ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೃತರನ್ನು ರಣಘಾಟ್‌ನ ಧಂತಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮತಿಕುಮ್ರ ಮಧ್ಯಪಾರದ 60 ವರ್ಷದ ಸುಶಾಂತ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಅವರು ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದರು. ಸೋಮವಾರ ಬೆಳಿಗ್ಗೆ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
ಸಂಬಂಧಿಕರ ಪ್ರಕಾರ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಬಿಸ್ವಾಸ್ ಭಯದಲ್ಲಿ ಬದುಕುತ್ತಿದ್ದರು. 2002 ರ ಮತದಾರರ ಪಟ್ಟಿಯಿಂದ ಅವರ ಹೆಸರು ಕಾಣೆಯಾಗಿದ್ದರಿಂದ ಅವರು ಚಿಂತಿತರಾಗಿದ್ದರು. ಭಯ ತೀವ್ರಗೊಂಡು ಅವರು ಹೊರಗೆ ಹೋಗುವುದನ್ನು ನಿಲ್ಲಿಸಿದರು. ನೆರೆಹೊರೆಯವರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಡಬಹುದು ಮತ್ತು ಅವರ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಲಾಗುವುದು ಎಂಬ ಭಯದಿಂದ ಅವರು ಹೆಚ್ಚು ಖಿನ್ನತೆಗೆ ಒಳಗಾದರು. ಅವರು ಎಸ್‌ಐಆರ್ ಫಾರ್ಮ್ ಅನ್ನು ಭರ್ತಿ ಮಾಡಿದ್ದಾರೆ ಎಂದು ಕುಟುಂಬದ ಸದಸ್ಯರು ದೃಢಪಡಿಸಿದರು.
ಅವರ ಪತ್ನಿ ನಮಿತಾ ಬಿಸ್ವಾಸ್ ಮಾತನಾಡಿ, “ಪತಿ ಯಾವಾಗಲೂ ಹೆದರುತ್ತಿದ್ದರು. ಮಾತನಾಡುವುದನ್ನು ಬಹುತೇಕ ನಿಲ್ಲಿಸಿದ್ದರು. ನಾವು ಅವರಿಗೆ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದೆವು, ಆದರೆ ಅವರು ಎಸ್‌ಐಆರ್ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಅವರು ‘ನನ್ನನ್ನು ಜೈಲಿಗೆ ಕರೆದೊಯ್ದರೆ, ಆರು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹೇಳುತ್ತಿದ್ದರು. ನನ್ನ ಅತ್ತೆಯ ಹೆಸರು 2002 ರ ಪಟ್ಟಿಯಲ್ಲಿದೆ. ನಾವು ಬೇರೆಡೆ ವಾಸಿಸುತ್ತಿದ್ದ ಕಾರಣ ನಮ್ಮ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇಂದು ಬೆಳಿಗ್ಗೆ, ನಾನು ಎಚ್ಚರವಾದಾಗ ಅವರು ಕುತ್ತಿಗೆಗೆ ಟವಲ್ ನೇತಾಡುತ್ತಿರುವುದನ್ನು ಕಂಡೆ” ಎಂದು ವಿವರಿಸಿದ್ದಾರೆ.
ರಣಘಾಟ್ ಪೊಲೀಸ್ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು, “ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 2002 ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದ ಕಾರಣ ಹಲವಾರು ದಿನಗಳವರೆಗೆ ಭಯದಿಂದ ಬದುಕಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದರು.
ಘಟನೆಯು ಅದೇ ಜಿಲ್ಲೆಯಲ್ಲಿ ನಡೆದಿದ್ದ ಇದೇ ರೀತಿಯ ಪ್ರಕರಣವನ್ನು ಹೋಲುತ್ತದೆ. ಅಲ್ಲಿ ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯ ಭಯದಿಂದ ಕೆಲವು ದಿನಗಳ ಹಿಂದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


