Homeಕರ್ನಾಟಕಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

- Advertisement -
- Advertisement -

ನಾಗರಹೊಳೆ ಹುಲಿ ಉದ್ಯಾನದ ಒಳಗೆ ಬದುಕುತ್ತಿರುವ ಆದಿವಾಸಿಗಳು ಮತ್ತು ವನ್ಯ ಜೀವಿಗಳ ನಡುವಿನ ಸಹಬಾಳ್ವೆ/ಸಂಘರ್ಷಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ನನ್ನ ಅಧ್ಯಯನಕ್ಕೆ ಅತ್ಯವಶ್ಯಕವಾಗಿತ್ತು. ಈ ಬಗ್ಗೆ ಹೆಗ್ಗಡದೇವನಕೋಟೆಯಲ್ಲಿ ವಾಸಿಸುತ್ತಿರುವ ಆದಿವಾಸಿ ಮುಖಂಡ ಜೇನುಕುರುಬರ ಸೋಮಣ್ಣ ಅವರಲ್ಲಿ ಕೇಳಿಕೊಂಡಾಗ, ನಾಗರಹೊಳೆ ಹುಲಿ ಉದ್ಯಾನದ ಒಳಗಿರುವ ಆದಿವಾಸಿ ಹಾಡಿಗಳಿಗೆ ನನ್ನನ್ನ ಕರೆದುಕೊಂಡುಹೋಗಲು ಅವರು ಒಪ್ಪಿದರು. ಸೋಮಣ್ಣನವರು 90ರ ದಶಕದಿಂದಲೇ ಆದಿವಾಸಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರಿಂದ ಆ ಭಾಗದ ಹಾಡಿಗಳಲ್ಲಿ ಅವರು ಚಿರಪರಿಚಿತರು.

ನಾವು ನಾಗಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬ ಆದಿವಾಸಿ ಮಹಿಳೆಯ ಮನೆಗೆ ನಡೆದುಕೊಂಡು ಹೋಗಬೇಕಾದರೆ ಮುಖ್ಯ ರಸ್ತೆ ಮತ್ತು ನಾಗಮ್ಮನವರ ಮನೆಯ ನಡುವೆ ಇರುವ ತುಂಡು ಭತ್ತದ ಗದ್ದೆಯಲ್ಲಿ ಹತ್ತಾರು ಆನೆ ಹೆಜ್ಜೆಗಳ ಗುರುತುಗಳು ಮೂಡಿದ್ದವು. ಅವರ ಮನೆಯನ್ನ ತಲುಪಿದಾಗ ನಾಗಮ್ಮ ಮನೆಯ ಹೊರಗಡೆಯೇ ನಿಂತಿದ್ದರು. ಅವರ ಮುಖದಲ್ಲಿ ಸ್ವಲ್ಪ ಆತಂಕದ ಛಾಯೆ ಇದ್ದಂತಿತ್ತು. ’ನಾಗಮ್ಮ ಚನ್ನಾಗಿದೀರಾ?’ ಅಂತ ಜೇನುಕುರುಬ ಭಾಷೆಯಲ್ಲಿ ಸೋಮಣ್ಣನವರು ಕೇಳಿದಾಗ, ನಾಗಮ್ಮನವರು (ನನ್ನನ್ನು ತೋರಿಸಿ) ’ಇವರನ್ನ ದೂರದಿಂದ ನೋಡಿದಾಗ ಎಲ್ಲಿ ಫಾರೆಸ್ಟ್‌ನವರು ಬಂದರೋ ಅಂತ ಭಯ ಆಯ್ತು, ಆದರೆ ನೀವು (ಸೋಮಣ್ಣ) ಅವರ ಜೊತೆ ನಡೆದು ಬರುತ್ತಿರುವುದು ನೋಡಿ ಸ್ವಲ್ಪ ಧೈರ್ಯ ಬಂತು’ ಎಂದರು.

