ಕೇರಳದ ಪ್ರಯಾಣಿಕರಿಗೆ ರಾಜ್ಯದ ನಿರ್ಬಂಧ - ಕರ್ನಾಟಕ ಪ್ರವೇಶಿಸಲು ಏನು ಬೇಕಿದೆ? ಇಲ್ಲಿದೆ ಮಾಹಿತಿ! | NaanuGauri

ನೆರೆಯ ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್‌‌ ವರದಿ ಅಥವಾ “ಎರಡೂ ಡೋಸ್‌ಗಳನ್ನು ಪಡೆದಿರುವ” ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ನೀಡುವಂತೆ ಕೇಳಲಾಗುವುದು ಎಂದು ಗುರುವಾರ ಹೊರಡಿಸಲಾದ ಅಧಿಕೃತ ಆದೇಶದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ. ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೊರಡಿಸಿದ ಆದೇಶದಲ್ಲಿ, ಕೇರಳದ ಕೆಲವು ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರವು ವರದಿಯಾಗಿದೆ, ಆದ್ದರಿಂದ ವಿಶೇಷ ಕಣ್ಗಾವಲು ಕ್ರಮಗಳು ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.

ಆದೇಶವು, “ಆರ್ಟಿ-ಪಿಸಿಆರ್‌ ನೆಗೆಟಿವ್‌‌ ವರದಿಯು 72 ಗಂಟೆಗಳಿಗಿಂತ ಹಳೆಯದಾಗಿರಬಾರದು. ಲಸಿಕೆ ಪ್ರಮಾಣಪತ್ರವು ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆಂದು ನಿರ್ದಿಷ್ಟಪಡಿಸಿರಬೇಕು. ವಿಮಾನ, ಬಸ್, ರೈಲು, ಟ್ಯಾಕ್ಸಿ ಮತ್ತು ವೈಯಕ್ತಿಕ ಸಾರಿಗೆಯ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ಎಲ್ಲ ಪ್ರಯಾಣಿಕರಿಗೂ ಈ ನಿಯಮ ಅನ್ವಯವಾಗುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತೆ ಎನ್ನಲು ಮಾಹಿತಿಯಿಲ್ಲ: ಡಾ. ರಂದೀಪ್ ಗುಲೇರಿಯಾ

ಇದಲ್ಲದೆ, ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ನಿಯಮವನ್ನು ಜಾರಿಗೆ ತರಲು ಚೆಕ್ ಪೋಸ್ಟ್‌ಗಳಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

“ಎಲ್ಲಾ ವಾಹನಗಳ ಚಾಲಕ, ಸಹಾಯಕ ಅಥವಾ ಕ್ಲೀನರ್ ಮತ್ತು ಪ್ರಯಾಣಿಕರು ಸೇರಿದಂತೆ ಎಲ್ಲರನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ನಿರ್ದಿಷ್ಟವಾಗಿ ಕೇಳಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರ ಆರ್‌ಟಿ-ಪಿಸಿಆರ್ ಪ್ರಮಾಣಪತ್ರವು 72 ಗಂಟೆಗಳಿಗಿಂತ ಹಳೆಯದಾಗಿರಬಾರದು.ಇದನ್ನು ಪರಿಶೀಲಿಸುವುದು ಕಂಡಕ್ಟರ್‌ನ ಜವಾಬ್ದಾರಿಯಾಗಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, “ಶಿಕ್ಷಣ, ವ್ಯವಹಾರ ಮತ್ತು ಇತರ ಕಾರಣಗಳಿಗಾಗಿ ಕರ್ನಾಟಕಕ್ಕೆ ಪ್ರತಿದಿನ ಭೇಟಿ ನೀಡುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ 15 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವುದು ಮತ್ತು ನೆಗಟಿವ್‌‌ ರಿಪೋರ್ಟ್ ವರದಿ ಹೊಂದಿರುವುದು ಕಡ್ಡಾಯವಾಗಿದೆ” ಎಂದು ಆದೇಶವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇಂಟರ್‍‍ನ್ಯಾಶನಲ್ ಫೋಕಸ್; ಇಥಿಯೋಪಿಯಾ: ನೊಬೆಲ್ ಶಾಂತಿ ಪ್ರಶಸ್ತಿಯ ಇನ್ನೊಂದು ಯುದ್ಧ

ಈ ವಾರದ ಆರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾಡಳಿತಗಳು ಮಂಗಳವಾರದಿಂದ ಕೇರಳದಿಂದ ಬರುವ ಜನರಿಂದ ಪರೀಕ್ಷಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪರಿಶೀಲಿಸಲಾಗುವುದು ಎಂದು ಘೋಷಿಸಿತ್ತು. ಕೇರಳ-ಕರ್ನಾಟಕ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹೆಚ್ಚಿನ ಜಾಗರೂಕತೆಯಿಂದ ಇರಬೇಕು ಮತ್ತು ಚೆಕ್‌ಪೋಸ್ಟ್‌ಗಳನ್ನು ಬಲಪಡಿಸುವಂತೆ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚನೆ ನೀಡಿದ ನಂತರ ಈ ಕ್ರಮಕ್ಕೆ ಚಾಲನೆ ನೀಡಲಾಯಿತು.

ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಜೊತೆಗೆ ಕುಟುಂಬದಲ್ಲಿ ಸಾವು ಮತ್ತು ವೈದ್ಯಕೀಯ ಅವಶ್ಯಕತೆಗಳಂತಹ ತುರ್ತು ಸಂದರ್ಭಗಳಲ್ಲಿ ಗಡಿಗಳ ನಡುವೆ ಪ್ರಯಾಣಿಸಲು ಅನುಮತಿಸಲಾಗುವುದು. ಆದರೆ ಅವರು ತಮ್ಮ ಗುರುತು ಮತ್ತು ವಿಳಾಸದ ವಿವರಗಳನ್ನು ನೀಡುವುದರ ಜೊತೆಗೆ ಕೋವಿಡ್ ಪರೀಕ್ಷೆಗೆ ತಮ್ಮ ಸ್ವ್ಯಾಬ್ ಮಾದರಿಯನ್ನು ನೀಡಬೇಕಾಗುತ್ತದೆ. ಪರೀಕ್ಷಾ ಫಲಿತಾಂಶವನ್ನು ಅವಲಂಬಿಸಿ ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆದೇಶ ಹೇಳಿದೆ.

ಜೂನ್ 28 ರಂದು ರಾಜ್ಯ ಸರ್ಕಾರವು ಮಹಾರಾಷ್ಟ್ರದ ಎಲ್ಲ ಪ್ರಯಾಣಿಕರಿಗೆ 72 ಗಂಟೆಗಳನ್ನು ಮೀರದ ಆರ್‌ಟಿ-ಪಿಸಿಆರ್ ಬೆಗೆಟಿವ್‌‌ ವರದಿಯನ್ನು ಮತ್ತು ಕನಿಷ್ಠ ಒಂದು ಡೋಸ್‌ನ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವ ಜನರಿಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ನಿರ್ದೇಶಿಸಿತ್ತು.

ಇದನ್ನೂ ಓದಿ: ಮತದಾನ ನಂತರದ ಹಿಂಸಾಚಾರ: ಚುನಾವಣಾ ಆಯೋಗ, ಬಂಗಾಳ ಮತ್ತು ಒಕ್ಕೂಟ ಸರ್ಕಾರಕ್ಕೆ ಸುಪ್ರೀಂನಿಂದ ನೋಟಿಸ್‌

LEAVE A REPLY

Please enter your comment!
Please enter your name here