ಪ್ರಕಾಶ್ ರಾಜ್ ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ ಮಾತ್ರವಲ್ಲ, ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದಿದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ಗೆ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.
ವಿಡಿಯೋ ಮೂಲಕ ಮಾತನಾಡಿರುವ ಪ್ರಕಾಶ್ ರಾಜ್, “ಇದು ಕರ್ನಾಟಕದ ದೇವನಹಳ್ಳಿಯ ರೈತರ ಸಮಸ್ಯೆ. ಹಾಗಾಗಿ, ದೇವನಹಳ್ಳಿಯಲ್ಲೇ ಹೋರಾಟ ಮಾಡ್ಬೇಕು. ನೀವು ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದಿದ್ದೀರಿ. ನಾವು ಅಲ್ಲೆಲ್ಲ ಹೋರಾಟ ಮಾಡಿದ್ದೇವೆ” ಎಂದಿದ್ದಾರೆ.
“ತಮಿಳುನಾಡಿನಲ್ಲಿ ರೈತರು 100 ದಿನಗಳ ಹೋರಾಟ ಹಮ್ಮಿಕೊಂಡಾಗ ದೆಹಲಿಯಲ್ಲಿ ಕೂತವನು ನಾನೇ. ಪಂಜಾಬ್, ಹರಿಯಾಣದ ರೈತರು ಹೋರಾಟ ಮಾಡಿದಾಗಲೂ ಇದ್ದವನು ನಾನೇ. ನಾವು ಎಲ್ಲಾ ಕಡೆನೂ ಮಾತನಾಡ್ತೀವಿ. ನಾವು ಮಣಿಪುರದಲ್ಲಿ ಅನ್ಯಾಯವಾದಗಲೂ ಮಾತನಾಡ್ತೀವಿ, ಪ್ಯಾಲೆಸ್ತೀನಲ್ಲಿ ಅನ್ಯಾಯವಾದಗಲೂ ಮಾತನಾಡ್ತೀವಿ ಎಂದು ಹೇಳಿದ್ದಾರೆ.
ಗುಜರಾತಿನ ಗುಜರಾತಿ ಮಹಾಪ್ರಭು ಪ್ರಧಾನಿಯವರನ್ನು ನಿಮಗಿಂತ ಹೆಚ್ಚು ಪ್ರಶ್ನೆ ಮಾಡಿದವನು ನಾನೇ. ಆಯಾ ಹೋರಾಟಗಳಲ್ಲಿ ಮಾಡ್ತಾ ಇರ್ತೀವಿ. ಏಕೆಂದರೆ, ನಾವು ಯಾವ ಪಕ್ಷದವರೂ ಅಲ್ಲ, ಜನರ ಪಕ್ಷದವರು. ನೀವು ಒಂದು ಪಕ್ಷದವರು, ನಾವು ಜನರ ಪಕ್ಷದವರು. ಹಾಗಾಗಿ, ಜನರಿಗೆ ಎಲ್ಲೇ ಸಮಸ್ಯೆ ಆದರೂ ಮಾತನಾಡೋದು ನಮ್ಮ ಕರ್ತವ್ಯ. ಅದು ಹೋರಾಟ, ಅದು ನಿಮಗೆ ಅರ್ಥವಾಗಲ್ಲ ಬಿಡಿ ಎಂದಿದ್ದಾರೆ.
ದೇವನಹಳ್ಳಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದು ನಾವು ಜನಪರ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಇದ್ದೀವಿ. ಆದರೆ, ಅದರಲ್ಲಿ ಕಾನೂನಿನ ತೊಡಕಿದೆ. ಹಾಗಾಗಿ, 15ನೇ ತಾರೀಖು ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ. ಹಾಗಾಗಿ, ನೀವು ಅದರ ಬಗ್ಗೆ ಯೋಚನೆ ಮಾಡಿ. ಹೇಗೆ ಕಾನೂನು ತೊಡಕು ನಿವಾರಿಸಬಹುದು, ಜನರ ಕಷ್ಟಗಳನ್ನು ಹೇಗೆ ಪರಿಹರಿಸಬಹುದು ಎಂದು ಯೋಚಿಸಿ ಎಂದು ಹೇಳಿದ್ದಾರೆ.
ಈ ನಡುವೆ ದೇವನಹಳ್ಳಿಯಲ್ಲಿ ಒಂದಿಷ್ಟು ಕಿಡಿಗೇಡಿಗಳು ಹೋಗಿ, ನಿಮಗೆ ಮೂರು ಕೋಟಿ ಕೊಡ್ತೀವಿ. ಸರ್ಕಾರದಿಂದ ಕಾನೂನು ಪ್ರಕಾರ ಕೊಡುವಾಗ ತುಂಬಾ ಲೇಟ್ ಆಗುತ್ತೆ ಎಂದು ಹೇಳಿ ರೈತರ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಇಡೀ ಪ್ರದೇಶವನ್ನು ಹಸಿರು ವಲಯ ಮಾಡ್ತೀವಿ. ಇನ್ನು 25 ವರ್ಷ ನೀವು ಮಾರೋದಕ್ಕೆ ಆಗಲ್ಲ ಎಂದು ರೈತರನ್ನು ಬೆದರಿಸುತ್ತಿದ್ದಾರಂತೆ. ಅವರೇನಾದರು ನಿಮಗೆ ಪರಿಚಯ ಇದ್ದರೆ ಈ ರೀತಿಯೆಲ್ಲ ಮಾಡ್ಬೇಡಿ ಎಂದು ಹೇಳಿ. ಏಕೆಂದರೆ, ಎಲ್ಲದಕ್ಕೂ ಕಾನೂನು ರೀತಿ ಒಂದು ಪರಿಹಾರ ಇದ್ದೇ ಇರುತ್ತದೆ ಎಂದಿದ್ದಾರೆ.
ನೀವು 15ನೇ ತಾರೀಖಿನ ಸಭೆಯಲ್ಲಿ ಕುಳಿತು ಮಾತನಾಡಿ. ಅಲ್ಲಿ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ, ನಮ್ಮತ್ರ ಬನ್ನಿ. ನಮ್ಮ ಬಳಿಯೂ ನ್ಯಾಯ ತಜ್ಞರು ಇದ್ದಾರೆ. ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಇದ್ದಾರೆ. ಅವರು ಯಾರು ಗೊತ್ತಾ ಪಶ್ಚಿಮ ಬಂಗಾಳದಲ್ಲಿ 1 ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು ರೈತರಿಗೆ ಕೊಡಬೇಕೆಂದು ಐತಿಹಾಸಿಕ ತೀರ್ಪು ಕೊಟ್ಟವರು. ಸಂವಿಧಾನ ಗೊತ್ತಿರುವವರು. ನಿಮಗೇನಾದರು 15ನೇ ತಾರೀಖು ಒಳಗಡೆ ಸಮಸ್ಯೆ ಇತ್ಯರ್ಥ ಆಗದಿದ್ದರೆ, ಬಂದು ಕೇಳಿ ಅದನ್ನೂ ಹೇಳ್ತೀವಿ. ಜನರಿಂದ ಆಯ್ಧ ಪ್ರತಿನಿಧಿ ನೀವು, ಜನಪರವಾಗಿ ಜವಾಬ್ದಾರಿಯಿಂದ ಇರಿ. 15ನೇ ತಾರೀಖು ಸಿಗೋಣ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಭೂ ಸ್ವಾಧೀನ ವಿರೋಧಿ ಹೋರಾಟ: ಚನ್ನರಾಯಪಟ್ಟಣಕ್ಕೆ ಜಗಜಿತ್ ಸಿಂಗ್ ದಲ್ಲೆವಾಲ್ ಭೇಟಿ


