ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಎಂ) ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಮತ್ತು ಜೀರ್ಣಕಾರಿ ಗುಣಗಳನ್ನು ಹೊಂದಿದ್ದು, ಜ್ವರ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಜನವರಿ 15ರಂದು ನಡೆದ ‘ಗೋ ಸಂರಕ್ಷಣಾ ಸಾಲ’ ಎಂಬ ಕಾರ್ಯಕ್ರಮದಲ್ಲಿ ಕಾಮಕೋಟಿ ಅವರು ಈ ಹೇಳಿಕೆಗಳನ್ನು ನೀಡಿದ್ದು, ಜನವರಿ 20ರ ಸೋಮವಾರ ಸಾರ್ವಜನಿಕರ ಗಮನಕ್ಕೆ ಬಂದ ಬಳಿಕ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತಮ್ಮ ಭಾಷಣದಲ್ಲಿ ಕಾಮಕೋಟಿ ಅವರು ಗೋಮೂತ್ರ ಸೇವಿಸಿದ ನಂತರ ತೀವ್ರ ಜ್ವರದಿಂದ ಚೇತರಿಸಿಕೊಂಡ ಸನ್ಯಾಸಿಯೊಬ್ಬರ ಕಥೆ ಹೇಳಿದ್ದಾರೆ. ಗೋಮೂತ್ರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಎನ್ನುವ ಮೂಲಕ ಅದರಲ್ಲಿ ‘ಔಷಧೀಯ ಗುಣವಿದೆ’ ಎಂದು ಪ್ರತಿಪಾದಿಸಿದ್ದಾರೆ.
ಕಾಮಕೋಟಿಯವರ ಹೇಳಿಕೆಗೆ ಅನೇಕರು ‘ಹುಸಿ ವಿಜ್ಞಾನ’ ಎಂದು ಪ್ರತಿಕ್ರಿಯೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರು ಐಐಟಿ ನಿರ್ದೇಶಕನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಾಮಕೋಟಿ ಅವರ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುವ ಮೂಲಕ ಟೀಕೆ ಮಾಡಿದವರಲ್ಲಿ ಮೊದಲಿಗರು.
ಎಕ್ಸ್‌ನಲ್ಲಿ ಕಾಮಕೋಟಿಯವರ ಹೇಳಿಕೆಯ ಮಾಧ್ಯಮ ವರದಿಗಳನ್ನು ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ ” ಅದ್ಭುತ ವಿಚಾರ ! ಇದನ್ನು ಪೂರ್ಣ ಪ್ರಮಾಣದ ಸಾಮೂಹಿಕ ಆಂದೋಲನವನ್ನಾಗಿ ಪರಿವರ್ತಿಸೋಣ! ಎಲ್ಲಾ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಮಾದರಿಯಾಗಿ ಮುನ್ನಡೆಯಬೇಕೆಂದು ನಾನು ಹೃತ್ಪೂರ್ವಕವಾಗಿ ಒತ್ತಾಯಿಸುತ್ತೇನೆ. ಸಾರ್ವಜನಿಕವಾಗಿ 250 ಮಿಲಿ (ಅಥವಾ ಕನಿಷ್ಠ 100 ಮಿಲಿ) ಗೋಮೂತ್ರವನ್ನು ಸೇವಿಸಿ ಮತ್ತು ಅದರ ಅದ್ಭುತ ಪ್ರಯೋಜನಗಳನ್ನು ಉತ್ಸಾಹದಿಂದ ತೋರಿಸಬೇಕು” ಎಂದು ಬರೆದುಕೊಂಡಿದ್ದಾರೆ.
“ಎರಡು ಪಟ್ಟು ಆರೋಗ್ಯವನ್ನು ಬಯಸುವವರು ಅಲ್ಲಿಗೇ ಏಕೆ ನಿಲ್ಲಿಸಬೇಕು? ಇದರ ಜೊತೆ ರುಚಿಕರವಾದ ಹಸುವಿನ ಸಗಣಿ ಕೇಕ್ ಅನ್ನೂ ಸೇರಿಸಿ” ಎಂದು ಕಾಲೆಳೆದಿದ್ದಾರೆ.
ಮುಂದುವರಿದು, “ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ನಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಸಂಶೋಧನಾ ಸಂಸ್ಥೆಗಳು ನಗೆಪಾಟಲಿಗೆ ಈಡಾಗುತ್ತಿರುವುದು ದುರಂತ. ಒಂದು ಕಾಲದಲ್ಲಿ ರಾಷ್ಟ್ರದ ಹೆಮ್ಮೆಯಾಗಿದ್ದ ಈ ಸಂಸ್ಥೆಗಳು, ನಾವೀನ್ಯತೆಗೆ ಮೀಸಲಿಡಬೇಕಾದ ಉತ್ಸಾಹವನ್ನು ‘ಹುಸಿ ವಿಜ್ಞಾನ’ದ ಮೂಲಕ ಕಳೆದುಕೊಳ್ಳುತ್ತಿವೆ. ಈ ದೇಶದ ಬುದ್ಧಿಶಕ್ತಿಗೆ ಎಂತಹ ಅಪಚಾರ” ಎಂದಿದ್ದಾರೆ.
Absolutely brilliant! Let’s turn this into a full-fledged mass movement! I wholeheartedly urge all RSS and BJP leaders to lead by example—publicly downing 250 ml (or even a modest 100 ml) of Gaumutra and enthusiastically endorsing its miraculous benefits.
For those seeking a… pic.twitter.com/TiDrqFWiX4
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 20, 2025
ಡಿಎಂಕೆ ವಕ್ತಾರ ಟಿ.ಕೆ.ಎಸ್ ಎಳಂಗೋವನ್ ಕೂಡ ಐಐಟಿ ನಿರ್ದೇಶಕ ಕಾಮಕೋಟಿ ಅವರ ಹೇಳಿಕೆ ಖಂಡಿಸಿದ್ದು, “ಅವರು (ಕಾಮಕೋಟಿ) ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಲು ಅನರ್ಹರು. ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಹಾಕಬೇಕು. ಅವರು ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಹ, ಐಐಟಿ-ಎಂ ನಂತಹ ಸಂಸ್ಥೆಯನ್ನು ಮುನ್ನಡೆಸಲು ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರ ಟೀಕೆಯ ನಡುವೆಯೂ, ಕಾಮಕೋಟಿ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದು, ತನ್ನ ಹೇಳಿಕೆ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗೋಮೂತ್ರವು ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಎಂದು ಸಾಬೀತುಪಡಿಸುವ ಐದು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ಅಮೆರಿಕನ್ ಶಿಕ್ಷಣ ತಜ್ಞರು ಪ್ರಕಟಿಸಿದ್ದಾರೆ” ಎಂದು ಹೇಳಿದ್ದಾರೆ.
ರಾಜಕೀಯ ನಾಯಕರ ಟೀಕೆಯ ಬಗ್ಗೆ ಪ್ರಶ್ನಿಸಿದಾಗ, ಪ್ರತಿಕ್ರಿಯೆ ನೀಡಲು ಕಾಮಕೋಟಿ ಅವರು ನಿರಾಕರಿಸಿದ್ದಾರೆ. ಆದರೆ, ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, ವಿಮರ್ಶಕರು ನನ್ನ ಹೇಳಿಕೆಯನ್ನು ವಿರೋಧಿಸುವ ಮೊದಲು ಸಂಶೋಧನಾ ಪ್ರಬಂಧಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.


