ರಾಂಚಿ: ಜಾರ್ಖಂಡ್‌ನಲ್ಲಿ ಕಳೆದ ವಾರದಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ತರಕಾರಿ ಬೆಳೆಯ ಬೆಲೆಗಳು ಭಾರೀ ಕುಸಿದಿದ್ದು, ರೈತರು ಬೇಸಾಯದ ಮೂಲ ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗದ ಕಾರಣ ಬಂಪರ್ ಫಸಲು ಹೊರತಾಗಿಯೂ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಹತಾಶೆಗೊಂಡು ಹೊಲದಲ್ಲಿಯೇ ಅವುಗಳನ್ನು ನಾಶಪಡಿಸುತ್ತಿದ್ದಾರೆ.
ರಾಂಚಿಯ ನಗರದ ಮಾರುಕಟ್ಟೆಗಳಲ್ಲಿ ಪ್ರಮುಖ ತರಕಾರಿಗಳಾದ ಹೂಕೋಸು, ಎಲೆಕೋಸು, ಪಾಲಕ್ ಮತ್ತು ಟೊಮೆಟೊಗಳನ್ನು ಕೆಜಿಗೆ 5-10 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಬೆಲೆ ಇನ್ನೂ ಕಡಿಮೆ ಇದೆ. ಇದರಿಂದ ರೈತರು ಹತಾಶರಾಗಿ ತಮ್ಮ ತರಕಾರಿ ಬೆಳೆ ನಾಶ ಮಾಡುತ್ತಿದ್ದಾರೆ. ಮಧ್ಯವರ್ತಿಗಳು ರೈತರಿಗೆ ನ್ಯಾಯಯುತ ಬೆಲೆ ನೀಡಲು ಸಿದ್ಧರಿಲ್ಲ. ಈ ಕುರಿತು ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಚಿತಾರ್‌ಪುರ ಬ್ಲಾಕ್‌ನ ಬಡ್ಕಿಪೋನಾ ಗ್ರಾಮದ ರೈತ ರಾಧೇಶ್ಯಾಮ್ ಮಹತೋ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿದ್ದ ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್ ಓಡಿಸಿ ನೆಲಸಮಗೊಳಿಸಿದ್ದಾರೆ. ಇದೇ ರೀತಿಯ ಘಟನೆ ಗೋಳಾ ಬ್ಲಾಕ್‌ನಲ್ಲಿ ಸಂಭವಿಸಿದ್ದು, ನ್ಯಾಯಯುತ ಬೆಲೆ ಸಿಗದ ಕಾರಣ ಮತ್ತೊಬ್ಬ ರೈತ ತನ್ನ ಹೂಕೋಸು ಬೆಳೆಯನ್ನು ನಾಶಪಡಿಸಿದ್ದಾನೆ. ರಾಂಚಿ ಜಿಲ್ಲೆಯ ಒರ್ಮಾಂಜಿಯಲ್ಲಿ ರೈತರು ತಮ್ಮ ತರಕಾರಿ ಬೆಳೆಗಳನ್ನು ಕಿತ್ತು ಬಿಸಾಡುತ್ತಿದ್ದಾರೆ. ಐದಾರು ಎಕರೆಯಲ್ಲಿ ಹೂಕೋಸು ಹಾಗೂ ಎಲೆಕೋಸು ಕೃಷಿ ಮಾಡಿರುವುದಾಗಿ ಉಕ್ರೀಡ್ ಗ್ರಾಮದ ರೈತ ಕಾಮೇಶ್ವರ ಮಹತೋ ತಿಳಿಸಿದ್ದಾರೆ.
ಈ ತರಕಾರಿ ಬೆಳೆಗಳಿಗೆ ಕೆ.ಜಿ.ಗೆ ಕೇವಲ 2-3 ರೂ.ಗೆ ಸಿಗುತ್ತಿದ್ದು, ಮಾರುಕಟ್ಟೆಯ ಸಾಗಣೆ ವೆಚ್ಚವೂ ಗಳಿಕೆಗಿಂತ ಹೆಚ್ಚಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ರಮೇಶ್ ವರ್ಮಾ, ರಾಮಚಂದ್ರ ಮಹತೋ, ಲಖನ್‌ಲಾಲ್ ಮಹತೋ ಮತ್ತು ನಿರಂಜನ್ ಮಹತೋ ಸೇರಿದಂತೆ ಬೊಕಾರೊ ಜಿಲ್ಲೆಯ ಕಸ್ಮಾರ್ ಬ್ಲಾಕ್‌ನ ಜಮ್ಹರ್ ಗ್ರಾಮದ ರೈತರು ಇದೇ ರೀತಿಯ ದುಃಖಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯನ್ನು ಸಹಿಸಿಕೊಂಡಿದ್ದ ರೈತರು, ಹೆಚ್ಚಿನ ಭರವಸೆಯೊಂದಿಗೆ ತಮ್ಮ ಹೊಲಗಳಲ್ಲಿ ತರಕಾರಿ ಬೆಳೆಗಳನ್ನು ಮರುನಾಟಿ ಮಾಡಿದ್ದರು. ಈಗ ಈ ತರಕಾರಿ ಬೆಳೆಗಳ ಬೆಲೆಯು ಮಾರುಕಟ್ಟೆಯಲ್ಲಿ ಬೆಲೆ ಕುಸಿತವನ್ನು ಎದುರಿಸಬೇಕಾಗಿದೆ.
ಈ ಸಮಸ್ಯೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದೆ. ಪ್ರಮುಖ ತರಕಾರಿ ಬೆಳೆಯುವ ಪ್ರದೇಶಗಳಾದ ಇಟ್ಕಿ, ಬೆಡೋ ಮತ್ತು ರಾಂಚಿ ಜಿಲ್ಲೆಯ ಮಂದರ್, ಬೊಕಾರೊ ಜಿಲ್ಲೆಯ ಪೆಟಾರ್ವಾರ್ ಮತ್ತು ಕಸ್ಮಾರ್, ರಾಮಗಢ ಜಿಲ್ಲೆಯ ಗೋಲಾ ಮತ್ತು ಚಿತಾರ್‌ಪುರ್ ಮತ್ತು ಕೊಡೆರ್ಮಾ ಜಿಲ್ಲೆಯ ಡೊಮ್‌ಚಾಂಚ್ ಮತ್ತು ದರ್ಗಾಂವ್ ಮುಂತಾದೆಡೆ ಈ ಬೆಲೆ ಕುಸಿತದ ಬಿಸಿ ತಟ್ಟಿದೆ.
ಹಜಾರಿಬಾಗ್ ಜಿಲ್ಲೆಯ ಚೌಪರಾನ್ ಬ್ಲಾಕ್‌ನ ದಾದ್‌ಪುರ ಗ್ರಾಮದ ರೈತ ಶಿಬು ಮಹತೋ ಮಾತನಾಡಿ, ಮೂಲಂಗಿ ಮತ್ತು ಎಲೆಕೋಸು ಕೆಜಿಗೆ ಕೇವಲ 4-5 ರೂ.ಗೆ ಮಾರಾಟವಾಗುತ್ತಿದೆ. ಖರೀದಿದಾರರು ಕಡಿಮೆ ದರಕ್ಕೆ ತರಕಾರಿ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಹೊಲಗಳಿಂದ ಮಾರುಕಟ್ಟೆಗಳಿಗೆ ಬೆಳೆಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್-ಮೇ ವರೆಗೆ ತರಕಾರಿಗಳ ಬೆಲೆ ಕುಸಿತವು ಪುನರಾವರ್ತಿತ ಸಮಸ್ಯೆಯಾಗಿದೆ. ತರಕಾರಿ ಸಂಸ್ಕರಣಾ ಘಟಕಗಳು ಮತ್ತು ಇವುಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವಿಧಾನಗಳ ಮಾರ್ಪಾಡು ಅಗತ್ಯ. ಇಂತಹ ಕ್ರಮಗಳಿಲ್ಲದೆ, ರೈತರ ಪರಿಸ್ಥಿತಿ ಕತ್ತಲೆಕೂಪವಾಗುತ್ತದೆ ಎಂದು ಚತ್ರಾ ಜಿಲ್ಲೆಯ ಇತ್ಖೋರಿಯ ಸ್ಥಳೀಯ ಪತ್ರಕರ್ತ ರಾಮದೇವ್ ಕೇಸರಿ ಹೇಳಿದ್ದಾರೆ.
ಯುವ ಪತ್ರಕರ್ತನ ಕೊಲೆ ಪ್ರಕರಣ : ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ


