ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪಕ್ಷದ 136 ನೇ ಸಂಸ್ಥಾಪನಾ ದಿನಾಚರಣೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, “ನಾನು ಗೋಮಾಂಸ ತಿನ್ನುತ್ತೇನೆ. ನೀನು ಯಾವನಯ್ಯ ನನ್ನನ್ನು ಕೇಳೋಕೆ? ನನ್ನ ಆಹಾರ ನನ್ನ ಇಷ್ಟ, ನನ್ನ ಹಕ್ಕು” ಎಂದು ಹೇಳಿದ್ದಾರೆ.
“ವಯಸ್ಸಾದ ಹಸುವೊಂದನ್ನು ಸಾಕಲು ರೈತನಿಗೆ ನಿತ್ಯ 100 ರೂ.ಖರ್ಚಾಗುತ್ತದೆ. ಅದನ್ನು ಬಿಜೆಪಿಯವರು ಕೊಡುತ್ತಾರೆಯೇ? ವಯಸ್ಸಾದ ಹಸುಗಳು ಹಾಗೂ ಗಂಡು ಕರುಗಳನ್ನು ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರೆ ನನ್ನನ್ನು ಗೋಮಾತೆಯ ವಿರೋಧಿ ಎನ್ನುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ಛೇಡಿಸಿದ ಸುರೇಶ್ ಕುಮಾರ್: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!
“ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಬೇಡ ಎನ್ನಲು ನೀನು ಯಾವನು ಎಂದು ಈ ಹಿಂದೆಯೇ ನಾನು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದ್ದೆ. 1964 ರಲ್ಲೆ ಕಾಂಗ್ರೆಸ್ ಪಕ್ಷ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು, ಇದೇನು ಹೊಸದಲ್ಲ. ಈಗ ಅದನ್ನು ತಿದ್ದುಪಡಿ ಮಾಡಿ ರಾಜ್ಯ ಸರಕಾರ ಕಾನೂನು ಜಾರಿಗೆ ತರಲು ಮುಂದಾಗಿದೆ” ಎಂದು ಅವರು ಹೇಳಿದ್ದಾರೆ.
“ಈಗ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತಂದಿದ್ದೀರಿ. ಆಯ್ತಪ್ಪಾ ನಾನು ದನದ ಮಾಂಸ ತಿನ್ನುತ್ತೇನೆ. ನೀನು ಯಾವನಯ್ಯ ನನ್ನನ್ನು ಕೇಳೋಕೆ. ನೀನು ತಿನ್ನು ಎಂದು ನಾನು ನಿನ್ನನ್ನು ಬಲವಂತ ಮಾಡುವುದಿಲ್ಲ. ನನ್ನ ಆಹಾರ ನನ್ನ ಇಷ್ಟ. ನನ್ನ ಹಕ್ಕು. ಅದನ್ನು ಕೇಳಲು ನೀನು ಯಾರು ಎಂಬುದನ್ನು ಹೇಳಲು ಹೆಚ್ಚು ಧೈರ್ಯ ಬೇಕಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಒಂದೇ ಒಂದು ಉದಾಹರಣೆಯಿಲ್ಲದ ಆರೆಸ್ಸೆಸ್ ನಮಗೆ ದೇಶಪ್ರೇಮ ಪಾಠ ಮಾಡಲು ಬರುತ್ತಿದೆ. ಅವರು ಬ್ರಿಟಿಷರಿಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಪತ್ರ ಬರೆದುಕೊಡುವುದನ್ನೇ ದೇಶಪ್ರೇಮ ಅಂದುಕೊಂಡವರು. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ನಡುವೆ ಒಳಒಪ್ಪಂದ ಆಗಿತ್ತು- ಜೆಡಿಎಸ್ ಶಾಸಕ


