ಕೊರೊನಾದಿಂದಾಗಿ ಬಂದ್ ಆಗಿದ್ದ ದೆಹಲಿಯ ಶಾಲೆಗಳು ಸುಮಾರು 1.5 ವರ್ಷಗಳ ನಂತರ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್ ನಡುವೆ ಬುಧವಾರ(ಇಂದು)ದಿಂದ ತೆರೆಯುತ್ತಿದೆ. ಆದರೆ 9-12 ತರಗತಿಳಿಗೆ ಮಾತ್ರ ದೆಹಲಿ ಸರ್ಕಾರ ಅನುಮತಿ ನೀಡಿದೆ. ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ಇನ್ನು ಮುಂದೆ ವಿಳಂಬ ಮಾಡಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
“ಒಂದು ವೇಳೆ ಇನ್ನೂ ವಿಳಂಬ ಮಾಡಿದರೆ ಇಡೀ ಪೀಳಿಗೆಯು ಜ್ಞಾನದ ಅಂತರವನ್ನು ಅನುಭವಿಸುತ್ತದೆ” ಎಂದು ಸಿಸೋಡಿಯಾ ಅವರು ಪ್ರತಿಪಾದಿಸಿದ್ದಾರೆ. ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಕೋಚಿಂಗ್ ಸಂಸ್ಥೆಗಳು ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಮತ್ತೆ ತೆರೆಯಲಾಗುತ್ತಿದೆ.
ಶಿಕ್ಷಕರಿಗೆ ವ್ಯಾಕ್ಸಿನೇಷನ್, ತರಗತಿಗಳಲ್ಲಿ 50% ರಷ್ಟು ಆಸನ ಸಾಮರ್ಥ್ಯ, ತೆರೆದ ಪ್ರದೇಶದಲ್ಲಿ ಊಟದ ವಿರಾಮಗಳು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ಹೇಳಿದೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಜಾಮೀನು ನಿರಾಕರಿಸಿದ ಸುಪ್ರೀಂ
“ಕಳೆದ 1.5 ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸಿದ್ದಾರೆ. ನಾವೆಲ್ಲರೂ ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ … ಜೊತೆಗೆ ಅವರ ಅಧ್ಯಯನದ ಬಗ್ಗೆಯು. ಶಾಲೆ ತೆರೆಯುವ ಬಗ್ಗೆ ನಾವು ಸಲಹೆಗಳನ್ನು ಕೇಳಿದಾಗ, 70% ದಷ್ಟು ಪೋಷಕರು ಶಾಲೆಗಳನ್ನು ತೆರೆಯಲು ಬಯಸಿದ್ದಾರೆ. ಹೆಚ್ಚಿನ ಪೋಷಕರು ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ” ಎಂದು ಹೇಳಿದ್ದಾರೆ.
“ಚಿಕ್ಕ ಮಕ್ಕಳಿಗೆ ಕಡಿಮೆ ಅಪಾಯವಿರುವುದರಿಂದ ತಜ್ಞರು ಕೂಡಾ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯಬಹುದು ಎಂದು ಹೇಳಿದ್ದಾರೆ. ಆದ್ದರಿಂದ ನಾವು 9 ರಿಂದ 12 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಯೋಚಿಸಿದ್ದೇವೆ” ಎಂದು ಸಿಸೋಡಿಯಾ ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ನಿರ್ಣಾಯಕ ವರ್ಷವನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ, ದೆಹಲಿ ಸರ್ಕಾರವು ಸೇತು ಬಂಧ ಕೋರ್ಸ್‌ಗಳನ್ನು ನಡೆಸಲು ಯೋಜಿಸಿದೆ. “ಸಾಂಕ್ರಾಮಿಕ ರೋಗವು ನಮ್ಮ ದಾರಿಯಲ್ಲಿ ಸಾಕಷ್ಟು ಸವಾಲುಗಳನ್ನು ಒಡ್ಡಿದೆ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಇದನ್ನು ಅಪಾಯಕಾರಿ ನಿರ್ಧಾರ ಎಂದು ಕರೆಯಬಹುದು, ಆದರೆ ವಿದ್ಯಾರ್ಥಿಗಳು ಅವರಿಗೆ ಬೇಕಾಗದ ಸಾಕಷ್ಟು ಸಂಪನ್ಮೂಲಗಳನ್ನು ಪಡೆಯಲು ಸಾಧ್ಯವಾಗದೆ ಅಪಾಯದಲ್ಲಿದ್ದಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ಪ್ರಸ್ತುತ, ದೆಹಲಿಯಲ್ಲಿ ಪ್ರತಿದಿನ 30-35 ಕೊರೊನಾ ಪ್ರಕರಣಗಳು ವರದಿಯಾಗುತ್ತಿದೆ. ನಾವೀಗ ಮುಂದುವರೆಯಬೇಕು, ಈ ನಿರ್ಧಾರವು ಇನ್ನಷ್ಟು ವಿಳಂಬವಾದರೆ, ಇಡೀ ಪೀಳಿಗೆಯು ಜ್ಞಾನದ ಅಂತರವನ್ನು ಅನುಭವಿಸುತ್ತದೆ” ಎಂದು ಸಿಸೋಡಿಯಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪರವರ ನಾಲಗೆ ಮತ್ತು ಮೆದುಳಿನ ಸಂಪರ್ಕ ಕಟ್ಟಾಗಿದೆ: ಸಿದ್ದರಾಮಯ್ಯ ಆಕ್ರೋಶ


