ಕರೂರು ಕಾಲ್ತುಳಿತ ದುರಂತದ ಬಳಿಕ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಕುರಿತು ತೀವ್ರ ದುಖಃ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ.
“ನನ್ನ ಜೀವನದಲ್ಲಿ ಇದುವರೆಗೆ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎದುರಿಸಿಲ್ಲ. ನನ್ನ ಹೃದಯದಲ್ಲಿ ನೋವು ಮಾತ್ರ ಇದೆ. ಜನರು ರ‍್ಯಾಲಿಯಲ್ಲಿ ನನ್ನನ್ನು ನೋಡಲು ಬಂದಿದ್ದರು. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಯಾವಾಗಲೂ ಕೃತಜ್ಞನಾಗಿದ್ದೇನೆ. ಜನರ ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು, ರಾಜಕೀಯ ಬದಿಗಿಟ್ಟು ನಾನು ಸುರಕ್ಷಿತವಾದ ಸ್ಥಳವನ್ನು ಆರಿಸಿಕೊಂಡಿದ್ದೆ. ಆದರೆ, ಏನಾಗಬಾರದೋ ಅದು ಸಂಭವಿಸಿತು” ಎಂದು ವಿಜಯ್ ವಿಡಿಯೋದಲ್ಲಿ ಹೇಳಿದ್ದಾರೆ.
“ನಾನೂ ಒಬ್ಬ ಮನುಷ್ಯ. ಅಷ್ಟೊಂದು ಜನರು ಸಂಕಷ್ಟಕ್ಕೆ ಸಿಲುಕಿದಾಗ, ನಾನು ಅವರನ್ನು ಬಿಟ್ಟು ಹೇಗೆ ಹೋಗಲಿ? ಆದರೆ, ಮತ್ತೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ನಾನು ದುರಂತ ಸ್ಥಳಕ್ಕೆ ವಾಪಸ್ ಹೋಗಲಿಲ್ಲ” ಎಂದು ತಿಳಿಸಿದ್ದಾರೆ.
ಮುಂದುವರಿದು, “ನಾವು ಯಾವುದೇ ತಪ್ಪು ಮಾಡಿಲ್ಲ. ಆದರೆ, ನಮ್ಮ ಪಕ್ಷದ ನಾಯಕರು, ಸ್ನೇಹಿತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಸಿಎಂ ಸರ್, ನೀವು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ನನಗೆ ಏನು ಬೇಕಾದರು ಮಾಡಿ. ಆದರೆ, ಅವರನ್ನು ಮುಟ್ಟಬೇಡಿ. ನಾನು ಮನೆಯಲ್ಲಿಯೇ ಇರುತ್ತೇನೆ ಅಥವಾ ನನ್ನ ಕಚೇರಿಯಲ್ಲಿಯೇ ಇರುತ್ತೇನೆ. ನೀವು ನನಗೆ ಏನು ಬೇಕಾದರೂ ಮಾಡಿ”ಎಂದು ವಿಜಯ್ ಹೇಳಿದ್ದಾರೆ.
— TVK Vijay (@TVKVijayHQ) September 30, 2025
“ರಾಜಕೀಯ ಪಿತೂರಿಯ ಬಗ್ಗೆ ಉಲ್ಲೇಖಿಸಿದ ಅವರು, “ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ. ಕರೂರಿನಲ್ಲಿ ಮಾತ್ರ ಏಕೆ ಹೀಗಾಯಿತು? ಇದು ಹೇಗೆ ಸಂಭವಿಸಿತು? ಜನರಿಗೆ ಸತ್ಯ ತಿಳಿದಿದೆ ಮತ್ತು ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದಿದ್ದಾರೆ.
“ನಮಗೆ ನೀಡಲಾದ ಸ್ಥಳದಿಂದಲೇ ನಾವು ಮಾತನಾಡಿದ್ದೇವೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕರೂರಿನ ಜನರು ಸತ್ಯ ಹೇಳುವುದನ್ನು ನೋಡುವಾಗ (ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು) ದೇವರೇ ಸತ್ಯ ಮಾತನಾಡಲು ಭೂಮಿಗೆ ಇಳಿದಂತೆ ಭಾಸವಾಗುತ್ತಿದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ” ಎಂದು ನನಗೆ ವಿಶ್ವಾಸವಿದೆ” ಎಂದು ವಿಜಯ್ ಹೇಳಿದ್ದಾರೆ.
ಕಾಲ್ತುಳಿತ ದುರಂತದ ಸಂತ್ರಸ್ತ ಕುಟುಂಬಗಳ ನೋವಿನ ಬಗ್ಗೆ ಉಲ್ಲೇಖಿಸಿದ ವಿಜಯ್, “ಈ ಸಂದರ್ಭದಲ್ಲಿ ನಾವೆಲ್ಲರೂ ನೋವಿನಲ್ಲಿದ್ದೇವೆ. ಅನೇಕ ಕುಟುಂಬಗಳು ನೋವಿನಿಂದ ಬಳಲುತ್ತಿವೆ ಎಂದು ನನಗೆ ತಿಳಿದಿದೆ. ಗಾಯಗೊಂಡ ಎಲ್ಲರೂ ಬೇಗ ಗುಣಮುಖರಾಗಲಿ. ಸಾಧ್ಯವಾದಷ್ಟು ಬೇಗ ನಿಮ್ಮೆಲ್ಲರನ್ನೂ ನಾನು ಭೇಟಿಯಾಗುತ್ತೇನೆ” ಎಂದು ತಿಳಿಸಿದ್ದಾರೆ.
“ನಮ್ಮ ರಾಜಕೀಯ ಪ್ರಯಾಣವು ಹೆಚ್ಚಿನ ಶಕ್ತಿ ಮತ್ತು ನಿರ್ಭಯತೆಯಿಂದ ಮುಂದುವರಿಯುತ್ತದೆ. ಈ ಸಮಯದಲ್ಲಿ, ರಾಜಕಾರಣಿಗಳು, ಪಕ್ಷದ ಸದಸ್ಯರು, ನಾಯಕರು ಮತ್ತು ನನ್ನ ಪರವಾಗಿ ಮಾತನಾಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳುವ ಮೂಲಕ ವಿಜಯ್ ತಮ್ಮ ವಿಡಿಯೋ ಕೊನೆಗೊಳಿಸಿದ್ದಾರೆ.
ಕರೂರು ಕಾಲ್ತುಳಿತದ ಬಗ್ಗೆ ವದಂತಿ ಹರಡಿದ ಆರೋಪ: ಯೂಟ್ಯೂಬರ್ ಸೇರಿ ನಾಲ್ವರ ಬಂಧನ


