ದಲಿತ ಸಮುದಾಯದ ವಿದ್ಯಾರ್ಥಿಗಳ ಮೇಲೆ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಮತ್ತು ಕಿರುಕುಳದ ವಿರುದ್ಧ ‘ರೋಹಿತ್ ಕಾಯ್ದೆ’ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಇಂದು ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಮಾಲೋಚನಾ ಸಭೆ ನಡೆಯಿತು.
ದೇಶದಾದ್ಯಂತ ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಹಲವು ವಿದ್ಯಾರ್ಥಿ ಹಾಗೂ ದಲಿತ ಸಂಘಟನೆಗಳು ಹಕ್ಕೊತ್ತಾಯ ಮಾಡಿದ್ದು, ಕರ್ನಾಟಕದಲ್ಲಿಯೂ ದಲಿತ, ವಿದ್ಯಾರ್ಥಿ ಮತ್ತು ನಾಗರಿಕ ಸಮಾಜದ ಹಲವಾರು ಸಂಘಟನೆಗಳು ದಲಿತ ಮತ್ತು ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಜಾತಿ ತಾರತಮ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒಕ್ಕೋರಲಿನಿಂದ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾತಿ ವಿರೋಧಿ ಕಾರ್ಯಕರ್ತರಾದ ರಾಧಿಕಾ ವೇಮುಲ, “ಶಾಂತ ಸ್ವಭಾವದ, ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ತಮ್ಮ ಮಗ ರೋಹಿತ್ ವೇಮುಲ ಹೀಗೆ ಒಂದು ದಿನ ಕಣ್ಮರೆಯಾಗುತ್ತಾನೆ ಎಂದು ಊಹಿಸಿರಲಿಲ್ಲ” ಎಂದು ಕಣ್ಣೀರಾದ ಅವರು, ದಲಿತ ವಿದ್ಯಾರ್ಥಿಗಳು ಸಾಂಸ್ಥಿಕವಾಗಿ ಹೇಗೆ ತಾರತಮ್ಯಕ್ಕೆ ಒಳಗಾಗಿದ್ದರೆ ಎಂಬುದನ್ನು ವಿವರಿಸಿದರು.
“ಐಐಎಂ-ಬಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಪ್ರೊ.ಗೋಪಾಲ ದಾಸ್‌ರವರ ಜೊತೆಗೆ ನಾವಿದ್ದೇವೆ. ಬಿಜೆಪಿ ಪಕ್ಷದಲ್ಲಿರುವ ದಲಿತ ವಿರೋಧಿ ಜನರಿಂದ ನನಗೆ ಈವರೆಗೂ ನ್ಯಾಯ ದೊರಕಿಲ್ಲ. ಜಾತಿ ನಿರ್ಮೂಲನೆಗಾಗಿ ನಾನು ನನ್ನ ಹೋರಾಟವನ್ನು ಹೀಗೆ ನಿರಂತರವಾಗಿ ಮುಂದುವರೆಸುತ್ತೇನೆ. ಏಕೆಂದರೆ, ನಾನು ಅನುಭಸಿದ ನೋವನ್ನು ಬೇರಾವ ತಾಯಿಯು ಅನುಭವಿಸಬಾರದು” ಎಂದು ಭಾವುಕರಾದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, “ಮೂಲಭೂತ ಹಕ್ಕುಗಳಿಗಾಗಿ ನಡೆಯುತ್ತಿರುವ ಜನರ ಆಂದೋಲನಗಳ ಬಗ್ಗೆ ಒಕ್ಕೂಟ ಸರ್ಕಾರ ಅಸಹಿಸ್ಣುತೆಯಿಂದ ನಡೆದುಕೊಳ್ಳುತ್ತಿದೆ” ಎಂದರು.
“ಬಿಜೆಪಿ ಸರ್ಕಾರದ ಕೋಮುವಾದಿ ಅಜೆಂಡಾದ ಫಲವಾಗಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ನಾಶವಾಗುತ್ತಿದೆ. ಈ ಹಿಂದೆ, ಸಿದ್ದರಾಮಯ್ಯ ಅವರ ಸರ್ಕಾರ ಮೂಢನಂಬಿಕೆಗಳ ವಿರುದ್ಧ ಕರಡು ಕಾಯ್ದೆಯನ್ನು ತಂದಿದ್ದರು. ಆದರೆ, ಅದು ಕಾನೂನಾಗಲಿಲ್ಲ. ಅದೇ ರೀತಿ, ಡಾ.ಸಿದ್ಧಲಿಂಗಯ್ಯ ರವರು ಅಂತರ್ಜಾತಿ ವಿವಾಹವಾದ ದಂಪತಿಗಳ ಮಕ್ಕಳಿಗೆ ಮೀಸಲಾತಿ ತರಬೇಕೆಂದು ಒತ್ತಾಯಿಸಿದ್ದರು. ಆದರೆ, ಅದು ಸಹ ಜಾರಿಯಾಗಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ದಲಿತ ಮಹಿಳೆಯರು ಮಾಡುವ ಮಧ್ಯಾಹ್ನದ ಬಿಸಿ ಊಟವನ್ನು ಮಕ್ಕಳು ನಿರಾಕರಿಸುವಂತೆ ಈ ಜಾತಿ ವ್ಯವಸ್ಥೆಯು ಅವರಿಗೆ ಹೇಳಿಕೊಡುತ್ತದೆ. ಜಾತಿವಾದವು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಷ್ಟು ವ್ಯಾಪಕವಾಗಿದ್ದರೆ, ಇದರ ವಿರುದ್ಧ ಹೋರಾಡಲು ರೋಹಿತ್ ಕಾಯ್ದೆಯಂತಹ ವಿಶೇಷ ಕಾನೂನಿನ ಅಗತ್ಯವಿದೆ” ಎಂದು ಆಗ್ರಹಿಸಿದರು.

ರೋಹಿತ್ ವೆಮುಲಾ ಸಹಪಾಠಿಯಾದ ದೋಂತ ಪ್ರಶಾತ್ ರವರು ಮಾತನಾಡಿ, “ವಿನಾಕಾರಣ ಮೂರು ಬಾರಿ ರೋಹಿತ್ ವೇಮುಲ ಮತ್ತು ಅವರ ಮೂರು ಜನ ಸ್ನೇಹಿತರನ್ನು ಶಿಕ್ಷೆಗೆ ಒಳಪಡಿಸಿ, ಎಲ್ಲರ ಮೇಲೂ ಸಾಮಾಜಿಕ ಬಹಿಷ್ಕಾರ ಹೇರಿದ್ದರು” ಎಂದರು.
“ನಮ್ಮನ್ನು ‘ಗೂಂಡಾಗಳು’ ಎಂದು ಕರೆಯುತ್ತಿದ್ದರು, ದೇಶದಾದ್ಯಂತ ದಲಿತರನ್ನು ಇದೇ ರೀತಿ ಅವಮಾನಿಸುತ್ತಾರೆ, ಇದು ನಮ್ಮ ಘನತೆಗೆ ಧಕ್ಕೆಯುಂಟು ಮಾಡುವ ವಿಷಯ. ವಿಶ್ವವಿದ್ಯಾಲಯಗಳು ವ್ಯವಸ್ಥಿತವಾಗಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳನ್ನು ಬೇರ್ಪಡಿಸುತ್ತಿವೆ. ಇದಕ್ಕಾಗಿಯೇ ರೋಹಿತ್ ಕಾಯ್ದೆಯ ಅಗತ್ಯವಿದೆ” ಎಂದರು.
