ಗಾಲ್ವಾನ್ ಕಣಿವೆಯಲ್ಲಿ 2020ರಲ್ಲಿ ಚೀನಾದೊಂದಿಗೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 4) ತಡೆ ನೀಡಿದೆ.
ಮಧ್ಯಂತರ ಪರಿಹಾರ (ತಡೆ) ನೀಡಲಾಗಿದ್ದರೂ, ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿಗಳಾಧ ದೀಪಂಕರ್ ದತ್ತ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿ ಮೌಖಿಕ ಹೇಳಿಕೆಗಳನ್ನು ನೀಡಿದೆ.
ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, “ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳ ಬಗ್ಗೆ ಮಾತನಾಡಲು ಸಾಧ್ಯವಾಗದಿದ್ದರೆ, ಅದು ದುರದೃಷ್ಟಕರ ಪರಿಸ್ಥಿತಿ. ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ” ಎಂದು ಸಿಂಘ್ವಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತ ಅವರು “ನೀವು ಏನು ಹೇಳಬೇಕೋ ಅದನ್ನು ಸಂಸತ್ತಿನಲ್ಲಿ ಏಕೆ ಹೇಳಬಾರದು? ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನೀವು ಇದನ್ನು ಏಕೆ ಹೇಳಬೇಕು?” ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರ ಹೇಳಿಕೆಗೆ ಮತ್ತಷ್ಟು ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ದತ್ತ ಅವರು, “ಡಾ. ಸಿಂಘ್ವಿ ಅವರೇ, 2000 ಚದರ ಕಿಲೋಮೀಟರ್ ಭಾರತೀಯ ಭೂ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆಂದು ನಿಮಗೆ (ರಾಹುಲ್ ಗಾಂಧಿಗೆ) ಹೇಗೆ ತಿಳಿಯಿತು? ನೀವು ಅಲ್ಲಿದ್ರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯಾ? ಯಾವುದೇ ಮಾಹಿತಿಯಿಲ್ಲದೆ ನೀವು ಈ ಹೇಳಿಕೆಗಳನ್ನು ಏಕೆ ನೀಡುತ್ತೀರಿ. ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನೆಲ್ಲಾ ಹೇಳುತ್ತಿರಲಿಲ್ಲ” ಎಂದರು.
ಇದಕ್ಕೆ, “ನಮ್ಮ 20 ಸೈನಿಕರನ್ನು ಹೊಡೆದು ಕೊಲ್ಲಲಾಯಿತು. ಅದು ಕಳವಳಕಾರಿ ವಿಷಯ ಎಂದು ನಿಜವಾದ ಭಾರತೀಯನೊಬ್ಬ ಹೇಳಬಹುದು” ಎಂದು ಸಿಂಘ್ವಿ ಉತ್ತರಿಸಿದರು.
ಈ ವೇಳೆ “ಗಡಿಗಳಲ್ಲಿ ಸಂಘರ್ಷ ಉಂಟಾದಾಗ, ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸುವುದು ಅಸಾಮಾನ್ಯವೇ?” ಎಂದು ನ್ಯಾಯಮೂರ್ತಿ ದತ್ತ ಮರು ಪ್ರಶ್ನೆ ಹಾಕಿದರು.
ಇದಕ್ಕೆ ಉತ್ತರಿಸಿದ ಸಿಂಘ್ವಿ, “ಗಡಿ ಸಂಘರ್ಷದ ಬಗ್ಗೆ ಸರಿಯಾದ ಮಾಹಿತಿ ಕೊಡಬೇಕು. ಯಾವುದೇ ವಿಷಯಗಳನ್ನು ಮುಚ್ಚಿಡಬಾರದು ಎಂಬ ಉದ್ದೇಶದಿಂದ ಮಾತ್ರ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು ಎಂದಿದ್ದಾರೆ. ಆದರೆ ನ್ಯಾಯಮೂರ್ತಿ ದತ್ತ ಅವರು ಈ ಬಗ್ಗೆ ಮಾತನಾಡಲು ಸರಿಯಾದ ವೇದಿಕೆ ಇದೆ ಎಂದು ಹೇಳಿದರು.
ಅರ್ಜಿದಾರರು (ರಾಹುಲ್ ಗಾಂಧಿ) ತಮ್ಮ ಹೇಳಿಕೆಗಳನ್ನು ಉತ್ತಮ ರೀತಿಯಲ್ಲಿ ಹೇಳಬಹುದಿತ್ತು ಎಂದು ಒಪ್ಪಿಕೊಂಡ ಸಿಂಘ್ವಿ, ಕೇವಲ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಶ್ನೆಗಳನ್ನು ಎತ್ತುವುದು ವಿರೋಧ ಪಕ್ಷದ ನಾಯಕನ ಕರ್ತವ್ಯ. ಸೆಕ್ಷನ್ 223 ಬಿಎನ್‌ಎಸ್‌ಎಸ್ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ದೂರನ್ನು ಪರಿಗಣಿಸುವ ಮೊದಲು ಆರೋಪಿಯ ಪೂರ್ವ ವಿಚಾರಣೆ ಕಡ್ಡಾಯವಾಗಿದೆ. ಆದರೆ, ಅದನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಸೆಕ್ಷನ್ 223ರ ಈ ಅಂಶವನ್ನು ಹೈಕೋರ್ಟ್ ಮುಂದೆ ಎತ್ತಲಾಗಿಲ್ಲ ಎಂದು ನ್ಯಾಯಮೂರ್ತಿ ದತ್ತ ಹೇಳಿದರು.
ಈ ಅಂಶವನ್ನು ಎತ್ತುವಲ್ಲಿ ಲೋಪವಾಗಿದೆ ಎಂದು ಸಿಂಘ್ವಿ ಒಪ್ಪಿಕೊಂಡರು. ಹೈಕೋರ್ಟ್‌ನಲ್ಲಿನ ಸವಾಲು ಪ್ರಾಥಮಿಕವಾಗಿ ದೂರುದಾರರ ಸ್ಥಳದ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು. ದೂರುದಾರರು ‘ನೊಂದ ವ್ಯಕ್ತಿ’ ಅಲ್ಲದಿದ್ದರೂ, ‘ಮಾನಹಾನಿಗೊಳಗಾದ ವ್ಯಕ್ತಿ’ ಎಂಬ ಹೈಕೋರ್ಟ್‌ನ ತರ್ಕವನ್ನು ಸಿಂಘ್ವಿ ಪ್ರಶ್ನಿಸಿದರು.
ಅಂತಿಮವಾಗಿ ಈ ಅಂಶವನ್ನು ಪರಿಗಣಿಸಲು ಪೀಠ ಒಪ್ಪಿಕೊಂಡಿತು ಮತ್ತು ಅಲಹಾಬಾದ್ ಹೈಕೋರ್ಟ್‌ನ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿದ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ವಿಶೇಷ ರಜಾ ಅವಧಿಯ ಅರ್ಜಿಯ ಕುರಿತು ನೋಟಿಸ್ ಜಾರಿಗೊಳಿಸಿತು. ವಿಚಾರಣೆಗೆ ಮೂರು ವಾರಗಳ ಅವಧಿಗೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಹಿರಿಯ ವಕೀಲ ಗೌರವ್ ಭಾಟಿಯಾ ಅವರು ದೂರುದಾರರ ಪರವಾಗಿ ಕೇವಿಯಟ್ ಮೇಲೆ ಹಾಜರಾಗಿದ್ದರು.
ಮೇ 29ರಂದು, ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿಯವರ ಅರ್ಜಿಯನ್ನು ತಿರಸ್ಕರಿಸಿತ್ತು. ಅವರು ಮಾನನಷ್ಟ ಪ್ರಕರಣವನ್ನು ಮತ್ತು ಫೆಬ್ರವರಿ 202 ರಲ್ಲಿ ಲಕ್ನೋದ ಸಂಸದ ಶಾಸಕರ ನ್ಯಾಯಾಲಯವು ಹೊರಡಿಸಿದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಭಾರತೀಯ ಸೇನೆಯ ಕುರಿತು ಅವಮಾನಕರವಾದ ಹೇಳಿಕೆಗಳನ್ನು ನೀಡುವ ಸ್ವಾತಂತ್ರ್ಯವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಒಳಗೊಂಡಿಲ್ಲ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಹೇಳಿದ್ದರು.
ಮಾಲೆಗಾಂವ್| ಜಾತಿ ಶ್ರೇಣಿ ಜಾರಿಗೊಳಿಸಿದವರು ಸನಾತನ ಧರ್ಮದ ಭಯೋತ್ಪಾದಕರು – ಎನ್‌ಸಿಪಿ-ಎಸ್‌ಸಿಪಿ ಶಾಸಕ


