ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರಿನ (ಐಐಎಂಬಿ) ಡೀನ್, ನಿರ್ದೇಶಕ ಮತ್ತು ಅಧ್ಯಾಪಕರ ವಿರುದ್ಧ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಆರಂಭಿಸಿದ ವಿಚಾರಣಾ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು TNIE ವರದಿ ಮಾಡಿದೆ. ಐಐಎಂಬಿಯ ಮಾರ್ಕೆಟಿಂಗ್‌ನ ಸಹ ಪ್ರಾಧ್ಯಾಪಕ ಡಾ.ಗೋಪಾಲ್ ದಾಸ್ ಅವರಿಗೆ ಜಾತಿ ಆಧಾರಿತ ಅವಮಾನ ಮಾಡಲಾಗಿದೆ ಮತ್ತು ದೌರ್ಜನ್ಯ ಎಸಲಾಗಿದೆ ಎಂಬ ಆರೋಪದ ಬಗ್ಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ವಿಚಾರಣೆ ಪ್ರಾರಂಭಿಸಿತ್ತು. ಐಐಎಂಬಿ ಜಾತಿ ದೌರ್ಜನ್ಯ
ನಿರ್ದೇಶಕ ಪ್ರೊ. ಋಷಿಕೇಶ ಟಿ.ಕೃಷ್ಣನ್, ಡೀನ್ ಪ್ರಾಧ್ಯಾಪಕ ಪ್ರೊ.ದಿನೇಶ್ ಕುಮಾರ್ ಮತ್ತು ಇತರ ಅಧ್ಯಾಪಕರಾದ ಪ್ರೊ. ಶ್ರೀಲತಾ ಜೊನ್ನಲಗೆದ್ದ, ಪ್ರೊ. ರಾಹುಲ್ ಡಿ, ಪ್ರೊ. ಆಶಿಸ್ ಮಿಶ್ರಾ ಮತ್ತು ಪ್ರೊ. ಚೇತನ್ ಸುಬ್ರಮಣಿಯನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ನೀಡಲಾಗಿದೆ. ಮತ್ತೊಬ್ಬ ಅರ್ಜಿದಾರರಾದ ಐಐಎಂಬಿಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರ ವಿಚಾರಣೆಗೆ ಜುಲೈ 18ರಂದು ತಡೆಯಾಜ್ಞೆ ನೀಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎಲ್ಲಾ ಅರ್ಜಿದಾರರು ಗೋಪಾಲ್ ದಾಸ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಡಿಸಿಆರ್‌ಇ ಪ್ರಾರಂಭಿಸಿದ ಸಂಪೂರ್ಣ ಪ್ರಕ್ರಿಯೆಗಳನ್ನು ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜನವರಿ 2025 ರ ಎರಡನೇ ವಾರಕ್ಕೆ ಕೋರ್ಟ್ ಮುಂದೂಡಿದೆ. ಏತನ್ಮಧ್ಯೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ನಿರ್ದೇಶಕರು ಮತ್ತು ಇತರರು ಇತ್ತೀಚೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಐಐಎಂಬಿ ಜಾತಿ ದೌರ್ಜನ್ಯ
ಏನಿದು ಪ್ರಕರಣ?
ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ದಲಿತ ವಿದ್ವಾಂಸರಾದ ಅಸೋಸಿಯೇಟ್ ಪ್ರೊಫೆಸರ್ ಗೋಪಾಲ್ ದಾಸ್ ಅವರು ಐಐಎಂ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ದೌರ್ಜನ್ಯದ ಕುರಿತು
2024ರ ಜನವರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು.
ಪತ್ರದಲ್ಲಿ ಅವರು ಆರೋಪಗಳನ್ನು ಮಾಡಿದ್ದು, ಮುಖ್ಯವಾಗಿ, ಸಾಂಸ್ಥಿಕ ಚಟುವಟಿಕೆಗಳಿಂದ ಹೊರಗಿಡುವುದು, ಸಂಪನ್ಮೂಲಗಳನ್ನು ಪಡೆಯಲು ತಡೆ ಒಡ್ಡುವುದು ಸೇರಿದಂತೆ ಐಐಎಂಬಿಯಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳ ಕುರಿತು ಪ್ರೊಫೆಸರ್ ಗೋಪಾಲ್ ದಾಸ್ ಅವರು ತನ್ನ ಪತ್ರದಲ್ಲಿ ರಾಷ್ಟ್ರಪತಿಗೆ ವಿವರಿಸಿದ್ದರು. ಬಳಿಕ ರಾಷ್ಟ್ರಪತಿ ಕಚೇರಿಯ ನಿರ್ದೇಶನದ ಮೇರೆಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಮಾರ್ಚ್‌ನಲ್ಲಿ ಜಾತಿ ದೌರ್ಜನ್ಯದ ಕುರಿತು ತನಿಖೆ ಕೈಗೊಂಡಿತ್ತು.
ಮೇ ತಿಂಗಳಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ದೂರು ಸಲ್ಲಿಸಿದ್ದ ಗೋಪಾಲ್ ದಾಸ್ ಅವರು, ಡಿಸಿಆರ್‌ಇ ತನಿಖೆ ಪ್ರಾರಂಭಿಸಿದ ನಂತರ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿದ್ದರು.
ಈ ನಡುವೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅರುಣ್ ಚಕ್ರವರ್ತಿ ನೇತೃತ್ವದ ಡಿಸಿಆರ್‌ಇ ತನಿಖೆಯು ನವೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಗೋಪಾಲ್ ದಾಸ್ ಅವರ ಮೇಲಿನ ಜಾತಿ ಆಧಾರಿತ ದೌರ್ಜನ್ಯ ಮತ್ತು ಅವರನ್ನು ಕೆಲಸದ ಸ್ಥಳದಿಂದ ಹೊರಗಿಡಲು ಪ್ರಯತ್ನಿಸಿದರ ಕುರಿತು ಮಹತ್ವದ ಸಾಕ್ಷ್ಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸಂಸ್ಥೆಯೊಳಗೆ ಹರಿದಾಡಿದ ಸಾಮೂಹಿಕ ಈ-ಮೇಲ್‌ನಲ್ಲಿ ನಿರ್ದೇಶಕ ರಿಷಿಕೇಶ್ ಕೃಷ್ಣನ್ ಅವರು ಗೋಪಾಲ್ ದಾಸ್ ಅವರ ಜಾತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎಂದು ವರದಿ ಆರೋಪಿಸಿತ್ತು. ರಿಷಿಕೇಶ್ ಮತ್ತು ಡೀನ್ ದಿನೇಶ್ ಕುಮಾರ್ ಅವರು ವೃತ್ತಿಪರ ಚಟುವಟಿಕೆಗಳಲ್ಲಿ ಗೋಪಾಲ್ ದಾಸ್ ಅವರಿಗೆ ಸಮಾನ ಅವಕಾಶಗಳನ್ನು ನಿರಾಕರಿಸಿದ್ದಾರೆ ಎಂದು ವರದಿ ಹೇಳಿತ್ತು. ಅಲ್ಲದೆ, ಎಸ್‌ಸಿ ಮತ್ತು ಎಸ್‌ಟಿ ಉದ್ಯೋಗಿಗಳ ಕುಂದುಕೊರತೆಗಳನ್ನು ಪರಿಹರಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸುವ ಶಾಸನಬದ್ಧ ಜವಾಬ್ದಾರಿಗಳನ್ನು ಅನುಸರಿಸಲು ಐಐಎಂ-ಬಿ ವಿಫಲವಾಗಿದೆ ಎಂದು ವರದಿಯು ಎತ್ತಿ ತೋರಿಸಿತ್ತು.
ವರದಿ ಆಧರಿಸಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಡಿಸೆಂಬರ್ 9ರಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಐಐಎಂ-ಬಿ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿತ್ತು.
ಇದರ ನಂತರ, ಐಐಎಂ-ಬಿಯ ನಿರ್ದೇಶಕ ರಿಷಿಕೇಶ್ ಟಿ ಕೃಷ್ಣನ್, ಹಿರಿಯ ಅಧ್ಯಾಪಕ ಹಾಗೂ ಡೀನ್ ಡಾ.ದಿನೇಶ್ ಕುಮಾರ್, ಪ್ರಾಧ್ಯಾಪಕರಾದ ಸೈನೇಶ್ ಜಿ, ಶ್ರೀನಿವಾಸ್ ಪ್ರಕಾ, ಚೇತನ್ ಸುಬ್ರಮಣಿಯನ್, ಆಶಿಶ್ ಮಿಶ್ರಾ, ಶ್ರೀಲತಾ ಜೋನಲಗೇಡು ಮತ್ತು ರಾಹುಲ್ ದೆ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಆರ್) (ಎಸ್‌ಸಿ/ಎಸ್‌ಟಿ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಬೆದರಿಸುವುದು) ಮತ್ತು 3(1)(ಎಸ್) (ಎಸ್‌ಸಿ/ಎಸ್‌ಟಿ ವ್ಯಕ್ತಿಯನ್ನು ಜಾತಿ ಹೆಸರಿನಿಂದ ನಿಂದಿಸುವುದು) ಅಡಿಯಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಐಐಎಂನಲ್ಲಿ ಜಾತಿ ದೌರ್ಜನ್ಯ : ನಿರ್ದೇಶಕ, 7 ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು ಐಐಎಂನಲ್ಲಿ ಜಾತಿ ದೌರ್ಜನ್ಯ : ನಿರ್ದೇಶಕ, 7 ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲು


