ವಿಶ್ವ ಬ್ಯಾಂಕಿನ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (ಐಎಫ್‌ಸಿ)ಯು ‘ವಸತಿ ಅಭಿವೃದ್ಧಿ ಹಣಕಾಸು ನಿಗಮ’ದಲ್ಲಿ (ಎಚ್‌ಡಿಎಫ್‌ಸಿ) 186 ಕೋಟಿ ರೂಪಾಯಿ ಸಾಲ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಎಚ್‌ಡಿಎಫ್‌ಸಿ ಭಾರತೀಯ ಹಣಕಾಸು ಸೇವೆಗಳ ಕಂಪನಿಯಾಗಿದೆ.
ಎಚ್‌ಡಿಎಫ್‌ಸಿ ಭಾರತದ ಪ್ರಮುಖ ವಸತಿ ಹಣಕಾಸು ಪೂರೈಕೆದಾರ ಸಂಸ್ಥೆಯಾಗಿದ್ದು, ಇದು ಬ್ಯಾಂಕಿಂಗ್, ಜೀವ ಮತ್ತು ಸಾಮಾನ್ಯ ವಿಮೆ, ಆಸ್ತಿ ನಿರ್ವಹಣೆ, ಸಾಹಸೋದ್ಯಮ ಬಂಡವಾಳ, ಶಿಕ್ಷಣ, ಠೇವಣಿ ಮತ್ತು ಶಿಕ್ಷಣ ಸಾಲಗಳ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಒಕ್ಕೂಟ ಬಜೆಟ್ 2021-22: ಉಳ್ಳವರನ್ನು, ಉದ್ಯಮಪತಿಗಳನ್ನು, ವಾಣಿಜ್ಯೋದ್ಯಮಿಗಳನ್ನು ತಣಿಸಲು ಪ್ರಯತ್ನಿಸಿರುವ ವೈಭವದ ಮಾತಿನ ಬಜೆಟ್
“ಉದ್ದೇಶಿತ ಹೂಡಿಕೆಯು ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ 186 ಕೋಟಿ ರೂ. (250 ಮಿಲಿಯನ್ ಡಾಲರ್) ವರೆಗಿನ ದೊಡ್ಡ ಸಾಲ ಹೂಡಿಕೆಯನ್ನು ಒಳಗೊಂಡಿದೆ. ಸಾಲದ ಆದಾಯವನ್ನು ಚಿಲ್ಲರೆ ಖರೀದಿದಾರರಿಗೆ ಕೈಗೆಟುಕುವ ದರದಲ್ಲಿ ವಸತಿಗಾಗಿ ಹಣಕಾಸು ಒದಗಿಸಲು ಬಳಸಲಾಗುತ್ತದೆ. ಪರಸ್ಪರ ಒಪ್ಪಿತ ಐಎಫ್‌ಸಿ ನಿಧಿಯೊಂದಿಗೆ ಕೈಗೆಟುಕುವ ಪರಿಸರ ಸ್ನೇಹಿ ವಸತಿಗಾಗಿ ಮೀಸಲಿಡಲಾಗುವುದು” ಎಂದು ಐಎಫ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಕೈಗೆಟುಕುವ ಪರಿಸರ ಸ್ನೇಹಿ ವಸತಿಯನ್ನು ನಿರ್ಮಿಸುವ ಹಲವು ಅಂಶಗಳ ಬಗ್ಗೆ ಎಚ್‌ಡಿಎಫ್‌ಸಿಗೆ ತಾನು ಸಲಹೆ ನೀಡುವುದಾಗಿ ಐಎಫ್‌ಸಿ ಹೇಳಿದೆ.
ಭಾರತ ಸರ್ಕಾರದ “2022 ರೊಳಗೆ ಎಲ್ಲರಿಗೂ ವಸತಿ”ಯ ಉಪಕ್ರಮಕ್ಕೆ ಅನುಗುಣವಾಗಿ, ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ವಸತಿಗಾಗಿ ಹಣಕಾಸಿನ ಲಭ್ಯತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ” ಎಂದು ಐಎಫ್‌ಸಿ ಹೇಳಿದೆ.
ಇದನ್ನೂ ಓದಿ: ಶ್ರೀಲಂಕಾ ಮೇಲೆ ವಾಣಿಜ್ಯ ನಿರ್ಬಂಧ ಹೇರಲು ಮುಂದಾದ ಯುರೋಪಿಯನ್ ಸಂಸತ್ತು


