“ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ” ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಖ್ಯಾತ ನಟ-ರಾಜಕಾರಣಿ ಕಮಲ್ ಹಾಸನ್ ಅವರು, ತನ್ನ ಹೇಳಿಗೆ ಕ್ಷಮೆಯಾಚಿಸುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. “ನಾನು ಹೇಳಿದ್ದ ತಪ್ಪು ಎಂದು ನನಗೆ ಮನವರಿಕೆ ಆಗುವವರೆಗೆ ಕ್ಷಮೆಯಾಚಿಸುವುದಿಲ್ಲ” ಎಂದು ಹೇಳಿದ್ದಾರೆ. ತಪ್ಪೆಂದು ಮನವರಿಕೆ ಆಗುವವರೆಗೆ
ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ಥಗ್ ಲೈಫ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಅವರು ನೀಡಿದ ಹೇಳಿಕೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು ಚಿತ್ರವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದು, ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.
ಕನ್ನಡಿಗರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥರೂ ಆಗಿರುವ ಕಮಲ್, ತಾನು ಈ ಹಿಂದೆಯೂ ಇಂತಹ ಬೆದರಿಕೆಗಳನ್ನು ಎದುರಿಸಿದ್ದೇನೆ ಮತ್ತು ಯಾವುದೇ ಮುಜುಗರಕ್ಕೊಳಗಾಗಿಲ್ಲ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಅವರು ಮುಂದಿನ ತಿಂಗಳು ತಮಿಳುನಾಡು ಆಡಳಿತಾರೂಢ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸುವ ನಿರೀಕ್ಷೆಯಿದೆ.
“ನನಗೆ ಮೊದಲು ಕೂಡಾ ಬೆದರಿಕೆ ಬಂದಿದೆ… ಆದರೆ ಪ್ರೀತಿ ಯಾವಾಗಲೂ ಗೆಲ್ಲುತ್ತದೆ” ಎಂದು ಅವರು ಹೇಳಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. “ಒಂದು ಕಾರ್ಯಸೂಚಿ ಹೊಂದಿರುವವರು ಮಾತ್ರ ಬೇರೆ ರೀತಿಯಲ್ಲಿ ಅನುಮಾನಿಸುತ್ತಾರೆ.” ಎಂದು ಅವರು ಹೇಳಿದ್ದಾರೆ.
ದಕ್ಷಿಣದ ಎಲ್ಲಾ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ತಾನು ಗೌರವಿಸುತ್ತಿದ್ದು, ಆದರೂ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಮತ್ತು ತಾವು ತಪ್ಪು ಮಾಡಿರುವುದಾಗಿ ಮನವರಿಕೆಯಾದರೆ ಮಾತ್ರ ಕ್ಷಮೆಯಾಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. “ನಾನು ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಒಂದು ವೇಳೆ ತಪ್ಪಿಲ್ಲದಿದ್ದರೆ ನಾನು ಕ್ಷಮೆ ಯಾಚಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ ಅವರು, “ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.
ಕಮಲ್ ಹಾಸನ್ ಅವರ ಹೇಳಿಕೆಯ ವಿರುದ್ಧ ಕನ್ನಡ ಸಂಘಟನೆಗಳು ಮತ್ತು ರಾಜಕಾರಣಿಗಳಿಂದ ತೀವ್ರವಾದ ಟೀಕೆಗಳು ವ್ಯಕ್ತವಾಗಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎಂ. ನರಸಿಂಹಲು ಅವರು ಪ್ರತಿಕ್ರಿಯಿಸಿ, ಕಮಲ್ ಹಾಸನ್ ಅವರ ಕನ್ನಡ “ತಮಿಳಿನಿಂದ ಹುಟ್ಟಿದೆ” ಎಂಬ ಹೇಳಿಕೆಯ ಕುರಿತು ಅವರೊಂದಿಗೆ ಮಾತನಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
“ಅನೇಕ ಕನ್ನಡ ಸಂಘಟನೆಗಳು ಅವರ ಚಲನಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿವೆ. ಅವರು ಹೇಳಿದ್ದು ತಪ್ಪು ಎಂದು ನಾವು ನಂಬುತ್ತೇವೆ ಮತ್ತು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ನರಸಿಂಹಲು ಹೇಳಿದ್ದಾರೆ.
ಕಮಲ್ ಹಾಸನ್ ನಾಳೆಯೊಳಗೆ ಕ್ಷಮೆಯಾಚಿಸದಿದ್ದರೆ, ಕರ್ನಾಟಕದಲ್ಲಿ ಅವರ ಚಲನಚಿತ್ರ ಬಿಡುಗಡೆಯನ್ನು ಚೇಂಬರ್ ವಿರೋಧಿಸುತ್ತದೆ ಎಂದು ಕೆಎಫ್‌ಸಿಸಿಯ ಮಾಜಿ ಮುಖ್ಯಸ್ಥ ಸಾ ರಾ ಗೋವಿಂದು ಎಚ್ಚರಿಸಿದ್ದಾರೆ. “ನಾವು ಕನ್ನಡ ಹೋರಾಟಗಾರರನ್ನು ಬೆಂಬಲಿಸುತ್ತೇವೆ ಮತ್ತು ತೀವ್ರವಾಗಿ ಪ್ರತಿಭಟಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಭಾಷಾ ವಿಷಯಗಳ ಬಗ್ಗೆ ಎಲ್ಲಾ ಕನ್ನಡಿಗರು ಒಂದಾಗಬೇಕು ಎಂದು ಕೆಎಫ್‌ಸಿಸಿ ಮಾಜಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ. “ಅವರ ಹೇಳಿಕೆ ತಿಳಿದೋ ತಿಳಿಯದೆಯೋ ತಪ್ಪಾಗಿದೆ. ತಪ್ಪನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಅವರು ಹೇಳಿದ್ದಾರೆ.
.@maiamofficial Chief & Actor @ikamalhaasan addresses press at the #DMK HQ ,#AnnaArivalayam. pic.twitter.com/e2IYuZQw8p
— TNIE Tamil Nadu (@xpresstn) May 30, 2025
ತಪ್ಪೆಂದು ಮನವರಿಕೆ ಆಗುವವರೆಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೆಲಂಗಾಣ| ಭದ್ರಾದ್ರಿ ಕೊಥಗುಡೆಮ್‌ನಲ್ಲಿ 17 ಮಾವೋವಾದಿಗಳು ಪೊಲೀಸರಿಗೆ ಶರಣು
ತೆಲಂಗಾಣ| ಭದ್ರಾದ್ರಿ ಕೊಥಗುಡೆಮ್‌ನಲ್ಲಿ 17 ಮಾವೋವಾದಿಗಳು ಪೊಲೀಸರಿಗೆ ಶರಣು

