ಪ್ರಧಾನಿ ಮೋದಿಯವರಿಗೆ ಧೈರ್ಯವಿದ್ದರೆ ಟ್ರಂಪ್ ಸುಳ್ಳುಗಾರ ಎಂದು ಬಹಿರಂಗವಾಗಿ ಹೇಳಲಿ ಎಂದು ರಾಹುಲ್ ಗಾಂಧಿ ಬುಧವಾರ (ಜುಲೈ 30) ಸವಾಲೆಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಟ್ರಂಪ್ ಅವರು 29 ಬಾರಿ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಮಾಡಿಸಿದ್ದು ನಾನೇ ಎಂದಿದ್ದಾರೆ. ಟ್ರಂಪ್ ಮಾತು ಸುಳ್ಳಾಗಿದ್ದರೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಅದು ಸುಳ್ಳು ಎಂದು ಹೇಳಲಿ. ಪ್ರಧಾನಿಯವರಿಗೆ ಧೈರ್ಯವಿದ್ದರೆ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಇಲ್ಲಿಯೇ ಹೇಳಲಿ ಎಂದಿದ್ದಾರೆ.
“ಅವರಿಗೆ (ಪ್ರಧಾನಿ ಮೋದಿಗೆ) ಇಂದಿರಾ ಗಾಂಧಿ ಅವರಂತೆ ಧೈರ್ಯವಿದ್ದರೆ, ಡೊನಾಲ್ಡ್ ಟ್ರಂಪ್ ಸುಳ್ಳುಗಾರ ಎಂದು ಇಲ್ಲಿ ಹೇಳಲಿ. ನೀವು (ಟ್ರಂಪ್) ಕದನ ವಿರಾಮ ಮಾಡಿಸಿಲ್ಲ ಎನ್ನಲಿ. ಆದರೆ, ಮೋದಿಯವರು ಹಾಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವರು ಹಾಗೆ ಹೇಳಿದರೆ ಟ್ರಂಪ್ ಸತ್ಯ ಬಯಲು ಮಾಡುತ್ತಾರೆ” ಎಂದು ಹೇಳಿದ್ದಾರೆ.
“ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಬೇಕು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಆಗ್ರಹಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಯುದ್ದವನ್ನು ನಾನೇ ನಿಲ್ಲಿಸಿದೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿರುವುದು ಮತ್ತು ಅಮೆರಿಕ ಭಾರತದ ಸರಕುಗಳ ಮೇಲೆ ಶೇಕ 25 ಸುಂಕ ವಿಧಿಸಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ” ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿ ಸ್ಪಷ್ಟಪಡಿಸುತ್ತಿಲ್ಲ. ಹಾಗಾಗಿ, ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ” ಎಂದಿದ್ದಾರೆ.
ಸಂಸತ್ ಭವನದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಟ್ರಂಪ್ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ಯಾವ ರೀತಿಯ ಒಪ್ಪಂದ ಆಯಿತು ಎಂದು ಗೊತ್ತಾಯಿತಲ್ವಾ?” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುವ ಧೈರ್ಯ ಪ್ರಧಾನಿಯವರಿಗೆ ಇಲ್ಲ” ಎಂದಿದ್ದಾರೆ.
“ಭಾರತ-ಪಾಕಿಸ್ತಾನದ ಕದನ ವಿರಾಮದ ವಿಷಯದಲ್ಲಿ ಮೂರನೇ ವ್ಯಕ್ತಿಯ ಯಾವುದೇ ರೀತಿಯ ಮಧ್ಯಸ್ಥಿಕೆಯನ್ನು ನಾವು ಎಂದಿಗೂ ಸ್ವೀಕರಿಸಿಲ್ಲ ಎಂಬುದು ನಮ್ಮ ನೀತಿಯಾಗಿದೆ ಮತ್ತು ಅದು ಇಂದಿಗೂ ನಮಗೆ ಸ್ವೀಕಾರಾರ್ಹವಲ್ಲ” ಎಂದು ಖರ್ಗೆ ಹೇಳಿದ್ದಾರೆ.
ಅವರು (ಮೋದಿ) ಏಕೆ ಒಪ್ಪಿಕೊಂಡರು, ಕಾರಣಗಳೇನು ಎಂಬುದನ್ನು ದೇಶಕ್ಕೆ ತಿಳಿಸಬೇಕು” ಎಂದು ಸಂಸತ್ ಭವನದ ಸಂಕೀರ್ಣದಲ್ಲಿ ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅವರು (ಮೋದಿ) ತಮ್ಮ ಎರಡು ಗಂಟೆಗಳ ಭಾಷಣದಲ್ಲಿ ಒಮ್ಮೆಯೂ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಅವರು ಟ್ರಂಪ್ ಹೇಳಿಕೆಗಳನ್ನು ಖಂಡಿಸಬೇಕಿತ್ತು ಮತ್ತು ಅವರು ದೇಶದ ಚಿತ್ರಣವನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬೇಕಿತ್ತು” ಎಂದು ಖರ್ಗೆ ಹೇಳಿದ್ದಾರೆ.
ಟ್ರಂಪ್‌ನಿಂದ ಭಾರತದ ಸರಕುಗಳ ಮೇಲೆ 25% ಸುಂಕ: ಕೇಂದ್ರ ಮತ್ತು ವಿರೋಧ ಪಕ್ಷಗಳ ಪ್ರತಿಕ್ರಿಯೆ


