಯ ಅಂದಿನ ಅಖಿಲ ಭಾರತ ನಾಯಕಿ.

ರಾಜಮಾತಾ ವಿಜಯರಾಜೇ ಸಿಂಧಿಯಾ

ಇವರೇ ನಾನು ಸಂಘದಲ್ಲಿ ಕಂಡ ಮೊತ್ತ ಮೊದಲ ‘ರಾಷ್ಟ್ರೀಯ ಸೇವಿಕಾ ಸಮಿತಿ’ಯ ಪ್ರತಿನಿಧಿ. ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಉಪಾಧ್ಯಕ್ಷೆ ಕೂಡಾ ಆಗಿದ್ದರು. ಇದೇ ಸತಿ ದೇವಾಲಯದ ಪ್ರಚಾರಾಂದೋಲನದ ಅಂಗವಾಗಿ ಅವರು ಒಂದು ಆಂದೋಲನವನ್ನೆ ಮುನ್ನಡೆಸಿದರು. (ವಿಜಯರಾಜೇ ಸಿಂಧಿಯಾ ಅವರೊಬ್ಬರೇ ಅಲ್ಲ, ಬಿಜೆಪಿ ಪಕ್ಷದ ರಾಜಸ್ತಾನ ಘಟಕದ ಉಪಾಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ರಾಠೋಡ್, ಭಾರತೀಯ ಜನತಾ ಯುವಮೋರ್ಚಾ(ಬಿಜೆವೈಎಂ) ಅಧ್ಯಕ್ಷ ಪ್ರತಾಪ್ ಸಿಂಗ್ ಖಾಚರಿಯವಾಸ್ ಸತಿ ಪದ್ಧತಿಯನ್ನು ಬೆಂಬಲಿಸಿ, ಸತಿ ಪದ್ಧತಿಯನ್ನು ವೈಭವೀಕರಿಸಿ ಬೃಹತ್ ರ್‍ಯಾಲಿಗಳನ್ನು, ಪ್ರದರ್ಶನಗಳನ್ನು ನಡೆಸಿದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಇಂಥ ಒಂದು ರ್‍ಯಾಲಿಯಲ್ಲಿ 4 ಲಕ್ಷ ಜನರನ್ನು ಸೇರಿಸಲಾಗಿತ್ತಂತೆ. ರೂಪ ಕನ್ವರ್ ಸತಿ ಹೋದ ಸ್ಥಳವನ್ನು ಒಂದು ಧಾರ್ಮಿಕ ಕೇಂದ್ರವನ್ನಾಗಿ ಮಾಡಲಾಗಿತ್ತು.)

ಈ ಆಂದೋಲನ ನಡೆಯುವ ಕಾಲಘಟ್ಟದಲ್ಲೆ ವಿಜಯರಾಜೇ ಸಿಂಧಿಯಾ ಅವರು ಕರ್ನಾಟಕದ ಉಡುಪಿಗೂ ಭೇಟಿ ನೀಡಿದ್ದರು. ‘ತರಂಗ’ ವಾರಪತ್ರಿಕೆ ಅವರ ವಿವರವಾದ ಸಂದರ್ಶನ ನಡೆಸಿತ್ತು. (1990 ಅಕ್ಟೋಬರ್ 14 ರ ಸಂಚಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ.) ಸಂದರ್ಶನದಲ್ಲಿ ವಿಜಯರಾಜೇ ಸಿಂಧಿಯಾ ಅವರು ರೂಪಕನ್ವರ್‌ಗೆ ದೇಗುಲ ನಿರ್ಮಿಸುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಈ ಮುಂದೆ ಅವರ ಹೇಳಿಕೆಯ ಯಥಾವತ್ ರೂಪವನ್ನು ಕೊಡಲಾಗಿದೆ. ವಿಜಯರಾಜೇ ಸಿಂಧಿಯಾ ಅವರು ಈ ಸತಿ ದೇಗುಲ ನಿರ್ಮಾಣದ ಸಂಬಂಧ “ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವ ಹಕ್ಕು ಯಾರಿಗೂ ಇಲ್ಲ” ಎಂದು ಘೋಷಿಸಿದ್ದಾರೆ. ಅವರ ಹೇಳಿಕೆ ಸ್ಪಷ್ಟವಾಗಿದೆ. “ಅಲ್ಲಿ (ರೂಪಾ ಕನ್ವರ್ ದಹನವಾದ ಸ್ಥಳ) ಜಾತ್ರೆ, ಮೇಳಗಳು ನಡೆಯುತ್ತವೆ.

ಸತಿ ದೇವಾಲಯಕ್ಕೆ ಇಂದಿಗೂ ಸಾಕಷ್ಟು ಜನ ಭಕ್ತಿಭಾವದಿಂದ ಬರುತ್ತಾರೆ. ರೂಪಾ ಕನ್ವರ್ ಘಟನೆ ನಡೆದ ಬಳಿಕ ಈ ಶಕ್ತಿಕೇಂದ್ರಗಳನ್ನು ಏಕಾಏಕಿ ನಾಶ ಮಾಡುವ ಪ್ರಯತ್ನ ನಡೆದಿತ್ತು”, ಮುಂದುವರೆದು “ಸತಿ” ಬಲಾತ್ಕಾರದಿಂದಲೋ ಅಥವಾ ದೌರ್ಜನ್ಯದಿಂದಲೋ ನಡೆದರೆ ಅದು ಖಂಡಿತಾ ತಪ್ಪು. ಅಂಥವುಗಳನ್ನು ನಾವು ವಿರೋಧಿಸಲೇಬೇಕು” ಎಂದು ಅವರು ಹೇಳಿದ್ದರು. “ಬಲಾತ್ಕಾರದಿಂದ ನಡೆದರೆ ತಪ್ಪು” ಎಂದರೆ ಏನು ಅರ್ಥ? ‘ಸ್ವಯಂಪ್ರೇರಣೆಯಿಂದ ಯಾರಾದರೂ ಸತಿ ಹೋದರೆ ಅದು ತಪ್ಪಲ್ಲ. ಅದು ದೇವಸ್ಥಾನ ಕಟ್ಟಿ ಪೂಜಿಸಬೇಕಾದ ಆದರ್ಶ ಪರಂಪರೆ!’ ಎಂದರ್ಥ ಅಲ್ಲವೆ. ರೂಪ ಕನ್ವರ್ ಸ್ವಯಂಪ್ರೇರಣೆಯಿಂದ ಸತಿ ಹೋಗಿರುವುದರಿಂದ ಆಕೆಗೆ ದೇವಸ್ಥಾನ ಕಟ್ಟುವುದು ನಮ್ಮ ಧಾರ್ಮಿಕ ನಂಬಿಕೆ. ಅದನ್ನು ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ ಎಂಬುದು ಅವರ ವಾದವಾಗಿತ್ತು.

ಸತಿ ದೇಗುಲ ನಿರ್ಮಿಸುವ ನಿಲುವು ವಿಜಯರಾಜೇ ಸಿಂಧಿಯ ಅಥವಾ ಕೆಲವು ಬಿಜೆಪಿ ಮುಖಂಡರ ವೈಯಕ್ತಿಕ ನಿಲುವಾಗಿರಲಿಲ್ಲ. ಈ ವಿಷಯದಲ್ಲಿ ಆರೆಸ್ಸೆಸ್‌ನ ನಿಲುವು ಸಹ ಸ್ಪಷ್ಟವಾಗಿತ್ತು. ವಿಜಯರಾಜೇ ಸಿಂಧಿಯಾ ಅವರ ನಿಲುವು ಅವರ ವೈಯಕ್ತಿಕ ನಿಲುವಾಗಿದ್ದಿದ್ದರೆ ಅದನ್ನು ಬಹಿರಂಗ ಹೇಳಿಕೆಯ ಮೂಲಕ ಆರೆಸ್ಸೆಸ್ ಸ್ಪಷ್ಟಪಡಿಸಬಹುದಿತ್ತು. ರಾಜಾರಾಮ್ ಮೋಹನ ರಾಯ್ ಅವರ ನೇತೃತ್ವದ ಹೋರಾಟದ ಫಲವಾಗಿ ಬ್ರಿಟಿಷರ ಆಡಳಿತದಲ್ಲಿ 1828ರಲ್ಲೇ ನಿಷೇಧಿಸಲಾಗಿದ್ದ ಅಮಾನವೀಯ, ಕ್ರೂರ ಸತಿ ಪದ್ಧತಿಯ ಆಚರಣೆಯನ್ನು ಖಂಡಿಸಿ, ಸತಿ ದೇಗುಲ ನಿರ್ಮಾಣಕ್ಕೆ ಆರೆಸ್ಸೆಸ್ ಬೆಂಬಲ ಇಲ್ಲ ಎಂದು ಸಾರಬಹುದಿತ್ತು. ಸತಿ ದೇವಾಲಯ ನಿರ್ಮಾಣದ ವಿರುದ್ಧ ಪ್ರಚಾರಾಂದೋಲನ ನಡೆಸಬಹುದಿತ್ತು. ವಿಜಯರಾಜೇ ಸಿಂಧಿಯಾ ಅವರನ್ನು ತಿದ್ದಲು ಪ್ರಯತ್ನಿಸಬಹುದಿತ್ತು. ವಿಜಯರಾಜೇ ಸಿಂಧಿಯಾ ಸಂಘದ ಮಾತು ಕೇಳದಿದ್ದರೆ ಅವರ ಮೇಲೆ ಶಿಸ್ತು ಕ್ರಮವಹಿಸಿ ಅವರನ್ನು ‘ರಾಷ್ಟ್ರೀಯ ಸೇವಿಕಾ ಸಮಿತಿ’ಯಿಂದ ಹೊರಹಾಕಬಹುದಿತ್ತು ಮತ್ತು ಬಿಜೆಪಿ ಸಹ ವಿಜಯಾರಾಜೇ ಸಿಂಧಿಯಾ ಮತ್ತು ಸತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದ ಮುಖಂಡರನ್ನು ಪಕ್ಷದಿಂದ ಹೊರಹಾಕಬಹುದಿತ್ತು. ಅಂತಹ ಯಾವುದೂ ನಡೆಯಲಿಲ್ಲ.

ಸತಿ ಪದ್ಧತಿಯನ್ನು ಬೆಂಬಲಿಸಿ ರೂಪ ಕನ್ವರ್‌ಗೆ ದೇಗುಲ ನಿರ್ಮಿಸುವ ಸಂಬಂಧ ‘ತರಂಗ’ ಪತ್ರಿಕೆಯಲ್ಲಿ ವಿಜಯರಾಜೇ ಸಿಂಧಿಯ ಅವರ ಸಂದರ್ಶನ ಪ್ರಕಟವಾಗುವ ಹೊತ್ತಿಗಾಗಲೇ ನಾನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ.)ನ ಸಕ್ರಿಯ ಕಾರ್ಯಕರ್ತನಾಗಿದ್ದೆ. 1988ರ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನಾನು ಎ.ಪಿ.ಎಸ್. ಸಂಜೆ ಕಾಲೇಜಿನಲ್ಲಿ 50 ಪೈಸೆ ವಾರ್ಷಿಕ ಶುಲ್ಕ ಕೊಟ್ಟು ಎಸ್ಸೆಫೈಗೆ ಸದಸ್ಯನಾಗಿದ್ದೆ. ನನ್ನ ಸಹಪಾಠಿ ಶ್ರೀರಾಮ್ ನನ್ನನ್ನು ಎಸ್ಸೆಫೈಗೆ ಸದಸ್ಯನ್ನಾಗಿ ಮಾಡಿದ್ದರು. ನಾನು ಕೊಟ್ಟ 50 ಪೈಸೆಗೆ ನನಗೆ ರಸೀದಿ ಸಹ ಸಿಕ್ಕಿತ್ತು. ರಸೀದಿಯಲ್ಲಿ ಎಸ್‌ಎಫ್‌ಐನ ವಿಚಾರ, ಬೇಡಿಕೆಗಳು ಎಲ್ಲವೂ ಇದ್ದವು. ನಾನು ಎಸ್ಸೆಫೈ ಸದಸ್ಯನಾದದ್ದಕ್ಕೆ ದಾಖಲೆ ಇತ್ತು. ಎಸ್ಸೆಫೈನ ವಿಚಾರಗಳು ತಿಳಿಯುತ್ತಾ ಹೋದಂತೆ ಕ್ರಮೇಣ ನಾನು ಎಸ್ಸೆಫೈನಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಾ ಹೋದೆ. ನಮ್ಮದು ಸಂಜೆ ಕಾಲೇಜಾಗಿತ್ತು. ನಾನು ಹಗಲು ಕೆಲಸ ಮಾಡುತ್ತಿದ್ದೆ. ಸಂಜೆ ಕಾಲೇಜಿಗೆ ಬರುತ್ತಿದ್ದೆ.

ನಾನು ಒಂದು ಕಡೆ ಎಸ್ಸೆಫೈನ ಸದಸ್ಯ, ಕಾರ್ಯಕರ್ತನಾಗಿದ್ದರೂ ಆರೆಸ್ಸೆಸ್‌ಗೆ ಅಧಿಕೃತವಾಗಿ ರಾಜಿನಾಮೆಯನ್ನೇನೂ ಕೊಟ್ಟಿರಲಿಲ್ಲ. ಆರೆಸ್ಸೆಸ್‌ನಲ್ಲಿ ಸದಸ್ಯತ್ವ, ಸದಸ್ಯತ್ವ ನೋಂದಣಿ, ಸದಸ್ಯತ್ವ ರಸೀದಿ ಇಂತಹ ಯಾವ ಕ್ರಮವನ್ನೂ, ದಾಖಲೆಯನ್ನೂ ನಾನು ನೋಡಿಯೇ ಇಲ್ಲ. ಇನ್ನೂ ರಾಜಿನಾಮೆ ಕೊಡುವುದು ಹೇಗೆ? ಬಾಬರಿ ಮಸೀದಿ-ರಾಮಮಂದಿರ ಎಂದು ಗದ್ದಲ ಎಬ್ಬಿಸುವ ಆರೆಸ್ಸೆಸ್ ನೀತಿಯ ಬಗೆಗೆ ನನ್ನಲ್ಲಿ ತಿರಸ್ಕಾರ ಮೂಡಿದಾಗ ಶಾಖೆಗೆ ಹೋಗುವುದನ್ನು ನಿಲ್ಲಿಸಿ ಹಾಗೇ ಸುಮ್ಮನಾಗಿದ್ದೆ ಅಷ್ಟೆ.

ಸತಿ ಪದ್ಧತಿಯನ್ನು ಆರೆಸ್ಸೆಸ್ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಬೆಂಬಲಿಸುವ ವಿಚಾರ ನೋಡಿ ನನ್ನಲ್ಲಿ ಒಂದು ಬಗೆಯ ಸಾತ್ವಿಕ ಆಕ್ರೋಶ ತಲೆಯೆತ್ತಿತು. ಆರೆಸ್ಸೆಸ್‌ನ ಈ ಜೀವ ವಿರೋಧಿ ನಿಲುವನ್ನು ಪ್ರಶ್ನಿಸಬೇಕು, ಸುಮ್ಮನೆ ಬಿಡಬಾರದು ಎಂದು ನನಗೆ ತೀವ್ರವಾಗಿ ಅನ್ನಿಸಿತು. ಈಗ ನಾನು ಮತ್ತೊಮ್ಮೆ ಆರೆಸ್ಸೆಸ್ ಶಾಖೆಯತ್ತ ಮುಖ ಮಾಡಿದೆ. ಮೊದಲಿಗೆ ಶ್ರೀನಗರದ ನನ್ನದೇ ಊರಿನ ಶಾಖೆಗೆ ಹೋದೆ. ಮನಸ್ಸಿಲ್ಲದಿದ್ದರೂ ಎದೆಯ ಮೇಲೆ ಕೈಯಿಟ್ಟು ಆರೆಸ್ಸೆಸ್‌ನ ಕೇಸರಿ ಧ್ವಜಕ್ಕೆ ವಂದನೆ ಸಲ್ಲಿಸಿದೆ. ತಡವಾಗಿ ಶಾಖೆ ಸೇರಿಕೊಳ್ಳುವವರು ಹೀಗೆ ಮೊದಲು ‘ಧ್ವಜವಂದನೆ’ ಸಲ್ಲಿಸಿ ಸೇರಿಕೊಳ್ಳುವುದು ಕ್ರಮ. ಅದು, ಇದು ಆಟಗಳು ಆದ ಮೇಲೆ ಎಲ್ಲರೂ ವೃತ್ತಾಕಾರವಾಗಿ ಕುಳಿತುಕೊಂಡು ಮಾತನಾಡುವಾಗ ನನ್ನ ಪ್ರಶ್ನೆಗಳ ಸುರುಳಿ ಬಿಚ್ಚಿದೆ. “ಆರೆಸ್ಸೆಸ್ ಸತಿ ಪದ್ಧತಿಯನ್ನು ಬೆಂಬಲಿಸುವುದು ಎಷ್ಟು ಸರಿ?”, “ರೂಪ್ ಕನ್ವರ್ಗೆ ದೇವಸ್ಥಾನ ಕಟ್ಟುವ ಚಳುವಳಿ ನಡೆಸುವುದು ಅಂದರೆ ಸತಿ ಪದ್ದತಿಯನ್ನು ಬೆಂಬಲಿಸಿದಂತೆಯೇ ಅಲ್ಲವೇ?” ನನ್ನ ಪ್ರಶ್ನೆಗಳು ನೇರವಾಗಿದ್ದವು. ಆದರೆ ಉತ್ತರ ನೇರವಾಗಿರಲಿಲ್ಲ. “ಬಲವಂತವಾಗಿ ಮಹಿಳೆಯರು ಸತಿ ಹೋಗುವಂತೆ ಮಾಡಿದರೆ ಅದು ತಪ್ಪು. ಆದರೆ ಸ್ವಯಂ ಪ್ರೇರಣೆಯಿಂದ ಮಹಿಳೆಯರು ಸತಿ ಹೋದರೆ ಅದು ತಪ್ಪೇನಲ್ಲ. ರೂಪ ಕನ್ವರ್ ಸತಿ ಹೋಗಲು ಯಾರೂ ಬಲವಂತ ಮಾಡಿಲ್ಲ. ಆದ್ದರಿಂದ ರೂಪ್ ಕನ್ವರ್‌ಗೆ ದೇವಸ್ಥಾನ ಕಟ್ಟುವುದರಲ್ಲಿ ಯಾವುದೇ ತಪ್ಪಿಲ್ಲ” ಎನ್ನುವ ಉತ್ತರ ನನಗೆ ಸಿಕ್ಕಿದ್ದು!

ಇದಾದನಂತರ ನಾನು ಆರೆಸ್ಸೆಸ್ ಕೇಂದ್ರ ಕಚೇರಿಯಾದ ಬಸವನಗುಡಿ ಸಮೀಪದ ರಂಗರಾವ್ ರಸ್ತೆಯ ‘ಕೇಶವ ಕೃಪ’ದ ಆವರಣದಲ್ಲಿ ನಡೆಯುತ್ತಿದ್ದ ‘ಸಾಯಂ ಶಾಖೆ’ಗೆ, ಅಂದರೆ ಸಂಜೆಯ ಶಾಖೆಗೆ ಹೋದೆ. ಅಲ್ಲಿಯೂ ಹೀಗೆ ಇದೇ ಪ್ರಶ್ನೆಯನ್ನೇ ಮುಂದಿಟ್ಟೆ. ಬಹುತೇಕ ಅಂಥದ್ದೇ ಉತ್ತರ. ಬಲವಂತವಾಗಿ ಪತಿಯ ಚಿತೆಗೆ ಮಹಿಳೆಯನ್ನು ತಳ್ಳುವುದು ತಪ್ಪು. ಆದರೆ ಸ್ವಯಂ ಪ್ರೇರಣೆಯಿಂದ ಹೆಂಡತಿ ಸತಿ ಹೋದರೆ ಅದು ತಪ್ಪಲ್ಲ!!

‘ತರಂಗ’ ಪತ್ರಿಕೆಯಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಸಂದರ್ಶನ

ಮುಂದಿನ ಸರದಿ ನರಸಿಂಹರಾಜ ಕಾಲೋನಿಯ ಆಚಾರ್ಯ ಪಾಠಶಾಲಾ ಮೈದಾನದ ಪಕ್ಕದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂದೆ ನಡೆಯುತ್ತಿದ್ದ ಶಾಖೆಯದು. ಅಲ್ಲಿ ನಾಲ್ಕಾರು ಮಕ್ಕಳು, ನಾಲ್ಕೈದು ಜನ ವಯಸ್ಕರು ಶಾಖೆಯಲ್ಲಿ ಪಾಲ್ಗೊಂಡಿದ್ದರು. ನಾನು ಎಂದಿನಂತೆ ತಂಡದೊಳಗೆ ಸೇರಿಕೊಂಡೆ. ಆ ತಂಡದಲ್ಲಿ ಒಬ್ಬ ಯುವಕನಿದ್ದ. ಅವನು ಎಂ.ಟೆಕ್. ವಿದ್ಯಾರ್ಥಿ. ನಾನು ಅವನಿಗೆ ಸಂಘವು ಸತಿ ಪದ್ಧತಿಯನ್ನು ಬೆಂಬಲಿಸುತ್ತಿರುವ ಬಗೆಗೆ ಕೇಳಿದೆ. ಆಗ ಅವನು ಹೇಳಿದ ಉತ್ತರ ಕೇಳಿ ನನಗೆ ಅಘಾತವಾಯಿತು. ಆತ ಹೇಳಿದ, “ಸಂಘದಲ್ಲಿ ನಾವು ಹಿರಿಯರು ಹೇಳಿದ್ದನ್ನು ಪಾಲಿಸುತ್ತೇವೆ. ಅವರು ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಂಡಿರುತ್ತಾರೆ. ನಾವು ಆ ತೀರ್ಮಾನಗಳನ್ನು ವಿಮರ್ಶೆ ಮಾಡಲು ಹೋಗುವುದಿಲ್ಲ”!!!

ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ರೂಪ ಕನ್ವರ್‌ಗೆ ದೇಗುಲ ಕಟ್ಟುವ ಚಳವಳಿ ವಿಜಯರಾಜೇ ಸಿಂಧಿಯಾ ಅವರ ವೈಯಕ್ತಿಕ ನಿಲುವಲ್ಲ. ಈ ಚಳವಳಿಗೆ ಸಂಘ ಪರಿವಾರದ ಸಮ್ಮತಿ ಮತ್ತು ಬೆಂಬಲ ಎರಡೂ ಇದೆ.

ಆರೆಸ್ಸೆಸ್‌ಗೆ ರಾಜಿನಾಮೆ..

ಈಗ ನಾನು ಸಂಘಕ್ಕೆ ಅಧಿಕೃತವಾಗಿ ರಾಜೀನಾಮೆ ಕೊಟ್ಟೆ, ಅದು ನನ್ನದೇ ಆದ ಶೈಲಿಯಲ್ಲಿ. ಅಂದು ಮನೆಯಲ್ಲಿ ಬೆಳಿಗ್ಗೆ ನೀರೊಲೆಗೆ ಒಟ್ಟಿದ್ದ ಸೌದೆಗಳು ಹೊತ್ತಿಕೊಂಡು ಒಲೆ ಧಗಧಗ ಉರಿಯುತ್ತಿದ್ದವು. ಈಗ ನಾನು ನನ್ನ ಖಾಸಗಿ ವಸ್ತುಗಳನ್ನು ಇಟ್ಟುಕೊಂಡಿದ್ದ ಕಬ್ಬಿಣದ ಹಳೆಯ ಟ್ರಂಕನ್ನು ತೆರೆದೆ. ಆ ಟ್ರಂಕ್‌ನಲ್ಲಿ ಆರೆಸ್ಸೆಸ್‌ನಲ್ಲಿದ್ದಾಗ ತೊಡುತ್ತಿದ್ದ ಕರಿಟೋಪಿ ಹಾಗೇ ಇತ್ತು. ಹಾಗೆಯೇ ಶಾಖೆಯಲ್ಲಿ ನನಗೆ ಕೊಟ್ಟಿದ್ದ ‘ನಮಸ್ತೆ ಸದಾ ವತ್ಸಲೆ’ ಸಂಘಗೀತೆ ಇದ್ದ ಕಿರು ಹೊತ್ತಿಗೆಯೂ ಇತ್ತು. ಅವುಗಳನ್ನು ಎಳೆದು ಹೊರಗೆ ತೆಗೆದೆ. ಅವುಗಳನ್ನು ಒಂದೊಂದಾಗಿ ಬೆಂಕಿಗೆ ಹಾಕಿದೆ. ಆರೆಸ್ಸೆಸ್‌ನ ಕರಿ ಟೋಪಿ ಮತ್ತು ಸಂಘಗೀತೆಯಿದ್ದ ಕಿರು ಪುಸ್ತಕ ಎರಡೂ ನೀರೊಲೆಯ ಬೆಂಕಿಯಲ್ಲಿ ಧಗಧಗಿಸಿ ಹೊತ್ತಿಕೊಂಡು ಉರಿದು ಬೂದಿಯಾದವು. ಹೀಗೆ ಆರೆಸ್ಸೆಸ್‌ಗೆ ನಾನು ಕೊಟ್ಟ ರಾಜಿನಾಮೆ ಅಂಗೀಕಾರವಾಗಿತ್ತು.

ಆರ್.ರಾಮಕೃಷ್ಣ (ಗವಿಪುರಂ) ದಾಸರಹಳ್ಳಿ,

ಪತ್ರಕರ್ತರು, ಬೆಂಗಳೂರು


ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಇದನ್ನೂ ಓದಿ: ‘ಫೇಕ್‌‌ ಅಕೌಂಟ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಬಿಜೆಪಿ ಸಂಸದನಿಗೆ ವಿನಾಯಿತಿ ನೀಡಲಾಗಿತ್ತು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...