ರೈತರ ವಿರುದ್ಧ ಹಾಡುಗಳನ್ನು ಬರೆಯದ ಕಾರಣಕ್ಕಾಗಿ ಹರ್ಯಾಣ ಸರಕಾರದ ವಿಶೇಷ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ತನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದಾರೆ ಎಂದು ಸ್ವತಃ ರಾಕಿ ಮಿತ್ತಲ್( ಜೈ ಭಗವಾನ್) ಸ್ಪಷ್ಟನೆ ನೀಡಿದ್ದಾರೆ. ವಿಶೇಷ ಪ್ರಚಾರ ಸಮಿತಿಯ ಅಧ್ಯಕ್ಷಾಗಿದ್ದ ಅವರನ್ನು ಸೋಮವಾರದಂದು ಹರ್ಯಾಣ ಸರಕಾರ ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ಅಧಿಕಾರದಿಂದ ವಜಾ ಮಾಡಿತ್ತು.
ಹರ್ಯಾಣದ ಮಾಹಿತಿ, ಸಾರ್ವಜನಿಕ ಸಂಪರ್ಕ ಮತ್ತು ಭಾಷೆ ವಿಭಾಗದ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿರುವ ಧೀರ ಖಂಡೇಲ್ವಾಲ್ ಎಂಬವರು ರಾಕಿ ಮಿತ್ತಲ್ ಅವರನ್ನು ವಿಶೇಷ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ವಜಾ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಕಾರಣ ನೀಡಿರಲಿಲ್ಲ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ್ದ ಟ್ರೂಡೊ: ಭಾರತ-ಕೆನಡಾ ರಾಜಕೀಯ ಸಂಬಂಧದಲ್ಲಿ ಬಿರುಕು!
“ಡಿಸೆಂಬರ್ 4 ರಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೋರ್ವರನ್ನು ಭೇಟಿಯಾಗಲು ತೆರಳಿದ್ದ ವೇಳೆ, ಅವರು ’ರೈತ ಆಂದೋಲನದ ವಿರುದ್ಧ ಹಾಡೊಂದನ್ನು ರಚಿಸು’ ಎಂದಿದ್ದರು. ನಾನೊಬ್ಬ ರೈತ ಹಾಗೂ ಮಧ್ಯವರ್ತಿಯೂ ಆಗಿರುವುದರಿಂದ ನನ್ನಿಂದ ರೈತರ ವಿರುದ್ಧ ಹಾಡು ರಚಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾಗಿ ಅವರು ಹೇಳಿದ್ದಾರೆ.
“ಹಾಡು ರಚಿಸಿ, ಆ ಹಾಡಿನ ಮುಖಾಂತರ ರೈತರಿಗೆ ಮತ್ತು ಮಧ್ಯವರ್ತಿಗಳಿಗೆ ಸರಕಾರದ ನೂತನ ಕೃಷಿ ಕಾಯ್ದೆಯು ನಿಮಗೆ ಲಾಭವನ್ನೇ ತರುತ್ತದೆ ಎಂದು ಪೊಳ್ಳು ಮನವರಿಕೆ ಮಾಡಿಸಬೇಕಿತ್ತು. ನನ್ನ ತಂದೆ ಓರ್ವ ದಲ್ಲಾಳಿಯಾಗಿದ್ದರು ಮತ್ತು ನಮ್ಮದು ರೈತ ಕುಟುಂಬ. ನಾನು ಓಲೈಕೆಗೆ ಮಣಿದು ನಮ್ಮವರ ಬೆನ್ನಿಗೆ ಚೂರಿ ಇರಿಯಲು ಹೇಗೆ ಸಾಧ್ಯ? ನಾನು ರೈತರ ವಿರುದ್ಧ ಹಾಡು ರಚಿಸದ್ದು ನನ್ನ ತಪ್ಪೇ? ಪ್ರಧಾನಿ ನರೇಂದ್ರ ಮೋದಿಯ ಪರ ಹಾಡು ರಚಿಸುವುದಕ್ಕಾಗಿ ನನಗೆ ತಿಂಗಳಿಗೆ ಒಂದು ಲಕ್ಷ ರೂ. ವೇತನ ನೀಡಲಾಗುತ್ತಿತ್ತು” ಎಂದು ರಾಕಿ ಮಿತ್ತಲ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಕಿ ಮಿತ್ತಲ್ 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯ ಪರವಾಗಿ ಹಾಡುಗಳನ್ನು ರಚಿಸಿದ ಬಳಿಕ ‘ಮೋದಿ ಭಗತ್’ ಎಂದೇ ಪ್ರಸಿದ್ಧರಾಗಿದ್ದರು. ಅವರನ್ನು ವಜಾ ಮಾಡಿರುವ ಕುರಿತು ಬಿಜೆಪಿಯ ಪ್ರಮುಖ ನಾಯಕರಲ್ಲಿ ಪ್ರಶ್ನಿಸಿದ್ದು, ಅವರು ’ನಮಗೆ ಅದರ ಅರಿವಿಲ್ಲ’ ಎಂದಿದ್ದಾರೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ರೈತರು ವಿಷ ಸೇವಿಸಿದಾಗ ಕಾಳಜಿ ವಹಿಸದವರು ಪಿಜ್ಜಾ ತಿನ್ನುವಾಗ ಟೀಕೆ ಮಾಡುತ್ತಾರೆ – ದಿಲ್ಜಿತ್ ದೋಸಾಂಜ್


