Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ'

ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

"ಕಾಮಾಚಾರವೆಲ್ಲ ವಾಮಾಚಾರವಲ್ಲ, ವೇದಾಂತಿಗಳೆಲ್ಲ ಸುಭಗರಲ್ಲ. ಮುಚ್ಚಿಟ್ಟ ಚಿಂದಿಗಳು; ಮುಚ್ಚಿಟ್ಟ ದುರ್ನಾತಗಳು. ಎಷ್ಟು ದಿನ ಈ ನಾಟಕ! ಒಂದಲ್ಲ ಒಂದು ದಿನ ಎಲ್ಲ ಬಯಲಾಗಬೇಕು" ಎನ್ನುವ ಬನ್ನಂಜೆ ಕಾಮವನ್ನು ಹತ್ತಿಕ್ಕಲು ಪ್ರಯತ್ನಿಸುವ ಮನುಷ್ಯನ ಪ್ರಯತ್ನವೇ ಒಂದು ನಿಷ್ಫಲದ ಸಾಹಸವೆನ್ನುತ್ತಾರೆ. ಸಾಮಾನ್ಯ ಮತ್ತು ಸಹಜ ಕ್ರಿಯೆಯಾಗಿರುವ ಈ ಲೈಂಗಿಕಾಸಕ್ತಿ ಮತ್ತು ಲಿಂಗಶಕ್ತಿಗಳನ್ನು ಉಪನಿಷತ್ತು ಮತ್ತು ವೇದಗಳಲ್ಲಿ ಪ್ರಕಟಗೊಂಡಿರುವ ಬಗೆಗಳನ್ನು ಬಿಚ್ಚಿಡುತ್ತಾರೆ.

- Advertisement -
- Advertisement -

ಸಂಭೋಗ ಅಂದತಕ್ಷಣ ಸುಭಗರಂತೆ ಮೂಗು ಮುರಿಯುವ ಸಂಪ್ರದಾಯವಾದಿಗಳಿಗೆ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ ಪುಸ್ತಕದ ಪುಟಪುಟಗಳಲ್ಲಿ ಮೈ ಚಳಿ ಬಿಡಿಸುತ್ತಾ ಹೋಗುತ್ತಾರೆ. “ಹೆಣ್ಣಿನ ಮುಂದೆಯೂ ವೇದಾಂತ ಬಿಚ್ಚುವವರು ವೇದಾಂತದ ಒಳಗೂ ಹೆಣ್ಣನ್ನೇ ಹುಡುಕುತ್ತಿರುತ್ತಾರೆ. ಒಳಗೊಂದು ಹೊರಗೊಂದು ಆದವರು ಮಡಿವಂತ ವೇದಾಂತಿಗಳಾಗಿ ನೆಲದಲ್ಲೆ ಕುಪ್ಪಳಿಸುತ್ತಾರೆ” ಎಂದು ವಿಡಂಬಿಸುವ ಬನ್ನಂಜೆ, ಕೃತಿಯುದ್ದಕ್ಕೂ ವೇದ ಮತ್ತು ಇತರ ಪ್ರಾಚೀನ ಗ್ರಂಥಗಳ ಆಧಾರದಿಂದಲೇ ಲೈಂಗಿಕತೆಯ ವಿವಿಧ ವಿಸ್ತಾರಗಳನ್ನು ಪ್ರಸ್ತುತಪಡಿಸುತ್ತಾ ಹೋಗುತ್ತಾರೆ. ವಿಮರ್ಶೆ ಮತ್ತು ವಿಡಂಬನೆಗಳು ಗುಪ್ತಗಾಮಿಯಾಗಿದ್ದು ವಿಷಯ ಪ್ರಧಾನವಾಗಿ ಪ್ರಸ್ತುತವಾಗುತ್ತದೆ.

“ಕಾಮಾಚಾರವೆಲ್ಲ ವಾಮಾಚಾರವಲ್ಲ, ವೇದಾಂತಿಗಳೆಲ್ಲ ಸುಭಗರಲ್ಲ. ಮುಚ್ಚಿಟ್ಟ ಚಿಂದಿಗಳು; ಮುಚ್ಚಿಟ್ಟ ದುರ್ನಾತಗಳು. ಎಷ್ಟು ದಿನ ಈ ನಾಟಕ! ಒಂದಲ್ಲ ಒಂದು ದಿನ ಎಲ್ಲ ಬಯಲಾಗಬೇಕು” ಎನ್ನುವ ಬನ್ನಂಜೆ ಕಾಮವನ್ನು ಹತ್ತಿಕ್ಕಲು ಪ್ರಯತ್ನಿಸುವ ಮನುಷ್ಯನ ಪ್ರಯತ್ನವೇ ಒಂದು ನಿಷ್ಫಲದ ಸಾಹಸವೆನ್ನುತ್ತಾರೆ. ಸಾಮಾನ್ಯ ಮತ್ತು ಸಹಜ ಕ್ರಿಯೆಯಾಗಿರುವ ಈ ಲೈಂಗಿಕಾಸಕ್ತಿ ಮತ್ತು ಲಿಂಗಶಕ್ತಿಗಳನ್ನು ಉಪನಿಷತ್ತು ಮತ್ತು ವೇದಗಳಲ್ಲಿ ಪ್ರಕಟಗೊಂಡಿರುವ ಬಗೆಗಳನ್ನು ಬಿಚ್ಚಿಡುತ್ತಾರೆ.

“ಗಂಡಿಗಾಗಿ ಗಂಡನ್ನು ಹೆಣ್ಣು ಪ್ರೀತಿಸುವುದಿಲ್ಲ. ಹೆಣ್ಣಿಗಾಗಿ ಹೆಣ್ಣನ್ನು ಗಂಡು ಪ್ರೀತಿಸುವುದಿಲ್ಲ. ತನ್ನ ಕಾಮಪೂರ್ತಿಗಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ತನ್ನ ಕಾಮಪೂರ್ತಿಗಾಗಿಯೇ ಮನುಷ್ಯ ಎಲ್ಲವನ್ನೂ ಪ್ರೀತಿಸುತ್ತಾನೆ” ಎಂದು ಬೃಹದಾರಣ್ಯಕೋಪನಿಷತ್ತಿನ (4.5) ಶ್ಲೋಕವು ಸಿಗ್ಮಂಡ್ ಫ್ರಾಯ್ಡನ ಪ್ರಾಚೀನ ಸೊಲ್ಲಿನಂತೆ ಹಿಂಧ್ವನಿಸುತ್ತದೆ.

ಕಾಮ ಎನ್ನುವುದು ಹೆಣ್ಣು ಗಂಡಿನ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಬಗೆಯ ಬದುಕಿನ ಬಯಕೆಯೂ ಕಾಮ. ಎಲ್ಲ ಇಂದ್ರಿಯಗಳ ಬಯಕೆಯೂ ಕಾಮ. ಈ ಎಲ್ಲ ಬಯಕೆಗಳಿಗೆ ಎಲ್ಲಿ ಸಾಫಲ್ಯವೋ ಅದೇ ಕಾಮದ ಗೌರೀಶಂಕರ ಎನ್ನುವ ಬನ್ನಂಜೆ ಹಿಂದೆ ಹೆಣ್ಣಿಗಿದ್ದ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ. ಶೀಲ ಮತ್ತು ಅಶ್ಲೀಲವೆಂಬುದೇ ಮನುಷ್ಯನ ಸಂಕುಚಿತ ಮಾನಸಿಕ ಅವಸ್ಥೆಗಳಿಂದ ಹುಟ್ಟಿರುವುದು. ಮನುಷ್ಯ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವ ಸ್ವಾರ್ಥದಿಂದ ಹೇಗೆ ನಾನಾ ಬಗೆಯ ತಂತ್ರಗಳನ್ನು ಹೂಡುತ್ತಾನೋ ಹಾಗೆಯೇ ತನ್ನ ಲೈಂಗಿಕಾಭಿಲಾಷೆಯನ್ನು ಪೂರೈಸಿಕೊಳ್ಳಲು ಯತ್ನಿಸಿದಾಗ ಅಕ್ರಮಿಯಾಗಿಬಿಡುತ್ತಾನೆ. ಹಾಗಾಗಲು ಕಾರಣಗಳೋ ಹಲವು. ಹೆಣ್ಣಿಗೆ ಪಾತಿವ್ರತ್ಯದ ಮೌಲ್ಯವನ್ನು ಎತ್ತಿ ಹಿಡಿಯಲು ಗಂಡುಸಂತತಿಗಳು ಹೆಣಗಾಡಿದ್ದೇ ತಮ್ಮ ದೌರ್ಬಲ್ಯ ಮತ್ತು ಅಸೂಯೆಗಳನ್ನು ಮರೆಮಾಚಲು. ಹಾಗೆಯೇ ಅವುಗಳಷ್ಟೇ ಪಾತಿವ್ರತ್ಯವೆಂಬ ಮೌಲ್ಯದ ಹಿಂದಿನ ಕಾರಣಗಳೂ ಕೂಡಾ. ಆ ಮೂಲಕ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಲೈಂಗಿಕ ತೃಷೆಯಲ್ಲಿ ಅಗ್ನಿಯಾಗಿರುವ ಹೆಣ್ಣನ್ನು ತಣಿಸಲು ತನ್ನ ತುಪ್ಪವಾಗಿಸಿಕೊಂಡು ಸುರಿಯುವ ಪುರುಷತ್ವವು ಟುಸ್ಸ್ ಆದರೂ ಅವಳು ಮತ್ತೊಂದು ಪುರುಷನಿಂದ ತಣಿದುಬಿಟ್ಟು ತನ್ನ ಕಡೆಗಣಿಸಿಬಿಟ್ಟಾಳೆಂದು ಅವನ ಪುರುಷಾಧಿಕ್ಯದ ಅಹಂಕಾರವನ್ನು ಬೆದರಿಸುತ್ತಿತ್ತು. ಈ ಹೆದರಿಕೆಯನ್ನು ದರ್ಪವನ್ನಾಗಿಸಿಕೊಂಡ ಗಂಡು ಹೆಣ್ಣಿಗೆ ಶೀಲ, ಪಾತಿವ್ರತ್ಯ, ಪತಿಯೇ ಪರದೈವ; ಹೀಗೆ ಅನೇಕಾನೇಕ ಅನೈಸರ್ಗಿಕವಾದ ನೈತಿಕ ಮೌಲ್ಯಗಳಿಂದ ಅವಳನ್ನು ಬಂಧಿಸಿ ವಿಧೇಯವಾಗಿರಿಸಲು ಯತ್ನಿಸಿದ. ಅಂಜುಕುಳಿಯು ಅಬ್ಬರಿಸುವುದು ಶೂರತ್ವದಂತೆ ಕಾಣುವುದು ದೂರದಿಂದ.

ಹೆಣ್ಣಿನ ಲೈಂಗಿಕ ತೃಷೆಯೆಂಬ ಅಗ್ನಿಯ ಬಗ್ಗೆ ಮಾತು ಹಾಗಿರಲಿ, ಕಾಮವಾದರೂ ಏನು? ಭಗವಂತನ ತೆಕ್ಕೆಯಲ್ಲಿ ಹಾಯಾಗಿ ಮಲಗಿದ ಜೀವದಂತೆ. ಬೃಹದಾರಣ್ಯಕೋಪನಿಷತ್ತಿನಲ್ಲಿ (6.3.21) ಹೇಳುವಂತೆ ಮೆಚ್ಚಿದ ಹೆಣ್ಣಿನ ತೆಕ್ಕೆಯಲ್ಲಿ ಮೈಮರೆತು ಮಲಗಿದವನಿಗೆ ಹೊರಗಿನ ಮತ್ತು ಒಳಗಿನ ಪರಿವೆಯು ಇರುವುದಿಲ್ಲ. ನಿದ್ದೆಯಲ್ಲಿ ಭಗವಂತನ ತೆಕ್ಕೆಯಲ್ಲಿ ಹಾಯಾಗಿ ಮಲಗಿದ ಜೀವನೂ ಹಾಗೆಯೇ. ಅದು ಕೇವಲ ಆನಂದದ ಅನುಭೂತಿಯ ಸ್ಥಿತಿ; ಎಂದು ಕಾಮ ನೀಡುವ ಸುವಿಶ್ರಾಂತ ಸ್ಥಿತಿಗಳನ್ನು ಅನೇಕ ಉಲ್ಲೇಖಗಳಿಂದ ಬನ್ನಂಜೆ ವಿವರಿಸುತ್ತಾರೆ.

“ಸಂಗವನ್ನು ಬಯಸಿ ಹಾಸಿಗೆಗೆ ಬಂದ ಯಾವ ಹೆಣ್ಣನ್ನೂ ನಿರಾಶೆಗೊಳಿಸಬಾರದು. ವಾಮದೇವ ಯಜ್ಞದಲ್ಲಿ ದೀಕ್ಷಿತರಾದವರಿಗೆ ಇದೊಂದು ಪುಣ್ಯಕಾರ್ಯ ಎನ್ನುತ್ತಾ ಛಂದೋಗ್ಯೋಪನಿಷತ್ತಿನ (2.13.2) ಭಾಗವೊಂದನ್ನು ವಿವರಿಸುವಾಗ ಗಮನಿಸಬೇಕಾದ ಅಂಶವೆಂದರೆ ಬಲಾತ್ಕಾರವನ್ನು ನಿರಾಕರಿಸುವುದು. ಬಯಸಿ ಬಂದ ಹೆಣ್ಣನ್ನು ನಿರಾಕರಿಸಬಾರದು, ಅವಳ ಬಯಕೆಯನ್ನು ಈಡೇರಿಸುವುದೇ ಒಂದು ಮಹಾಯಜ್ಞ ಎನ್ನುವ ಉಪನಿಷತ್ತು ಅತ್ಯಾಚಾರವನ್ನು ಪುರಸ್ಕರಿಸುವುದಿಲ್ಲ. ಬದಲಾಗಿ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಗಂಡು ಬಲಾತ್ಕರಿಸಬಾರದು. “ಹೆಣ್ಣು ಯಾವನೇ ಒಬ್ಬನ ಖಾಸಗಿ ಸೊತ್ತಲ್ಲ ಎನ್ನುವ ಪ್ರಾಚೀನ ಕಾಮಶಾಸ್ತ್ರ ರಚನಾಕಾರ ಯಶೋಧರಾ “ಅವಳೊಡನೆ ಜಗಳವಾಡಬೇಡ. ಅವಳಲ್ಲೇ ಮುಳುಗಿರಲೂ ಬೇಡ. ರಮಿಸಿ ಖುಷಿಪಡು, ಖುಷಿ ಕೊಡು” ಎಂದು ಕಿವಿಮಾತು ಹೇಳುತ್ತಾನಂತೆ.

PC : Prajavani, (ಬನ್ನಂಜೆ ಗೋವಿಂದಾಚಾರ್ಯ)

ಒಟ್ಟಾರೆ ಪ್ರಾಚೀನರು ಹೇಳುವಂತೆ ಹೆಣ್ಣಿಗೆ ಯಾವುದೇ ನಿರ್ಬಂಧ ಸಲ್ಲದು. ಆದರೆ ಮಕ್ಕಳಾಗಲಿ ಆಗದಿರಲಿ, ಸುಖ ಸಿಗಲಿ, ಸಿಗದಿರಲಿ, ಹೆಣ್ಣಿಗೆ ತಾಳಿ ಕಟ್ಟಿದ ಗಂಡೇ ಪರದೈವ ಎನ್ನುವುದು ಅಂಜುಕುಳಿ ಗಂಡಸರು ಅಸೂಯೆಯಿಂದ ಮಾಡಿರುವ ಕಟ್ಟುಪಾಡುಗಳು. ಪ್ರಾಚೀನ ಭಾರತದಲ್ಲಿ ತನ್ನ ಗಂಡನಿಂದ ಮಕ್ಕಳಾಗದಿದ್ದರೆ ನಿಯೋಗ ಪದ್ಧತಿಯಲ್ಲಿ ಅವಳು ತನ್ನ ತಾಯ್ತನವನ್ನು ಪೂರೈಸಿಕೊಳ್ಳಬಹುದಿತ್ತು. ಮಹಾಭಾರತ ಮತ್ತು ರಾಮಾಯಣದಲ್ಲಿ ಮಂತ್ರದಿಂದ ಮತ್ತು ಪಾಯಸದಿಂದ ಹುಟ್ಟಿದವರೆಲ್ಲಾ ಹೀಗೇ ಅಲ್ಲವೇ!

ಲೈಂಗಿಕಾಂಗಗಳ ಗಾತ್ರ ಮತ್ತು ಅದರ ಪುಷ್ಟೀಕರಣದ ವಿಷಯವಾಗಿ ಹಲವಾರು ಉಲ್ಲೇಖಗಳನ್ನು ನೀಡುವ ಬನ್ನಂಜೆ ಹೀಗೆ ಹೇಳುತ್ತಾರೆ: “ಮನಸ್ಸಿನಲ್ಲಿ ಕಾಮದ ಭಾವನೆ ಮೂಡಿದರೆ ಅದನ್ನು ಹೇಳಿ ಕೈ ತೊಳೆದುಕೊಂಡುಬಿಡಬೇಕು. ಅದನ್ನು ಉಲ್ಲೇಖಿಸದೇಬಿಟ್ಟರೆ ಅದು ಒಳಗಿಂದೊಳಗೆ ಬೆಳೆದು ಕೊನೆಗೊಮ್ಮೆ ವಿನಾಶಕಾರಿಯಾಗಿ ಸ್ಫೋಟಗೊಳ್ಳಬಹುದು. ಕ್ಯಾನ್ಸರಿನಂತೆ ಒಳಗೆಯೇ ಹಬ್ಬಿ ವ್ಯಕ್ತಿತ್ವವನ್ನು ನಾಶಮಾಡಬಹುದು. ಅಪ್ಪ ಅದುಮಿಟ್ಟ ಕಾಮ ಮಗನಲ್ಲಿ, ಮೊಮ್ಮಗನಲ್ಲಿ ಅತಿಕಾಮವಾಗಿ ಮತ್ತೊಮ್ಮೆ ಪುಟಿದೇಳಬಹುದು. ಮನಸ್ಸನ್ನು ಮಡಿಯಾಗಿಡುವುದೆಂದರೆ ಕೆಟ್ಟ ಭಾವನೆಗಳನ್ನು ಮನಸ್ಸಿನೊಳಗೆ ಅದುಮಿ ಹಿಡಿಯುವುದಲ್ಲ. ಹೊರಕ್ಕೆ ಬಿಡುವುದು.”

ಸಮಾಜದಲ್ಲಿ ಅತ್ಯಾಚಾರಿಗಳು ರೂಪುಗೊಳ್ಳುವ ಬಗೆಯನ್ನು ಈಗ ನಾವು ಆಲೋಚಿಸಬಹುದು. ಲೈಂಗಿಕ ಶಿಕ್ಷಣವೆಂದರೆ ಇದೆಯೇ. ತನ್ನದೇ ಲೈಂಗಿಕಾಂಗಗಳ ಬಗ್ಗೆ ತಾನು ತಿಳಿದುಕೊಂಡು, ಅದರ ಕುರಿತಾದ ವಿಚಾರಗಳನ್ನು ಮುಕ್ತವಾಗಿ ಮೂಗು ಮುಸುಡಿಯ ಬಗ್ಗೆ ಮಾತಾಡುವಂತೆ ವಿಷಯವನ್ನು ಹಂಚಿಕೊಳ್ಳುವುದು. ಆಗ ಅದು ಬಚ್ಚಿಟ್ಟುಕೊಂಡು ಕೊಳೆತು ಗಲೀಜಾಗಿ ಹೊರಗೊಮ್ಮೆ ಚಿಮ್ಮುವುದಿಲ್ಲ. ಆರೋಗ್ಯಕರವಾದ ಬದುಕಿಗೆ ಆರೋಗ್ಯಕವಾದ ಲೈಂಗಿಕತೆಯೂ ಕಾರಣವಾಗುತ್ತದೆ. ಪ್ರಾಚೀನ ಭಾರತದಲ್ಲಿ ಲೈಂಗಿಕ ಶಿಕ್ಷಣವನ್ನು ಪ್ರತಿಪಾದಿಸಿರುವ ರೀತಿಗಳನ್ನು ಬನ್ನಂಜೆ ಉಲ್ಲೇಖಿಸುತ್ತಾರೆ.

“ಚಂದದ ಅಪ್ಸರೆಯರ ಹುಳು ತಲೆಗೆ ಹೊಕ್ಕಾಗ ಋಷಿಗಳು ಮೊದಲು ಅವರನ್ನು ಭೋಗಿಸಿ ಮತ್ತೆ ತಪಸ್ಸಿಗೆ ಹೊರಡುತ್ತಿದ್ದರು. ಇಲ್ಲವಾದರೆ ತಪಸ್ಸಿನ ಉದ್ದಕ್ಕು ಅಪ್ಸರೆಯರೆ ಕಂಡಾರು. ಮೊದಲು ತಲೆ ಖಾಲಿಯಾಗಬೇಕು. ಆಮೇಲೆ ತಪಸ್ಸಿಗೆ ಕೂಡಬೇಕು.”

ಯಜುರ್ವೇದದಲ್ಲಿ ಅಶ್ಲೀಲ ಭಾಷಣವೊಂದು ಈ ಕಾಲದ ಯಾವ ಪೋಲಿ ಪೋಕರಿಯ ಮಾತಿಗೂ ಕಡಿಮೆಯಿಲ್ಲದಂತೆ ಸಂಸ್ಕೃತದಲ್ಲಿ ಉಲಿಯುತ್ತದೆ.

ಕರ್ನಾಟಕದ ಪಶ್ಚಿಮ ಕರಾವಳಿ, ಗುಜರಾತ್, ಆಂದ್ರಪ್ರದೇಶವೂ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಮಂತ್ರಿಮಾಗಧರು ತಮ್ಮ ಹೆಂಡಂದಿರನ್ನು ರಾತ್ರಿಯ ಹೊತ್ತು ರಾಜನ ಆರೈಕೆಗೆಂದು ಅಂತಃಪುರಕ್ಕೆ ಕಳಿಸುತ್ತಿದ್ದರು. ಅಷ್ಟೇ ಅಲ್ಲ. ಮದುವೆಯಾದ ಹತ್ತನೆಯ ದಿವಸ ಗಂಡನ ಜತೆಗೆ ಪ್ರಸ್ತಕ್ಕೆ ಕೂಡುವ ಮುನ್ನ, ರಾಜ್ಯದ ಹುಡುಗಿಯರು ರಾಜನಿಗೆ ಉಡುಗೊರೆಯಾಗಿ ಒಪ್ಪಿಸಲು ಅಂತಃಪುರಕ್ಕೆ ಹೋಗಬೇಕಾಗಿತ್ತು. ಇದು ಪ್ರಭುತ್ವದಲ್ಲಿರುವ ಪುರುಷರು ಅಥವಾ ಶ್ರೀಮಂತ ಲಂಪಟರು ಹೆಣ್ಣನ್ನು ಶೋಷಿಸಿದ ರೀತಿಯಾದರೆ, ರಾಣಿಯರಿಗೆ ಚಾಕರಿಯ ಹುಡುಗಿಯರು ಚೆಂದದ ಹುಡುಗರನ್ನು ಬೇಟೆಯಾಡಿ ತಂದು ಅವರ ಶಯನ ಗೃಹಕ್ಕೆ ಬಿಡುತ್ತಿದ್ದರು. ಅಂತಃಪುರದ ಕಾವಲಿಗಿರುವವರು ರಾಣಿಯರು ಸೇರುತ್ತಿದ್ದರು. ಪೇಟೆಯ ಹುಡುಗರಿಗೆ ಹೆಣ್ಣಿನ ವೇಶ ತೊಡಿಸಿ ತಂದೊಪ್ಪಿಸುತ್ತಿದ್ದರು. ಹೀಗೆ ರಾಣಿಯರೂ ಗುಪ್ತವಾಗಿ ತಮ್ಮ ರಾಜರ ದರ್ಬಾರಿಗೆ ಸೆಡ್ಡೊಡೆಯುತ್ತಿದ್ದರು.

ಲೈಂಗಿಕ ವಾಂಛೆಯ ಸುತ್ತ ಇರುವ ಪ್ರಾಚೀನ ಭಾರತದ ವಿಚಿತ್ರ ಸಂಪ್ರದಾಯಗಳನ್ನು ಕೆದಕುತ್ತಾ ಬೆದಕುತ್ತಾ ತಮ್ಮ ಸನಾತನ ಶಾಸ್ತ್ರಗಳು ಶ್ರೇಷ್ಠ ಮತ್ತು ಪವಿತ್ರ ಎಂದು ಕೊಚ್ಚಿಕೊಳ್ಳುತ್ತಾ ಶೀಲ ಅಶ್ಲೀಲಗಳೆಂದು ಪಾಶ್ಚಾತ್ಯರ ಮುಕ್ತತೆಯನ್ನು ಹೀಯಾಳಿಸುವವರಿಗೆ ಚುರುಕು ಮುಟ್ಟಿಸುತ್ತಾರೆ ಬನ್ನಂಜೆ ಗೋವಿಂದಾಚಾರ್ಯರು.

ಹೆಣ್ಣು, ಹೊನ್ನು ಮತ್ತು ಮಣ್ಣು ಎಂದು ಹೆಣ್ಣನ್ನು ಭೋಗದ ಮತ್ತು ಅಧೀನಕ್ಕೊಳಪಡಿಸುವ ವಸ್ತುವನ್ನಾಗಿ ಸಂಕುಚಿಸಿದ ಪುರುಷಧರ್ಮಿಗಳು ಮಾಡಿಕೊಂಡಿರುವ ಎಡವಟ್ಟುಗಳನ್ನು ಅನಾವರಣ ಮಾಡುವ ಕೃತಿಯು ಪ್ರಾಚೀನ ವೇಶ್ಯೆಯರ ಕಲೆ ಮತ್ತು ಕಸುಬಿನ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಏನೆಲ್ಲಾ ಲೈಂಗಿಕ ಮುಕ್ತತೆಯ ಬಗ್ಗೆ ಶಾಸ್ತ್ರಗಳು ವಿವರಿಸಿದರೂ ರಚಿಸಿದವರು ಪುರುಷರೇ ಆದ್ದರಿಂದ ಹೆಣ್ಣು ಒಂದು ಭೋಗದ ಮತ್ತು ಸುಖ ನೀಡುವ ವಸ್ತುವನ್ನಾಗಿಯೇ ನೋಡುವುದು. ಆದರೆ ವ್ಯತ್ಯಾಸವೆಂದರೆ ಬಲಾತ್ಕಾರ ಮತ್ತು ಹಿಂಸೆಗಳನ್ನು ಅನುಮೋದಿಸದೇ ಒಲಿಸಿಕೊಳ್ಳುವ ದಿಕ್ಕಿನಲ್ಲಿ ಬೆತ್ತಲಾಗಿ ತೆರೆದುಕೊಂಡು ಬಿದ್ದುಕೊಳ್ಳುತ್ತದೆ.


ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮಸ್ಕಾರಗಳು
    ಭಾರತೀಯ ಸಮಾಜದಲ್ಲಿ ಕಾಮಶಾಸ್ತ್ರ ಈ ಪುಸ್ತಕದ ಪ್ರಕಾಶಕರು ಯಾರು ತಿಳಿಸಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...