Homeಅಂತರಾಷ್ಟ್ರೀಯಶ್ರೀಲಂಕಾ ಮೇಲೆ ವಾಣಿಜ್ಯ ನಿರ್ಬಂಧ ಹೇರಲು ಮುಂದಾದ ಯುರೋಪಿಯನ್‌ ಸಂಸತ್ತು

ಶ್ರೀಲಂಕಾ ಮೇಲೆ ವಾಣಿಜ್ಯ ನಿರ್ಬಂಧ ಹೇರಲು ಮುಂದಾದ ಯುರೋಪಿಯನ್‌ ಸಂಸತ್ತು

ಶ್ರೀಲಂಕಾ ದೇಶದಲ್ಲಿ ಹೆಚ್ಚಾಗಿ ತಮಿಳರನ್ನು ಬಂಧಿಸಲು, ಶಿಕ್ಷಿಸಲು ಬಳಕೆಯಾಗುವ ಪ್ರಿವೆನ್ಶನ್‌ ಆಫ್‌ ಟೆರರಿಸಮ್‌ ಆಕ್ಟ್‌ (PTA) ನ್ನು ವಜಾಗೊಳಿಸಲು ಯುರೋಪಿಯನ್‌ ಒತ್ತಡ ಹೇರಿದೆ.

- Advertisement -
- Advertisement -

ಶ್ರೀಲಂಕಾ ಸರ್ಕಾರದ ತಮಿಳರ ಮೇಲಿನ ಧೋರಣೆ ಇಡಿ ಜಗತ್ತಿಗೆ ತಿಳಿದಿರುವಂತದ್ದು. ಶ್ರೀಲಂಕಾ ಸರ್ಕಾರವೇ ಮುಂದೆ ನಿಂತು ಅಲ್ಲಿನ ತಮಿಳು ಭಾಷಿಕ ಜನಾಂಗದ ಮೇಲೆ ದೌರ್ಜನ್ಯ ನಡೆಸಿದ ಪರಿಣಾಮ ಇಂದು ಲಕ್ಷಾಂತರ ಜನ ಶ್ರೀಲಂಕನ್‌ ತಮಿಳರು ತಮ್ಮ ತಾಯ್ನಾಡು ತೊರೆದು ಭಾರತ, ಸಿಂಗಾಪುರ್‌, ಯುರೋಪ್‌, ಬ್ರಿಟನ್‌, ಚೀನಾಗಳಲ್ಲಿ ನಿರಾಶ್ರಿತರಾಗಿ ನೆಲೆಸಿದ್ದಾರೆ. ಶ್ರೀಲಂಕಾ ಸರ್ಕಾರ ತಮಿಳರ ಹಕ್ಕೊತ್ತಾಯದ ಪ್ರತಿಭಟನೆಗಳನ್ನು ಭಯೋತ್ಪಾದನೆಯಂತೆಯೇ ಕಾಣುತ್ತ ಬಂದಿದೆ. ಇದನ್ನು ಅಂತರಾಷ್ಟ್ರೀಯ ಸಮುದಾಯ, ವಿಶ್ವ ಸಂಸ್ಥೆ, ವಿಶ್ವ ಮಾನವ ಹಕ್ಕುಗಳ ಆಯೋಗಳು ಖಂಡಿಸುತ್ತಲೇ ಬಂದಿವೆ. ವಿಶ್ವ ಸಂಸ್ಥೆಯು ಶ್ರೀಲಂಕಾ ದೇಶದ ಮೇಲೆ ಹಲವು ನಿರ್ಬಂಧಗಳನ್ನು ಈಗಾಗಲೇ ವಿಧಿಸಿದೆ. ಈಗ ಯುರೋಪಿಯನ್‌ ಯೂನಿಯನ್‌ ಕೂಡ ವಿಶ್ವ ಸಂಸ್ಥೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿದೆ.

ನೆನ್ನೆ ಗುರುವಾರ ಜೂನ್‌ 10 ರಂದು ಯುರೋಪಿಯನ್‌ ಯೂನಿಯನ್‌ನ ಸಂಸತ್ತು ಹೊಸ ನಿರ್ಣಯ ಒಂದನ್ನು ಅಂಗೀಕರಿಸಿದೆ. ಶ್ರೀಲಂಕಾ ದೇಶದಲ್ಲಿ ಹೆಚ್ಚಾಗಿ ತಮಿಳರನ್ನು ಬಂಧಿಸಲು, ಶಿಕ್ಷಿಸಲು ಬಳಕೆಯಾಗುವ ಪ್ರಿವೆನ್ಶನ್‌ ಆಫ್‌ ಟೆರರಿಸಮ್‌ ಆಕ್ಟ್‌ (PTA) ನ್ನು ವಜಾಗೊಳಿಸಲು ಒತ್ತಡ ಹೇರುವಂತೆ ಯುರೋಪಿಯನ್‌ ಯೂನಿಯನ್‌ ಭಾರಿ ಬಹುಮತದಿಂದ ನಿರ್ಣಯ ಅಂಗೀಕರಿಸಿದೆ. ಯೂನಿಯನ್‌ ಸಂಸತ್‌ ನ 705 ಸದಸ್ಯರಲ್ಲಿ 628 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ : ರೈತರ ಪ್ರತಿಭಟನೆಗೆ ಬೆದರಿದ ಹರಿಯಾಣ ಸಿಎಂ: ಆನ್‌ಲೈನ್‌ನಲ್ಲೇ ಕಾರ್ಯಕ್ರಮ ಉದ್ಘಾಟಿಸಲು ನಿರ್ಧಾರ

ಗುರುವಾರ ಯುರೋಪಿಯನ್‌ ಯೂನಿಯನ್‌ ಸ್ವೀಕರಿಸಿದ ಈ ರೆಸಲ್ಯೂಶನ್‌ನಲ್ಲಿ ಶ್ರೀಲಂಕಾದ ಮೇಲೆ ತಾತ್ಕಾಲಿಕ ವಾಣಿಜ್ಯ ನಿರ್ಬಂಧ ಹೇರುವುದು ಮುಖ್ಯವಾದ ಅಂಶವಾಗಿದೆ. ಶ್ರೀಲಂಕಾದ ಉತ್ಪನ್ನಗಳು ಯೂರೋಪಿನ ಮಾರುಕಟ್ಟೆಗೆ ಪ್ರವೇಶಿಸಿದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಬೇಕು ಎಂದು ಯುರೋಪಿಯನ್‌ ಪಾರ್ಲಿಮೆಂಟ್ ತನ್ನ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದೆ. ಶ್ರೀಲಂಕಾದ ಮುತ್ತು, ರತ್ನ, ರಬ್ಬರ್‌, ಸಾಂಬಾರು, ಚಹ ಉತ್ಪನ್ನಗಳಿಗೆ ಯುರೋಪನಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ನಿರ್ಬಂಧ ಶ್ರೀಲಂಕಾದ ಆರ್ಥಿಕತೆ ಮತ್ತು ವಿದೇಶಿ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿದೆ.

ನಾವು ಶ್ರೀಲಂಕಾ ಸರ್ಕಾರ ತನ್ನ ಜನರಿಗೆ ನೀಡಿದ್ದ ಸಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಶ್ರೀಲಂಕಾದ ಅಪಾರದರ್ಶಕ ನ್ಯಾಯ ನಿರ್ಣಯಗಳನ್ನು ನೋಡುತ್ತಿದ್ದೇವೆ. ನಿರ್ದಿಷ್ಟ ಸಮುದಾಯವನ್ನು ಶ್ರೀಲಂಕಾದಿಂದ ಹೊರಹಾಕುವ ಪ್ರಯತ್ನವನ್ನು ನೋಡುತ್ತಿದ್ದೇವೆ. ಶ್ರೀಲಂಕಾದಲ್ಲಿ ಪ್ರಿವೆನ್ಶನ್‌ ಆಫ್‌ ಟೆರರಿಸಮ್‌ ಕಾಯ್ದೆಯು ಹೋರಾಟಗಾರರು, ಬರಹಗಾರರನ್ನು ಮತ್ತು ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವವರನ್ನು ದಮನಿಸಲು ಬಳಕೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಯುರೋಪಿನ್‌ ಕಮಿಷನರ್‌ ಹೆಲೇನಾ ಡಾಲಿ ಅವರು ತಿಳಿಸಿದ್ದಾರೆ.

ಶ್ರೀಲಂಕಾ

 

ಯುರೋಪಿಯನ್‌ ಯುನಿಯನ್‌ ಜಗತ್ತಿನ ಎಲ್ಲರ ಮಾನವ ಹಕ್ಕುಗಳನ್ನು ಬೆಂಬಲಿಸುತ್ತದೆ. ಶ್ರೀಲಂಕಾದಲ್ಲಿ ಭಯೋತ್ಪಾದನಾ ನಿಷೇಧ ಕಾಯ್ದೆಯಡಿ ಬಂಧಿಸಿದವರನ್ನು ಸರಿಯಾದ ರೀತಿಯಲ್ಲಿ ಕಾನೂನು ಪ್ರಕಾರ ವಿಚಾರಣೆ ನಡೆಸಬೇಕು. ಈ ಕ್ರೂರಿ ದಮನಕಾರಿ ಕಾನೂನು ವಜಾಗೊಳ್ಳಬೇಕೆಂದು ಯುರೋಪಿಯನ್‌ ಯೂನಿಯನ್‌ ಶ್ರೀಲಂಕಾದ ಮೇಲೆ ಒತ್ತಡವನ್ನು ಹೇರುತ್ತದೆ ಎಂದು ಹೆಲೇನಾ ಡಾಲಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಸತತವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಕಗ್ಗೊಲೆಯ ಕುರಿತು ಹೊಸ ರೆಸಲ್ಯೂಶನ್‌ನಲ್ಲಿ ಯುರೋಪಿಯನ್‌ ಸಂಸತ್ತು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಜೊತೆಗೆ ಶ್ರೀಲಂಕಾ ಕುರಿತಾದ ವಿಶ್ವಸಂಸ್ಥೆಯ ವಿವಿಧ ವರದಿಗಳನ್ನೂ ಸಹ ರೆಸಲ್ಯೂಶನ್‌ನಲ್ಲಿ ಉಲ್ಲೇಖಿಸಲಾಗಿದೆ.

ಶ್ರೀಲಂಕಾಗೆ ಯುರೋಪ್‌ನಲ್ಲಿ ಕಲ್ಪಿಸಲಾಗಿದ್ದ ವಿಶೇಷ ತೆರಿಗೆ ಮತ್ತು ಆಮದು ಸುಂಕ ರಹಿತ ಮಾರುಕಟ್ಟೆ ಸೌಲಭ್ಯಕ್ಕೆ (GSP) ಯುರೋಪಿಯನ್‌ ಸಂಸತ್ತು ಅಂತ್ಯ ಹಾಡಿದೆ.

ಈ ಹಿಂದೆ 2021 ರ ಮಾರ್ಚ್‌ನಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಮಿಷೆಲ್‌ ಬ್ಯಾಚಲೆಟ್‌ ಶ್ರೀಲಂಕಾದ ಮೇಲೆ ಸಾಧ್ಯವಾದಷ್ಟು ನಿರ್ಬಂಧಗಳನ್ನು ಹೇರುವಂತೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಮನವಿ ಮಾಡಿದ್ದರು.

ಶ್ರೀಲಂಕಾದಲ್ಲಿ ದಿನೇ ದಿನೇ ಭಯೋತ್ಪಾದನಾ ನಿಷೇಧ ಕಾಯ್ದೆ ಅಡಿಯಲ್ಲಿ ಹೋರಾಟಗಾರರ ಮೇಲೆ, ತಮಿಳು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಲೈಂಗಿಕ ದೌರ್ಜನ್ಯ, ಕಗ್ಗೊಲೆ ಮುಂತಾದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳು ಶ್ರೀಲಂಕಾದಿಂದ ಬರುತ್ತಿವೆ. ಯುರೋಪಿಯನ್‌ ಯೂನಿಯನ್‌ ನಿರ್ಬಂಧದ ನಂತರ ವಿಶ್ವ ಸಂಸ್ಥೆ ಕೂಡ ಶ್ರೀಲಂಕಾದ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಗಳಿವೆ.


ಇದನ್ನೂ ಓದಿ : ಸಂಚಾರ ನಿರ್ಬಂಧ ತೆರವಿಗೆ ಚೀನಾ ಜೊತೆ ಭಾರತ ಮಾತುಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

0
ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯಲ್ಲಿ ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಕಂಗೆಟ್ಟ ಬುಡಕಟ್ಟು ಗ್ರಾಮದ 600ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ...