ಬೀದಿ ನಾಯಿಗಳಿಗೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆಗಾಗಿ ಬುಧವಾರ (ಆ.13) ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ನೇತೃತ್ವದ ಪೀಠದ ಮುಂದೆ ಪ್ರಸ್ತಾಪಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ. “ನಾನು ಈ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಅರ್ಜಿದಾರರಿಗೆ ಭರವಸೆ ನೀಡಿದರು.
ಕಾನ್ಫರೆನ್ಸ್ ಫಾರ್ ಹ್ಯೂಮನ್ ರೈಟ್ಸ್ (ಇಂಡಿಯಾ) ಸಂಸ್ಥೆಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠದ ಮುಂದೆ ಸಂಸ್ಥೆಯ ಪರ ವಕೀಲ ಪ್ರಸ್ತಾಪಿಸಿದರು. ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು ಈಗಾಗಲೇ ಆದೇಶವನ್ನು ನೀಡಿದೆ ಎಂದು ಸಿಜೆಐ ಗಮನಸೆಳೆದರು.
ಆಗಸ್ಟ್ 11ರಂದು, ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, “ನಾಯಿ ಕಡಿತದ ಪ್ರಕರಣಗಳು ‘ಅತ್ಯಂತ ಭೀಕರ’ ಪರಿಸ್ಥಿತಿಗೆ ಕಾರಣವಾಗಿವೆ ಎಂದಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ‘ಸಾಧ್ಯವಾದಷ್ಟು ಬೇಗ’ ಶಾಶ್ವತವಾಗಿ ಸ್ಥಳಾಂತರಿಸಲು ಆದೇಶಿಸಿತ್ತು.
ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಹೈಕೋರ್ಟ್‌ಗಳಿಗೆ ವರ್ಗಾಯಿಸಿ ನ್ಯಾಯಮೂರ್ತಿ ಜೆ.ಕೆ ಮಹೇಶ್ವರಿ ನೇತೃತ್ವದ ಪೀಠವು ಮೇ 2024ರಲ್ಲಿ ಹೊರಡಿಸಿದ ಆದೇಶವನ್ನು ಬುಧವಾರ ವಕೀಲರು ಸಿಜೆಐ ಪೀಠದ ಮುಂದೆ ಉಲ್ಲೇಖಿಸಿದರು. ‘ಈ ಬಗ್ಗೆ ನಾವು ಪರಿಶೀಲಿಸುತ್ತೇವೆ’ ಎಂದು ಸಿಜೆಐ ಹೇಳಿದರು.
ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ನಿಯಂತ್ರಿಸಲು ನಿಯಮಿತ ಸಂತಾನಹರಣ ಮತ್ತು ರೋಗನಿರೋಧಕ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸುವ 2001ರ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಕಾನ್ಫರೆನ್ಸ್ ಫಾರ್ ಹ್ಯೂಮನ್ ರೈಟ್ಸ್ (ಇಂಡಿಯಾ) ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ಆಗಸ್ಟ್ 11ರ ತನ್ನ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ನಾಯಿ ಆಶ್ರಯಗಳನ್ನು ಕಾಲಾನಂತರದಲ್ಲಿ ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿತ್ತು. ಆರರಿಂದ ಎಂಟು ವಾರಗಳಲ್ಲಿ ಸುಮಾರು 5,000 ನಾಯಿಗಳ ಆಶ್ರಯವನ್ನು ಸ್ಥಾಪಿಸುವ ಮೂಲಕ ಈ ಕಾರ್ಯ ಪ್ರಾರಂಭಿಸಲು ದೆಹಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಇದಲ್ಲದೆ, ನಾಯಿಗಳ ಸ್ಥಳಾಂತರ ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಅಡಚಣೆ ಉಂಟಾದರೆ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠ ಎಚ್ಚರಿಸಿತ್ತು. ಇದು ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕಾರಣವಾಗಬಹುದು ಎಂದಿತ್ತು
ನಾಯಿ ಕಡಿತ ಪ್ರಕರಣ: ಬಿಬಿಎಂಪಿ ವ್ಯಾಪ್ತಿಯ ಆರು ತಿಂಗಳಲ್ಲಿ 13,800 ಪ್ರಕರಣ ದಾಖಲು


