ಬರೋಬ್ಬರಿ 36 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಒತ್ತಾಯಿಸಿ 26 ವರ್ಷದ ಮಹಿಳೆಯೊಬ್ಬರಿಗೆ, ಆಕೆಯ ಗಂಡ ಮತ್ತು ಅತ್ತೆ-ಮಾವ ಕ್ರೂರವಾಗಿ ಹಲ್ಲೆ ನಡೆಸಿ ಬೆಂಕಿ ಹಚ್ಚಿರುವ ಭಯಾನಕ ಘಟನೆ ಗ್ರೇಟರ್ ನೋಯ್ಡಾದ ಸಿರ್ಸಾ ಗ್ರಾಮದಲ್ಲಿ ನಡೆದಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆ ನಿಕ್ಕಿ ಶುಕ್ರವಾರ (ಆ.22) ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸಣ್ಣ ಮಗ ಮತ್ತು ಅಕ್ಕನ ಮುಂದೆಯೇ ನಿಕ್ಕಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ವರದಿಗಳು ಹೇಳಿವೆ.
ಪಿಟಿಐ ವರದಿಯ ಪ್ರಕಾರ, ದೌರ್ಜನ್ಯವನ್ನು ಕಣ್ಣಾರೆ ಕಂಡ ನಿಕ್ಕಿ ಅವರ ಆರು ವರ್ಷದ ಮಗ “ಮೇರಿ ಮಮ್ಮ ಕೆ ಊಪರ್ ಕುಚ್ ದಾಲಾ, ಫಿರ್ ಉನ್ಕೋ ಚಾಂತ ಮಾರಾ ಫಿರ್ ಲೈಟರ್ ಸೆ ಆಗ್ ಲಗಾ ದಿ” (ಅವರು ನನ್ನ ತಾಯಿಯ ಮೇಲೆ ಏನೋ ಸುರಿದ್ರು, ಅವರಿಗೆ ಕಪಾಳಮೋಕ್ಷ ಮಾಡಿ, ಲೈಟರ್‌ನಿಂದ ಬೆಂಕಿ ಹಚ್ಚಿದರು) ಎಂದು ವರದಿಗಾರರಿಗೆ ತಿಳಿಸಿದ್ದಾನೆ.
ನಿಕ್ಕಿಯ ಮೈದುನನ್ನು ಮದುವೆಯಾದ ನಂತರ ಅದೇ ಕುಟುಂಬದ ಭಾಗವಾಗಿರುವ ಆಕೆಯ ಅಕ್ಕ ಕಾಂಚನ್ ಕೂಡ ಘಟನೆಯನ್ನು ವಿವರಿಸಿದ್ದು, 36 ಲಕ್ಷ ರೂ. ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ನಿಕ್ಕಿಯನ್ನು ಕೊಲ್ಲಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಗುರುವಾರ ರಾತ್ರಿ, ನಿಕ್ಕಿಯ ಪತಿ ವಿಪಿನ್ ಮತ್ತು ಅತ್ತೆ ಮಾವಂದಿರು ತೀವ್ರವಾಗಿ ಥಳಿಸಿ ಬೆಂಕಿ ಹಚ್ಚಿದರು. ವರದಕ್ಷಿಣೆಗಾಗಿ ಹಲವು ದಿನಗಳ ಕಾಲ ಅವರು ನಮ್ಮನ್ನು ಹಿಂಸಿಸಿದ್ದಾರೆ. ಅವರು ಆಕೆಯ ತಲೆ ಮತ್ತು ಕುತ್ತಿಗೆಗೆ ಹೊಡೆದು ಆಸಿಡ್ ಎರಚಿದ್ದಾರೆ. ಇತರ ಹಲವು ರೀತಿಯಲ್ಲಿ ನನ್ನ ಸಹೋದರಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ನನಗೂ ಕೂಡ ಥಳಿಸಿ ಪ್ರಜ್ಞಾಹೀನಳಾಗಿ ಮಾಡಿದ್ದರು” ಎಂದು ಕಾಂಚನ್ ಹೇಳಿದ್ದಾರೆ.
ವಿಪಿನ್ ಮರುಮದುವೆಯಾಗಲು ಬಯಸಿದ್ದ. ಅದಕ್ಕಾಗಿ ಅತ್ತೆ-ಮಾವಂದಿರು ನಿಕ್ಕಿಯನ್ನು ದೂರವಿಡಲು ಬಯಸಿದ್ದರು ಎಂದು ಕಾಂಚನ್ ಹೇಳಿಕೊಂಡಿದ್ದಾರೆ.
“ಆಗಸ್ಟ್ 21 ರಂದು, ಫೋರ್ಟಿಸ್ ಆಸ್ಪತ್ರೆಯಿಂದ ನಮಗೆ ಸುಟ್ಟ ಗಾಯಗಳೊಂದಿಗೆ ದಾಖಲಾಗಿರುವ ಮಹಿಳೆಯ ಬಗ್ಗೆ ಕರೆ ಬಂದಿತು. ನಂತರ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ದುರದೃಷ್ಟವಶಾತ್, ನಾವು ತಲುಪುವ ಮೊದಲೇ ಅವರು ನಿಧನರಾದರು” ಎಂದು ಗ್ರೇಟರ್ ನೋಯ್ಡಾ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸುಧೀರ್ ಕುಮಾರ್ ಹೇಳಿದ್ದಾರೆ.
ಕಾಂಚನ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ನಿಕ್ಕಿಯ ಪತಿ ವಿಪಿನ್ ಅವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಕೇರಳ| ಬುಡಕಟ್ಟು ವ್ಯಕ್ತಿಯನ್ನು ಐದು ದಿನಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟ ಉದ್ಯೋಗದಾತ


