ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಶನಿವಾರ ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, “ರಾಜ್ಯದ ಜನರ ಜೀವನದ ಜೊತೆ ಆಟವಾಡುತ್ತಿರುವ, ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತವನ್ನು ಬೆಂಬಲಿಸಲು ಬೇಸರವಾಗುತ್ತಿದೆ” ಎಂದು ಹೇಳಿದ್ದಾರೆ.
ಜನ ಸುರಾಜ್ ಪಕ್ಷದ ಸಂಸ್ಥಾಪಕ ಮತ್ತು ನಿತೀಶ್ ಕುಮಾರ್ ಅವರ ಕಟ್ಟಾ ರಾಜಕೀಯ ವಿರೋಧಿ ಪ್ರಶಾಂತ್ ಕಿಶೋರ್ ಅವರನ್ನು “ಬಿಹಾರ ರಾಜಕೀಯದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ” ಎಂದು ಹೊಗಳಿದ ಬೆನ್ನಲ್ಲೇ ಚಿರಾಗ್ ಪಾಸ್ವಾನ್ ನಿತೀಶ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಗಯಾದಲ್ಲಿ ರ್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಸ್ವಾನ್, “ಆಡಳಿತವು ಅಪರಾಧಿಗಳ ಮುಂದೆ ತಲೆಬಾಗುತ್ತಿರುವಂತೆ ತೋರುತ್ತಿರುವುದರಿಂದ ಜನರು ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಕೊಲೆ, ದರೋಡೆ, ಅಪಹರಣ ಮತ್ತು ಅತ್ಯಾಚಾರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದ ಅವರು, ಏಕೆ ಇಂತಹ ಅಪರಾಧಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಬಿಹಾರದ ಜನರು ಸುರಕ್ಷಿತವಾಗಿಲ್ಲ. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತಿಲ್ಲ. ಆಡಳಿತವು ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಪಾಸ್ವಾನ್ ದೂರಿದ್ದು, ಹೆಚ್ಚುತ್ತಿರುವ ಅಪರಾಧಗಳಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಅಪರಾಧಿಗಳು ತಮ್ಮ ಇಚ್ಛೆಯಂತೆ ಜನರನ್ನು ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲಿ ಹೊಡೆಯುತ್ತಿದ್ದಾರೆ. ಇದು ನನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಸಂಬಂಧಿಸಿದೆ. ಇದು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ. ಬಂಧನಗಳನ್ನು ಮಾಡಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗಿದೆ. ಆದರೆ, ಇಂತಹ ಅಪರಾಧ ಘಟನೆಗಳನ್ನು ಕಡಿಮೆಯಾಗುತ್ತಿಲ್ಲ ಎಂಬುದು ಪ್ರಶ್ನೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.


