‘ವಿಧಾನಸಭೆ ಚುನಾವಣೆ ಮುಗಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ‘ರಾಜ್ಯ ಸ್ಥಾನಮಾನ’ವನ್ನು ಮರುಸ್ಥಾಪಿಸಲು ವಿಫಲವಾದರೆ, ಕಾಂಗ್ರೆಸ್ ಕೇಂದ್ರದ ಮೇಲೆ ಒತ್ತಡ ಹೇರಲಿದೆ’ ಎಂದು ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
“ದೇಶದ ಇತಿಹಾಸದಲ್ಲಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಇದೇ ಮೊದಲು. ನಿಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳಲಾಗಿದೆ. ರಾಜ್ಯತ್ವವನ್ನು ಮರುಸ್ಥಾಪಿಸುವ ಬೇಡಿಕೆಗೆ ನಾವು ಆದ್ಯತೆ ನೀಡಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಚುನಾವಣೆಯ ನಂತರ ರಾಜ್ಯವನ್ನು ಪುನಃಸ್ಥಾಪಿಸಲು ಅವರು ವಿಫಲವಾದರೆ, ನಿಮ್ಮ ರಾಜ್ಯತ್ವವನ್ನು ಮರುಸ್ಥಾಪಿಸುವಂತೆ ನಾವು ಅವರ ಮೇಲೆ ಒತ್ತಡ ಹೇರುತ್ತೇವೆ. ಜಮ್ಮು ಮತ್ತು ಕಾಶ್ಮೀರವನ್ನು ದೆಹಲಿ ಆಳುತ್ತಿದೆ, ಸ್ಥಳೀಯರಲ್ಲದವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
ಧರ್ಮ, ಜಾತಿ, ಪಂಥ ಮತ್ತು ಪ್ರದೇಶದ ಹೆಸರಿನಲ್ಲಿ ಜನರನ್ನು ವಿಭಜಿಸಲು ಆರ್‌ಎಸ್‌ಎಸ್-ಬಿಜೆಪಿ ದ್ವೇಷವನ್ನು ಹರಡುತ್ತಿದೆ. ಅವರನ್ನು ಎದುರಿಸಲು ಕಾಂಗ್ರೆಸ್ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದಿದೆ ಎಂದು ಹೇಳಿದರು.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಪ್ರಸ್ತುತ ಮೂರು ಹಂತದ ಚುನಾವಣೆ ನಡೆಯುತ್ತಿದೆ. ಬುಧವಾರ ಮತ್ತು ಅಕ್ಟೋಬರ್ 1 ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಹಂತದ ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ; ‘ನನ್ನ ಪರಿಸ್ಥಿತಿ ರಾಮನ ಅನುಪಸ್ಥಿತಿಯ ಭರತನಂತಿದೆ..’ ಎಂದ ದೆಹಲಿ ನೂತನ ಮುಖ್ಯಮಂತ್ರಿ ಅತಿಶಿ


