‘ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ನಾನು ವ್ಯಾಪಾರವನ್ನು ಅಸ್ತ್ರವಾಗಿ ಬಳಸಿಕೊಂಡೆ’ ಎಂಬ ಮಾತನ್ನು ಸತತ ನಾಲ್ಕನೇ ದಿನವೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ತಮ್ಮ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ಭೋಜನಕೂಟ ಆಯೋಜಿಸಬೇಕು ಎಂದು ಟ್ರಂಪ್ ಹೊಸ ಸಲಹೆ ನೀಡಿದ್ದಾರೆ.
ಮಂಗಳವಾರ ರಿಯಾದ್‌ನಲ್ಲಿ ಆಯೋಜಿಸಿದ್ದ ಸೌದಿ-ಯುಎಸ್ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, “ಲಕ್ಷಾಂತರ ಜನರನ್ನು ಬಲಿ ಪಡೆಯುವ ಸಾಧ್ಯತೆ ಇದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಅಣ್ವಸ್ತ್ರ ಸಮರವನ್ನು ತಪ್ಪಿಸಲು ನಮ್ಮ ಆಡಳಿತ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸಲು ನೆರವಾಗಿದೆ” ಎಂದಿದ್ದಾರೆ.
Is this man going to contest in Bihar Elections? 😂 pic.twitter.com/njuJ3NQwP7
— Satish Acharya (@satishacharya) May 14, 2025
ಹೂಡಿಕೆ ಸಮಾವೇಶದಲ್ಲಿ ಸೌದಿ ಅರೇಬಿಯಾ ದೊರೆ ಮುಹಮ್ಮದ್ ಬಿನ್ ಸಲ್ಮಾನ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಕದನ ವಿರಾಮಕ್ಕೆ ಒಪ್ಪದಿದ್ದರೆ ವ್ಯಾಪಾರ ನಿಲ್ಲಿಸುತ್ತೇನೆ ಎಂಬುವುದಾಗಿ ಟ್ರಂಪ್ ಬೆದರಿಸಿಲ್ಲ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ. ಆದರೆ, ಟ್ರಂಪ್ ಹೋದಲ್ಲಿ ಬಂದಲ್ಲಿ ನಾನು ವ್ಯಾಪಾರ ನಿಲ್ಲಿಸುವುದಾಗಿ ಹೇಳಿಯೇ ಕದನ ವಿರಾಮಕ್ಕೆ ಒಪ್ಪಿಸಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
“ಪರಮಾಣು ಕ್ಷಿಪಣಿಗಳ ವ್ಯಾಪಾರ ಬೇಡ, ನೀವು ತಯಾರಿಸುವ ಸುಂದರ ವಸ್ತುಗಳನ್ನು ವ್ಯಾಪಾರ ಮಾಡೋಣ. ಎರಡೂ ದೇಶಗಳ ನಾಯಕರು ಬಲಿಷ್ಠರು ಮತ್ತು ಬುದ್ದಿವಂತರು. ಸದ್ಯಕ್ಕೆ ಸಂಘರ್ಷ ನಿಂತಿದೆ. ಅದು ಹಾಗೆಯೇ ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ” ಎಂದು ಭಾರತ-ಪಾಕಿಸ್ತಾನ ಕುರಿತು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ‘ಕದನ ವಿರಾಮ’ಕ್ಕೆ ಒಪ್ಪಿಗೆ ನೀಡುವಲ್ಲಿ ಶ್ರಮಿಸಿದ ವಿದೇಶಾಂಗ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರುಬಿಯೊ ಹಾಗೂ ಇತರರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.
ನಮ್ಮ ಮಧ್ಯಸ್ಥಿಕೆಯಿಂದ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿತು ಎಂದು ಶನಿವಾರ, ಭಾನುವಾರ ಮತ್ತು ಸೋಮವಾರ ಟ್ರಂಪ್ ಹೇಳಿದ್ದರು. ಸತತ ನಾಲ್ಕನೇ ದಿನವೂ ಮಂಗಳವಾರ ಅದನ್ನು ಪುನರುಚ್ಚರಿಸಿದ್ದಾರೆ.
ಆದರೆ, ಟ್ರಂಪ್ ಹೇಳಿಕೆಗಳ ಕುರಿತು ಮಂಗಳವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯ “ಪಾಕಿಸ್ತಾನ ಜೊತೆಗಿನ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಾಯಕತ್ವ ಸಂಪರ್ಕದಲ್ಲಿತ್ತು. ಆದರೆ, ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.


