ಎರಡು ಕುಟುಂಬಗಳ ನಡುವಿನ ಗಲಾಟೆ ಪ್ರಕರಣವೊಂದರಲ್ಲಿ ಆರು ದಿನಗಳ ಅಕ್ರಮ ಸೆರೆವಾಸಕ್ಕೆ ಗುರಿಯಾಗಿದ್ದ ಇಬ್ಬರು ಅರ್ಜಿದಾರರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್‌ನ ಔರಂಗಬಾದ್ ದ್ವಿಸದಸ್ಯ ಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದೆ.
ನ್ಯಾಯಮೂರ್ತಿ ತಾನಾಜಿ ವಿ ನಲವಾಡ ಮತ್ತು ಮುಕುಂದ್ ಜಿ ಸೇವಲಿಕರ್ ಪೀಠದ ಮುಂದೆ ಅರುಣ್ ತಗಡ್ ಮತ್ತು ಶೈಲೇಂದ್ರ ತಗಡ್ ಅಕ್ರಮ ಜೈಲುವಾಸಕ್ಕೆ ಕಾರಣರಾದವರಿಂದ ತಮಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಿಸಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!
ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ, ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ಸೂಕ್ತ ಸ್ಪಷ್ಟೀಕರಣ ನೀಡಬೇಕು. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಕೆಳಹಂತದ ಪೊಲೀಸರಿಗೆ ಈ ಸಂಬಂಧ ಸ್ಪಷ್ಟ ಸೂಚನೆಗಳನ್ನು ಕೊಡಬೇಕೆಂದು ನಿರ್ದೇಶನ ನೀಡಿದೆ.
28 ಜನವರಿ 2013ರಂದು ಬೀಡ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ, 35 ವರ್ಷದ ಮಹಿಳೆಯೊಬ್ಬರು, “ತನಗೆ ನೀರಿನಲ್ಲಿ ಎತ್ತುಗಳು ಮತ್ತು ಗಾಡಿಯನ್ನು ಇಳಿಸಲು ಅವಕಾಶ ನೀಡದೆ, ನನ್ನ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದು ತನ್ನ ಮೇಲೆ ಹಲ್ಲೆ ನಡೆಸಿದ್ದರು. ಹೀಗಾಗಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದು ಅರ್ಜಿದಾರರ ವಿರುದ್ಧ ದೂರು ನೀಡಿದ್ದರು. ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದರು.
ಇದನ್ನೂ ಓದಿ: ’ಆಝಾದಿ’ ಘೋಷಣೆ ಕೂಗಿದ್ದಾರೆಂದು 6 ವಿದ್ಯಾರ್ಥಿಗಳ ಮೇಲೆ ದೇಶದ್ರೋಹಿ ಪ್ರಕರಣ ದಾಖಲು
30 ಜನವರಿ 2013ರಂದು ಪೊಲೀಸರು ಅರ್ಜಿದಾರರ ವಿರುದ್ಧ ಐಪಿಸಿ 323, 324, 504 ಮತ್ತು 306 ಸೆಕ್ಷನ್ ಅಡಿ ಕೇಸು ದಾಖಲಿಸಿ ಬಂಧಿಸಿದ್ದರು. ನಂತರ ಆರೋಪಿಗಳನ್ನು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗಳಿಂದ ವೈಯಕ್ತಿಕ ಬಾಂಡ್ ಮತ್ತು ಭದ್ರತೆ ಪಡೆದು ಬಿಡುಗಡೆ ಮಾಡಿದ್ದರು.
ಇದಾದ ಬಳಿಕ ಪೊಲೀಸರು ಎರಡನೇ ಬಾರಿಯೂ ಆರೋಪಿಗಳನ್ನು ಬಂಧಿಸಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಆರೋಪಿಗಳಿಗೆ ತಲಾ 25 ಸಾವಿರ ರೂ.ಗಳ ಭದ್ರತೆ ನೀಡಬೇಕೆಂದು ಮಧ್ಯಂತರ ನಿರ್ದೇಶನ ನೀಡಿದ್ದರು.
ಇದನ್ನು ಪ್ರಶ್ನಿಸಿ ಅರ್ಜಿದಾರರು 31 ಜನವರಿ 2013ರಲ್ಲಿ ರಿಟ್ ಸಲ್ಲಿಸಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರ ಮುಂದೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೂ 30 ಜನವರಿ 2013 ರಿಂದ ಫೆಬ್ರವರಿ 5, 2013 ರವರೆಗೂ ಅರ್ಜಿದಾರರನ್ನು ಅಕ್ರಮವಾಗಿ ಜೈಲಲ್ಲಿ ಇಡಲಾಗಿತ್ತು.
ಇದನ್ನೂ ಓದಿ: ’ಕನ್ನಡ ಪ್ರಭ’ದ ಮಾಜಿ ಉದ್ಯೋಗಿಯ ಡೆತ್ ನೋಟ್: ತನಿಖೆಗೆ ಆಗ್ರಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ…
ಅರ್ಜಿದಾರರ ಪರ ವಾದ ಮಂಡಿಸಿದ ನ್ಯಾಯವಾದಿ ಎನ್.ಆರ್. ಥೋರಟ್, “ಪೊಲೀಸರು ಮತ್ತು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವಶ್ಯಕ ಆದೇಶ ಹೊರಡಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅರ್ಜಿದಾರರು ಅಕ್ರಮವಾಗಿ ಜೈಲಲ್ಲಿ ಇರುವಂತಾಯಿತು. ಅರ್ಜಿದಾರರು ಅಪರಾಧಿಗಳಲ್ಲ. ಶೈಲೇಂದ್ರ ತಗಡ್ ಈ ಅವಧಿಯಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅರುಣ್ ತಗಡ್ ಸ್ಥಳೀಯವಾಗಿ ಹೆಸರು ಮಾಡಿದ್ದರು ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದರು. ಇವರ ಬಂಧನ ಮತ್ತು ಅಕ್ರಮ ಸೆರೆವಾಸ ಕಾನೂನುಬಾಹಿರವಾಗಿದೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದರು.
ವಾದವನ್ನು ಆಲಿಸಿದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು, “ಈ ಪ್ರಕರಣದ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ಜವಾಬ್ದಾರಿಗಳೇನೆಂಬುದನ್ನು ತಿಳಿಸಬೇಕು. ಜೊತೆಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಕೆಳಹಂತದ ಪೊಲೀಸರಿಗೆ ಆಗತ್ಯ ಸೂಚನೆಗಳನ್ನು ನೀಡಬೇಕೆಂದು” ಪೀಠ ನಿರ್ದೇಶನ ನೀಡಿದೆ ಎಂದು ದಿವೈರ್.ಇನ್ ವರದಿ ಮಾಡಿದೆ.
ಇದನ್ನೂ ಓದಿ: ಶಿವಮೊಗ್ಗ: Jio ಇಂದ Airtel ಗೆ ಸಾಮೂಹಿಕವಾಗಿ ಪೋರ್ಟ್ ಆದ ರೈತ ಹೋರಾಟಗಾರರು!


