ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪಾತ್ರ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ ಒದಗಿಸುವಂತೆ ಕುಕಿ ಸಂಘಟನೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ನ.8) ಆದೇಶಿಸಿದೆ.
ಗಲಭೆಗೆ ತಾನೇ ಕುಮ್ಮಕ್ಕು ನೀಡಿದ್ದಾಗಿ ಸಿಎಂ ಬೀರೇನ್ ಸಿಂಗ್ ಹೇಳಿಕೊಂಡಿದ್ದಾರೆ. ಈ ಕುರಿತ ಆಡಿಯೋ ಇದೆ ಎಂದು ಕುಕಿ ಮಾನವ ಹಕ್ಕು ಸಂಘಟನೆ ಟ್ರಸ್ಟ್ ಆರೋಪಿಸಿದೆ. ಹಾಗಾಗಿ, ಸಿಎಂ ಅವರ ಸಂಭಾಷಣೆಯದ್ದು ಎನ್ನಲಾದ ಆಡಿಯೊ ಟೇಪ್ ಮತ್ತು ದಾಖಲೆಗಳ ಮೂಲ ವಿವರಗಳನ್ನು ಒದಗಿಸುವಂತೆ ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಸೂಚಿಸಿದೆ.
“ಸ್ವತಃ ಮುಖ್ಯಮಂತ್ರಿಗಳೇ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವಾಗ, ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಘಟನೆಯ ತನಿಖೆ ನಡೆಸಬಹುದು?” ಎಂದು ಕುಕಿ ಟ್ರಸ್ಟ್ ಪರ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.
ಆಡಿಯೋ ಟೇಪ್‌ಗಳನ್ನು ಲಾಂಬಾ ಆಯೋಗಕ್ಕೆ ಸಲ್ಲಿಸಲಾಗಿದೆ. ಈ ನ್ಯಾಯಾಲಯ ಮಣಿಪುರ ಹಿಂಸಾಚಾರ ಪ್ರಕರಣ ಆಲಿಸುತ್ತಿದೆ. ಇದು ಸಾಮಾನ್ಯ ಪ್ರಕರಣವಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕುಕಿ ಸಂಘಟನೆಯ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣದ ತನಿಖೆ ನಡೆಯುತ್ತಿದೆ. ಶಾಂತಿ ಕಾಪಾಡಲು ಸಿಎಂ ಎಲ್ಲಾ ಕುಕಿ ಸಮುದಾಯದ ಶಾಸಕರನ್ನು ಭೇಟಿಯಾಗಿದ್ದಾರೆ. ಆದರೆ, ಟ್ರಸ್ಟ್ ಶಾಂತಿ ಬಯಸುತ್ತಿಲ್ಲ. ಬೆಂಕಿಯಾಡುತ್ತಲೇ ಇರುವಂತೆ ನೋಡಿಕೊಳ್ಳುವುದು ಅದರ ಉದ್ದೇಶ. ಹೈಕೋರ್ಟ್‌ನ ಘನತೆಗೆ ಧಕ್ಕೆ ತರಬಾರದು ಎಂಬುವುದು ನನ್ನ ಸಲಹೆ ಎಂದಿದ್ದಾರೆ.
ಆದರೆ, ಸಿಎಂ ಅವರದ್ದು ಎನ್ನಲಾದ ಆಡಿಯೋ ಟೇಪ್‌ಗಳ ಸತ್ಯಾಸತ್ಯತೆ ಪರೀಕ್ಷಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ: ಜಿರಿಬಾಮ್‌ನಲ್ಲಿ ಆರು ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ಹಲ್ಲೆ


