ಕಳೆದ ತಿಂಗಳು ಶುಲ್ಕ ಹೆಚ್ಚಳದ ವಿರುದ್ಧದ ತೀವ್ರ ನಿರಂತರ ಪ್ರತಿಭಟನೆ ನಡೆಸಿದ್ದರು ಜೆಎನ್‌ಯು ವಿದ್ಯಾರ್ಥಿಗಳು. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಇತರ ನಾಗರಿಕರೂ ಸಹ ಬೆಂಬಲ ಸೂಚಿಸಿದ್ದರು. ಶುಲ್ಕ ಹೆಚ್ಚಳದ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಪ್ರಕರಣ ತಿಳಿಯಾಗುವ ಮೊದಲೇ ಸರ್ಕಾರ ಪುಣೆ FTTI (ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ದಾಖಲಾತಿ ಶುಲ್ಕಗಳನ್ನು ಡಬಲ್ ಮಾಡಿದೆ. ಇದನ್ನು ಖಂಡಿಸಿ ನಾಲ್ಕು ವಿದ್ಯಾರ್ಥಿಗಳಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
ಬ್ಯಾಚ್‌ಗಳು ಆರಂಭವಾದ 2013ರಿಂದಲೂ ಪ್ರತಿ ವರ್ಷ ಶೇ.10%ನಷ್ಟು ಶುಲ್ಕ ಮಾತ್ರ ಹೆಚ್ಚಳವಾಗುತ್ತಿತ್ತು. ಹಾಗೆ ನೋಡಿದರೆ ವಾರ್ಷಿಕ ಶುಲ್ಕ 2013ರಲ್ಲಿ 55,380ರೂ ಇದ್ದಿದ್ದು ಈಗ 2020ರ ಬ್ಯಾಚ್‌ಗೆ 1,18,323ರೂಗೆ ತಲುಪಿದೆ. ಅಂದರೆ ಶುಲ್ಕ 50%ಹೆಚ್ಚಳವಾಗಿದೆ ಎಂದು ವಿದ್ಯಾರ್ಥಿ ಸಂಘ ಆರೋಪಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

FTTI ಮತ್ತು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್‌ನಲ್ಲಿಯೂ ಸಹ ಇದರೊಂದಿಗೆ ಜಂಟಿ ದಾಖಲಾತಿ ಅರ್ಜಿ ಶುಲ್ಕವನ್ನು(ಜೆಎಟಿ) ಹೆಚ್ಚಳ ಮಾಡಲಾಗಿದೆ. 2015ರಲ್ಲಿ 1500ರೂ ಇದ್ದ ದಾಖಲಾತಿ ಶುಲ್ಕ 2020ರ ಬ್ಯಾಚಿಗೆ 10000ರೂಗಳಿಗೆ ತಲುಪಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಭರಿಸಲಾಗದ ಅತ್ಯಂತ ಹೆಚ್ಚಿನ ಶುಲ್ಕವಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಈ ಕೂಡಲೇ ಶುಲ್ಕ ಹೆಚ್ಚಳದ ಆದೇಶವನ್ನು ವಾಪಸ್ ಪಡೆಯಬೇಕು ಮತ್ತು ಮೊದಲಿನಂತೆ ಶೇ.10% ಮಾತ್ರ ಶುಲ್ಕ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಸತತ ಮೂರು ವರ್ಷಗಳಿಂದಲೂ ಶುಲ್ಕ ಹೆಚ್ಚಳದ ವಿರುದ್ಧ ಹೋರಾಟುತ್ತಿದ್ದೇವೆ. ಹಲವಾರು ಮನವಿಗಳನ್ನು ನೀಡಿದ್ದೇವೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ಆಡಳಿತ ಮಂಡಳಿ ಏಕಾಏಕಿ ದಿಢೀರ್ ಎಂದು ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಿದೆ. ಹಾಗಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಶುಲ್ಕ ಹೆಚ್ಚಳದ ಆದೇಶವನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಉಪವಾಸನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ.


