Homeಕರ್ನಾಟಕಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

- Advertisement -
- Advertisement -

| ಸೋಮಶೇಖರ ಚಲ್ಯ |
ಸಕ್ಕರೆ ನಾಡು ಎನ್ನುವ ಹೆಗ್ಗಳಿಕೆ ಇರುವ ಮಂಡ್ಯ ಈಗೀಗ ಗುರುತಿಸಿಕೊಳ್ಳುತ್ತಿರುವುದು ಹಲವು ಕುಖ್ಯಾತ ಕಾರಣಗಳಿಂದ. ರೈತರ ಆತ್ಮಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿಯಾಧಾರಿತ ದೌರ್ಜನ್ಯಗಳ ಕುಖ್ಯಾತಿಯ ಪಟ್ಟಿಯಲ್ಲಿ ಮಂಡ್ಯ ಮೊದಲ ಶ್ರೇಣಿಯಲ್ಲಿರುವುದು ಮಂಡ್ಯದ ಘನತೆಯನ್ನು ಕುಂದಿಸುತ್ತಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ, ಕಲ್ಲಿನ ಕ್ವಾರೆಗಳಲ್ಲಿ ನಿಗೂಢ ಸಾವುಗಳು. ಕೆಆರ್‍ಎಸ್ ಸುತ್ತಮುತ್ತಲಿನ ಶ್ರೀರಂಗಪಟ್ಟಣ, ಬೇಬಿ ಬೆಟ್ಟ ಮುಂತಾದ ಹಲವಾರು ಪ್ರದೇಶಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಾಜಕೀಯ ಬಲ ಹಾಗೂ ತೋಳ್ಬಲಗಳಿಂದ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದರಿಂದಾಗಿ ಆ ಪ್ರದೇಶಗಳು ಬಳ್ಳಾರಿಯಂತಹ ಮೈನಿಂಗ್ ತಾಣಗಳಂತೆ ಕಾಣುತ್ತಿದ್ದು, ಮಂಡ್ಯದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ಗಣಿಗಾರಿಕೆಗಳಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೂ ಅಪಾಯ ಬಂದಿದೆಯೆಂದು, ಅದರ ಉಳಿವಿಗಾಗಿ ಮೈನಿಂಗ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ.

ಇದೆಲ್ಲದರ ನಡುವೆ ಕ್ವಾರೆಗಳಲ್ಲಿ ಕೂಲಿ ಕೆಲಸ ಮಾಡುವ ಜನರ ಸಾವುಗಳು ಸರಣಿ ರೀತಿಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ಸಾವುಗಳಿಗೆ ಕಾರಣವನ್ನು ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸೋತಿರುವುದು ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್ 20ರ ರಾತ್ರಿ ಮತ್ತೊಬ್ಬ ಕೂಲಿ ಕಾರ್ಮಿಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಕ್ವಾರೆಯಲ್ಲಿ ರಾತ್ರಿ 11 ಗಂಟೆಯ ವೇಳೆಗೆ ಕಂಪ್ರೆಸರ್ ಮೂಲಕ ಕುಳಿ ತೋಡಲು ಹೋಗಿದ್ದ ಕಾರ್ಮಿಕ ರಾಜು ಸಾವನ್ನಪ್ಪಿದ್ದಾನೆ. ಹಿಂದೆ ಒಂದು ಸಾರಿ ಕಲ್ಲನ್ನು ಸಿಡಿಸಲು ತೆಗೆದಿದ್ದ ಹಳೇ ಕುಳಿಯಲ್ಲಿ ಸಿಡಿಮದ್ದು ತುಂಬಿಯೂ ಅದು ಸಿಡಿದಿರಲಿಲ್ಲ. ಈಗ ಅದೇ ಸಿಡಿಮದ್ದು ತುಂಬಿದ್ದ ಕುಳಿಯಲ್ಲಿ ಮತ್ತೆ ಕುಳಿ ತೆಗೆದು ಸಿಡಿಸಲು ಹೋಗಿದ್ದಾರೆ. ಮೊದಲೇ ತುಂಬಿದ್ದ ಸಿಡಿಮದ್ದು ಕುಳಿ ಹಾಕುತ್ತಿದ್ದಂತೆಯೇ ಸಿಡಿದು ಹೋಗಿದೆ. ಇದರಿಂದ ರಾಜು ಸಾವನ್ನಪ್ಪಿದ್ದಾನೆ, ಆತನ ಸಂಬಂಧಿ ಮುನಿಯಪ್ಪನಿಗೆ ಕೈ ಮುರಿದಿದೆ. ಆದರೆ, ಕ್ವಾರೆಯ ಮಾಲೀಕರಾದ ಮೀನಾಕ್ಷಿ, ನಂಜೇಗೌಡ ಮತ್ತು ಸಂತೋಷ್ ಕಂಪ್ರೇಸರ್ ಟ್ರ್ಯಾಕ್ಟರ್ ಮಗುಚಿ ಆತ ಸಾವಿನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಪ್ರೊ.ಹುಲ್ಕೆರೆ ಮಹದೇವ ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ಮೊದಲೇನಲ್ಲ. ರಾಜ್ಯದ ಹಲವಾರು ಹಳ್ಳಿಗಳಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಉದ್ಯೋಗಗಳನ್ನು ಅರಸಿ ಬರುತ್ತಾರೆ. ಅಂತಹ ಜನರಿಗೆ ಒಂದಷ್ಟು ಮೊತ್ತದ ದುಡ್ಡು ಕೊಟ್ಟು ಇಂತಿಷ್ಟು ವರ್ಷಗಳಿಗೆ ಎಂದು ಜೀತದ ರೀತಿಯಲ್ಲಿ ದುಡಿಸಿಕೊಳ್ಳುವುದು ಕ್ವಾರೆಗಳಲ್ಲಿ ಇನ್ನು ತಪ್ಪಿಲ್ಲ. ದಾರುಣ ಬಡತನದಲ್ಲಿರುವ ಜನ ಈಗಲೂ ಜೀತದಾಳುಗಳಾಗಿ ಬಂದು ದುಡಿಯುತ್ತಿದ್ದಾರೆ.

ಇದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯ ಪ್ರಕರಣಗಳು ಎಲ್ಲರಿಗೂ ನೆನಪಿದ್ದೇ ಇರುತ್ತದೆ. 18 ವರ್ಷಗಳ ಹಿಂದೆ, ಹಂಗರಹಳ್ಳಿಯಲ್ಲಿ ಕಾಲಿಗೆ ಕೋಳ ತೊಡಿಸಿ ಕಾರ್ಮಿಕರು ಎಲ್ಲೂ ಹೋಗದಂತೆ ಒಂದೇ ಕಡೆ ಕಟ್ಟಿ ದುಡಿಸಲಾಗುತ್ತಿತ್ತು. ರೈತಸಂಘವು ಅದನ್ನು ಬಯಲಿಗೆ ತಂದನಂತರ ದೇಶಾದ್ಯಂತ ಸುದ್ದಿ ಆಗಿತ್ತು. ನಂತರದಲ್ಲಿ ಆ ಸಂತ್ರಸ್ತರನ್ನೇ ಹೆದರಿಸಿ, ತಮಗೆ ಸಿನೆಮಾ ಶೂಟಿಂಗ್ ಕಾರಣಕ್ಕೆ ಕೋಳ ತೊಡಿಸಲಾಗಿತ್ತೆಂದು ಸಾಕ್ಷಿ ನುಡಿಸಿದ್ದರು. ಅಂತಿಮವಾಗಿ ಕೇಸು ಬಿದ್ದುಹೋಗಿತ್ತು. ಇಷ್ಟಾದ ನಂತರ ಇದೇ ಹಂಗರಹಳ್ಳಿಯಲ್ಲಿ 2018ರ ಅಕ್ಟೋಬರ್‍ನಲ್ಲಿಯೂ ತನ್ನ ದುಡಿಮೆಯ ಲೆಕ್ಕ ಕೇಳಿದ ಕರಿಯಪ್ಪ ಮಾದರ್ ಎಂಬ ಜೀತಗಾರನನ್ನು ಕೊಂದು ನೇಣುಹಾಕಲಾಗಿತ್ತೆಂದು ಹೇಳಲು ಹಲವು ಸಾಂದರ್ಭಿಕ ಸಾಕ್ಷ್ಯಗಳಿದ್ದವು. ಆಗಲೂ ಪ್ರಕರಣ ಮುಚ್ಚಿಹೋಗದಂತೆ ಸ್ಥಳೀಯ ಹೋರಾಟಗಾರರು ಅದನ್ನು ಬೆಳಕಿಗೆ ತಂದಿದ್ದರು. ಅದೇ ಸಮಯದಲ್ಲಿ ಮದ್ದೂರಿನ ಕುದುರುಗುಂಡಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಜೀತಕ್ಕಿರಿಸಿಕೊಂಡು ದುಡಿಸಲಾಗುತ್ತಿತ್ತು. ಆಕೆ ಜೀತವನ್ನು ನಿರಾಕರಿಸಿ ಹೊರಹೋಗಿದ್ದರಿಂದ, ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯಗಳ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನೂ ಮಾಡಿದ್ದೆವು.

