Homeಮುಖಪುಟಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

ಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು!

- Advertisement -
- Advertisement -

ಪರಿಚಯವಿಲ್ಲದವರಿಗೆ ಕೇರಳದಲ್ಲಿನ ರಾಜಕೀಯ ಹಿಂದುತ್ವದ ಬೆಳವಣಿಗೆ ಹಾಗೂ ಅದರ ಭಾಗವೇ ಆದ ಬಿಜೆಪಿಯ ಮುನ್ನಡೆ ಕಾಲದ ಪ್ರವಾಹದಲ್ಲಿ ನುಚ್ಚುನೂರಾಗುವ ಪ್ರಕ್ರಿಯೆಯಂತೆ ಕಾಣಬಹುದು. ಕೇರಳದ ಒಳಗೆ ಮತ್ತು ಹೊರಗಿರುವ ಅನೇಕ ಪ್ರಗತಿಪರರಿಗೆ ಕೇರಳ ರಾಜ್ಯದೊಳಗಿನ ಹಿಂದುತ್ವದ ಶಕ್ತಿಗಳು ದುರ್ಬಲವಾಗಿವೆ, ಕೊನೇ ಪಕ್ಷ ಚುನಾವಣಾ ರಾಜಕೀಯದಲ್ಲಿ ಅವುಗಳ ಪ್ರಭಾವ ಕಡಿಮೆ ಎನ್ನಿಸಿ, ಅಲ್ಲಿನ ಎಡಪಕ್ಷಗಳು ಅದನ್ನು ತಡೆಯುತ್ತವೆ ಎಂದೆನಿಸಬಹುದು. ಈ ಅಭಿಪ್ರಾಯಗಳಿಗೆ ವಾಸ್ತವಾಂಶಕ್ಕಿಂತ ಹೆಚ್ಚಾಗಿ ಅತಿಯಾದ ಆತ್ಮವಿಶ್ವಾಸ ಕಾರಣವಾಗಿರುತ್ತವೆ. ಬಲಪಂಥೀಯ ಹಿಂದುತ್ವ ಶಕ್ತಿಗಳ ದೀರ್ಘಕಾಲೀನ ರಾಜಕೀಯ ಯೋಜನೆಗಳನ್ನು ಅಂದಾಜು ಮಾಡುವುದಕ್ಕೆ ಎಡವುದರಿಂದ ಈ ಅಭಿಪ್ರಾಯಗಳು ಮೂಡುತ್ತವೆ.

ಸ್ಥಾಪನೆಯ ದಿನದಿಂದಲೂ ಕೇರಳದ ಸಾಮಾಜಿಕ ಸಂರಚನೆಯಲ್ಲಿ ಸಂಘ ಪರಿವಾರ ಅಸ್ತಿತ್ವದಲ್ಲಿದೆ. ಸಂಘ ಪರಿವಾರದ ರಾಜಕೀಯ ಬಣ ಬಿಜೆಪಿಯು ರಾಜ್ಯದಲ್ಲಿ ಪಡೆಯುವ ಮತಗಳ ಸಂಖ್ಯೆ ತುಂಬಾ ಕಡಿಮೆ ಇರುವುದು ಹೌದಾದರೂ 2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು. 1940ರ ಇಸವಿಯಲ್ಲಿಯೇ ಆರ್‌ಎಸ್‌ಎಸ್ ಕೇರಳದಲ್ಲಿ ತನ್ನ ಬೇರು ಬಿಡಲು ಪ್ರಾರಂಭಿಸಿತು ಮತ್ತು ಕೇರಳದ ಮೇಲ್ಜಾತಿಗಳ ಹಿಂದೂಗಳ ನಡುವೆ ಮುಖ್ಯವಾಹಿನಿ ಶಕ್ತಿಯಾಗಿ ರೂಪುಗೊಂಡಿತು. 1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಆರ್‌ಎಸ್‌ಎಸ್‌ನ ಸದಸ್ಯರು ಬಹಿರಂಗವಾಗಿಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದನ್ನು ಕಂಡು ಉಂಟಾದ ಹತಾಶೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಯುವ ಕಮ್ಯುನಿಸ್ಟ್ ಒ.ಎನ್.ವಿ ಕುರುಪ್ ತಮ್ಮ ನೆನಪಿನ ಪುಟಗಳಲ್ಲಿ ದಾಖಲಿಸಿದ್ದಾರೆ.

1970ರ ಹೊತ್ತಿಗೆ ಆರ್‌ಎಸ್‌ಎಸ್ ಸಂಘಟಿತ ಕೋಮು ಹಿಂಸಾಚಾರವನ್ನು ನಡೆಸುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಬೇರುಬಿಟ್ಟಿತ್ತು. ಕಣ್ಣೂರಿನಲ್ಲಿ ಆರ್‌ಎಸ್‌ಎಸ್ ಪ್ರೇರಿತ ಕೋಮು ದ್ವೇಷದ ವದಂತಿಗಳು 1972ರ ತಲಚೇರಿ ಗಲಭೆಗೆ ಕಾರಣವಾಗಿತ್ತು. ಈ ಗಲಭೆಯ ಸಮಯದಲ್ಲಿ ಈಗ ಮುಖ್ಯ ಮಂತ್ರಿಯಾಗಿರುವ ಪಿಣರಾಯಿ ವಿಜಯನ್‌ರವರು ಸಿಪಿಐಎಂಅನ್ನು ಆರ್‌ಎಸ್‌ಎಸ್‌ನ ದಾಳಿಗೆದುರಾಗಿ ಮುನ್ನಡೆಸಿದರು. ಈ ಪ್ರದೇಶದಲ್ಲಿದ್ದ ಮಸೀದಿಗಳ ಮೇಲೆ ಆರ್‌ಎಸ್‌ಎಸ್ ನಡೆಸುತ್ತಿದ್ದ ದಾಳಿಗಳನ್ನು ತಡೆದರು. ಈ ಗಲಭೆಯ ಸಮಯದಲ್ಲೇ ಮೆರುವಂಬಾಯಿ ಮಸೀದಿಯನ್ನು ಕಾಯುತ್ತಿದ್ದ ಸಿಪಿಐಎಂನ ಯು.ಕೆ. ಕುಂಯಿರಾಮನ್‌ರವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದರು. ಆರ್‌ಎಸ್‌ಎಸ್‌ನಿಂದ ಹತ್ಯೆಗೊಳಗಾದ ಮೊದಲ ಸಿಪಿಐಎಂ ಹುತಾತ್ಮ ಯು.ಕೆ. ಕುಂಯಿರಾಮನ್. ಕೇರಳದಲ್ಲಿ ಎಡಪಕ್ಷಗಳ ಮೇಲೆ ಆರ್‌ಎಸ್‌ಎಸ್ ನಡೆಸುವ ದಾಳಿಯು ಪ್ರಾರಂಭವಾಗಿದ್ದೇ ಈ ಗಲಭೆಯಿಂದ. ಆರ್‌ಎಸ್‌ಎಸ್‌ನ ಈ ನಿರಂತರ ಸರಣಿ ದಾಳಿಗಳು ಇವತ್ತಿಗೂ ಮುಂದುವರೆದಿದೆ, ಹಲವು ಜೀವಗಳನ್ನು ಬಲಿ ಪಡೆದಿದೆ.

ಕೇರಳದಲ್ಲಿ ಈಗ ಹೆಚ್ಚುಕಡಿಮೆ ಏಳು ಸಾವಿರ ಶಾಖೆಗಳನ್ನು ಹೊಂದಿರುವ ಆರ್‌ಎಸ್‌ಎಸ್ ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿದೆ. 2014ರಿಂದ ಸಂಘ ಪರಿವಾರ ಕೇರಳದೆಡೆಗೆ ತನ್ನ ರಾಜಕೀಯ ಗುರಿಯನ್ನು ವರ್ಗಾಯಿಸಿದ್ದು, ಬಿಜೆಪಿಯ ಮತಗಳಿಕೆ ಪ್ರಮಾಣವು ಗಣನೀಯವಾಗಿ ಏರಿಕೆ ಕಂಡಿದೆ. ಈ ಮುಂಚೆ ಕಾಂಗ್ರೆಸ್ಸಿಗೆ ಮತ ಚಲಾಯಿಸುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಜೊತೆ ಸಂಬಂಧ ಹೊಂದಿದವರು ಈಗ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೋಮ್‌ನಿಂದ ಬಿಜೆಪಿಯ ಮುಖಂಡರಾದ ಓ ರಾಜಗೋಪಾಲ್ ಜಯಗಳಿಸಿದ್ದು ಬಿಜೆಪಿಯ ಮತಗಳಿಕೆಯ ಪ್ರಮಾಣದ ಹೆಚ್ಚುವಿಕೆಗೊಂದು ಉದಾಹರಣೆ. ನೆಮೋಮ್‌ನಲ್ಲಿ ನಡೆದ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐಎಂ ಪಡೆದ ಮತಗಳನ್ನು ಪರಿಗಣಿಸಿದಾಗ ಕಾಂಗ್ರೆಸ್ಸಿಗೆ ಬೀಳುತ್ತಿದ್ದ ಮತಗಳೆಲ್ಲ ಹೇಗೆ ಬಿಜೆಪಿಗೆ ವರ್ಗವಾಗಿವೆ ಎನ್ನುವುದನ್ನು ಗುರುತಿಸಬಹುದಾಗಿದೆ.

ಈ ಬದಲಾವಣೆಗೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖ ಕಾರಣವೆಂದರೆ ಬಿಜೆಪಿಗೆ ತನ್ನ ನೆಲೆಗಳನ್ನು ಬಿಟ್ಟುಕೊಡಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸುತ್ತಿರುವ ಮೃದು ಹಿಂದುತ್ವ ಧೋರಣೆ. 2018ರಲ್ಲಿ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ನೀಡಿದ ಆದೇಶದ ಕುರಿತು ಕಾಂಗ್ರೆಸ್ ತೆಗೆದುಕೊಂಡ ಧೋರಣೆಗಳು ಬಿಜೆಪಿಯ ಧೋರಣೆಗಿಂತ ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿದ್ದ ಅಡೆತಡೆಯ ಹಿಂದಿನ ಪುರುಷ ಪ್ರಧಾನ ಮನಸ್ಥಿತಿಯನ್ನು ಗಮನಕ್ಕೇ ತೆಗೆದುಕೊಳ್ಳದೇ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ’ಸಂಪ್ರದಾಯವನ್ನು ರಕ್ಷಿಸಬೇಕು’, ’ಕಮ್ಯುನಿಸ್ಟರು ಹಿಂದೂ ಮೌಲ್ಯಗಳ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಬೊಬ್ಬಿರಿದರು.

ಇವೆಲ್ಲವುಗಳ ಜೊತೆಗೆ ಕೇರಳದ ಬಹುಜನರನ್ನು ಕಳೆದ ಕೆಲವು ದಶಕಗಳಿಂದ ’ಸಂಸ್ಕೃತೀಕರಣ’ಕ್ಕೊಳಪಡಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಂದೆ ನಿಂತು ನಡೆಸುತ್ತಿರುವುದು ಸಂಘ ಪರಿವಾರ. ಪಾರಂಪರಿಕ ಪೂಜ್ಯ ಜಾಗಗಳನ್ನೆಲ್ಲ ದೇವಸ್ಥಾನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬಹುಜನರು ವೈದಿಕ ಆಚರಣೆಗಳ ಜೊತೆ ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯು ರಾಜಕೀಯವಾಗಿಯೂ ಗೆಲ್ಲುತ್ತಿರುವುದು, ರಾಜ್ಯದಲ್ಲಿ 1957ರಿಂದ ಕಂಡುಬರುವ ಜಾತಿ ಆಧಾರಿತ ಐತಿಹಾಸಿಕ ಮತ ಚಲಾವಣೆಯು ಮುರಿದು ಬೀಳುತ್ತಿರುವ ಸೂಚನೆ. ಅರವತ್ತು ವರುಷಗಳ ಹಿಂದೆ ಕೇರಳದಲ್ಲಿದ್ದ ಕಮ್ಯುನಿಸ್ಟರ ಸರಕಾರವನ್ನು ಸವರ್ಣ ಭೂಮಾಲೀಕರ ಮೈತ್ರಿ ಮೋಸದಿಂದ ಕೆಡವಿದ ಮೇಲೆ ಕೇರಳದಲ್ಲಿ ಮತ ಚಲಾವಣೆಯು ಜಾತಿಯಾಧಾರಿತವಾಗಿದೆ. ರಾಜ್ಯದಲ್ಲಿನ ದಲಿತರು – ಹಿಂದುಳಿದ ವರ್ಗಗಳ ಮತಗಳನ್ನು ಕಮ್ಯುನಿಸ್ಟರೇ ನಿರಂತರವಾಗಿ ಪಡೆಯುತ್ತಾ ಬಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಹಿಂದುತ್ವದ ಶಕ್ತಿಗಳು ವಾಟ್ಸ್‌ಆಪ್ ಮೆಸೇಜುಗಳ ಮೂಲಕ ಸಂಘಟಿತವಾಗಿ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವುದು ಕೂಡ ಹಿಂದುತ್ವವು ರಾಜಕೀಯ ಶಕ್ತಿಯಾಗಿ ಬೆಳೆಯಲು ಕಾರಣವಾಗಿದೆ. ರಾಜಕಾರಣದ ಕುರಿತು ಕಾಂಗ್ರೆಸ್ಸಿನ ದೃಷ್ಟಿಕೋನ ಆಮೂಲಾಗ್ರವಾಗಿ ಬದಲಾಗದೇ ಹೋದಲ್ಲಿ ಕೇರಳ ರಾಜ್ಯದಲ್ಲಿ ಬಹುದೊಡ್ಡ ಪಕ್ಷಪಾತಿ ರಾಜಕೀಯ ಬದಲಾವಣೆ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ಸಿನ ಜಾಗದಲ್ಲಿ ಬಿಜೆಪಿ ಬೆಳೆದು ಎಡ ಪಕ್ಷಗಳಿಗೆ ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯುತ್ತದೆ. ಇದರಿಂದ ಉಂಟಾಗುವ ರಾಜಕೀಯ ಧ್ರುವೀಕರಣದ ಪ್ರಭಾವಗಳು ಸುದೀರ್ಘ ಕಾಲದವರೆಗೆ ಪರಿಣಾಮ ಬೀರುತ್ತವೆ.

  • ವಾರ್ಕಿ ಪಾರಕ್ಕಲ್

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿರುವ ವಾರ್ಕಿ ಸಾಮಾಜಿಕ ಕಾರ್ಯಕರ್ತರು ಕೂಡ. ದೆಹಲಿ ಎಸ್‌ಎಫ್‌ಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ.

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...