ಹೊಸ ಅರಣ್ಯ ಮತ್ತು ವನ್ಯಜೀವಿ ಕಾನೂನುಗಳಡಿಯಲ್ಲಿ ಕಾಡಿನೊಳಗೆ ವ್ಯವಸಾಯಕ್ಕೆ ಅವಕಾಶವಿರಲಿಲ್ಲ. ಆದಕಾರಣ, ನಾಗಮ್ಮನವರ ಪೂರ್ವಿಕರು ನಾಗರಹೊಳೆ ಕಾಡು, ಹುಲಿ ಸಂರಕ್ಷಿತ ಪ್ರದೇಶ ಆಗುವ ಮೊದಲೇ ಆ ಜಾಗದಲ್ಲಿ ವಾಸಿಸುತ್ತ, ಸಣ್ಣ ಪ್ರಮಾಣದಲ್ಲಿ ಭತ್ತದ ವ್ಯವಸಾಯ ಮಾಡುತ್ತಿದ್ದರೂ ಕೂಡ ಅವರಿಗೆ ವ್ಯವಸಾಯ ಮಾಡಲು ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದರು. ಅಷ್ಟೇ ಅಲ್ಲದೆ 2006ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆ ಕೂಡ ಆದಿವಾಸಿಗಳ ಅರಣ್ಯದ ಹಕ್ಕನ್ನ ರಕ್ಷಿಸುವಲ್ಲಿ ಅಷ್ಟೇನೂ ಸಫಲವಾಗಿಲ್ಲ. ಆದರೆ ಅರಣ್ಯ ಹಕ್ಕು ಕಾಯ್ದೆ ಬಂದನಂತರ ಆದಿವಾಸಿಗಳ ಮೇಲೆ ಬಲಪ್ರಯೋಗಿಸಿ ಕಾಡಿನಿಂದ ಹೊರಹಾಕುವುದು ಮೊದಲಿನಷ್ಟು ಸುಲಭದ ಕೆಲಸವಲ್ಲ. ಹೀಗಿದ್ದರೂ, ವ್ಯವಸಾಯ ಮಾಡುವ ಮೂಲಕ ಇಲ್ಲವೇ ಕಾಡಿನ ಉಪ ಉತ್ಪನ್ನ ಸಂಗ್ರಿಹಿಸುವ ಮೂಲಕ ಆದಿವಾಸಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಅರಣ್ಯ ಇಲಾಖೆಯವರು ಆಪಾದಿಸಿ ಅವರನ್ನು ಬಂಧಿಸಿರುವ ಅಥವಾ ಬಂಧಿಸುವುದಾಗಿ ಬೆದರಿಸಿರುವ ಬಗ್ಗೆ ಕೆಲವು ಆದಿವಾಸಿಗಳು ನಾನು ಅವರನ್ನ ಸಂದರ್ಶಿಸುವಾಗ ತಿಳಿಸಿದ್ದಾರೆ.

PC : Down To Earth

ಈ ಮೊದಲೇ ಅರಣ್ಯ ಅಧಿಕಾರಿಗಳು ನಾಗಮ್ಮನ ಮನೆಯವರಿಗೆ ಕೃಷಿ ಮಾಡದಿರಲು ಬಹಳಷ್ಟು ಸಲ ತಾಕೀತು ಮಾಡಿದ್ದರೂ ಕೂಡ ಅವರು ಭತ್ತ ಬೆಳೆಯುವುದನ್ನ ನಿಲ್ಲಿಸಿರಲಿಲ್ಲ. ಆದಕಾರಣ ನಾವು ಅವರ ಮನೆಗೆ ಹೋಗುವ ಒಂದುವಾರ ಮೊದಲು ನಾಗಮ್ಮನವರ ಪತಿಯನ್ನ ಬಂಧಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿದ್ದರು. ಆದರೆ ನಾಗಮ್ಮನವರ ಪತಿ ಕಾಡಿನಲ್ಲಿ ಅಡಗಿಕೊಂಡು ತಪ್ಪಿಸಿಕೊಂಡಿದ್ದರಿಂದ, ಅರಣ್ಯ ಇಲಾಖೆಯವರು ಅವರ ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡಿ ಹೋಗುವಂತೆ ತಾಕೀತುಮಾಡಿಹೋಗಿದ್ದರು. ಆದುದರಿಂದ ನನ್ನನ್ನು ನೋಡಿದ ನಾಗಮ್ಮನವರು ಎಲ್ಲಿ ಅರಣ್ಯ ಅಧಿಕಾರಿಯೇ ಬಂದನೋ ಎಂದು ಆತಂಕಿತರಾಗಿದ್ದರು.

