ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಕಿರಣ್ ರಾವ್ ನಿರ್ದೇಶನದ ಚಲನಚಿತ್ರ ‘ಲಾಪತಾ ಲೇಡೀಸ್’ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (ಐಐಎಫ್‌ಎ-ಐಫಾ) 2025ರಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಭಾನುವಾರ (ಮಾ.9) ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ‘ಅತ್ಯುತ್ತಮ ಚಿತ್ರ’ ಮತ್ತು ‘ಅತ್ಯುತ್ತಮ ನಿರ್ದೇಶನ’ ಸೇರಿದಂತೆ 10 ಪ್ರಶಸ್ತಿಗಳನ್ನು ಲಾಪತಾ ಲೇಡಿಸ್ ತಂಡ ಗೆದ್ದುಕೊಂಡಿದೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಲಾಪತಾ ಲೇಡಿಸ್ ಐಫಾದ ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ‘ಕಿರಣ್ ರಾವ್ ಅತ್ಯುತ್ತಮ ನಿರ್ದೇಶಕಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಚಿತ್ರದಲ್ಲಿ ಕಳೆದುಹೋದ ವಧುವಿನ ಪಾತ್ರ ಮಾಡಿರುವ ನಿತಾಂಶಿ ಗೋಯೆಲ್ ಪ್ರಮುಖ ಪಾತ್ರದಲ್ಲಿ (ಮಹಿಳೆ) ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.

“ಲಾಪತಾ ಲೇಡೀಸ್’ ನಂತಹ ಚಿತ್ರಕ್ಕಾಗಿ ಪ್ರಶಸ್ತಿ ಗೆಲ್ಲುವುದು ಅಪರೂಪದ ಸೌಭಾಗ್ಯ. ಈ ರೀತಿಯ ಚಿತ್ರವನ್ನು ನಿರ್ಮಿಸುವುದೇ ಒಂದು ಅಪರೂಪದ ಸೌಭಾಗ್ಯ. ಈ ರಾತ್ರಿ ಸ್ಮರಣೀಯವಾದದ್ದು” ಎಂದು ಭಾನುವಾರ ರಾತ್ರಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಕಿರಣ್ ರಾವ್ ಹೇಳಿದ್ದಾರೆ.
“ನಿಮ್ಮ ಚಿತ್ರವನ್ನು ನಾವು ಒಮ್ಮೆ ಅಲ್ಲ, ಹಲವು ಬಾರಿ ನೋಡಿದ್ದೇವೆ ಎಂದು ಹೇಳುವ ಜನರ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ. ಒಬ್ಬರು ಚಲನಚಿತ್ರ ನಿರ್ಮಾಪಕರು ಬದುಕುವುದೇ ಇದಕ್ಕಾಗಿಯೇ. ಆದ್ದರಿಂದ ನಮ್ಮ ಚಲನಚಿತ್ರಗಳನ್ನು ನೋಡಿದ್ದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಅವರು ‘ಭೂಲ್ ಭುಲೈಯಾ 3′ ಚಿತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ (ಪುರುಷ) ಅತ್ಯುತ್ತಮ ಅಭಿನಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕರಣ್ ಜೋಹರ್ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದ ನಟ ಆರ್ಯನ್, “ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರಿಂದ ಫ್ರಾಂಚೈಸಿಯನ್ನು ವಹಿಸಿಕೊಂಡಾಗ ಜನರು ತನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು” ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಹೇಳಿದ್ದಾರೆ.
“ಭೂಲ್ ಭುಲೈಯಾ’ ಚಿತ್ರದ ನಟನೆಯು ಸವಾಲುಗಳಿಂದ ಕೂಡಿದ್ದ ಪ್ರಯಾಣವಾಗಿತ್ತು. ಆರಂಭದಿಂದಲೂ, ನಾನು ‘ಭೂಲ್ ಭುಲೈಯಾ 2’ಗೆ ಆಯ್ಕೆಯಾದಾಗ, ಈ ಚಿತ್ರವನ್ನು ಮುಂದುವರೆಸಲು ಸಾಧ್ಯವಾಗುತ್ತದೆಯೇ? ಎಂಬ ಹಲವು ಪ್ರಶ್ನೆಗಳು ನನ್ನಲ್ಲಿ ಎದ್ದಿತ್ತು. ಭೂಲ್ ಭುಲೈಯಾ 3ರ ಚಿತ್ರೀಕರಣದ ಸಮಯದಲ್ಲಿಯೂ ಇದೇ ರೀತಿಯ ಪ್ರಶ್ನೆಗಳು ನನ್ನಲ್ಲಿ ಮೂಡಿದ್ದವು” ಎಂದಿದ್ದಾರೆ.

“ಬಾಲ್ಯದಲ್ಲಿ ದೂರದರ್ಶನದಲ್ಲಿ ಐಫಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೋಡುತ್ತಿದ್ದೆ. ಆದರೆ, ನಾನೇ ಹೋಗಿ ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ನಟಿ ನಿತಾಂಶಿ ಗೋಯೆಲ್ ಭಾವುಕರಾದರು.
“ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸುವ ಚಿತ್ರದ ಭಾಗವಾಗುವುದು ಯಾರಿಗಾದರೂ ಒಂದು ಕನಸಾಗಿರುತ್ತದೆ. ನನಗೆ ಲಾಪತಾ ಲೇಡಿಸ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಹಿಗೆಯೇ ಇರಲಿ” ಎಂದು ಹೇಳಿದ್ದಾರೆ.

ನಿತಾಂಶಿ ಗೋಯೆಲ್ ಅವರ ಸಹ ನಟರಾದ ರವಿ ಕಿಶನ್ ಮತ್ತು ಪ್ರತಿಭಾ ರಂತ ಕ್ರಮವಾಗಿ ಅತ್ಯುತ್ತಮ ಪೋಷಕ ಪಾತ್ರ (ಪುರುಷ) ಮತ್ತು ಅತ್ಯುತ್ತಮ ಆರಂಭ (ಮಹಿಳೆ) ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಲಾಪತಾ ಲೇಡೀಸ್ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ, ಅವುಗಳಲ್ಲಿ ಬಿಪ್ಲಬ್ ಗೋಸ್ವಾಮಿಗೆ ಅತ್ಯುತ್ತಮ ಕಥೆ (ಮೂಲ), ಸ್ನೇಹಾ ದೇಸಾಯಿಗೆ ಅತ್ಯುತ್ತಮ ಚಿತ್ರಕಥೆ ಮತ್ತು ಜಬೀನ್ ಮರ್ಚೆಂಟ್‌ಗೆ ಅತ್ಯುತ್ತಮ ಸಂಕಲನ ಪ್ರಶಸ್ತಿಗಳು ಸೇರಿವೆ.
‘ಸಜ್ನಿ’ ಹಾಡಿಗೆ ಪ್ರಶಾಂತ್ ಪಾಂಡೆ ಅತ್ಯುತ್ತಮ ಸಾಹಿತ್ಯ ಮತ್ತು ರಾಮ್ ಸಂಪತ್ ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಪಡೆದ್ದಾರೆ. ‘ಶೈತಾನ್’ ಚಿತ್ರದ ಅಭಿನಯಕ್ಕಾಗಿ ನಟಿ ಜಾನಕಿ ಬೋಡಿವಾಲಾ ಅತ್ಯುತ್ತಮ ಪೋಷಕ ಪಾತ್ರ (ಮಹಿಳೆ) ಪ್ರಶಸ್ತಿಯನ್ನು ಪಡೆದಿದ್ದು, ‘ಕಿಲ್’ ಚಿತ್ರದ ಪಾತ್ರಕ್ಕಾಗಿ ರಾಘವ್ ಜುಯಾಲ್ ಅತ್ಯುತ್ತಮ ನಕಾರಾತ್ಮಕ ಪಾತ್ರದ (Negative Role ) ಅಭಿನಯ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಚೊಚ್ಚಲ (ಡೆಬ್ಯೂ) ವಿಭಾಗಗಳಲ್ಲಿ, ಮಡ್ಗಾಂವ್ ಎಕ್ಸ್‌ಪ್ರೆಸ್‌ಗಾಗಿ ಕುನಾಲ್ ಕೆಮ್ಮು ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿಯನ್ನು ಗೆದ್ದರೆ, ಕಿಲ್ ಚಿತ್ರದ ಪಾತ್ರಕ್ಕಾಗಿ ಲಕ್ಷ್ಯ ಲಾಲ್ವಾನಿ ಅತ್ಯುತ್ತಮ ಚೊಚ್ಚಲ (ಪುರುಷ) ಪ್ರಶಸ್ತಿಯನ್ನು ಪಡೆದಿದ್ದಾರೆ.
‘ಅಡಾಪ್ಟೇಶನ್’ ಚಿತ್ರಕ್ಕಾಗಿ ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲಧಾ ಸೂರ್ತಿ, ಮತ್ತು ಅನುಕೃತಿ ಪಾಂಡೆಯ ಮೇರಿ ಕ್ರಿಸ್ಮಸ್ ತಂಡಕ್ಕೆ ಅತ್ಯುತ್ತಮ ಕಥೆ ದೊರೆತಿದೆ. ತಾಂತ್ರಿಕ ವಿಭಾಗಗಳಲ್ಲಿ ಕಿಲ್ ಚಿತ್ರಕ್ಕಾಗಿ ರಫೇ ಮಹಮೂದ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಸುಭಾಷ್ ಸಾಹೂ, ಬೊಲೊಯ್ ಕುಮಾರ್ ಡೊಲೊಯ್ ಹಾಗೂ ರಾಹುಲ್ ಕಾರ್ಪೆ ಅವರಿಗೆ ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿ ಸಿಕ್ಕಿದೆ.

ಆರ್ಟಿಕಲ್ 370 ಚಿತ್ರಕ್ಕಾಗಿ ಅರ್ಜುನ್ ಧವನ್, ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ ಮತ್ತು ಮೋನಾಲ್ ಥಾಕರ್ ಅವರಿಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ದೊರೆತಿದೆ.
ವಿಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಝ್’ ಚಿತ್ರದ ‘ತೌಬಾ ತೌಬಾ’ ಹಾಡಿಗಾಗಿ ಬಾಸ್ಕೋ-ಸೀಸರ್ ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ‘ಭೂಲ್ ಭುಲೈಯಾ 3’ ಚಿತ್ರದ ‘ರೆಡ್ ಚಿಲ್ಲೀಸ್’ ವಿಎಫ್ಎಕ್ಸ್ ಅತ್ಯುತ್ತಮ ವಿಎಫ್ಎಕ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಂಗೀತ ವಿಭಾಗಗಳಲ್ಲಿ, ‘ಆರ್ಟಿಕಲ್ 370ರ’ ‘ದುವಾ’ ಹಾಡಿಗಾಗಿ ಜುಬಿನ್ ನೌಟಿಯಾಲ್ ಅತ್ಯುತ್ತಮ ಗಾಯಕ (ಪುರುಷ) ಪ್ರಶಸ್ತಿಯನ್ನು ಪಡೆದಿದ್ದು, ‘ಭೂಲ್ ಭುಲೈಯಾ 3 ರ’ ‘ಅಮಿ ಜೆ ತೋಮರ್ 3.0’ ಹಾಡಿಗಾಗಿ ಶ್ರೇಯಾ ಘೋಷಾಲ್ ಅತ್ಯುತ್ತಮ ಗಾಯಕಿ (ಮಹಿಳೆ) ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಹಿರಿಯ ಚಲನಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಅವರಿಗೆ ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಅವರನ್ನು ಹಿರಿಯ ನಟಿ ರೇಖಾ ಸನ್ಮಾನಿಸಿದ್ದಾರೆ.
ಬೆಂಗಳೂರು ಚಲನಚಿತ್ರೋತ್ಸವ | ಹಿರಿಯ ನಟಿ ಶಬಾನಾ ಅಝ್ಮಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’