ಪ್ರಗತಿಪರ ಚಿಂತಕರು ಹಾಗು ಬರಹಗಾರರಾದ ವಿಕಾಸ್ ಮೌರ್ಯ ಮಾತನಾಡಿ, “ಸರ್ಕಾರ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಷ್ಟು ಜನ ಎಸ್‌ಸಿ/Sಎಸ್‌ಟಿ ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ಮಂಡಿಸಿದರು. ಆದರೆ, ಇದನ್ನು ತಡೆಯಲು ಏನು ಮಾಡಬೇಕು ಎಂದು ಮಾತ್ರ ಸರ್ಕಾರ ಯೋಚಿಸುತ್ತಿಲ್ಲ. ಭಾರತದಲ್ಲಿ ಬ್ರಾಹ್ಮಣವಾದ ಹಾಗೂ ಬಂಡವಾಳಶಾಹಿ ಪದ್ದತಿ ಎರಡು ಸೇರಿ ದಲಿತ ಬಹುಜನ ವಿಧ್ಯಾರ್ಥಿಗಳನ್ನು ಮೂಲೆಗುಂಪು ಮಾಡುತ್ತಿದೆ. ಸ್ವಾತಂತ್ರ್ಯ ಸಿಕ್ಕಿ ಇಷ್ಟು ದಶಕಗಳ ನಂತರವೂ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಷ್ಡೊಂದು ಅಸಮಾನತೆ ಹಾಗೂ ತಾರತಮ್ಯ ಇರುವುದು ಬೇಸರದ ವಿಷಯ” ಎಂದರು.
ಆಲ್ ಇಂಡಿಯಾ ವಿಧ್ಯಾರ್ಥಿ ಸಂಘಟನೆಯ ಲೇಖಾ ಅಡವಿ ಅವರು ಮಾತನಾಡಿ, ” ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯವನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಇಂದು ಜಾತಿ ತಾರತಮ್ಯದಿಂದ ದಲಿತ ವಿಧ್ಯಾರ್ಥಿಗಳಿಗೆ ಕಾಲೇಜು ಪ್ರವೇಶಿಸುವುದು ಕಷ್ಟವಾಗಿದೆ. ಕಾಲೇಜು ಸೇರಿಕೊಂಡ ಮೇಲೆ ಅಲ್ಲಿ ತಾರತಮ್ಯ ಎದುರಿಸುತಿದ್ದಾರೆ, ಕೆಲವರಿಗೆ ತಮ್ಮ ಓದು ಮುಂದುವರಿಸಲಾಗುತ್ತಿಲ್ಲ. ಈ ತಾರತಮ್ಯ ಹಾಗೂ ಮಾನಸಿಕ ಹಿಂಸೆ ತಡೆಯಲಾರದೆ ಕೆಲ ವಿಧ್ಯಾರ್ಥಿಗಳು ತಮ್ಮ ಪ್ರಾಣತ್ಯಾಗ ಮಾಡುತಿದ್ದಾರೆ. ಹಾಗಾಗಿ, ನಾವು ಹಲವು ಸಂಘಟನೆಗಳು ಸೇರಿ ರೋಹಿತ್ ಕಾಯ್ದೆಗಾಗಿ ಜನಾಂದೋಲನದ ಅಡಿಯಲ್ಲಿ ಬಂದಿದ್ದೇವೆ. ರೋಹಿತ್ ಕಾಯ್ದೆಯು, ಜಾತಿ ತಾರತಮ್ಯ ತಡಿಯುವುದಲ್ಲದೆ , ಎಸ್‌ಸಿ/ಎಸ್‌ಟಿ ವಿಧ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ,ಕಾಲೇಜುಗಳಲ್ಲಿ ಅಕ್ಯಾಡೆಮಿಕ್ ಬೆಂಬಲ ಸಹ ನೀಡಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೋಹಿತ್ ವೇಮುಲಾರ ತಾಯಿ ರಾಧಿಕಾ ವೇಮುಲ, ರಾಜ ವೇಮುಲ, ದಲಿತ ಸಂಘರ್ಷ ಸಮಿತಿಯ ನಾಯಕರಾದ ಮಾವಳ್ಳಿ ಶಂಕರ್, ದೊಂತ ಪ್ರಶಾಂತ್, ಲೇಖಕರಾದ ವಿಕಾಸ್ ಆರ್ ಮೌರ್ಯ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸ್ಸೋಸಿಟೇಷನ್ (ಎಐಎಸ್‌ಎ) ನ ಲೇಖ ಅಡವಿ ಉಪಸ್ಥಿತರಿದ್ದರು.
ಇದನ್ನೂ ಓದಿ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ


