- Advertisement -
ಪರಿಹಾರ ಬಿಡುಗಡೆ ಮಾಡದಿದ್ದರೆ ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ. ಈಗ ಯಾರ ಬಗ್ಗೆಯೂ ಮಾತನಾಡುವುದಿಲ್ಲ, ಎಲ್ಲವನ್ನೂ ಗಮನಿಸುತ್ತಿದ್ದೇನೆ. ಕೇಂದ್ರ ಸರ್ಕಾರ ಶೀಘ್ರ ನೆರೆ ಪರಿಹಾರ ಹಣ ಬಿಡುಗಡೆ ಮಾಡಿದಿದ್ದರೆ, ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ನೂರು ಮಂದಿ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಮತ್ತು ಜಿಲ್ಲಾಧ್ಯಕ್ಷ-ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ದೇವೇಗೌಡರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡುತ್ತೋ, ಇಲ್ಲವೋ ಎಂಬ ಬಗ್ಗೆ ಇನ್ನೂ ಒಂದೆರಡು ದಿನ ಕಾದು ನೋಡುತ್ತೇನೆ. ಪರಿಹಾರ ನೀಡಿದ್ದರೆ ಹೋರಾಟ ಅನಿವಾರ್ಯ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್.ಬಂಗಾರಪ್ಪ, ಬಿಎಸ್.ಯಡಿಯೂರಪ್ಪ ಸೇರಿದಂತೆ ಹಲವರು ರಾಜ್ಯದಲ್ಲಿ ಪಕ್ಷಗಳನ್ನು ಕಟ್ಟಿದರೂ ಉಳಿಸಿಕೊಳ್ಳಲು ಆಗಿಲಿಲ್ಲ. ಜನತಾ ಪರಿವಾರದಲ್ಲೇ ಎರಡು ಮೂರು ಪಕ್ಷಗಳಾದವು. ಅವು ಉಳಿಯಲಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷಗಳು ಯಾವವೂ ಉಳಿದಿಲ್ಲ. ಆದರೆ ಜಾತ್ಯತೀತ ಜನತಾ ಪಕ್ಷ ಬೇರು ಬಿಟ್ಟಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದೆ. ಹಾಗಾಗಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದರು.
ಕಾರ್ಯಕರ್ತರು ಮತ್ತು ಜನತೆ ನಮ್ಮ ಪಕ್ಷವನ್ನು ಒಪ್ಪಿಕೊಂಡಿದ್ದಾರೆ. ಕಾರ್ಯಕರ್ತರು ಶ್ರಮಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುಣಾವಣೆಯಲ್ಲಿ ಸೋತ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸೋತಿರಬಹುದು. ಆದರೆ ಛಲ ಬಿಡದೆ ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸುತ್ತೇನೆ. ಪಕ್ಷವನ್ನು ಮುಗಿಸಲು ಯಾರಿದಂತಲೂ ಸಾದ್ಯವಿಲ್ಲ ಎಂದು ತಿಳಿಸಿದರು.


