15 ದಿನಗಳಿಂದ ತೀವ್ರ ಚರ್ಚೆಯಲ್ಲಿರುವ ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ವಿವಾದ ಅಂತ್ಯವಾಗುವ ಹಂತಕ್ಕೆ ಬಂದಿದೆ. ಅಲ್ಲಿ ಬುಧವಾರ ರಾತ್ರಿ ಸ್ಥಾಪಿಸಲ್ಪಟ್ಟಿರುವ ರಾಯಣ್ಣನ ಪ್ರತಿಮೆಯನ್ನು ಜಿಲ್ಲಾಡಳಿತ ಅಧಿಕೃತ ಎಂದು ಒಪ್ಪಿಕೊಂಡಿದೆ. ಅಲ್ಲದೇ ಆ ವೃತ್ತಕ್ಕೆ ಶಿವಾಜಿ ಹೆಸರಿಡುವುದಾಗಿ ಘೋಷಿಸಿದೆ. ಅಂತೂ ವಿಷಯ ತಣ್ಣಗಾಗುತ್ತಿರುವಾಗಲೇ ವೇಳೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಕನ್ನಡಿಗರು ತಿರುಗಿ ಬೀಳುವಂತೆ ಮಾಡಿದೆ.
ಆಗಸ್ಟ್ 15 ರಂದು ಕನ್ನಡಿಗರು ಮತ್ತು ರಾಯಣ್ಣನ ಅಭಿಮಾನಿಗಳು ಪ್ರತಿಮೆ ಸ್ಥಾಪನೆ ಮಾಡಿದ್ದಾಗ ಅದನ್ನು ಜಿಲ್ಲಾಡಳಿತ ಒಪ್ಪಿಕೊಂಡಿದ್ದರೆ ರಾದ್ಧಾಂತವೇ ಆಗುತ್ತಿರಲಿಲ್ಲ. ಆದರೆ ಪ್ರತಿಮೆ ತೆರವುಗೊಳಿಸಿದ್ದಲ್ಲದೇ ಅದರ ವಿರುದ್ಧ ಪ್ರತಿಭಟಿಸಿದವರ ಮೇಲೆ ಲಾಠಿ ಚಾರ್ಜ್ ನಡೆಸಿ ಕೇಸು ಜಡಿದಿದ್ದು ವಿವಾದ ತೀವ್ರ ಸ್ಪರೂಪ ಪಡೆದುಕೊಳ್ಳಲು ಕಾರಣವಾಗಿತ್ತು.
ಲಕ್ಷಾಂತರ ಕನ್ನಡಿಗರು ಅದೇ ಜಾಗದಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಹತ್ತಾರು ಪ್ರತಿಭಟನೆಗಳು, ಬೆಳಗಾವಿ ಚಲೋ ಹೋರಾಟ ನಡೆದುದ್ದರ ಪರಿಣಾಮವಾಗಿ ಕೊನೆಗೂ ರಾಜ್ಯಸರ್ಕಾರ ಮನಸ್ಸಿಲ್ಲದ ಮನಸ್ಸಿನಿಂದಲೇ ಪ್ರತಿಮೆಗೆ ಒಪ್ಪಿಗೆ ನೀಡಿತ್ತು. ಈ ನಡುವೆ ಎಂಇಎಸ್ ಸಂಘಟನೆ ಅಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣವಾಗಬೇಕೆಂದು ತಗಾದೆ ತೆಗೆದಿತ್ತು. ಕನ್ನಡಿಗರು ವರ್ಸಸ್ ಮರಾಠಿಗರು ಭಾವನೆ ಆರಂಭವಾಗಿತ್ತು. ಕೊನೆಗೂ ರಾಯಣ್ಣನ ಪ್ರತಿಮೆ ಮತ್ತು ವೃತ್ತಕ್ಕೆ ಶಿವಾಜಿ ಹೆಸರು ಒಂದು ಹಂತಕ್ಕೆ ಎಲ್ಲರಿಗೂ ಒಪ್ಪಿತವಾಗಿತ್ತು.
ಇಂತಹ ಸಂದರ್ಭದಲ್ಲಿ “ಶಿವಾಜಿ ಮಹಾರಾಜ್ ದೇಶದ ಸ್ವಾಭಿಮಾನದ ಸಂಕೇತ. ಹಾಗೆಯೇ ಸಂಗೊಳ್ಳಿ ರಾಯಣ್ಣ ನಮ್ಮ ಕರ್ನಾಟಕದ ಸ್ವಾಭಿಮಾನದ ಸಂಕೇತ.. ಇವರಿಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಪ್ರಶ್ನೆಯನ್ನು ತರುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ನಮಗೆ ಶಿವಾಜಿ ಪ್ರತಿಮೆಯೂ ಬೇಕು, ರಾಯಣ್ಣನ ಪ್ರತಿಮೆಯೂ ಬೇಕು” ಎಂಬ ಸಂಸದ ಪ್ರತಾಪ್ ಸಿಂಹರವರ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
ಶಿವಾಜಿ ರಾಷ್ಟ್ರನಾಯಕರು, ರಾಯಣ್ಣ ನಮ್ಮ ರಾಜ್ಯಕ್ಕೆ ಸೀಮಿತ ಎಂಬ ಮಾತಿನ ಅರ್ಥವೇನು? ಕನ್ನಡಿಗರು ಕರ್ನಾಟಕಕ್ಕಷ್ಟೇ ಸೀಮಿತವೇ ಎಂದು ಹಲವು ಕನ್ನಡಿಗರು ಪ್ರಶ್ನಿಸಿದ್ದಾರೆ. ಇವರಿಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬುದನ್ನು ಸಂಸದ ಪ್ರತಾಪ್ ಸಿಂಹರವರೇ ಧ್ವನಿಸಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಪಕ್ಕದ ಸರ್ಕಲ್‌ನಲ್ಲಿ ಬಹಳ ಹಿಂದಿನಿಂದಲೂ ಶಿವಾಜಿ ಪ್ರತಿಮೆ ಇದೆ. ಅದಕ್ಕೆ ಯಾವ ಕನ್ನಡಿಗರು ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಗೆ ವಿರೋಧವೇಕೆ? ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಬೇಕು ಎಂದು ವಾದಿಸುವವರು ಮಹಾರಾಷ್ಟ್ರದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಇರಿಸಲು ಮುಂದಾಗುವರೆ ಎಂದು ಅನೇಕ ಕನ್ನಡಿಗರು ಪ್ರಶ್ನಿಸಿದ್ದಾರೆ.
ಮಾತು ಪ್ರಾರಂಬವಾಗುವುದು ಹೀಗೆ-
ಶಿವಾಜಿ ಮಹಾರಾಜ್ ದೇಶದ ಸ್ವಾಭಿಮಾನದ ಸಂಕೇತ
ಸಂಗೊಳ್ಳಿ ರಾಯಣ್ಣ- ಕರ್ನಾಟಕದ ಸ್ವಾಭಿಮಾನದ ಸಂಕೇತ..ಕನ್ನಡಿಗರು ಎಷ್ಟೆ ಹೋರಾಟ ನಡೆಸಿದ್ರೂ ಅಷ್ಟೆ. ಕರ್ನಾಟಕಕ್ಕೆ ಅಷ್ಟೇ ಸೀಮಿತ. ಇಷ್ಟೇ ನಮ್ ಕತೆ. https://t.co/lNh92ag1ah
— ಅರುಣ್ ಜಾವಗಲ್ | Arun Javgal (@ajavgal) August 29, 2020
“ವಿಚಾರ ಇಷ್ಟೇ! ಕರ್ನಾಟಕದ ಮಹನೀಯರು ಕರ್ನಾಟಕಕ್ಕೆ ಮಾತ್ರ ಸೀಮಿತ. ಹೊರನಾಡಿನ ಮಹನೀಯರು ದೇಶದ ಸ್ವಾಭಿಮಾನದ ಸಂಕೇತ. ಕರ್ನಾಟಕದ ಮಹನೀಯರನ್ನು ಭಾರತದ ಮಟ್ಟದಲ್ಲಿ ಸ್ವಾಭಿಮಾನದ ಸಂಕೇತ ಎಂದು ತಿಳಿದುಕೊಂಡಿಲ್ಲದ ಜನಪ್ರತಿನಿಧಿಗಳನ್ನ ಆರಿಸಿದ್ದೇವೆ. ಕರ್ನಾಟಕದ ಬಹಳಷ್ಟು ಮಹನೀಯರ ಬಗ್ಗೆ ಹೊರನಾಡಿನ ಜನರಿಗೆ ತಿಳಿದೇಯಿಲ್ಲದ ಕಾರಣವೇನು ತಿಳಿಯಿತೇ?” ಎಂದು ಗ್ರಾಹಕ ಸೇವೆಯಲ್ಲಿ ಕನ್ನಡಕ್ಕಾಗಿ ದನಿಯೆತ್ತುತ್ತಿರುವ ಅರುಣ್ ಜಾವಗಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚನ್ನಮ್ಮ, ಅಬ್ಬಕ್ಕ, ಮಲ್ಲಮ್ಮನವರು ಮೊದಲು ಆಮೇಲೆ ಲಕ್ಷ್ಮಿಭಾಯಿ. ರಾಯಣ್ಣ ಮೊದಲು ಆಮೇಲೆ ಶಿವಾಜಿ. ಕೃಷ್ಣದೇವರಾಯ ಮೊದಲು ಆಮೇಲೆ ಅಶೋಕ. ವಿಷ್ಣುವರ್ಧನ ಮೊದಲು ಆಮೇಲೆ ಚಂದ್ರಗುಪ್ತ ಮೌರ್ಯ. ಟಿಪ್ಪು ಮೊದಲು ಆಮೇಲೆ ಸಂಬಾಜಿ. ಬಸವಣ್ಣ ಮೊದಲು ಆಮೇಲೆ ವಿವೇಕಾನಂದ. ಎಲ್ಲರಿಗೂ ಗೌರವ ಕೊಡೋಣ…ಮೊದಲು ನಮ್ಮ ಗೌರವ ಉಳಿಸಿಕೊಳ್ಳಣ ಎಂದು ನೂತನರವರು ಟ್ವೀಟ್ ಮಾಡಿದ್ದಾರೆ.
ಶಿವಾಜಿ ಮಾತ್ರ ಹೇಗೆ ದೇಶದ ಸ್ವಾಭಿಮಾನ ಆಗ್ತಾರೆ ? ಹಾಗೆ ನೋಡಿದರೆ ರಾಯಣ್ಣ ದೇಶದ ಸ್ವಾಭಿಮಾನದ ಸಂಕೇತವಾಗುತ್ತಾರೆ. ಶಿವಾಜಿ, ರಾಯಣ್ಣರ ಕಾಲದಲ್ಲಿ ಒಕ್ಕೂಟದ ವ್ಯವಸ್ಥೆಯೇ ಇರಲಿಲ್ಲ, ಸಾಮ್ರಾಜ್ಯಗಳು ಇದ್ದವು ಅಷ್ಟೇ. ಇಂತ ಸಾಮಾನ್ಯ ಅರಿವಿಲ್ಲದ ಮುಠ್ಠಾಳರು ತಮ್ಮ ಹೈಕಾಮಾಂಡ್ ಅನ್ನು ಮೆಚ್ಚಿಸಲು ಗುಲಾಮರ ರೀತಿ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಸುಚಿಂದ್ರರವರು ಟ್ವೀಟ್ ಮಾಡಿದ್ದಾರೆ.
ಇನ್ನು ಇಂದು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಚಿವ ಈಶ್ವರಪ್ಪ ಭೇಟಿ ನೀಡಿ ಎರಡು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಗನೆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ ಧೋರಣೆಯೇ ಇಂದಿನ ರಾಯಣ್ಣ ಪ್ರತಿಮೆ ವಿವಾದಕ್ಕೆ ನೇರ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದೇನೆ. ರಾಯಣ್ಣನಂಥ ಮಹಾನ್ ವ್ಯಕ್ತಿಗಳ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು. ಸರ್ಕಾರ ನಿನ್ನೆ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ರಾಯಣ್ಣನ ಪ್ರತಿಮೆ ನಿರ್ಮಾಣದ ವಿಚಾರ ವಿವಾದವೇ ಆಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್.ಡಿ ಕುಮಾರಸ್ವಾಮಿ, ಚಿದಂಬರಂ


