Homeಅಂಕಣಗಳುಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ.

- Advertisement -
- Advertisement -

ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತಸೇನೆ ದಿನಕಳೆದಂತೆ ಹಿಗ್ಗಲಿದೆಯೇ ವಿನಾ ಕುಗ್ಗುವ ಮಾತಿಲ್ಲ…
ಉತ್ತರ ಭಾರತ ಮೈ ನಡುಗಿಸುವ ಚಳಿಯ ಕಂಬಳಿಯನ್ನು ಹೊದೆಯತೊಡಗಿದೆ. ಶೀತ ಮಾರುತಗಳೆದ್ದು ಎಲುಬು ಕೊರೆಯುವಂತೆ ಕಾಡುವ ಚಳಿ ಇನ್ನೂ ಇಳಿದಿಲ್ಲ ಹೌದು. ಆದರೆ ಅದು ಸನಿಹದಲ್ಲೇ ಠಳಾಯಿಸಿದೆ. ಕ್ರಿಸ್ಮಸ್ ಮುಗಿದು ಡಿಸೆಂಬರ್ ಕಳೆದು ಜನವರಿ ಕಾಲಿಡುತ್ತಿದ್ದಂತೆ ಶೀತಮಾರುತಗಳು ಹೊಟ್ಟೆ ಬಟ್ಟೆಗಿಲ್ಲದ ನಿರ್ಗತಿಕ ಜನಕೋಟಿಯನ್ನು ಇನ್ನಿಲ್ಲದಂತೆ ಕಾಡಿ ಹಿಂಡಿ ಹಿಪ್ಪೆ ಮಾಡಲಿವೆ. ಬೇಸಿಗೆಯಲ್ಲಿ ಉಗ್ರ ಉಷ್ಣತೆಯ ಮಾರುತಗಳು ಬೀಸಿ ನಿರ್ಗತಿಕರು ಸಾಯುವುದುಂಟು. ಚಳಿಗಾಲದಲ್ಲಿ ಸಾವನ್ನು ಕರೆತಂದು ಕಾಡುವುದು ಶೀತಮಾರುತಗಳ ಸರದಿ.

PC : Gaon Connection, (ಮಹೇಂದ್ರಸಿಂಗ್ ಟಿಕಾಯತ್)

ಇಂತಹ ಥರಗುಡುವ ಥಂಡಿಯಲ್ಲಿ ದೇಶದ ರಾಜಧಾನಿ ದೆಹಲಿಗೆ ರೈತರು ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಹಾಕಿದ್ದಾರೆ. ದಶಕಗಳ ಹಿಂದೆ 1988ರಲ್ಲಿ ಮಹೇಂದ್ರಸಿಂಗ್ ಟಿಕಾಯತ್ ನೇತೃತ್ವದಲ್ಲಿ ಉತ್ತರಪ್ರದೇಶದ ರೈತರು ದೆಹಲಿಗೆ ನುಗ್ಗಿ ಸಂಸತ್ತಿಗೆ ಕೂಗಳತೆಯ ದೂರದ ಬೋಟ್ ಕ್ಲಬ್‌ನಲ್ಲಿ ಬಾವುಟ ನೆಟ್ಟು ಕುಳಿತಿದ್ದರು. ಆನಂತರದ ಐತಿಹಾಸಿಕ ಮುತ್ತಿಗೆ ಎಂದರೆ ಇದೇ, ಈಗಿನದು, ಪಂಜಾಬ್ ಮತ್ತು ಹರಿಯಾಣದ ರೈತರದು. ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕೋವಿಡ್ ದಾಳಿಯ ದಿನಗಳ ನಟ್ಟನಡುವೆ ತರಾತುರಿಯಿಂದ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ಸಿಡಿದೆದ್ದಿದ್ದರು. ಮೋದಿ ಸರ್ಕಾರ ಸೊಪ್ಪು ಹಾಕಲಿಲ್ಲ. ಪರಿಣಾಮವಾಗಿ ದೆಹಲಿಯ ಗಡಿಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಹಂತ ಹಂತವಾಗಿ ದೇಶದ ರಾಜಧಾನಿಗೆ ಸರಕು ಸೇವೆಗಳು ದೊರೆಯದಂತೆ ಗಡಿಗಳಲ್ಲೇ ತಡೆದು, ಸಂಚಾರವನ್ನು ನಿಲ್ಲಿಸಿ ದೆಹಲಿಯ ’ಉಸಿರು ಕಟ್ಟಿಸಿ’ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವುದು ರೈತರ ಕಾರ್ಯತಂತ್ರ.

ದೆಹಲಿಯನ್ನು ಪ್ರವೇಶಿಸದಂತೆ ರೈತರನ್ನು ತಡೆಯಲು ಹರಿಯಾಣದ ಬಿಜೆಪಿ ಸರ್ಕಾರ ರಸ್ತೆಗಳನ್ನು ಅಗೆದು ಭಾರೀ ಕಂದಕಗಳನ್ನು ನಿರ್ಮಿಸಿತು. ಬೃಹತ್ ಕಂಟೈನರುಗಳನ್ನು, ಕಾಂಕ್ರೀಟ್ ನಿರ್ಮಿತ ತಡೆಗೋಡೆಗಳನ್ನು ಎಬ್ಬಿಸಿತು. ಅವರು ಮುನ್ನುಗ್ಗದಂತೆ, ಚಳಿಗಾಲವೆಂದೂ ಲೆಕ್ಕಿಸದೆ ಜಲಫಿರಂಗಿ ಪ್ರಯೋಗಿಸಿ ಕ್ರೌರ್ಯ ಮೆರೆಯಿತು. ಎಲ್ಲೆಲ್ಲೆಂದಲೋ ನೂರಾರು ಟ್ರಕ್ಕುಗಳಲ್ಲಿ ಮಣ್ಣು ಹೊತ್ತು ತಂದು ಹೆದ್ದಾರಿಗಳಲ್ಲಿ ಮಣ್ಣಿನ ಬೃಹತ್ ದಿಣ್ಣೆಗಳನ್ನು ಎಬ್ಬಿಸಿತು. ಅಶ್ರುವಾಯು ಷೆಲ್‌ಗಳನ್ನು ಧಾರಾಳವಾಗಿ ಸಿಡಿಸಿತು. ಗುಂಡು ಹಾರಿಸುವುದು, ಬಾಂಬು ಸಿಡಿಸುವುದರ ವಿನಾ ಶತ್ರುದೇಶದ ಸೈನಿಕರನ್ನು ಹಿಮ್ಮೆಟ್ಟಿಸಲು ಹೂಡಲಾಗುವ ಉಳಿದೆಲ್ಲ ತಂತ್ರಗಳನ್ನು ಹೂಡಿತು. ಹೆದ್ದಾರಿಗಳನ್ನು ಅಗೆದು ಭಾರಿ ಕಂದಕ ತೋಡುವುದು ವಿಧ್ವಂಸಕ ಕೃತ್ಯವೇ ಹೌದು. ಅಂತಹ ಶಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಸರ್ಕಾರವೇ ಮುಂದೆ ನಿಂತು ಇಂತಹ ಕೃತ್ಯ ಎಸಗಿದರೆ ಅದರ ವಿರುದ್ಧ ಎಫ್‌ಐಆರ್ ದಾಖಲಿಸುವವರು ಯಾರು?

ಮೋದಿ ಸರ್ಕಾರ ಮತ್ತು ಕ್ರೋಧಿತ ರೈತರ ನಡುವೆ ಈ ಮುಖಾಮುಖಿ ಸದ್ಯಕ್ಕೆ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ತಮ್ಮ ಬೇಡಿಕೆಗಳು ಈಡೇರುವ ತನಕ ಇಲ್ಲಿಂದ ಕದಲುವುದಿಲ್ಲ ಎಂಬ ದೃಢನಿಶ್ಚಯ ಅವರದು. ಮೂರರಿಂದ ಆರು ತಿಂಗಳಿಗಾಗುವಷ್ಟು ದವಸ ಧಾನ್ಯ ಮತ್ತಿತರೆ ಅವಶ್ಯಕ ವಸ್ತುಗಳನ್ನು ತಮ್ಮ ಟ್ರ್ಯಾಕ್ಟರುಗಳಲ್ಲಿ ಪೇರಿಸಿ ಇಟ್ಟುಕೊಂಡಿದ್ದಾರೆ. ಸಿಂಘು ಗಡಿಯ ರಾಷ್ಟ್ರೀಯ ಹೆದ್ದಾರಿಯೊಂದರಲ್ಲೇ ಕಿ.ಮೀ.ಗಳ ಉದ್ದಕ್ಕೆ ಇಂತಹ 96 ಸಾವಿರ ಟ್ರ್ಯಾಕ್ಟರುಗಳು ನಿಂತಿವೆ. ಪ್ರತಿ ಟ್ರ್ಯಾಕ್ಟರಿನಲ್ಲೂ ಆಹಾರ ದಿನಸಿಗಳ ಸಂಗ್ರಹವಿದೆ. ಎಂಟು ದಿನಗಳು ಕಳೆದರೂ ಈ ಸಂಗ್ರಹವನ್ನು ಮುಟ್ಟಬೇಕಾದ ಪರಿಸ್ಥಿತಿ ರೈತರಿಗೆ ಒದಗಿಲ್ಲ. ರೈತರ ಹೋರಾಟವನ್ನು ಬೆಂಬಲಿಸುವ ಜನರು-ಸಂಘ ಸಂಸ್ಥೆಗಳಿಂದ ಈ ಸಾಮಗ್ರಿಗಳು ನದಿಯಂತೆ ಹರಿದುಬರತೊಡಗಿವೆ. ರೈತರು ಬೀಡುಬಿಟ್ಟಿರುವ ದೆಹಲಿ ಹೊರವಲಯದ ಯಾವುದೇ ಗಡಿ ಭಾಗಗಳಿಗೆ ಹೋದರೂ ಅಲ್ಲಿ ಹತ್ತು ಹಲವೆಡೆ ವ್ಯವಸ್ಥಿತ ಅನ್ನ ಸಂತರ್ಪಣೆಗಳನ್ನು ಕಾಣಬಲ್ಲಿರಿ. ಅಲ್ಲಿ ಯಾರು ಬಂದರೂ ಕಡೆಗೆ ತಮ್ಮ ವೈರಿ ಬಂದರೂ ಕೈ ಹಿಡಿದು ಪ್ರೀತಿಯಿಂದ ಕುಳ್ಳಿರಿಸಿ ಊಟ ಮಾಡಿಸಿ ಕಳಿಸುತ್ತಾರೆ ರೈತರು.

ಪಂಜಾಬ್ ಮತ್ತು ಹರಿಯಾಣದ ರೈತರು ದೇಶದ ಇತರೆ ಭಾಗಗಳ ತಮ್ಮ ಸೋದರರಿಗಿಂತ ಹೆಚ್ಚು ಅನುಕೂಲವಂತರು. ದೇಶದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವವರು. ಹಸಿರು ಕ್ರಾಂತಿಯ ಮುಂಚೂಣಿಯಲ್ಲಿದ್ದವರು. ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ ಪ್ರಕಾರ ಗರಿಷ್ಠ ಪ್ರಮಾಣದ ಆಹಾರ ಧಾನ್ಯಗಳ ಖರೀದಿ ನಡೆಯುವುದು ಈ ರಾಜ್ಯಗಳಲ್ಲಿಯೇ. ಹೀಗಾಗಿ ಈ ರಾಜ್ಯಗಳ ರೈತರು ಬಹಳ ವರ್ಷಗಳಿಂದಲೂ ಕನಿಷ್ಠ ಬೆಂಬಲ ಬೆಲೆಯ ಗರಿಷ್ಠ ಫಲಾನುಭವಿಗಳು. ಪಂಜಾಬಿನಲ್ಲಿ ಬೆಳೆಯಲಾಗುವ ಶೇ.85ಕ್ಕಿಂತ ಹೆಚ್ಚು ಭತ್ತ-ಗೋಧಿ ಮತ್ತು ಹರಿಯಾಣದಲ್ಲಿ ಬೆಳೆಯುವ ಶೇ.75ರಷ್ಟು ಗೋಧಿ- ಭತ್ತವನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಬೆಂಬಲ ಬೆಲೆ ಇಲ್ಲದೆ ಹೋದರೆ ದರಗಳು ಕುಸಿಯಲಿವೆ. ರಾಜ್ಯ ಸರ್ಕಾರಗಳೂ, ಕೃಷಿ ಮಾರುಕಟ್ಟೆ ಜಾಲವನ್ನೂ ಮತ್ತು ಅವುಗಳ ವ್ಯವಸ್ಥೆಯನ್ನೂ ಬಲಪಡಿಸಿವೆ. ಧಾನ್ಯ ಸಾಗಾಟಕ್ಕೆ ಬಹುತೇಕ ಗ್ರಾಮಗಳಿಂದ ಈ ಮಾರುಕಟ್ಟೆಗಳಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ರೈತರಿಗೆ ಅಳಿವು ಉಳಿವಿನ ಪ್ರಶ್ನೆಯಿದು. ಬೆಂಬಲ ಬೆಲೆಯ ರಕ್ಷಣೆಗಾಗಿ ಉಳಿದ ಯಾವುದೇ ರಾಜ್ಯದ ರೈತರಿಗಿಂತ ಮಿಗಿಲಾಗಿ ಕತ್ತಿ ಹಿಡಿದು ನಿಂತಿದ್ದಾರೆ.

PC : Twitter, (ಸರ್ದಾರ್ ಅಜಿತ್ ಸಿಂಗ್)

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ. ಜಾಟ್ ಸಿಖ್ಖರೆಂಬ ಸಿಖ್ ರೈತರು ಆಂದೋಲನಪ್ರಿಯರು. 20ನೆಯ ಶತಮಾನದ ಆರಂಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ’ಪಗಡಿ ಸಂಭಾಲ್ ಜಟ್ಟಾ’ ಎಂಬ ಹೆಸರಿನ ರೈತ ಆಂದೋಲನವನ್ನು ಸಿಡಿಸಿದವರು ಸರ್ದಾರ್ ಅಜಿತ್ ಸಿಂಗ್. ಬ್ರಿಟಿಷ್ ಸರ್ಕಾರ ಅಜಿತ್ ಸಿಂಗ್ ಅವರಿಗೆ 40 ವರ್ಷಗಳ ಕಾಲ ದೇಶ ತೊರೆಯಬೇಕೆಂಬ ಶಿಕ್ಷೆ ವಿಧಿಸಿತ್ತು. ಅವರು ಹುತಾತ್ಮ ಭಗತ್ ಸಿಂಗ್ ಅವರ ಚಿಕ್ಕಪ್ಪ. ’ಪಗಡಿ ಸಂಭಾಲ್ ಜಟ್ಟಾ’ ಘೋಷಣೆಯನ್ನು ಭಗತ್ ಸಿಂಗ್ ತಮ್ಮ ಕ್ರಾಂತಿಗೀತೆಯನ್ನಾಗಿ ಬಳಸಿಕೊಂಡಿದ್ದರು. ಈಗ ಅವರನ್ನು ಒಲಿಸಿಕೊಳ್ಳುವ ದಾರಿಯನ್ನು ಬಿಟ್ಟು ಬಲವಂತ ಹೇರಿಕೆಯ ದಾರಿ ಫಲ ನೀಡುವುದಿಲ್ಲ.

ಹಿಂದು-ಮುಸ್ಲಿಮ್ ದ್ರುವೀಕರಣ ಪಂಜಾಬಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಮುಸ್ಲಿಮರ ಸಂಖ್ಯೆ ತೀರಾ ನಗಣ್ಯ. ಸಿಖ್ಖರು ಮತ್ತು ಹಿಂದೂಗಳನ್ನು ಪರಸ್ಪರರ ವಿರುದ್ಧ ಹೂಡುವುದು ಅಪಾಯಕಾರಿ ಆಟವಾದೀತು. ಅಕಾಲಿದಳದಂತಹ ಸಿಖ್ ರಾಜಕೀಯ ಪಕ್ಷವನ್ನು ಜೊತೆಗಿಟ್ಟುಕೊಂಡೂ ಸಿಖ್ಖರನ್ನು ಒಲಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗಿಲ್ಲ. 2014 ಮತ್ತು 2019ರ ಎರಡೂ ಚುನಾವಣೆಗಳಲ್ಲಿ ಮೋದಿ ಮಂತ್ರ ಪಂಜಾಬಿನಲ್ಲಿ ಫಲಿಸಿಲ್ಲ.

ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು, ಪಾಕಿಸ್ತಾನಿಗಳು, ಬಿರಿಯಾನಿ ಬಯಸುವವರು, ದೇಶದ್ರೋಹಿಗಳು ಎಂದೆಲ್ಲ ಜರಿದು, ಅವರ ಹೆಸರಿಗೆ ಮಸಿ ಬಳಿಯುವ ನೀಚ ಪ್ರಯತ್ನಗಳು ನಡೆದಿವೆ. ’ಮೋದಿ-ಗೋದಿ ಮೀಡಿಯಾ’ (ಜನತೆಗೆ ನಿಷ್ಠರಾಗಿರದೆ ಆಳುವವರ ಮಡಿಲಲ್ಲಿ ಆಡುವ ಮುದ್ದಿನ ಮೀಡಿಯಾ) ಇಂತಹ ಪ್ರಯತ್ನಗಳಿಗೆ ಗಾಳಿ ಹೊಡೆದು ಹಿಗ್ಗಿಸಿ ತೋರಿಸತೊಡಗಿರುವುದು ಕೀಳು ಕೃತ್ಯ.

ನೋಟು ರದ್ದಿನಂತಹ ವಿನಾಶಕಾರಿ ಕ್ರಮ ಮತ್ತು ಲಾಕ್ ಡೌನ್- ಶ್ರಮಿಕರ ಮಹಾವಲಸೆಯಂತಹ ಭಾರೀ ಬಿಕ್ಕಟ್ಟುಗಳನ್ನೇ ಜೀರ್ಣಿಸಿಕೊಂಡಿರುವ ಅಹಂಕಾರದ ಅಮಲು ಮೋದಿ-ಶಾ ಬಿಜೆಪಿಯ ತಲೆಯಿಂದ ಇನ್ನೂ ಇಳಿದಂತಿಲ್ಲ. ಹೀಗಾಗಿಯೇ ರೈತರ ಪ್ರತಿಭಟನೆಯನ್ನೂ ಜೀರ್ಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಂತಿದೆ.

ಆದರೆ ವರ್ತಮಾನ ಮಗ್ಗುಲು ತಿರುಗುವುದೇ ಇಲ್ಲ, ಗಾಲಿ ಉರುಳುವುದೇ ಇಲ್ಲ ಎಂದು ನಂಬಿ ನಡೆದುಕೊಳ್ಳುವುದು ಅವಿವೇಕವಾದೀತು.


ಇದನ್ನೂ ಓದಿ: ಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...