ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ (ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ) ವಿರುದ್ದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಗುರುವಾರ (ನ.21) ಬಂಧನ ವಾರೆಂಟ್ ಹೊರಡಿಸಿದೆ.
ಬೆಂಜಮಿನ್ ನೆತನ್ಯಾಹು ಮತ್ತು ಯೋವ್ ಗ್ಯಾಲಂಟ್ 8 ಅಕ್ಟೋಬರ್ 2023ರಿಂದ 20 ಮೇ 2024 (ಪ್ರಾಸಿಕ್ಯೂಷನ್ ಬಂಧನ ವಾರೆಂಟ್‌ಗೆ ಅರ್ಜಿ ಸಲ್ಲಿಸಿದ ದಿನ) ರವರೆಗೆ ನಡೆಸಿದ ‘ಮನುಷ್ಯ ವಿರೋಧಿ ಯುದ್ದ ಅಪರಾಧ’ಗಳಿಗೆ ಸಂಬಂಧಿಸಿದಂತೆ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿಯ ಈ ಆದೇಶ ನೆತನ್ಯಾಹು ಓಡಾಟಕ್ಕೆ ಅಂಕುಶ ಹಾಕಲಿದೆ. ಏಕೆಂದರೆ, ಐಸಿಸಿಯ ವ್ಯಾಪ್ತಿಗೆ ಬರುವ 124 ರಾಷ್ಟ್ರಗಳಲ್ಲಿ ಯಾರು ಬೇಕಾದರು ತಮ್ಮ ಪ್ರದೇಶದ ಒಳಗೆ ನೆತನ್ಯಾಹು ಅವರನ್ನು ಬಂಧಿಸಬಹುದು ಎಂದು ವರದಿಗಳು ಹೇಳಿವೆ.
ಮಾನವ ಹಕ್ಕುಗಳ ಗುಂಪುಗಳು ಮತ್ತು ಹಮಾಸ್ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದೆ.
ಎರಡೂ ಕಡೆಯವರ ವಿರುದ್ಧದ ಬಂಧನ ವಾರೆಂಟ್‌ಗಳು “ಕೆಲ ವ್ಯಕ್ತಿಗಳು ಕಾನೂನಿಗಿಂತ ದೊಡ್ಡವರು ಎಂಬ ಭಾವನೆಯನ್ನು ಹೋಗಲಾಡಿಸುತ್ತದೆ” ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಸಹಾಯಕ ಅಂತಾರಾಷ್ಟ್ರೀಯ ನ್ಯಾಯ ನಿರ್ದೇಶಕ ಬಾಲ್ಕೀಸ್ ಜರ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಪ್ರಧಾನಿ ನೆತನ್ಯಾಹು ಈಗ ಅಧಿಕೃತವಾಗಿ ಬೇಕಾಗಿರುವ ವ್ಯಕ್ತಿ” ಎಂದು ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿಯ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ.
“ಇದೊಂದು ಐತಿಹಾಸಿಕ ಆದೇಶ. ನಮ್ಮ ಜನರ ವಿರುದ್ಧದ ಅನ್ಯಾಯದ ಸುದೀರ್ಘ ಇತಿಹಾಸವನ್ನು ಈ ಆದೇಶ ತಿದ್ದುಪಡಿ ಮಾಡಲಿದೆ. ನಮ್ಮ ಜನರು ಕಳೆದ 76 ವರ್ಷಗಳಿಂದ ಸುದೀರ್ಘ ಫ್ಯಾಸಿಸ್ಟ್ ಆಕ್ರಮಣವನ್ನು ಎದುರಿಸುತ್ತಿದ್ದಾರೆ” ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
“ನಮ್ಮ ಪ್ಯಾಲೆಸ್ತೀನ್ ಜನರ ವಿರುದ್ಧ ದೌರ್ಜನ್ಯ ಎಸಗಿದ ಮತ್ತು ಆಧುನಿಕತೆಗೆ ತಿಳಿದಿರುವ ಅತ್ಯಂತ ಘೋರವಾದ ಕೊಲೆ, ಭಯೋತ್ಪಾದನೆ ಮತ್ತು ಹಸಿವಿನ ಕೃತ್ಯಗಳನ್ನು ಎಸಗಿರುವ ಎಲ್ಲಾ ಕ್ರಿಮಿನಲ್ ನಾಯಕರು, ಮಂತ್ರಿಗಳು ಮತ್ತು ಫ್ಯಾಸಿಸ್ಟ್ ಮಿಲಿಟರಿ ಅಧಿಕಾರಿಗಳನ್ನು ಈ ಆದೇಶದೊಳಗೆ ಸೇರಿಸಿ” ಎಂದು ಹಮಾಸ್ ಐಸಿಸಿಯನ್ನು ಒತ್ತಾಯಿಸಿದೆ. ತನ್ನ ಮಿಲಿಟರಿ ಮುಖ್ಯಸ್ಥ ಡೀಫ್ ವಿರುದ್ಧದ ವಾರೆಂಟ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಕಳೆದ ಜುಲೈನಲ್ಲಿ ದಕ್ಷಿಣ ಗಾಝಾದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಡೀಫ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಆಗಸ್ಟ್ ಆರಂಭದಲ್ಲಿ ಹೇಳಿತ್ತು. ಆದರೆ, ಹಮಾಸ್ ಈ ಸಾವನ್ನು ದೃಢಪಡಿಸಿಲ್ಲ. ಡೀಫ್ ಸಾವನ್ನಪ್ಪಿದ್ದಾರೆಯೇ.. ಇಲ್ಲವೇ? ಎಂಬುವುದನ್ನು ನಿರ್ಧರಿಸಲು ಪ್ರಾಸಿಕ್ಯೂಟರ್‌ಗೆ ಸಾಧ್ಯವಾಗದ ಕಾರಣ ಬಂಧನ ವಾರೆಂಟ್ ಹೊರಡಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ಐಸಿಸಿಯ ಆದೇಶವನ್ನು ಇಸ್ರೇಲ್ ಕಠುವಾಗಿ ಟೀಕಿಸಿದೆ. ಇದು “ಯಹೂದಿ ವಿರೋಧಿ” ಆದೇಶ ಎಂದಿದೆ. ಐಸಿಸಿ “ತನ್ನ ವಿರುದ್ಧ ಮಾಡಿರುವ ಅಸಂಬದ್ಧ, ಸುಳ್ಳು ಆರೋಪಗಳನ್ನು ಅಸಹ್ಯದಿಂದ ತಿರಸ್ಕರಿಸುತ್ತೇವೆ” ಎಂದು ಇಸ್ರೇಲ್ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ (ಯುಎಸ್) ಸೇರಿದಂತೆ ಇಸ್ರೇಲ್‌ನ ಮಿತ್ರರಾಷ್ಟ್ರಗಳು ಕೂಡ ಇಸ್ರೇಲಿ ರಾಜಕಾರಣಿಗಳ ವಿರುದ್ಧದ ಬಂಧನ ವಾರೆಂಟ್‌ಗಳನ್ನು ಖಂಡಿಸಿವೆ.
ಇದನ್ನೂ ಓದಿ : ಕಾರ್ಮಿಕರ ಕಳ್ಳ ಸಾಗಾಣಿಕೆ ತಡೆಯಲು ಪ್ರಸ್ತಾವನೆ ರೂಪಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ


