ಕಳೆದ ವಾರ ಬಳ್ಳಾರಿಯ ಸಿಎಎ ಪರ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಇದ್ದಕ್ಕಿದ್ದಂತೆಯೇ ಮುಸ್ಲಿಮರ ವಿರುದ್ಧ ಉಗ್ರ ಭಾಷಣ ಬಿಗಿದಿದ್ದರು. ಖಡ್ಗ ಮಚ್ಚು ತಂದು ಕೊಚ್ಚಿ ಹಾಕ್ತೀವಿ ಎನ್ನುವವರೆಗೂ ತನ್ನ ನಾಲಗೆ ಹರಿಯಬಿಟ್ಟಿದ್ದರು. ಆತನ ಮಾತುಗಳಿಂದ ಸ್ವತಃ ಬಿಜೆಪಿಗರೆ ಆಶ್ರ್ಯಚಕಿತರಾಗಿದ್ದರು. ಆತ ಮುಂಚೆ ಹಾಗಿರಲಿಲ್ಲ, ಈಗೇಕೆ ರೊಚ್ಚಿಗೆದ್ದರು ಎಂದು ಹುಡುಕಿ ಹೊರಟರೆ ಅದರ ಮೂಲ ವಿಜಯನಗರ ಜಿಲ್ಲೆಗೆ ಬಂದು ನಿಲ್ಲುತ್ತದೆ.
ಹೌದು, ಹೊಸಪೇಟೆಯ ಶಾಸಕ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ಆಗಬೇಕೆಂದು ಯಡಿಯೂರಪ್ಪ ಬಳಿ ಮನವಿ ಮಾಡಿದಾಕ್ಷಣ ಯಡಿಯೂರಪ್ಪ ಒಪ್ಪಿ ಸಹಿ ಹಾಕಿದ್ದು ನಿಮಗೆ ಗೊತ್ತೆ ಇದೆ. ಉಜ್ಜಯಿನಿ ಸ್ವಾಮೀಜಿಗಳು, ಸಂಗನಬಸವ ಸ್ವಾಮೀಜಿಗಳ ಒತ್ತಡವೂ ಇದಕ್ಕೆ ಕಾರಣವಾಗಿತ್ತು. ಆದರೆ ಏನು ಕಾರಣವೋ ಯಾವ ಒತ್ತಡವೋ ಆ ಆದೇಶ ವಾಪಸ್ ಹಿಂದಕ್ಕೆ ತೆಗೆದುಕೊಂಡುಬಿಟ್ಟರು. ಅದೇ ಸಮಯದಲ್ಲಿ ಒಬ್ಬರಿಗೊಬ್ಬರು ಆಗದವರಂತಿದ್ದ ಸೋಮಶೇಖರ್ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ವಿಜಯನಗರ ಜಿಲ್ಲೆ ಆಗಬಾರದು ಎಂದು ಒಟ್ಟಿಗೆ ದನಿಯೆತ್ತಿದ್ದರು. ಹಾಗೇನಾದರೂ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಒಂದುವೇಳೆ ವಿಜಯನಗರ ಜಿಲ್ಲೆ ರಚನೆಯಾದಲ್ಲಿ ಅದು ಈ ರೆಡ್ಡಿಗಳ ಅಸ್ತಿತ್ವವನ್ನು ಅಲ್ಲಾಡಿಸುವುದರಲ್ಲಿ ಅನುಮಾನವೇ ಇಲ್ಲ. ಆಗ ಸಂಡೂರು, ಬಳ್ಳಾರಿ, ಬಳ್ಳಾರಿ ಗ್ರಾಮೀಣ ಮತ್ತು ಕುರುಗೋಡು ತಾಲ್ಲೂಕುಗಳು ಮಾತ್ರ ಬಳ್ಳಾರಿ ಜಿಲ್ಲೆಗೆ ಉಳಿದುಕೊಳ್ಳುತ್ತವೆ. ಬಳ್ಳಾರಿಗೆ ಹತ್ತಿರವಿದ್ದರೂ ಸಹ ಕೂಡ್ಲಿಗಿ, ಕಂಪ್ಲಿ ತಾಲ್ಲೂಕುಗಳು ಸಹ ವಿಜಯನಗರಕ್ಕೆ ಸೇರಲು ಒತ್ತಾಯಿಸುತ್ತಿವೆ. ಪ್ರತ್ಯೇಕ ಜಿಲ್ಲೆಯಾದರೆ ರೆಡ್ಡಿಗಳ ಆಟಾಟೋಪ ಇರುವುದಿಲ್ಲ, ಡ್ಯಾಂ ಇದೆ, ಪ್ರವಾಸೋದ್ಯಮವಿದೆ, ಹಾಗಾಗಿ ಅದು ಅಭಿವೃದ್ಧಿಯಾಗುತ್ತದೆ ಎಂಬುದು ಅಲ್ಲಿಯ ಜನರ ಅಭಿಮತ.
ವಿಜಯನಗರ ಜಿಲ್ಲೆ ಆದಲ್ಲಿ ಈಗಾಗಲೇ ಲೂಟಿಯಾಗಿರುವ ಬಳ್ಳಾರಿ ಜಿಲ್ಲೆ ಮತ್ತಷ್ಟು ಸೊರಗುತ್ತದೆ. ಇತ್ತೀಚೆಗೆ ರೆಡ್ಡಿಗಳು ಯಾವುದೇ ಅಭಿವೃದ್ದಿ ಕೆಲಸ ಮಾಡದೇ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಬೆಳೆದಿದೆ ಎನ್ನಲಾಗುತ್ತಿದೆ. ಆನಂದ್ ಸಿಂಗ್ ಮಂತ್ರಿಯಾಗುವುದರ ಜೊತೆಗೆ ವಿಜಯನಗರ ಜಿಲ್ಲೆಯ ಹರಿಕಾರನಾಗಿ ಮೆರೆಯುತ್ತಾರೆ, ಆಗ ಬಳ್ಳಾರಿಯಲ್ಲಿ ತಮ್ಮ ಹಿಡಿತ ಕಡಿಮೆಯಾಗುತ್ತದೆ ಎಂಬುದು ರೆಡ್ಡಿ ಸಹೋದರರ ಚಿಂತೆ. ಈಗಾಗಲೇ ಜನರಿಂದ ದೂರವಾಗುತ್ತಿರುವ ರೆಡ್ಡಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶತಾಯಗತಾಯ ವಿಜಯನಗರ ಜಿಲ್ಲೆ ತಡೆಯಬೇಕು ಮತ್ತು ಮತ್ತೆ ಚಾಲ್ತಿಗೆ ಬರಬೇಕಿದೆ. ಇಂತಹ ಸಂದರ್ಭದಲ್ಲಿ ಸಿಎಎ ಅವರಿಗೆ ವರವಾಗಿ ಬಂದಿದೆ.
ಹೌದು ಹಂಪಿ ಉತ್ಸವದಲ್ಲಿ ವಿಜಯನಗರ ಜಿಲ್ಲೆ ಘೋಷಣೆಯಾಗುತ್ತೆ ಅಂತ ಪುಕಾರು ಎಬ್ಬಿತ್ತು. ಇದರಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ತನಗೂ ಜನರ ಬೆಂಬಲವಿದೆ ಎಂದು ಘೋಷಿಸುವುದು ರೆಡ್ಡಿಗಳಿಗೆ ಅನಿವಾರ್ಯವಾಗಿತ್ತು. ಹಾಗಾಗಿಯೇ ಸೋಮಶೇಖರ್ ರೆಡ್ಡಿ ಉಗ್ರ ಭಾಷಣ ಮಾಡಿದ್ದಾರೆ. ಆಶ್ರ್ಯ ಎಂದರೆ ಅಷ್ಟು ದಿನ ಜನಾರ್ದನ ರೆಡ್ಡಿ ಬಲಗೈ ಬಂಟನಂತಿದ್ದ ಮೆಹಫೂಜ್ ಅಲಿಖಾನ್ ಸೋಮಶೇಖರ್ ರೆಡ್ಡಿಗಳ ವಿರುದ್ಧವೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾನೆ. ಅಂದರೆ ಆ ವಿಚಾರವನ್ನು ಚಾಲ್ತಿಯಲ್ಲಿಡುವುದು ಅವರಿಗೆ ಅನಿವಾರ್ಯವಾಗಿದೆ.
ಇದರಿಂದ ಏಕಕಾಲದಲ್ಲಿ ಪ್ರಚಾರವೂ, ಆರ್ಎಸ್ಎಸ್ ಬೆಂಬಲವೂ ರೆಡ್ಡಿಗಳಿಗೆ ಸಿಕ್ಕಿದೆ. ಅವರ ಹೇಳಿಕೆ ಕೇಳಿದೊಡನೆಯು ಸ್ಥಳೀಯ ಆರ್ಎಸ್ಎಸ್ ಮುಖಂಡರು ಸೋಮಶೇಖರ್ ರೆಡ್ಡಿ ಪರವಾಗಿ ನಿಂತಿದ್ದಾರೆ. ಬಳ್ಳಾರಿಯಲ್ಲಿ ಹೆಚ್ಚು ಕೋಮುಗಲಭೆಗಳು ನಡೆದ ಉದಾಹರಣೆಗಳಿಲ್ಲ. ಮುಂದೇನಾದರೂ ಆದಲ್ಲಿ ಅದು ಬಿಜೆಪಿಗೆ ವರವಾಗುವ ಲಕ್ಷಣಗಳನ್ನು ತೋರಿಸುತ್ತಿವೆ. ಆದರೂ ಸೋಮಶೇಖರ್ ರೆಡ್ಡಿ ಇಷ್ಟಕ್ಕೆ ಸುಮ್ಮನಿದ್ದಿಲ್ಲ. ನಿನ್ನೆ ರೆಡ್ಡಿಗೆ ಸವಾಲು ಹಾಕಿ ಬಳ್ಳಾರಿಗೆ ಬಂದಿದ್ದ ಜಮೀರ್ ಅಹ್ಮದ್ ಖಾನ್ ಬಂಧನ, ಬಿಡುಗಡೆಯ ಬಳಿಕ ಆತ ನನಗೆ ಹೆದರಿಕೊಂಡು ವಾಪಸ್ ಹೋಗಿದ್ದಾನೆ ಎಂದು ತನ್ನ ವರಸೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಗೆ ಬರ್ತೀನಿ, ಅದೇನ್ ಮಾಡ್ತಿಯೋ ನೋಡ್ತೀನಿ: ಸೋಮಶೇಖರ್ ರೆಡ್ಡಿಗೆ ತೊಡೆ ತಟ್ಟಿದ ಜಮೀರ್ ಅಹ್ಮದ್
ಇನ್ನು ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಬಲ ಪ್ರತಿರೋಧ ತೋರಬಹುದಿದ್ದ ಕಾಂಗ್ರೆಸ್ ಸಂಪೂರ್ಣ ಮಲಗಿದೆ. ಜಮೀರ್ ಆಹ್ಮದ್ ಬರಬಾರದು ಎಂದು ಅರ್ಜಿ ಕೊಟ್ಟ ಕಾಂಗ್ರೆಸ್ ಮುಖಂಡ ಕೆ.ಸಿ ಕೊಂಡಯ್ಯ ಸೋಮಶೇಖರ್ ರೆಡ್ಡಿಯ ವಿರುದ್ಧ ಒಂದೂ ಹೇಳಿಕೆ ಕೊಟ್ಟಿಲ್ಲ. ಅಷ್ಟರಮಟ್ಟಿಗೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಮಾರಾಟವಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೆಲ್ಲದರ ಲಾಭ ಪಡೆದುಕೊಳ್ಳಲು ರೆಡ್ಡಿ ಸಹೋದರರು ಮುಂದಾಗಿದ್ದಾರೆ.
ಇನ್ನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಬಿ.ಶ್ರೀರಾಮುಲುಗೆ ಇದೆಲ್ಲಾ ಬೇಕಾಗಿಲ್ಲ. ಅದಕ್ಕಾಗಿಯೇ ಸೋಮಶೇಖರ್ ರೆಡ್ಡಿ ಹೇಳಿಕೆ ಕೊಟ್ಟ ಮರುದಿನವೇ ಮುಸ್ಲಿಂ ಮದುವೆಯೊಂದರಲ್ಲಿ ರೆಡ್ಡಿ ಜೊತೆ ಭಾಗವಹಿಸಿದ್ದಲ್ಲದೇ ಮುಸ್ಲಿಂ ಮುಖಂಡರ ಮುಂದೆ ಅಂಗಲಾಚಿ ಮಾತನಾಡಿದ್ದಾರೆ. ದೇಶದಲ್ಲಿ ಮೋದಿ ಅಲೆ ಇದೆ, ನಾವೆಲ್ಲರೂ ಅಣ್ಣತಮ್ಮಂದಿರಂತೆ ಇದ್ದೀವಿ, ಇದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳಬೇಡಿ ಎಂದು ಮನವಿ ಮಾಡುವ ವಿಡಿಯೋ ವೈರಲ್ ಆಗಿತ್ತು.
ಶ್ರೀರಾಮುಲು ಮುಸ್ಲಿಮರ ವಿರುದ್ಧ ನೇರವಾಗಿ ಮಾತಾಡುವುದಿಲ್ಲ. ಆದರೆ ಸೋಮಶೇಖರ್ ರೆಡ್ಡಿಯನ್ನು ಬಿಟ್ಟುಕೊಡುವಂತಿಲ್ಲ. ಏಕೆಂದರೆ ಬಳ್ಳಾರಿಯ ಹಿಡಿತ ತಪ್ಪುವುದು ಅವರಿಗೂ ಬೇಕಿಲ್ಲ. ತಮ್ಮ ಕುಟುಂಬದ ಅಸ್ತಿತ್ವ ಕಾಪಾಡಲು ಸಿಎಎ ಅವರಿಗೆ ಒಂದು ನೆಪವಾಗಿ ಸಿಕ್ಕಿದೆಯಷ್ಟೇ.
ಒಟ್ಟಿನಲ್ಲಿ ಸೋಮಶೇಖರ್ ರೆಡ್ಡಿ ಪ್ಲಾನ್ ವರ್ಕೌಟ್ ಆದಂತೆ ಕಾಣುತ್ತಿದೆ. ಒಂದು ಕಡೆ ರಾಜ್ಯಮಟ್ಟದ ಪ್ರಚಾರ, ಇನ್ನೊಂದು ಕಡೆ ಆರ್ಎಸ್ಎಸ್ ಬೆಂಬಲ.. ಇನ್ನು ವಿಜಯನಗರ ಜಿಲ್ಲೆಯ ಸೊಲ್ಲೆ ಕೇಳಿಬಂದಿಲ್ಲ ಎಂದಮೇಲೆ ಅವರಿಗೂ ಅದೇ ಬೇಕಿತ್ತು ತಾನೇ?
(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)


