ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ, ಅದೇ ಜಾಗದಲ್ಲಿ ರಸ್ತೆ ತಡೆ ನಡೆಸುವುದಲ್ಲದೇ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಿ ರಾಜ್ಯಾದ್ಯಂತ ಸಂಚಾರ ಅಸ್ತವ್ಯಸ್ತ ಮಾಡುತ್ತೇವೆ ಎಂದು ಕ.ರಾ.ರೈ.ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನವರಿ 26 ರಂದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದೇವೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್‌ಗಳು ಬೆಂಗಳೂರಿನತ್ತ ಹೊರಟಿವೆ. ಆದರೆ ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಪೊಲೀಸರು ಗೌರವಯುತವಾಗಿ ಟ್ರ್ಯಾಕ್ಟರ್‌ಗಳು ಬೆಂಗಳೂರಿಗೆ ಬರಲು ಅನುಮತಿ ಕೊಡಬೇಕು. ಇಲ್ಲಿದಿದ್ದರೆ ಸಂಚಾರ ಅಸ್ತವ್ಯಸ್ತವಾದರೆ ಸರ್ಕಾರವೇ ಜವಾಬ್ದಾರಿ” ಎಂದಿದ್ದಾರೆ.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿ ನಮ್ಮ ಹೋರಾಟವನ್ನು ಹತ್ತಿಕ್ಕಲು ನೋಡುತ್ತಿದೆ. ಇದು ಸರಿಯಾದುದ್ದಲ್ಲ. ಲಕ್ಷಾಂತರ ಟ್ರ್ಯಾಕ್ಟರ್‌ಗಳು ಸೇರುವ ದೆಹಲಿ ಹೋರಾಟಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಬೇಕು. ಒಂದು ವೇಳೆ ಜನವರಿ 26 ರಂದು ನಮ್ಮ ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ ರಾಜ್ಯದ ಎಲ್ಲಾ ಹೆದ್ದಾರಿಗಳನ್ನು ಅನಿರ್ದಿಷ್ಟಾವಧಿ ಬಂದ್ ಮಾಡಿ ಸಂಚಾರ ಅಸ್ತವ್ಯಸ್ತ ಮಾಡಬೇಕಾಗುತ್ತದೆ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು ಎಂದು ನಾಗೇಂದ್ರರವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಒಂದು ವಿನಂತಿ ಮಾಡುತ್ತೇವೆ. ನೀವು ಟ್ರ್ಯಾಕ್ಟರ್‌ಗಳನ್ನು ತಡೆದು ನಮ್ಮ 3 ಗಂಟೆಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಬೇಡಿ. ಒಂದು ವೇಳೆ ಹಾಗೆ ಮಾಡಿದರೆ ನಾವು ರಾಜ್ಯಾದ್ಯಂತ ದಿನವಿಡೀ ರಸ್ತೆಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಾವು ಬಾಂಬು – ಬಂದೂಕು ತೆಗೆದುಕೊಂಡು ಬೆಂಗಳೂರಿಗೆ ಬರುತ್ತಿಲ್ಲ. ಬದಲಿಗೆ ಶಾಂತಿಯುತವಾಗಿ ಹೋರಾಟ ಮಾಡಲು ಬರುತ್ತಿದ್ದೇವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕಾನೂನುಗಳು ರದ್ದಾಗಬೇಕೆಂಬುದು ನಮ್ಮ ಒತ್ತಾಯ ಎಂದು ನಾಗೇಂದ್ರರವರು ಹೇಳಿದ್ದಾರೆ.
ಸಂಯುಕ್ತ ಹೋರಾಟ – ಕರ್ನಾಟಕ ವೇದಿಕೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳಿಂದ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಲಿದ್ದು, ಸುಮಾರು 5000 ವಾಹನಗಳು ಬೆಂಗಳೂರಿನಲ್ಲಿ ಪರೇಡ್ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜ. 26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್; ರಾಜಧಾನಿಯತ್ತ 5000 ವಾಹನಗಳು!


