ನಾನು ಎಲ್ಲಿಯೂ ‘ಬಾಂಬೆ ಬಾಯ್ಸ್’ ಎಂಬ ಪದ ಬಳಸಿಲ್ಲ. ಆದರೂ ತಪ್ಪಾಗಿ ಉಲ್ಲೇಖ ಮಾಡಿ ಪ್ರಸಾರ ಮಾಡಲಾಗಿದೆ ಎಂದು ‘ಸುವರ್ಣ ಚಾನೆಲ್’ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಬಹಿರಂಗವಾಗಿ ಕಿಡಿಕಾರಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಗಾಳಿ ನಮಗೂ ಬೀಸಿ, ಸ್ವಲ್ಪ ಅಶಿಸ್ತು ಉಂಟಾಗಿದೆ’ ಎಂದು ಹೇಳಿದ್ದೆ. ಆದರೆ ‘ಸುವರ್ಣ ಚಾನೆಲ್’ನಲ್ಲಿ ‘ಬಾಂಬೆ ಬಾಯ್ಸ್ ವಿರುದ್ಧ ಈಶ್ವರಪ್ಪ ಗರಂ’ ಎಂಬ ಸುದ್ದಿ ಪ್ರಸಾರವಾಗುವುದು ಗಮನಿಸಿದೆ. ಟಿವಿಗಳಲ್ಲಿ ಏನು ಬೇಕಾದರೂ ಬರೆಯಬಹುದು ಎಂಬುದು ನೋಡಿ ನನಗೆ ಆಶ್ವರ್ಯವಾಯಿತು. ನಾನು ಅಲ್ಲಿ ಬಾಂಬೆ ಬಾಯ್ಸ್ ಅಂತ ಪ್ರಸ್ತಾಪ ಮಾಡಿದ್ದನ್ನು ತೋರಿಸಲಿ. ಆದರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆ ಬಳಿಕ ಸಂಬಂಧಪಟ್ಟ ಹುಬ್ಬಳ್ಳಿಯ ವರದಿಗಾರನಿಗೆ ಕರೆ ಮಾಡಿ ಕೇಳಿದಾಗ, ನಾನು ಆ ಥರ ಕಳಿಸಿಲ್ಲ. ಮುಖ್ಯ ಕಚೇರಿಯಿಂದ ಹಾಗೆ ವರದಿ ಮಾಡುತ್ತಿದ್ದಾರೆ ಎಂದುತ್ತರಿಸಿದರು. ಆ ಬಳಿಕ ಸುವರ್ಣ ಚಾನೆಲ್‌ನ ಉನ್ನತ ಹುದ್ದೆಯಲ್ಲಿರುವವರಿಗೆ ತಿಳಿಸಿದಾಗ, ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು. ಅವರು ಬದಲಾವಣೆ ಮಾಡುವ ವೇಳೆಗೆ ಇಡೀ ರಾಜ್ಯದ ಜನ ನೋಡಿಯಾಗಿತ್ತು. ಅಲ್ಲದೇ, ‘ಬಾಂಬೆ ಬಾಯ್ಸ್’ ಸುದ್ದಿಯಿಂದ ಬಿಜೆಪಿಗೆ ಬಂದಂತಹಾ 17 ಜನ ಶಾಸಕರಿಗೂ ಕೂಡ ನೋವಾಗಿದೆ. ನನಗೂ ನೋವಾಯಿತು. ಅವರು ನಮಗೆ ಸಹಕಾರ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ಕೂಡ ಬಂತು. ನಾನೂ ಕೂಡ ಮಂತ್ರಿಯಾದೆ. ಆದರೆ, ಅವರ ಬಗ್ಗೆ ಆಪಾದನೆ ಮಾಡಿ ಸುದ್ದಿ ಹರಡಿರುವುದು ನೋವಾಗಿದೆ ಎಂದು ಈಶ್ವರಪ್ಪ ಸಮಜಾಯಿಷಿ ನೀಡಿದರು.
ಈ ಸಂಬಂಧ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಪೋನ್ ಮಾಡಿ ತಿಳಿಸಿದೆ. ಬಳಿಕ ಪಕ್ಷದ ಕಾರ್ಯಕರ್ತರ ಸಭೆಗೆ ಹೋದಾಗ, ಅಲ್ಲಿ ಸುವರ್ಣ ಚಾನೆಲ್‌ನ ವರದಿಗಾರರಿದ್ದರು. ಅವರಲ್ಲಿ ನನ್ನ ಸ್ಪಷ್ಟೀಕರಣ ಹಾಕುವಂತೆ ವಿನಂತಿಸಿದೆ. ಆದರೆ ಅವರು ವಿಡಿಯೋ ಮಾಡಲಿಲ್ಲ. ನಾನು ಅಲ್ಲಿ ‘ಬಾಂಬೆ ಬಾಯ್ಸ್’ ಎಂದು ಪ್ರಸ್ತಾಪವೇ ಮಾಡಿಲ್ಲ. ಕಾಂಗ್ರೆಸ್‌ನ ಗಾಳಿ ನಮಗೂ ಬೀಸಿ, ಸ್ವಲ್ಪ ಅಶಿಸ್ತು ಉಂಟಾಗಿದೆ ಎಂದಷ್ಟೇ ಹೇಳಿದ್ದೆ. ಆದ್ದರಿಂದ ಇಂತಹ ಸುದ್ದಿಗಳು ಪ್ರಸಾರ ಮಾಡುವುದರಿಂದ ನಮ್ಮೊಳಗಡೆ ಗೊಂದಲ ಉಂಟಾಗುತ್ತದೆ. ಆದ್ದರಿಂದ ಹೇಳದೇ ಇರುವ ಹೇಳಿಕೆಗಳನ್ನು ಪ್ರಸಾರ ಮಾಡಬೇಡಿ’ ಎಂದು ‘ಸುವರ್ಣ ಚಾನೆಲ್’ನ ಹೆಸರೇಳಿ ಮನವಿ ಮಾಡಿದರು.
ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ


