Homeಕರ್ನಾಟಕವಿಷವುಣಿಸಿದ ಬಳಿಕ ನೀರು ಕೊಟ್ಟರೆ ಅಪರಾಧ ಮುಚ್ಚಿಹೋಗದು: ನಿರಂಜನಾರಾಧ್ಯ

ವಿಷವುಣಿಸಿದ ಬಳಿಕ ನೀರು ಕೊಟ್ಟರೆ ಅಪರಾಧ ಮುಚ್ಚಿಹೋಗದು: ನಿರಂಜನಾರಾಧ್ಯ

“ತೇಪ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗಲಾರದು. ಪಠ್ಯ ಪರಿಷ್ಕರಣೆಯೇ ಅಪ್ರಜಾಸತ್ತಾತ್ಮಕ ಎಂದಾದರೆ, ಅದನ್ನು ಆಧರಿಸಿ ಪರಿಷ್ಕರಿಸಿರುವ ಎಲ್ಲಾ ಪ್ರಕ್ರಿಯೆಗಳೂ ಅಕ್ರಮವೆಂದಲ್ಲವೇ!?”

- Advertisement -
- Advertisement -

“ವಿಷವುಣಿಸಿದ ಬಳಿಕ ನೀರು ಕೊಟ್ಟರೆ ಅಪರಾಧ ಮುಚ್ಚಿಹೋಗದು” ಎಂದು ಅಭಿವೃದ್ಧಿ ಶಿಕ್ಷಣ ತಜ್ಞ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರಾದ ಡಾ.ವಿ.ಪಿ.ನಿರಂಜನಾರಾಧ್ಯ ತಿಳಿಸಿದ್ದಾರೆ.

ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರವು ತಿದ್ದೋಲೆಯನ್ನು ಹೊರಡಿಸಲು ಅನುಮತಿ ನೀಡಿ ಹೊರಡಿಸಿರುವ ಸರಕಾರೀ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ತಿದ್ದೋಲೆ ಹೊರಡಿಸಲು ಅನುಮತಿಸಿರುವ ಆದೇಶವು, ವಿಷವುಣಿಸಿದ ವ್ಯಕ್ತಿ ಸಾಯುವ ಮುನ್ನ ನೀರು ಕೊಡಲು ಕರುಣಿಸಿದಂತಿದೆ. ಈ ಮೂಲಕ ವಿಷವುಣಿಸಿದ ಘೋರ ಅಪರಾಧವನ್ನು ಮುಚ್ಚಿ ಹಾಕಿ, ಅಪರಾಧವೇ ನಡೆದಿಲ್ಲವೇನೋ ಎಂಬಂತೆ ಬಿಂಬಿಸಲು ಹೊರಟಿರುವುದು, ಇಡೀ ಪ್ರಕ್ರಿಯೆಯ ಹಿಂದಿರುವ ಕುತಂತ್ರ ಹಾಗೂ ಹುನ್ನಾರಗಳನ್ನು ಬೆತ್ತಲೆಗೊಳಿಸಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೊಸ ಪಠ್ಯಪುಸ್ತಕಗಳು ಯಾವುದೇ ಸಹಜ ನ್ಯಾಯದ ತತ್ವಗಳನ್ನು (Principles of Natural Justice) ಅನುಸರಿಸದೆ ಅಸಾಂವಿಧಾನಿಕವಾಗಿವೆ. ನಿಯಮಾನುಸಾರ ಒಪ್ಪಿತ ಪಠ್ಯಕ್ರಮ ಚೌಕಟ್ಟಿನಲ್ಲಿ ನಡೆಯದ ಅಪ್ರಬುದ್ಧ, ಅಪಾರದರ್ಶಕ ಹಾಗೂ ಅಪ್ರಜಾಸತ್ತ್ಮಕ ನಿಯಮ ಬಾಹಿರ ಪ್ರಕ್ರಿಯೆಯನ್ನು ತಿದ್ದೋಲೆ ಹೊರಡಿಸುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಳ್ಳುವ ಜನವಿರೋಧಿ ನಡೆ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಮಕ್ಕಳ ಕಲಿಕೆಯನ್ನು ಮತ್ತಷ್ಟು ಗೊಂದಲಗೊಳಿಸುವುದಲ್ಲದೆ, ಕಳೆದ ಹಲವಾರು ದಶಕಗಳಿಂದ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಅಣಿಗೊಳಿಸಿದ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡುವ ಮೂಲಕ ದಮನಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುತ್ತದೆ ಎಂದು ಎಚ್ಚರಿಸಿದ್ದಾರೆ.

ಶಿಕ್ಷಣ ಹಕ್ಕಲ್ಲ, ಅದು ಕೆಲವರ ಸವಲತ್ತು ( Education is a privilege not a Right) ಎಂದು ವಾದಿಸುತ್ತಾ ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ದಮನಿತರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡುವ ಮೂಲಕ ನಡೆದಿದ್ದ ಅಕ್ಷರ ವಂಚನೆ ಸಂಸ್ಕೃತಿಯನ್ನು ಮುಂದುವರಿಸಲು, ಜನರನ್ನು ದಿಕ್ಕುತಪ್ಪಿಸಲು ಈ ಆದೇಶ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವ ಬದಲು, ತಿದ್ದೋಲೆ ಆದೇಶದ ಅನ್ವಯ ಪುಸ್ತಕಗಳಲ್ಲಿರುವ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಈ ಶೈಕ್ಷಣಿಕ ವರ್ಷ ಮುಗಿದು ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಕ್ಕಳಿಗೆ ವಿಷಪ್ರಾಶನ ಮಾಡುವ ಈ ಕೆಲಸದಲ್ಲಿ ಸರಕಾರವನ್ನು ಬಾಹ್ಯವಾಗಿ ನಿಯಂತ್ರಿಸುತ್ತಿರುವ, ಸಂವಿಧಾನಕ್ಕೂ ಮೀರಿದ ಶಕ್ತಿಗಳು ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಈಗ ಸರ್ಕಾರದ ಮೂಲಕವೇ ತಿದ್ದೋಲೆ ಕೊಡಿಸಲು ಹೊರಟಿರುವುದು ಸಂವಿಧಾನವನ್ನು ಅಣಕಿಸುವಂತಿದೆ ಎಂದು ಟೀಕಿಸಿದ್ದಾರೆ.

ತೇಪ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗಲಾರದು. ಪರಿಷ್ಕರಣೆಯ ಮೂಲ ಚಿಂತನೆಯೇ ದುರುದ್ದೇಶಪೂರಿತ ಹಾಗೂ ಅಪ್ರಜಾಸತ್ತಾತ್ಮಕ ಎಂದಾದರೆ, ಅದನ್ನು ಆಧರಿಸಿ ಪರಿಷ್ಕರಿಸಿರುವ ಎಲ್ಲಾ ಪ್ರಕ್ರಿಯೆಗಳು ಅಕ್ರಮವೆಂದಲ್ಲವೇ! ತಿದ್ದೋಲೆ ಮೂಲಕ ಪದ, ವಾಕ್ಯ, ಪ್ಯಾರಾ, ಪೋಟೋಗಳನ್ನು ಸರಿಪಡಿಸಿದರೆ ಅದು ಸಕ್ರಮವಾಗುವುದೇ? ಎಂದು ಪ್ರಶ್ನಿಸಿದ್ದಾರೆ.

ತಿದ್ದೋಲೆ ಆದೇಶವನ್ನು ಹೊರಡಿಸುವುದೆಂದರೆ ಸರ್ಕಾರ ಪಠ್ಯ ಪರಿಷ್ಕರಣೆ ಪ್ರಕ್ರಿಯಲ್ಲಿಯಾಗಿರುವ ಲೋಪಗಳನ್ನು ಅಧಿಕೃತವಾಗಿ ಒಪ್ಪಿದೆ ಎಂದಾಯಿತು. ತಪ್ಪಾಗಿರುವುದನ್ನು ಸರಕಾರ ಒಪ್ಪಿದ ಮೇಲೆ, ತಿದ್ದೋಲೆ ಮೂಲಕ ತಿಪ್ಪೆ ಸಾರಿಸುವ ನ್ಯಾಯವನ್ನು ಕೈಬಿಟ್ಟು ಅಸಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕವಾದ ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿ, ಅಲ್ಲಿರುವ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಒಂದು ಸ್ವತಂತ್ರ ತಜ್ಞರ ಸಮಿತಿ ಅಥವಾ ಸದನ ಸಮಿತಿಯನ್ನುಯನ್ನು ರಚಿಸುವುದು ಸೂಕ್ತ ತೀರ್ಮಾನವಾಗುತ್ತದೆ. ಅಲ್ಲಿಯವರೆಗೆ ಸಹಜ ನ್ಯಾಯದ ತತ್ವದಂತೆ ಯಥಾಸ್ಥಿಯನ್ನು, ಅಂದರೆ 2021-22ರಲ್ಲಿದ್ದ ಪುಸ್ತಕಗಳನ್ನೇ ಮುಂದುವರಿಸಿ,ತಜ್ಞರ ಸಮಿತಿ/ ಸದನ ಸಮಿತಿಯ ವರದಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವುದು ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ತೀರ್ಮಾನವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿರಿ: ಪಠ್ಯ ಪರಿಷ್ಕರಣೆ: 8 ತಪ್ಪು ತಿದ್ದಲು ಮುಂದಾದ ಸರ್ಕಾರ; ಹಾಗೆಯೇ ಉಳಿದ ಸಾಲು ಸಾಲು ಎಡವಟ್ಟು!

ಈಗಲಾದರೂ ಮುಖ್ಯಮಂತ್ರಿಯವರು, ತಮಗೇ ತಿಳಿಯದ ತೆರೆಮರೆಯ, ಈ ಎಲ್ಲಾ ಕುತಂತ್ರಗಳನ್ನು ಅರಿತು, ಸಂವಿಧಾನ ವಿರೋಧಿಗಳ ಕೈಗೊಂಬೆಯಾಗದೆ, ತಮ್ಮ ಸಂವಿಧಾನಬದ್ಧ ಅಧಿಕಾರವನ್ನು ಬಳಸಿ, ಇದಕ್ಕೆಲ್ಲ ಮೂಲ ಕಾರಣರಾದ ಶಿಕ್ಷಣ ಸಚಿವರನ್ನು ವಜಾಗೊಳಿಸಿ, ಆದೇಶರಹಿತ ಕಾನೂನು ಬಾಹಿರ ಪಠ್ಯ ಪರಿಷ್ಕರಣೆಯನ್ನು ಅಮಾನ್ಯಗೊಳಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ ಎಂದು ಪಕ್ಷಾತೀತವಾಗಿ ಶೈಕ್ಷಣಿಕ ವಲಯದಲ್ಲಿ ಕಳೆದ ಮೂರೂವರೆ ದಶಕಗಳಿಂದ ಶಾಲಾ ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನಾನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ಎಂದು ಕೋರಿದ್ದಾರೆ.

“ಇದು ಪ್ರತಿಷ್ಠೆಯ ಪ್ರಶ್ನೆಯಲ್ಲ. ಬದಲಿಗೆ ಮೌಲಿಕ ನ್ಯಾಯದ ಮತ್ತು ಪ್ರಜಾಸತ್ತೆಯನ್ನು ಗೌರವಿಸಿ ಸಂವಿಧಾನವನ್ನು ಎತ್ತಿಹಿಡಿಯುವ ಪ್ರಶ್ನೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...