ಅಕ್ರಮ ಗೋಮಾಂಸ ಸಾಗಾಟದ ಆರೋಪದಲ್ಲಿ ತೀವ್ರ ಹಲ್ಲೆಗೊಳಗಾಗಿದ್ದ ಸಂತ್ರಸ್ತ ಲುಕ್ಮನ್ ಖಾನ್ (25) ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶುಕ್ರವಾರ ನಡೆದ ಘಟನೆಯನ್ನು ನೆನಪಿಸಿಕೊಂಡಿರುವ ಅವರು ‘ಅದು ಗೋಮಾಂಸವಲ್ಲ ಎಂದು ಬೇಡಿಕೊಂಡೆ, ಆದರೂ ಹೊಡೆದರು’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
“ಅದು ಹಸುವಿನ ಮಾಂಸವಲ್ಲ, ಎಮ್ಮೆ ಮಾಂಸ. ಒಂದು ವೇಳೆ ಅದು ಹಸುವಿನ ಮಾಂಸವಾಗಿದ್ದರೆ ನಾನೀಗಲೇ ಪ್ರಾಣ ಕೊಡಲು ಸಿದ್ದನಿದ್ದೇನೆ ಎಂದು ಹೇಳಿದೆ. ಆದರೆ ಅವರು ಜೈ ಶ್ರೀರಾಮ್ ಎನ್ನುವಂತೆ ನನ್ನನ್ನು ಒತ್ತಾಯಿಸಿದರು. ಸರಳುಗಳು ಮತ್ತು ಸುತ್ತಿಗೆಯಿಂದ ಬಡಿದರು” ಎಂದು ಲುಕ್ಮನ್ ಖಾನ್ ಹೇಳಿದ್ದಾರೆ.
ನಾನು ಹಲವು ವರ್ಷಗಳಿಂದ ಗುರ್ಗಾವ್ ಬಳಿಯ ಸದರ್ ಬಜಾರ್ ಮಾರುಕಟ್ಟೆಗೆ ಎಮ್ಮೆ ಮಾಂಸ ಪೂರೈಸುತ್ತಿದ್ದೇನೆ. ಯಥಾ ಪ್ರಕಾರ ಶುಕ್ರವಾರವೂ ಸಹ ಟ್ರಕ್‌ನಲ್ಲಿ ಹೊರಟಿದ್ದಾಗ ಹಲವಾರು ಜನ ನನ್ನನ್ನು ತಡೆದು ಮನಬಂದಂತೆ ಥಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನನ್ನನ್ನು ಟ್ರಕ್‌ನಲ್ಲಿ ಗುರಗಾಂವ್‌ನ ಬಾದ್‌ಶಾಹ್‌ಪುರ ಗ್ರಾಮಕ್ಕೆ ಕರೆದೊಯ್ದು ಅಲ್ಲಿಯೂ ಹಲವಾರು ಜನ ಥಳಿಸಿದರು. ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
This is terrible and the silence around it is deafening https://t.co/umHsL4veBr
— Faye DSouza (@fayedsouza) August 2, 2020
ಈ ಘಟನೆಯನ್ನು ಹಲವಾರು ಸಾಮಾಜಿಕ ಕಾರ್ಯಕರ್ತರು ವಿರೋಧಿಸಿದ್ದಾರೆ. ದಲಿತ ಹೋರಾಟಗಾರ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ “ಮತ್ತೆ ರಾಮನ ಹೆಸರಿನಲ್ಲಿ ಹಲ್ಲೆ” ಎಂದು ಟೀಕಿಸಿದ್ದಾರೆ.
ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್ ಮಾಡಿ “ಮುಸ್ಲಿಂಲೈವ್ಸ್‌ಮ್ಯಾಟರ್” ಎಂದಿದ್ದಾರೆ. ಅದೇ ರೀತಿ “ಈ ಘಟನೆಯ ಸುತ್ತಲಿನ ಮೌನವು ಮತ್ತಷ್ಟು ಭಯಾನಕವಾಗಿದೆ” ಎಂದು ಇನ್ನೊರ್ವ ಪತ್ರಕರ್ತೆ ಫಯೆ ಡಿಸೋಜ ತಿಳಿಸಿದ್ದಾರೆ.
ಈ ಘಟನೆ 5 ವರ್ಷಗಳ ಹಿಂದೆ ದಾದ್ರಿಯಲ್ಲಿ ನಡೆದ ಗುಂಪುಹತ್ಯೆ ಪ್ರಕರಣವನ್ನು ನೆನಪಿಸುತ್ತದೆ. ಅಖ್ಲಾಖ್ ಎಂಬ ಅಮಾಯಕನನ್ನು ಗೋರಕ್ಷಕರು ಹೊಡೆದುಕೊಂದಿದ್ದಕ್ಕೂ, ಈ ಘಟನೆಗೂ ಹಲವು ಸಾಮ್ಯತೆಗಳಿವೆ. ಇಲ್ಲಿಯೂ ಅಕ್ರಮ ಗೋಮಾಂಸ ಸಾಗಣೆ ಆರೋಪ ಹೊರಿಸಲಾಗಿದೆ. ಇನ್ನೂ ಮುಖ್ಯವಾಗಿ ದಾದ್ರಿಯಂತೆಯೇ ಇಲ್ಲಿಯೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸುವುದು ಬಿಟ್ಟು, ಮಾಂಸವನ್ನು ಪರೀಕ್ಷಿಸಲು ಲ್ಯಾಬ್‌ಗೆ ಕಳಿಸಿದ್ದಾರೆ.
ಲುಕ್ಮನ್ ಚಲಾಯಿಸುತ್ತಿದ್ದ ವಾಹನದ ಮಾಲೀಕರು ”ಅದು ಎಮ್ಮೆ ಮಾಂಸವಾಗಿದೆ ಮತ್ತು ಕಳೆದ 50 ವರ್ಷಗಳಿಂದ ನಾವು ಈ ವ್ಯವಹಾರದಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆ ನೀಡಲು ಮತ್ತು ವಿವರ ನೀಡಲು ನಿರಾಕರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು..
ಇದನ್ನೂ ಓದಿ: ಪೊಲೀಸರ ಎದುರೇ ದಲಿತರ ಮೇಲೆ ಹಲ್ಲೆ ಆರೋಪ: ಠಾಣೆ ಎದುರು ಪ್ರತಿಭಟನೆ


