ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡವನ್ನು ವಿಧಿಸುವ ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತಾ ಕಾನೂನಿನ ವಿರುದ್ಧ ದೇಶದ ವಿವಿಧೆಡೆ ಟ್ರಕ್ ಚಾಲಕರು ವ್ಯಾಪಕವಾಗಿ ಪ್ರತಿಭಟನೆ ಮಾಡಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ, ರಾಜಸ್ಥಾನ ಮತ್ತು ಬಿಹಾರಗಳಲ್ಲಿ ಪ್ರತಿಭಟನೆ ಜನರ ಮೇಲೆ ವ್ಯಾಪಕವಾದ ಪರಿಣಾಮ ಬೀರಿತ್ತು. ಟ್ರಕ್ ಚಾಲಕರ ಪ್ರತಿಭಟನೆಯಿಂದಾಗಿ ಹೈದರಾಬಾದ್‌ನ ಪೆಟ್ರೋಲ್ ಪಂಪ್‌ಗಳಾದ್ಯಂತ ಭಾರಿ ಜನಸಂದಣಿ ಸೇರಿದ್ದರು. ಚಾಲಕರ ವ್ಯಾಪಕ ಪ್ರತಿಭಟನೆಗಳಿಂದ ಇಂಧನ ಪೂರೈಕೆ ಸ್ಥಗಿತದ ಭಯದಿಂದ ಜನರು ಪೆಟ್ರೋಲ್ ಪಂಪ್‌ಗಳಲ್ಲಿ ಜಮಾಯಿಸಿದ್ದರು.
ಇದರಿಂದ ಹೈದರಾಬಾದ್‌ನ ಝೊಮಾಟೊ ಡೆಲಿವರಿ ಬಾಯ್ ಓರ್ವ ತನ್ನ ದ್ವಿಚಕ್ರ ವಾಹನವನ್ನು ಬಿಟ್ಟು ಕುದುರೆಯಲ್ಲಿ ಪಾರ್ಸೆಲ್ ಸಾಗಾಟ ಮಾಡಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ‘ಅರ್ಬಾಜ್ ದಿ ಗ್ರೇಟ್’ ಎಂಬ ಎಕ್ಸ್ ಖಾತೆಯಲ್ಲಿ ಈ ಕುರಿತು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಡೆಲಿವರಿ ಏಜೆಂಟ್ ತನ್ನ ಹೆಗಲ ಮೇಲೆ ಡೆಲಿವರಿ ಬ್ಯಾಗ್ ಹಾಕಿಕೊಂಡಿದ್ದಾನೆ. ಝೊಮಾಟೊ ಟೀಸರ್ಟ್ ಧರಸಿದ್ದ ಯುವಕ ಕುದುರೆಯ ಮೇಲೇರಿ ಜನ ಸಂದಣಿ ಪ್ರದೇಶದಲ್ಲಿ ವಾಹನಗಳ ನಡುವೆ ಪಾರ್ಸೆಲ್ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಹೈದರಾಬಾದ್‌ನಲ್ಲಿ ಪ್ರತಿಭಟನೆಯಿಂದಾಗಿ ಇಂಧನ ಕೊರತೆಯ ಆತಂಕದಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಜನರು ಜಮಾಯಿಸಿದ್ದರು. ಉದ್ದವಾದ ಸರತಿ ಸಾಲುಗಳಿದ್ದ ಕಾರಣಕ್ಕೆ ಬೈಕ್ ಬದಿಗಿಟ್ಟು, ಕುದುರೆಯ ಮೂಲಕ ಪುಡ್ ಡೆಲಿವರಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಭಾರತೀಯ ನ್ಯಾಯ ಸಂಹಿತಾ ಶಾಸನವನ್ನು ಖಂಡಿಸಿ ಜ.1 ಮತ್ತು 2ರಂದು ನಡೆದ ರಾಷ್ಟ್ರವ್ಯಾಪಿ ಮುಷ್ಕರವು ಇಂಧನ ವಿತರಣೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಇದು ಗ್ರಾಹಕರಲ್ಲಿ ಇಂಧನದ ಕೊರತೆ ಮತ್ತು ಭೀತಿಗೆ ಕಾರಣವಾಗಿದೆ. ಹೈದರಾಬಾದ್‌ನ ಅಫ್ಜಲ್‌ಗುಂಜ್, ಬಂಜಾರಾ ಹಿಲ್ಸ್, ನಾಂಪಲ್ಲಿ, ಬೇಗಂಪೇಟ್, ಲಂಗರ್ ಹೌಜ್ ಮತ್ತು ಗಚಿಬೌಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೆಟ್ರೋಲ್ ಪಂಪ್‌ಗಳ ಬಳಿ ಜನರ ಸಾಲುಗಳು ನಿಂತುಕೊಂಡಿರುವುದು ಕಂಡು ಬಂದಿತ್ತು.
#Hyderabadi Bolde Kuch bhi Kardete 😅
Due To Closure of #PetrolPumps in Hyderabad, A Zomato Delivery boy came out to deliver food on horse at #Chanchalgudaa near to imperial hotel.#Hyderabad #ZomatoMan #DeliversOnHorse#TruckDriversProtest pic.twitter.com/UUABgUPYc1— Arbaaz The Great (@ArbaazTheGreat1) January 2, 2024
ಏನಿದು ಪ್ರತಿಭಟನೆ?
ಹೊಸ ಕ್ರಿಮಿನಲ್ ಕಾನೂನಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗಿದೆ. ಅಪಘಾತದ ಬಳಿಕ ಚಾಲಕರು ಪರಾರಿಯಾಗಲು ಯತ್ನಿಸಿದರೆ ಅಥವಾ ಮಾರಣಾಂತಿಕ ಅಪಘಾತವನ್ನು ಪೊಲೀಸರಿಗೆ ವರದಿ ಮಾಡದಿದ್ದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಈ ಹಿಂದೆ, ಹಿಟ್ ಅಂಡ್ ರನ್ ಪ್ರಕರಣಕ್ಕೆ ಐಪಿಸಿಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ 2 ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು.
ಯಾರೂ ಉದ್ದೇಶಪೂರ್ವಕವಾಗಿ ಅಪಘಾತವೆಸಗುವುದಿಲ್ಲ. ಹೊಸ ಕಾನೂನಿನ ಪ್ರಕಾರ ಅಪಘಾತ ನಡೆದಾಗ ಘಟನಾ ಸ್ಥಳದಿಂದ ಪಲಾಯಣ ಮಾಡದಿದ್ದರೆ ಆಕ್ರೋಶಿತ ಜನರು ಚಾಲಕರ ಮೇಲೆ ದಾಳಿ ಮಾಡುವ ಸಾಧ್ಯತೆಯಿರುತ್ತದೆ. ತಮ್ಮ ರಕ್ಷಣೆಗೋಸ್ಕರ ಪಲಾಯಣ ಮಾಡುವ ಚಾಲಕರನ್ನು ಹೊಸ ಕಾನೂನು ತಡೆಯುತ್ತದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರೊಂದಿಗಿನ ಸಭೆಯ ನಂತರ ಇಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಎಐಎಂಟಿಸಿ) ಮುಷ್ಕರ ಕೊನೆಗೊಳಿಸಲು ನಿರ್ಧರಿಸಿದೆ. ಹೊಸ ಕಾನೂನುಗಳು ಇನ್ನೂ ಜಾರಿಗೆ ಬಂದಿಲ್ಲ. ಎಐಎಂಟಿಸಿಯೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಅಜಯ್ ಭಲ್ಲಾ ಅವರು ಸಾರಿಗೆ ಸಂಸ್ಥೆಯ ಸದಸ್ಯರಿಗೆ ಭರವಸೆ ನೀಡಿದ ಹಿನ್ನೆಲೆ, ಮುಷ್ಕರ ಹಿಂಪಡೆಯಲಾಗಿದೆ ಎನ್ನಲಾಗಿದೆ.
ಇದನ್ನು ಓದಿ; ದಲಿತ ರೈತರಿಗೆ ‘ED’ ಸಮನ್ಸ್ ಪ್ರಕರಣ: ರಾಷ್ಟ್ರಪತಿಗೆ ಪತ್ರ ಬರೆದ IRS ಅಧಿಕಾರಿ


