ಗಾಝಾ ಹತ್ಯಾಕಾಂಡದ ರುವಾರಿ, ನರಹಂತಕ ಇಸ್ರೇಲ್ ಪ್ರಧಾನಿ ಬೆಂಜಮನ್ ನೆತನ್ಯಾಹು ಸಂದರ್ಶನ ನಡೆಯುತ್ತಿದ್ದ ಪಶ್ಚಿಮ ಪ್ಯಾರಿಸ್ ಉಪನಗರದ ಫ್ರಾನ್ಸ್‌ನ ಖಾಸಗಿ ಬ್ರಾಡ್‌ಕಾಸ್ಟರ್ ‘TF1’ ಕಚೇರಿ ಹೊರಗೆ ಸಾವಿರಾರು ಮಂದಿ ಸೇರಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ಭಾರೀ ಪೊಲೀಸ್ ಭದ್ರತೆಯಿದ್ದ ಮಾದ್ಯಮ ಕಟ್ಟಡದ ಬಳಿ ಪ್ರತಿಭಟನಾಕಾರರು ಪ್ಯಾಲೆಸ್ತೀನ್ ಧ್ವಜಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. “ಗಾಝಾ, ಪ್ಯಾರಿಸ್ ನಿಮ್ಮೊಂದಿಗೆ ಇದೆ”, ತಕ್ಷಣದ ಕದನ ವಿರಾಮ ಮಾಡಬೇಕು ಮತ್ತು ‘ಇಸ್ರೇಲ್’- ಕೊಲೆಗಾರ ಎಂದು ಘೋಷಣೆಯನ್ನು ಕೂಗಿದ್ದರೆ.
TF1 ಸುದ್ದಿ ಚಾನೆಲ್‌ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ, ನೆತನ್ಯಾಹು ಗಾಝಾದ ಮೇಲಿನ ಯುದ್ಧವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ನಾಗರಿಕರ ಸಾವಿನ ಸಂಖ್ಯೆಯು ಅತ್ಯಂತ ಕಡಿಮೆ ದರದಲ್ಲಿದೆ ಎಂದು ಹೇಳಿದ್ದಾರೆ. ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಕ್ಷಾಮವನ್ನು ಉಂಟುಮಾಡಲು ಪ್ರಯತ್ನಿಸುತ್ತಿಲ್ಲ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ.
ಯುಎನ್ ಏಜೆನ್ಸಿಗಳು, ನೆರವು ಗುಂಪುಗಳು ಗಾಝಾ ಭೂಪ್ರದೇಶವನ್ನು ಪ್ರವೇಶಿಸುವ ಮಾನವೀಯ ನೆರವಿನ ಮೇಲೆ ಇಸ್ರೇಲ್ ನಿರ್ಬಂಧಗಳ ಪರಿಣಾಮವಾಗಿ ಗಾಝಾವು ಕ್ಷಾಮವನ್ನು ಅನುಭವಿಸುತ್ತಿದೆ ಎಂದು ಹೇಳುತ್ತಿದೆ, ಗಾಝಾದ ಮಕ್ಕಳ ಅನ್ನ, ನೀರು, ಆಹಾರ ಸೇರಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.
ಇಸ್ರೇಲ್ ಯುದ್ಧ ಘೋಷಿಸಿ ಅ.7ರಂದು ಗಾಝಾ ಮೇಲೆ ದಾಳಿ ಪ್ರಾರಂಭಿಸಿದ ಬಳಿಕ ಕನಿಷ್ಠ 36,224 ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು ಮತ್ತು 81,777 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡಕ್ಕೆ ಜಾಗತಿಕ ಖಂಡನೆ ಮತ್ತು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯವು ತಕ್ಷಣವೇ ನಗರದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದರೂ ಇಸ್ರೇಲ್ ರಾಫಾದ ಮೇಲೆ ಆಕ್ರಮಣವನ್ನು ಮುಂದುವರೆಸುತ್ತಿರುವುದರಿಂದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ರಫಾದಿಂದ ಸ್ಥಳಾಂತರಗೊಂಡಿದ್ದಾರೆ.
— Sébastien DELOGU (@sebastiendelogu) May 30, 2024
ನೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರೆವೈದ್ಯಕೀಯ ಸಿಬ್ಬಂದಿಗಳ ಹತ್ಯೆ
ರಫಾದಲ್ಲಿ ಇಸ್ರೇಲ್ ಪಡೆಗಳಿಂದ ಕೊಲ್ಲಲ್ಪಟ್ಟ ಇಬ್ಬರು ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ (PRCS) ಅರೆವೈದ್ಯರ ಕುಟುಂಬಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.
ರಾಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಹೈಥಮ್ ತುಬಾಸಿ ಮತ್ತು ಸುಹೇಲ್ ಹಸ್ಸೌನಾ ಅವರು ತಮ್ಮ ಆಂಬ್ಯುಲೆನ್ಸ್‌ನಲ್ಲಿ ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾಗಿ ಇಸ್ರೇಲ್ ಉದ್ದೇಶಪೂರಕವಾಗಿ ದಾಳಿ ನಡೆಸಿ ಇಬ್ಬರು ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ ಸಿಬ್ಬಂದಿಗಳನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ. ಈವರೆಗೆ 19 ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ ಸಿಬ್ಬಂದಿಗಳು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ.
ಗಾಝಾದ ನುಸಿರಾತ್ ನಿರಾಶ್ರಿತರ ಶಿಬಿರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮತ್ತೆ ನಡೆಸಿದ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಗಾಝಾದ ಮೇಲೆ ಇಸ್ರೇಲ್ ಯುದ್ಧ ಘೋಷಿಸಿದಾಗ ಸುರಕ್ಷಿತ ಸ್ಥಳವೆಂದು ನಾಗರಿಕರು ತಾತ್ಕಾಲಿಕ ನೆಲೆ ಕಂಡುಕೊಂಡಿದ್ದ ರಫಾ ಮೇಲೆ ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ ಈ ನಗರದಲ್ಲಿ ಈವರೆಗೆ 60ಕ್ಕೂ ಅಧಿಕ ಮಂದಿಯ ಹತ್ಯೆ ನಡೆದಿದೆ. ಅಲ್ಲಿನ ನಾಗರಿಕರ ಕೊನೆಯ ಆಶ್ರಯದ ಮೇಲಿನ ದಾಳಿಗೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದರೆ ಇಸ್ರೇಲ್ ತನ್ನ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುತ್ತಿದೆ.
ಇದನ್ನು ಓದಿ: ಸಾವಿನ ಅಂಚಿನಲ್ಲಿರುವ ವ್ಯಕ್ತಿಯ ಹೇಳಿಕೆ ಹೆಚ್ಚು ಮಾನ್ಯತೆಯನ್ನು ಹೊಂದಿದೆ: ಸುಪ್ರೀಂಕೋರ್ಟ್