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

ರಾತ್ರಿಯ ವೇಳೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸುವುದರಿಂದ ರಾಜು ಮತ್ತು ಮುನಿಯಪ್ಪ ಕ್ವಾರೆಯಲ್ಲಿ ಕುಳಿ ತೆಗೆಯಲು ಬಂದಿದ್ದಾಗ ಈ ಘಟನೆ ನಡೆದಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ಶವವನ್ನು ಪೊಲೀಸ್ ಮಹಜರ್ ಮಾಡುವುದಕ್ಕೂ ಮೊದಲೇ ಯಾರಿಗೂ ತಿಳಿಯದಂತೆ ಜಲ್ಲಿ ಕ್ರಷರ್‍ನಲ್ಲಿ ಅಡಗಿಸಿಟ್ಟಿದ್ದಾರೆ. ಕ್ರಷರ್ ಬಳಿಗೆ ಯಾರೂ ಬಾರದಂತೆ ರಸ್ತೆಯಲ್ಲಿ ಗುಂಡಿ ತೋಡಿದ್ದಾರೆ. ಬೆಳಗ್ಗೆಯ ವೇಳೆಗೆ ಆತನ ಕುಟುಂಬಕ್ಕೆ 4.5 ಲಕ್ಷದಷ್ಟು ಹಣ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಆ ಸಮಯಕ್ಕೆ ಘಟನೆಯ ವಿಷಯ ಅಕ್ಕ-ಪಕ್ಕದವರಿಗೆ ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.

ಜೂನ್ 21ರಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರ ಹಿರಿಯ ಹೋರಾಟಗಾರರಿಗೆ ವಿಷಯ ತಿಳಿದಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರನ್ನು ವಿಚಾರಿಸಿದ್ದಾರೆ. ತಹಶೀಲ್ದಾರ್ ಆ ವಿಷಯ ತಮಗೆ ತಿಳಿದೇ ಇಲ್ಲವೆಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅರಕೆರೆ ಪೊಲೀಸರೂ ತಮಗೂ ವಿಷಯ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಇಂಥದೊಂದು ಘಟನೆ ನಡೆದಿದೆ, ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಗಾರರು ಹೇಳುವಾಗ, ಆ ಮಾಲೀಕ ದಲಿತ ಜಾತಿಗೆ ಸೇರಿದವರು ಏನ್ ಮಾಡ್ತಿರಾ ಎಂದು ಅರಕೆರೆ ಪೊಲೀಸ್ ಠಾಣೆಯ ಎಸ್‍ಐ ಹೇಳಿದ್ದಾರೆ. ಇದು ಪೊಲೀಸರು ಕ್ವಾರೆಯ ಮಾಲೀಕರೊಂದಿಗೆ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದು ಅವರ ಆರೋಪ. ಮೊದಲೇ ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿರುವುದು ಹಸಿಹಸಿಯಾಗಿ ಬಯಲಾದ ನಂತರ ಅವರು ತಬ್ಬಿಬ್ಬಾದರು ಮತ್ತು ಆಗ ಪೊಲೀಸರು ಮತ್ತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡೆವೆಂದು ಹೇಳಿದ್ದಾರೆ.

ನಂತರ ಸಂಜೆ 4.30ರ ವೇಳೆಗೆ ಮೈಸೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ತಂದಿದ್ದಾರೆ. ಅಲ್ಲಿಯವರೆಗೂ ಶವ ಎಲ್ಲಿತ್ತು ಎಂಬ ಸುಳಿವೇ ಸಿಕ್ಕಿಲ್ಲ, ಮಹಜರ್ ಸಹಾ ಮಾಡಲಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‍ಐಆರ್ ಆಗದೆ ಪೋಸ್ಟ್‍ಮಾರ್ಟಂ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅಪಘಾತ ಸಾವು ಎಂದು ಎಫ್‍ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಪ್ರೆಸರ್ ಟ್ರ್ಯಾಕ್ಟರ್ ಮೇಲಿತ್ತು, ನಾವು ಹೋಗುವ ಸಮಯದಲ್ಲಿ ಅದು ಉರುಳಿಬಿತ್ತು ಎಂದು ಮುನಿಯಪ್ಪ ಹೇಳಿಕೆ ನೀಡಿದ್ದಾನೆ. ಆದರೆ ಈ ಹೇಳಿಕೆಯು ಮಾಲೀಕರ ಮೇಲಿನ ಭಯದಿಂದ ಬಂದಿದೆ ಎಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹಜರು ಮಾಡದೆ ಮತ್ತು ಎಫ್‍ಐಆರ್ ಹಾಕದೆ ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಹಜರ್ ಮಾಡದೇ ಶವವನ್ನ ತೆಗೆದಿದ್ದು ಯಾಕೆ? ಯಾರು ಆ ಸ್ಥಳಕ್ಕೆ ಬಾರದಂತೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು ಯಾಕೆ? ಎಫ್‍ಐಆರ್ ದಾಖಲಿಸದೇ ಪೋಸ್ಟ್ ