ಬಿಜೆಪಿ ಜೊತೆ ಕೈಜೋಡಿಸುವ ಪ್ರಾದೇಶಿಗಳ ಪಕ್ಷಗಳು ಅಥವಾ ಸಣ್ಣ ಪಕ್ಷಗಳಿಗೆ ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಭಾನುವಾರ (ಜ.18) ಎಚ್ಚರಿಕೆ ನೀಡಿದ್ದು, ಕೇಸರಿ ಪಕ್ಷ ಆರಂಭದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದು, ಬಳಿಕ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿಬಿಡುತ್ತದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಕಪಿಲ್ ಸಿಬಲ್, “ಬಿಜೆಪಿ ಅಧಿಕಾರದಲ್ಲಿ ಇಲ್ಲದ ಅಥವಾ ಬಹುಮತವಿಲ್ಲದ ರಾಜ್ಯಗಳಲ್ಲಿ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ನಂತರ ಅವರನ್ನು ದುರ್ಬಲಗೊಳಿಸುತ್ತದೆ ಅಥವಾ ಅಂಚಿಗೆ ತಳ್ಳುತ್ತದೆ. ಈ ತಂತ್ರ ಬಿಹಾರದಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿಯೂ ಬಳಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಅಂದರೆ, ಬಿಹಾರದಲ್ಲಿ ಮೊದಲ ಅವಧಿಯಲ್ಲಿ ಜೆಡಿ(ಯು) ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಎರಡನೇ ಅವಧಿಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಹರಿಯಾಣದಲ್ಲೂ ಮೊದಲ ಅವಧಿಗೆ ಐಎನ್‌ಎಲ್‌ಡಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಎರಡನೇ ಅವಧಿಗೆ ಬಿಜೆಪಿಯೇ ದೊಡ್ಡ ಪಕ್ಷವಾಯಿತು. ಮಹಾರಾಷ್ಟ್ರದಲ್ಲಿ ಮೊದಲು ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈಗ ಬಿಜೆಪಿಯೇ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂಬುವುದು ಕಪಿಲ್ ಸಿಬಲ್ ಪೋಸ್ಟ್‌ನ ಸಾರಾಂಶವಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿಭಜನೆಯ ಹಿಂದೆ ಬಿಜೆಪಿಯೇ ಮುಖ್ಯ ಪಾತ್ರವಹಿಸಿದೆ ಎಂದು ಹೇಳಲಾಗ್ತಿದೆ. ಮೊದಲು ಶಿವಸೇನೆಯನ್ನು ಒಡೆದು ಏಕನಾಥ್ ಶಿಂದೆ ಬಣದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈಗ ಶಿಂದೆ ಬಣಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. ಇದು ವಿಧಾನಸಭೆ ಮತ್ತು ಇತ್ತೀಚಿಗೆ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.


