ಹಿಂದೂ-ಮುಸ್ಲಿಂ ದಂಪತಿಯನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರಿಗೆ ಶನಿವಾರ (ಅ.19) ಛೀಮಾರಿ ಹಾಕಿದ ಅಲಹಾಬಾದ್ ಹೈಕೋರ್ಟ್, ಪೊಲೀಸರ ನಡೆ ಕಾನೂನುಬಾಹಿರ ಮತ್ತು ಸಂವಿಧಾನದ 21ನೇ ವಿಧಿಯಡಿ ಖಾತ್ರಿ ಪಡಿಸಲಾದ ದಂಪತಿಯ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.
ದಂಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದ್ದು, ಅವರಿಗೆ ಯಾವುದೇ ಕಿರುಕುಳ ನೀಡದೆ ಅಲೀಗಢ ತಲುಪುವವರೆಗೆ ರಕ್ಷಣೆ ಒದಗಿಸುವಂತೆ ಸೂಚಿಸಿದೆ.
ಶೇನ್ ಅಲೀ ಮತ್ತು ರಶ್ಮಿ ಈ ಪ್ರಕರಣದ ದಂಪತಿ. ನನ್ನ ಮಗಳನ್ನು ಶೇನ್ ಅಲೀ ಅಪಹರಿಸಿದ್ದಾನೆ ಎಂದು ಸೆಪ್ಟೆಂಬರ್ 27ರಂದು ಅಲೀಗಢದ ಅಕ್ರಬಾದ್ ಪೊಲೀಸ್ ಠಾಣೆಯಲ್ಲಿ ರಶ್ಮಿಯ ತಂದೆ ದೂರು ದಾಖಲಿಸಿದ್ದರು.
ಅಕ್ಟೋಬರ್ 15ರಂದು ಹೈಕೋರ್ಟ್ ಮುಂದೆ ಹಾಜರಾದ ದಂಪತಿ, ನಾವು ಇಬ್ಬರೂ ವಯಸ್ಕರು, ಪರಸ್ಪರ ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದೇವೆ ಎಂದಿದ್ದರು. ತನ್ನ ವಿರುದ್ದ ರಶ್ಮಿಯ ತಂದೆ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಶೇನ್ ಅಲೀ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ದಂಪತಿ ಹೈಕೋರ್ಟ್‌ನಿಂದ ಹೊರ ಬಂದ ಕೂಡಲೇ ರಶ್ಮಿಯ ತಂದೆ ಸ್ಥಳೀಯ ಪೊಲೀಸರ ಸಹಾಯದಿಂದ ಇಬ್ಬರನ್ನೂ ಅಪಹರಿಸಿದ್ದರು. ಅವರನ್ನು ಅಲೀಗಢಕ್ಕೆ ಕರೆದೊಯ್ದು, ರಶ್ಮಿಯನ್ನು ‘ಒನ್ ಸ್ಟಾಪ್ ಸೆಂಟರ್’ ಅಥವಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಶೇನ್ ಅಲೀಯನ್ನು ಪೊಲೀಸರು ಬಂಧಿಸಿ ಲಾಕ್ ಅಪ್‌ನಲ್ಲಿ ಇಟ್ಟಿದ್ದರು.
ಅಕ್ಟೋಬರ್ 17ರಂದು ದಂಪತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 183ರ ಅಡಿ ರಶ್ಮಿ ಹೇಳಿಕೆ ನೀಡಿದ್ದರು.
ಈ ನಡುವೆ ಶೇನ್ ಅಲೀಯ ಸಹೋದರ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಶನಿವಾರ ರಜಾ ದಿನವಾದರೂ ನ್ಯಾಯಮೂರ್ತಿಗಳಾದ ಸಲೀಲ್ ಕುಮಾರ್ ರೈ ಮತ್ತು ದಿವೇಶ್ ಚಂದ್ರ ಸಮಂತ್ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ, “ಅಕ್ಟೋಬರ್ 17 ರಂದು ರಶ್ಮಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಅಲ್ಲಿ ಆಕೆ ವಯಸ್ಕಳೆಂದು ಕಂಡುಬಂದಿದೆ. ಅಲ್ಲದೆ, ಶೇನ್ ಅಲೀಯನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ” ಎಂದು ಸರ್ಕಾರಿ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
“ವಿಡಿಯೋ ಕಾನ್ಫರೆನ್ಸ್‌ನಲ್ಲಿ ನ್ಯಾಯಾಧೀಶರ ಮುಂದೆ ಹಾಜರಾದ ರಶ್ಮಿ, “ತನಗೆ 21 ವರ್ಷ ವಯಸ್ಸಾಗಿದ್ದು, ಶೇನ್ ಅಲಿಯನ್ನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ. ಆತನೊಂದಿಗೆ ಜೀವಿಸಲು ಬಯಸಿದ್ದೇನೆ ಎಂದಿದ್ದಾರೆ. ತನ್ನ ಹಿಂದಿನ ಹೇಳಿಕೆಯನ್ನು ಯಾವುದೇ ಒತ್ತಡವಿಲ್ಲದೆ ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಮೇಜರ್ ಆಗಿರುವುದರಿಂದ ಆಕೆ ಬಯಸಿದ ಯಾರೊಂದಿಗಾದರೂ ಹೋಗಿ ಜೀವಿಸಲು ಸ್ವತಂತ್ರಳು ಎಂದಿರುವ ಹೈಕೋರ್ಟ್ ಪೀಠ, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನಿರ್ಧರಿಸಲು ಅವರ ವಿವಾಹದ ಸಿಂಧುತ್ವವು ಪ್ರಸ್ತುತವಲ್ಲ ಎಂದಿದೆ.
ಅಕ್ಟೋಬರ್ 15ರಂದು ಹೈಕೋರ್ಟ್ ಆವರಣದಿಂದ ಅಪಹರಿಸಿ ಅಲಿಗಢಕ್ಕೆ ಕರೆದೊಯ್ದಿದ್ದಾರೆ ಎಂಬ ದಂಪತಿಯ ಹೇಳಿಕೆಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
“ಅಕ್ರಬಾದ್ ಠಾಣೆಯಲ್ಲಿ ರಶ್ಮಿಯ ತಂದೆ ದಾಖಲಿಸಿರುವ ಎಫ್‌ಐಆರ್‌ನ ತನಿಖಾಧಿಕಾರಿ, ದಂಪತಿಯ ಧಾರ್ಮಿಕ ಭಿನ್ನಾಭಿಪ್ರಾಯಗಳು ಮತ್ತು ಅವರ ವಿವಾಹದ ಕಾನೂನುಬದ್ಧತೆಯ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅಂತಹ ಯಾವುದೇ ತನಿಖೆಯ ಅಗತ್ಯವಿರಲಿಲ್ಲ. ಮ್ಯಾಜಿಸ್ಟ್ರೇಟ್ ಆಕೆಯನ್ನು ಬಿಡುಗಡೆ ಮಾಡಿದ ನಂತರ ಪೊಲೀಸರ ಏಕೈಕ ಕೆಲಸವೆಂದರೆ ದಂಪತಿ ಹೇಳಿದ ಜಾಗಕ್ಕೆ ಸೂಕ್ತ ರಕ್ಷಣೆಯೊಂದಿಗೆ ಅವರನ್ನು ಕಳುಹಿಸಿ ಕೊಡುವುದಾಗಿದೆ ಹೈಕೋರ್ಟ್ ತಿಳಿಸಿದೆ.
ವಿಚಾರಣೆ ವೇಳೆ ಅಂತರ್ಧರ್ಮೀಯ ವಿವಾಹ ಹಿನ್ನೆಲೆ ಸಾಮಾಜಿಕ ಒತ್ತಡದಿಂದ ದಂಪತಿಯನ್ನು ಬಂಧಿಸಲಾಗಿದೆ ಎಂಬ ಪೊಲೀಸರ ಅಥವಾ ಸರ್ಕಾರದ ಸಮರ್ಥನೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಒಬ್ಬರು ವ್ಯಕ್ತಿಯನ್ನು ಸೂಕ್ತ ಕಾನೂನಿನಡಿ ಮಾತ್ರ ಬಂಧಿಸಬಹುದು, ಸಾಮಾಜಿಕ ಒತ್ತಡ ಹಿನ್ನೆಲೆ ಬಂಧಿಸಲು ಸಾಧ್ಯವಿಲ್ಲ ಎಂದಿದೆ.
ಪೊಲೀಸರ ಕ್ರಮ ವಿಧಿ 21 ರ ಉಲ್ಲಂಘನೆ ಎಂದು ಹೇಳಿದ ನ್ಯಾಯಪೀಠ, ಸರ್ಕಾರದ ಕರ್ತವ್ಯ ನಾಗರಿಕರ ಸ್ವಾತಂತ್ರ್ಯವನ್ನು ರಕ್ಷಿಸುವುದು, ಸಾಮಾಜಿಕ ಒತ್ತಡಕ್ಕೆ ಶರಣಾಗುವುದು ಅಲ್ಲ ಎಂದು ಸ್ಪಷ್ಟಪಡಿಸಿದೆ.
ದಂಪತಿಗೆ ರಕ್ಷಣೆ ಒದಗಿಸಲು ಮತ್ತು ಅವರ ಸ್ವತಂತ್ರ ಜೀವನಕ್ಕೆ ಯಾರೂ ಅಡ್ಡಿಪಡಿಸದಂತೆ ನೋಡಿಕೊಳ್ಳಲು
ಪ್ರಯಾಗ್‌ರಾಜ್ ಪೊಲೀಸ್ ಆಯುಕ್ತರು, ಅಲಿಗಢ ಮತ್ತು ಬರೇಲಿಯ ಎಸ್‌ಎಸ್‌ಪಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ನವೆಂಬರ್ 28, 2025ರೊಳಗೆ ವರದಿ ಸಲ್ಲಿಸುವಂತೆ ಅಲಿಗಢದ ಎಸ್‌ಎಸ್‌ಪಿಗೆ ಆದೇಶಿಸಿದೆ.
ಕೇರಳ ಹಿಜಾಬ್ ವಿವಾದ: ವರ್ಗಾವಣೆ ಪ್ರಮಾಣಪತ್ರ ಕೇಳಿದ ಇಬ್ಬರು ವಿದ್ಯಾರ್ಥಿಗಳು


