ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳ ವಿರುದ್ದ ಕೋಲ್ಕತ್ತಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ಗುರುವಾರ (ಜ.15) ತಡೆ ನೀಡಿದೆ. ಇದರಿಂದ ಇಡಿ ವಿರುದ್ದ ಸಮರ ಸಾರಿದ್ದ ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹಿನ್ನೆಡೆಯಾಗಿದೆ.
ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥನ ಮನೆ ಮೇಲಿನ ದಾಳಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಇಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ವಿಪುಲ್ ಪಾಂಚೋಲಿ ಅವರಿದ್ದ ಪೀಠ, “ಪ್ರಸ್ತುತ ಇಡಿ ಅಥವಾ ಇತರ ಕೇಂದ್ರ ಸಂಸ್ಥೆಗಳ ತನಿಖೆ ಮತ್ತು ರಾಜ್ಯ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯನ್ನು ಎತ್ತಿದೆ ಎಂದು ನಾವು ಮೇಲ್ನೋಟಕ್ಕೆ ಭಾವಿಸುತ್ತೇವೆ. ಇಡಿ ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸದಿದ್ದರೆ ದೇಶದಲ್ಲಿ ಕಾನೂನುಬಾಹಿರತೆ ಉಂಟಾಗುತ್ತದೆ” ಎಂದು ಹೇಳಿದೆ.
“ನಮ್ಮ ಅಭಿಪ್ರಾಯದ ಪ್ರಕಾರ, ದೇಶದಲ್ಲಿ ಕಾನೂನಿನ ಆಳ್ವಿಕೆಯನ್ನು ಕಾಪಾಡಲು ಮತ್ತು ಪ್ರತಿ ಸಂಸ್ಥೆ/ಅಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಮತಿಸಲು, ಈ ವಿಷಯವನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಇದರಿಂದ ಅಪರಾಧಿಗಳು ಒಂದು ನಿರ್ದಿಷ್ಟ ರಾಜ್ಯದ ಕಾನೂನು ಜಾರಿ ಮಾಡುವ ಏಜೆನ್ಸಿಗಳ ರಕ್ಷಣೆಯ ಕವಚದಡಿ ಸಂರಕ್ಷಣೆ ಪಡೆಯದಂತೆ ಮಾಡಬೇಕು” ಎಂದು ಕೋರ್ಟ್ ತಿಳಿಸಿದೆ.
ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಸೇರಿದಂತೆ ಇತರರನ್ನು ಅಮಾನತುಗೊಳಿಸುವಂತೆ ಕೋರಿ ಇಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ತನಿಖೆಗೆ ಅಡ್ಡಿಪಡಿಸಲು ಮತ್ತು ಸಾಕ್ಷ್ಯ ಕಳ್ಳತನಕ್ಕೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ, ಡಿಜಿಪಿ ಕುಮಾರ್ ಸೇರಿದಂತೆ ಪಶ್ಚಿಮ ಬಂಗಾಳದ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೋರಿ ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಿದೆ.
“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಾಳಿ (ಇಡಿ ಶೋಧ ಅಥವಾ ಪರಿಶೀಲನೆ) ನಡೆಯುತ್ತಿದ್ದ ಸ್ಥಳಕ್ಕೆ ಬಂದು ನಿಂತಿದ್ದರು. ಅವರು ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ನಮ್ಮ ಅಧಿಕಾರಿಗಳನ್ನು ಭಯಭೀತಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಂದರೆ, ಅಧಿಕಾರಿಗಳು ಭಯಪಟ್ಟು ಅಥವಾ ಒತ್ತಡಕ್ಕೆ ಒಳಗಾಗಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದು ನಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಗಂಭೀರವಾಗಿ ಹಾನಿಗೊಳಿಸಿದೆ” ಇಡಿ ತನ್ನ ಅರ್ಜಿಯಲ್ಲಿ ಹೇಳಿದೆ.
ಈ ಪ್ರಕರಣದ ತನಿಖೆಯನ್ನು ಕೇಂದ್ರದ ಸ್ವತಂತ್ರ ತನಿಖೆಯಾದ ಸಿಬಿಐನಿಂದ ಮಾಡಿಸಬೇಕು. ಕೋಲ್ಕತ್ತಾ ಪೊಲೀಸರು ಮಮತಾ ಬ್ಯಾನರ್ಜಿ ಸರ್ಕಾರದ ಅಧೀನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಡಿ ಮನವಿ ಮಾಡಿದೆ.
ದಾಳಿಯ ವೇಳೆ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳ ವಿರುದ್ದ ಪಶ್ಚಿಮ ಬಂಗಾಳದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರ ಕೇವಿಯಟ್ ಸಲ್ಲಿಸಿದೆ. ತನ್ನ ವಾದವನ್ನು ಆಲಿಸಿದೆ ಆದೇಶಗಳನ್ನು ನೀಡದಂತೆ ಕೋರಿದೆ.