ಆದಿವಾಸಿಗಳು ಕಾಡಿನಲ್ಲಿ ಇರುವುದರಿಂದಲೇ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದ್ದು, ಅವು ಕಾಡಿನಿಂದ ಹೊರಗೆ ಬರುತ್ತಿವೆ, ಆದಿವಾಸಿಗಳನ್ನ ಕಾಡಿನಿಂದ ಎತ್ತಂಗಡಿ ಮಾಡಿದರೆ ವನ್ಯಜೀವಿಗಳ ಸಂರಕ್ಷಣೆ ಕೆಲಸ ಯಶಸ್ವಿ ಆಗುತ್ತದೆ ಎನ್ನುವ ಮೂಢನಂಬಿಕೆ ಅರಣ್ಯ ಅಧಿಕಾರಿಗಳು ಮತ್ತು ಬಹಳಷ್ಟು ನಗರಕೇಂದ್ರಿತ, ವನ್ಯಜೀವಿತಜ್ಞರಿಗೆ ಇದೆ. ಈ ಮೂಢನಂಬಿಕೆ ಭಾರತದಲ್ಲಿ ಮಾತ್ರ ಅಲ್ಲ, ಯುರೋಪ್‌ನ ವಸಾಹತುಗಳಾಗಿದ್ದ ಬಹಳಷ್ಟು ದೇಶಗಳಲ್ಲಿ ಇದು ಆಳವಾಗಿ ಬೇರೂರಿರುವುದನ್ನ ಗುರುತಿಸಬಹುದು. ಅರಣ್ಯವಾಸಿ/ಆದಿವಾಸಿಗಳನ್ನ ಮತ್ತು ರೈತರನ್ನ ಅರಣ್ಯ ಮತ್ತು ವನ್ಯಜೀವಿಗಳ ನಾಶಕ್ಕೆ ಕಾರಣಕರ್ತರು ಎಂದು ಕೀಳಾಗಿ ಬಿಂಬಿಸುವ ಪಿತೂರಿ ಸುಮಾರು 18ನೇ ಶತಮಾನದ ಕೊನೆಯ ಭಾಗದಲ್ಲೇ ಭಾರತದಲ್ಲಿ ಪ್ರಾರಂಭವಾಯಿತು. ಬ್ರಿಟಿಷರಿಗಿದ್ದ ಆರ್ಥಿಕ ಹಿತಾಸಕ್ತಿಯೇ ಈ ಪಿತೂರಿಗೆ ಮುಖ್ಯ ಕಾರಣ. ಮುಂದಿನ ಕೆಲವು ಪ್ಯಾರಾಗಳಲ್ಲಿ ಈ ಪಿತೂರಿಯ ಬಗ್ಗೆ ವಿವರಿಸುತ್ತೇನೆ.

16 ಮತ್ತು 18ನೇ ಶತಮಾನದ ನಡುವೆ ಉತ್ತರ ಯೂರೋಪ್, ಪಶ್ಚಿಮ ಯೂರೋಪ್, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಕೈಗಾರಿಕೀಕರಣಕ್ಕಾಗಿ ಪೂರ್ತಿಯಾಗಿ ಅರಣ್ಯ ನಾಶಮಾಡಿದ ನಂತರ, ಕೈಗಾರಿಕೆಗಳ ಅವಶ್ಯಕತೆಯನ್ನ ಪೂರೈಸಲು ಯೂರೋಪಿನ ದೇಶಗಳು ತಮ್ಮ ವಸಾಹತುಗಳ ಕಡೆ ಮುಖಮಾಡಿದವು. ತೇಗ ಮತ್ತಿತರ ಗಟ್ಟಿ ಜಾತಿಯ ಮರಗಳು ಬೆಳೆಯುತ್ತಿದ್ದ ಭಾರತದ ಕಾಡುಗಳನ್ನ ತನ್ನ ವಶಕ್ಕೆ ತೆಗೆದುಕೊಂಡ ಬ್ರಿಟಿಷ್ ಸರಕಾರ ಸ್ಥಳೀಯ ನಿವಾಸಿಗಳ ಅರಣ್ಯ ಉಪಯೋಗದ ಮೇಲೆ ನಿರ್ಬಂಧ ಹೇರಿತು. ಅದರ ಜೊತೆಗೆ ಮರಗಳನ್ನು ಕಟಾವು ಮಾಡಿದ ಅರಣ್ಯ ಪ್ರದೇಶಗಳಲ್ಲಿ ಯುರೋಪ್‌ಗೆ ರಫ್ತು ಮಾಡಲು ಕಾಫಿ, ಟೀ ಮತ್ತಿತರ ಸಾಂಬಾರು ಪದಾರ್ಥಗಳ ತೋಟಗಳನ್ನು ನಿರ್ಮಿಸಲು ಯುರೋಪ್‌ನ ಜನರಿಗೆ ಅವಕಾಶ ಕಲ್ಪಿಸಲಾಯಿತು.

ಭಾರತದ ಇತರ ಭಾಗಗಳ ಕಾಡಿನಂತೆ 18 ಮತ್ತು 19ನೇ ಶತಮಾನದಲ್ಲಿ ಕರ್ನಾಟಕದಲ್ಲೂ ಕೂಡ ಬಹಳಷ್ಟು ಅರಣ್ಯವಾಸಿಗಳು ಜೇನು, ಗಡ್ಡೆ, ಗೆಣಸು, ಸೌದೆ, ಮಾಂಸ, ಸಣ್ಣ ಪ್ರಮಾಣದ ಕೃಷಿಗೆ ಮತ್ತು ಔಷಧಕ್ಕಾಗಿ ಕಾಡನ್ನು ಅವಲಂಬಿಸಿದ್ದರು. ಅಷ್ಟೇ ಅಲ್ಲದೆ ರೈತರೂ ಕೂಡ ಗೊಬ್ಬರ, ಸಾಕು ಪ್ರಾಣಿಗಳ ಮೇವು, ಕೃಷಿ ಉಪಕರಣಗಳಿಗೆ ಕಾಡನ್ನು ನಂಬಿಕೊಂಡಿದ್ದರು. ಬ್ರಿಟಿಷ್ ಸರಕಾರದ ಅರಣ್ಯ ಸಂಬಂಧಿತ ಕಾನೂನುಗಳು ಈ ಎಲ್ಲ ಚಟುವಟಿಕೆಗಳು ಅಪರಾಧವೆಂದು ಪರಿಗಣಿಸಿ ರೈತರ ಮತ್ತು ಅರಣ್ಯವಾಸಿಗಳ ಹೊಟ್ಟೆಯ ಮೇಲೆ ಹೊಡೆದವು. ಈ ಎಲ್ಲ ಕಾರಣಗಳಿಂದಾಗಿ ಬೀದಿಗೆ ಬಿದ್ದ ಬಹಳಷ್ಟು ಅರಣ್ಯವಾಸಿಗಳು ಮತ್ತು ರೈತರು ತೇಗದ ನೆಡುತೋಪುಗಳಲ್ಲಿ ಮತ್ತು ಕಾಫಿ ಮತ್ತಿತರ ತೋಟಗಳಲ್ಲಿ ಅಗ್ಗದ ಕೂಲಿಗಳಾಗಿ ದುಡಿಯಬೇಕಾಯಿತು.

ಇವೆಲ್ಲದರ ನಡುವೆ ಜಿಂಕೆ, ಕಾಡು ಹಂದಿಯಂತಹ ಬಲಿ ಪ್ರಾಣಿಗಳ ಮಾಂಸದ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು, ಭಾರತದ ಪ್ರತಿಷ್ಠಿತರು ಮತ್ತು ತೋಟದ ಮಾಲೀಕರು ಬಲಿ ಪ್ರಾಣಿಗಳನ್ನ ಬೇಟೆಯಾಡುವ ಹುಲಿ, ಚಿರತೆ ಮತ್ತು ಕಾಡು ನಾಯಿಗಳಿಗೆ ಕಂಡಲ್ಲಿ ಗುಂಡಿಕ್ಕಿದರು ಮತ್ತು ಈ ಮಾಂಸಾಹಾರಿ ಪ್ರಾಣಿಗಳನ್ನ ಬೇಟೆಯಾಡಿದವರಿಗೆ ಇನಾಮು ನೀಡಿದರು. ಬ್ರಿಟಿಷ್ ಅಧಿಕಾರಿಗಳ ಪ್ರಕಾರ ಬಂದೂಕು ಉಪಯೋಗಿಸಿ ಬೇಟೆಯಾಡುವುದು ಸುಸಂಸ್ಕೃತರ ಲಕ್ಷಣವಾಗಿತ್ತು ಆದರೆ ವನವಾಸಿಗಳ ಹಾಗೆ ಬಲೆ, ಉರುಳು ಮತ್ತು ವಿಷ ಉಪಯೋಗಿಸಿ ಬೇಟೆಯಾಡುವುದು ಅನಾಗರಿಕರ ಲಕ್ಷಣವಾಗಿತ್ತು. ಆದುದರಿಂದ ಅರಣ್ಯವಾಸಿಗಳ ಬೇಟೆಯ ವಿಧಾನಗಳನ್ನ ಕ್ರೌರ್ಯದ ಪರಮಾವಧಿ ಎಂದು ಕರೆದು ಅದನ್ನ ನಿಷೇಧಿಸಲಾಯಿತು.

20ನೇ ಶತಮಾನದಲ್ಲಿ ಭಾರತದಲ್ಲಿ ವನ್ಯಜೀವಿಗಳು ಮತ್ತು ಕಾಡಿನ ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪಿದ್ದರಿಂದ ಮತ್ತು ಜಾಗತಿಕವಾಗಿ ಕಾಡಿನ ಸಂರಕ್ಷಣೆಗಾಗಿ ಒತ್ತಡ ಹೆಚ್ಚಿದ್ದರಿಂದ ಬ್ರಿಟಿಷ್ ಸರ್ಕಾರ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಯಿತಾದರೂ ವನವಾಸಿಗಳನ್ನ ಕ್ರೂರಿಗಳೆಂದು ನೋಡುವ ಹಳೆ ಕಾನೂನುಗಳೇ ಮುಂದುವರಿದವು. ಸ್ವತಂತ್ರ ಭಾರತದಲ್ಲಿ ಈ ಕಾನೂನುಗಳು ಇನ್ನಷ್ಟು ಶಕ್ತಿ ಗಳಿಸಿಕೊಂಡು ಕಾಡಿನಲ್ಲಿ ಅಳಿದುಳಿದ ಆದಿವಾಸಿಗಳನ್ನೂ ಅವರ ನೆಲೆಯಿಂದ ಎತ್ತಂಗಡಿ ಮಾಡುವ ಪ್ರಯತ್ನಗಳು 2006ರಲ್ಲಿ ಅರಣ್ಯ ಹಕ್ಕು ಕಾಯಿದೆ ಬರುವವರೆಗೆ ದೊಡ್ಡ ಪ್ರಮಾಣದಲ್ಲಿ ನೆಡೆದವು. ತಾವು ಮಾಡದ ತಪ್ಪಿಗಾಗಿ ಅರಣ್ಯವಾಸಿಗಳೂ ಮತ್ತು ವನ್ಯ ಜೀವಿಗಳು ಶಿಕ್ಷೆ ಅನುಭವಿಸುತ್ತಿರುವುದು ನಮ್ಮ ಕಾಲದ ದುರಂತವೇ ಸರಿ.

ವನ್ಯಜೀವಿ ಮನುಷ್ಯ ಸಂಘರ್ಷ

ಇತ್ತೀಚಿಗೆ ಬಿಡುಗಡೆಯಾದ ಶೇರ್ನಿ ಚಲನಚಿತ್ರ ’ಅವನಿ’ ಎಂಬ ನರಭಕ್ಷಕ ಹೆಣ್ಣು ಹುಲಿಯ ಜೀವನದಿಂದ ಪ್ರೇರಣೆ ಪಡೆದದ್ದು. ನರಭಕ್ಷಕ ಹುಲಿ ಚಿರತೆಗಳ ಸುದ್ದಿ ಭಾರತದಲ್ಲಿ ಸರ್ವೇಸಾಮಾನ್ಯವಲ್ಲದಿದ್ದರೂ ಕೂಡ, ಅವೇನು ತೀರಾ ವಿರಳವೇನಲ್ಲ. ಆದರೆ ಅವನಿಯನ್ನ ಗುಂಡು ಹೊಡೆದು ಸಾಯಿಸಿದ ಸುದ್ದಿ ಜಗತ್ತಿನಾದ್ಯಂತ ಸದ್ದು ಮಾಡಿತು. ಸುಶಿಕ್ಷಿತ, ಇಂಗ್ಲಿಷ್ ಮಾತನಾಡುವ, ಮೇಲ್ವರ್ಗದವರೆ ಹೆಚ್ಚಿರುವ ವನ್ಯಜೀವಿ ಸಂರಕ್ಷಣಾ ಸಮುದಾಯದವರು ಅವನಿಯ ಸಾವಿನಿಂದ ಸಿಟ್ಟುಗೊಂಡಿದ್ದಂತೂ ನಿಜ. ಅವನಿಯನ್ನು ಕೊಂದಿದ್ದು ಸರಿಯೋ ತಪ್ಪೋ ಎಂದು ಚರ್ಚಿಸುವುದು ಮುಖ್ಯ, ಅದರ ಬಗ್ಗೆ ಎರಡು ಮಾತಿಲ್ಲ, ಆದರೆ ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಅಧಿಕಗೊಳ್ಳಲು ಕಾರಣ ಏನೆಂಬುದನ್ನ ಚರ್ಚಿಸುವುದು ಬಹು ಮುಖ್ಯ ಎಂದು ನನಗನಿಸುತ್ತದೆ.

ನನ್ನ ಹಾಗು ಹಲವರು ನಡೆಸಿರುವ ಅಧ್ಯಯನದ ಪ್ರಕಾರ ಮತ್ತು ಮೊದಲೇ ಸ್ವಲ್ಪ ವಿವರಿಸಿದಂತೆ ಕಳೆದ ಮುನ್ನೂರು ವರ್ಷಗಳಿಂದ ಅರಣ್ಯದ ಮೇಲೆ, ಕೈಗಾರಿಕೀಕರಣದಿಂದ, ಗಣಿಗಾರಿಕೆಯಿಂದ, ಆಣೆಕಟ್ಟುಗಳಿಂದ, ನಗರೀಕರಣದಿಂದ ನೆಡೆಯುತ್ತಿರುವ ದಾಳಿಯಿಂದಾಗಿ ವನ್ಯಜೀವಿಗಳ ಆವಾಸ ಸ್ಥಾನಗಳು ಛಿದ್ರಗೊಳ್ಳುತ್ತಿವೆ ಹಾಗು ನಶಿಸುತ್ತಿವೆ. ಇದರ ಜೊತೆಗೆ ಹವಾಮಾನ ಬದಲಾವಣೆ, ಮಲೆನಾಡಿನಲ್ಲಿನ ಗುಡ್ಡ ಕುಸಿತದಂತಹ ಘಟನೆಗಳು, ಪ್ರವಾಹ, ಬರ, ಕಾಡ್ಗಿಚ್ಚು ಇವೆಲ್ಲ ವನ್ಯಜೀವಿಗಳ ಆಹಾರ ಮತ್ತು ನೀರಿನ ಮೂಲಗಳಿಗೆ ಹಾನಿ ಮಾಡುತ್ತಿವೆ.
ಆದುದರಿಂದ ಬಹಳಷ್ಟು ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ, ನಗರಗಳಿಗೆ ನುಗ್ಗುತ್ತಿವೆ. ನಾಡಿಗೆ ಬರುವ ದಾರಿಯಲ್ಲಿ ಬೆಳೆ ತಿನ್ನುತ್ತವೆ, ಹಸುಗಳನ್ನ ಹಿಡಿಯುತ್ತವೆ, ಒಮ್ಮೊಮ್ಮೆ ಮನುಷ್ಯರನ್ನೂ ಕೊಂದು ತಿನ್ನುತ್ತವೆ.

ಪರಿಹಾರೋಪಾಯಗಳು

ಭಾರತವನ್ನೂ ಒಳಗೊಂಡಂತೆ ಜಗತ್ತಿನಲ್ಲಿ ನಡೆಯುತ್ತಿರುವ ಬಹಳಷ್ಟು ಸಂಶೋಧನೆಗಳು, ಆದಿವಾಸಿ ಜೀವನ ವಿಧಾನಗಳು ಮತ್ತು ಯೋಚನಾ ಕ್ರಮಗಳು ಹೇಗೆ ಪರಿಸರ ಸ್ನೇಹಿ ಎಂದು ತೋರಿಸಿಕೊಡುತ್ತಿವೆ. ಆದಕಾರಣ ನೂರಾರು ವರ್ಷಗಳಿಂದ ಅವಜ್ಞೆಗೆ ಒಳಗಾಗಿರುವ ಆದಿವಾಸಿ ಯೋಚನಾ ಕ್ರಮಗಳನ್ನು ನಮ್ಮ ಆಡಳಿತ ವ್ಯವಸ್ಥೆಯಲ್ಲಿ (ಜಾಗತಿಕವಾಗಿ) ಅಳವಡಿಸಿಕೊಂಡರೆ ಹವಾಮಾನ ಬದಲಾವಣೆ, ಅರಣ್ಯ ನಾಶದಂತಹ ಸಮಸ್ಯೆಗಳಿಗೆ ಅವು ಪರಿಹಾರವನ್ನ ಒದಗಿಸುವ ಮೂಲಕ ಮಾನವ ವನ್ಯಜೀವಿಗಳ ಸಹಬಾಳ್ವೆಗೆ ದಾರಿ ತೋರಿಸಬಲ್ಲವು. ಹಾಗೆಯೇ ನಾನು ಮೊದಲೇ ಹೇಳಿದಂತೆ ಮೇಲ್ವರ್ಗ ಮೇಲ್ಜಾತಿ ಜನರ ಹಿಡಿತದಲ್ಲಿರುವ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಆದಿವಾಸಿಗಳೂ ಮತ್ತು ಸ್ಥಳೀಯ ಜನರು ಒಳಗೊಳ್ಳುವಂತಾದರೆ ಜನಸ್ನೇಹಿಯಾದ ವನ್ಯಜೀವಿ ಸಂರಕ್ಷಣಾ ಮಾದರಿಗಳನ್ನ ಸೃಷ್ಟಿಸಬಹುದು.

ದೀಪಕ್ ಭಟ್ ದುಂಡಿ

ದೀಪಕ್ ಭಟ್ ದುಂಡಿ
ಸಂಶೋಧನಾ ವಿದ್ಯಾರ್ಥಿ, ಪರಿಸರ ಮಾನವಶಾಸ್ತ್ರ


ಇದನ್ನೂ ಓದಿ: ಹಳ್ಳಿಗಳ ಕನ್ನಡ ಹೆಸರು ಮಲಯಾಳೀಕರಣ: ವಿವಾದದ ಬಗ್ಗೆ ಕೇರಳ ಸಿಎಂ ಪ್ರತಿಕ್ರಿಯೆ ಹೀಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....