ತನ್ನ ಅಪ್ರಬುದ್ಧ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, ಕೇಂದ್ರ ಸರ್ಕಾರ ರದ್ದು ಮಾಡಿರುವ ಮೂರು ಕೃಷಿ ಕಾನೂನುಗಳ ಕುರಿತ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಇಂದು ಘೋಷಿಸಿದ್ದಾರೆ.
“ರದ್ದಾದ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ಮತ್ತೆ ಜಾರಿ ಮಾಡಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದ ಕಂಗನಾ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಆಕೆಯ ಹೇಳಿಕೆಗಳು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ಮಂಡಿ ಲೋಕಸಭಾ ಸಂಸದರು ಸಾರ್ವಜನಿಕ ಕ್ಷಮೆಯಾಚಿಸಿದ್ದು, “ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದರು.
ಕಂಗನಾ ಮಂಗಳವಾರ ನೀಡಿದ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದಯಕೊಂಡಿತ್ತು. ಪಕ್ಷದ ಪರವಾಗಿ ಇಂತಹ ಟೀಕೆಗಳನ್ನು ಮಾಡಲು ಕಂಗನಾ ರನೌತ್ ಅವರಿಗೆ ಅಧಿಕಾರವಿಲ್ಲ ಎಂದು ಹೇಳಿದೆ.
ವೀಡಿಯೊ ಸಂದೇಶ ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, “ಕಂಗನಾ ಅವರ ವೈಯಕ್ತಿಕ ಹೇಳಿಕೆಯು ಕೃಷಿ ಮಸೂದೆಗಳ ಬಗ್ಗೆ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ” ಎಂದು ಹೇಳಿದ್ದಾರೆ.
ಸ್ವಪಕ್ಷದಿಂದಲೇ ಟೀಕೆಗಳನ್ನು ಎದುರಿಸಿದ ನಂತರ, ಬಿಜೆಪಿ ಸಂಸದರು ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. “ನನ್ನ ಹೇಳಿಕೆಯು ಹಲವಾರು ಜನರನ್ನು ನಿರಾಶೆಗೊಳಿಸಿದೆ” ಎಂದು ಹೇಳಿದರು.
“ನಾನು ಇನ್ನು ಮುಂದೆ ಕೇವಲ ನಟಿಯಲ್ಲ, ನಾನು ರಾಜಕಾರಣಿಯೂ ಆಗಿದ್ದೇನೆ. ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರಬಾರದು. ಆದರೆ, ಪಕ್ಷದ ಪ್ರತಿಬಿಂಬವಾಗಿರಬೇಕು” ಎಂದು ಅವರು ಹೇಳಿದ್ದಾರೆ.
“ನನ್ನ ಅಭಿಪ್ರಾಯಗಳು ಮತ್ತು ಮಾತುಗಳಿಂದ ನಾನು ಯಾರನ್ನಾದರೂ ನಿರಾಶೆಗೊಳಿಸಿದ್ದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಾತನ್ನು ನಾನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ, ಪ್ರಧಾನಿಯವರ ತೀರ್ಪಿಗೆ ನಿಲ್ಲುವ ಬಿಜೆಪಿ ಸದಸ್ಯರ ಸಾಮೂಹಿಕ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
Do listen to this, I stand with my party regarding Farmers Law. Jai Hind 🇮🇳 pic.twitter.com/wMcc88nlK2
— Kangana Ranaut (@KanganaTeam) September 25, 2024
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಖಂಡಿತವಾಗಿಯೂ, ರೈತರ ಕಾನೂನುಗಳ ಬಗ್ಗೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ, ಆ ಮಸೂದೆಗಳಲ್ಲಿ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, “ಈ ಹೇಳಿಕೆ ವಿವಾದಾಸ್ಪದವಾಗಬಹುದು ಎಂದು ನನಗೆ ತಿಳಿದಿದೆ. ಆದರೆ, ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ತರಬೇಕು. ರೈತರೇ ಅದನ್ನು ಒತ್ತಾಯಿಸಬೇಕು” ಎಂದು ಮಂಗಳವಾರ ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು.
ಮೂರು ಕಾನೂನುಗಳು ರೈತರಿಗೆ ಪ್ರಯೋಜನಕಾರಿ. ಆದರೆ, ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರವು ಅದನ್ನು ರದ್ದುಗೊಳಿಸಿದೆ ಎಂದು ಅವರು ವಾದಿಸಿದರು.
“ರೈತರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ಅವರ ಒಳಿತಿಗಾಗಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ನಾನು ಅವರಿಗೆ ಮನವಿ ಮಾಡಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಲೋಕಸಭೆಯ ಸಂಸದರ ಟೀಕೆಗಳನ್ನು ಬಿಜೆಪಿ ಖಂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ರೈತರ ಪ್ರತಿಭಟನೆಯ ಕುರಿತು ಕಂಗನಾ ರಣಾವತ್ ಅವರ ಟೀಕೆಗಳಿಂದ ಪಕ್ಷವು ದೂರವಿತ್ತು. ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಹಾಗೂ ಸಂಯಮದಿಂದ ವರ್ತಿಸುವಂತೆ ತಾಕೀತು ಮಾಡಿತ್ತು.
ರೈತ ಪ್ರತಿಭಟನೆಗಳು “ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ” ನಿರ್ಮಾಣವಾಗಿದೆ ಎಂದು ಬಿಜೆಪಿ ಸಂಸದೆ ಆಗ ಹೇಳಿಕೊಂಡಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಮತ್ತು ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ; ಕೃಷಿ ಕಾನೂನು : ಸಂಸದೆ ಕಂಗನಾ ರಣಾವತ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ


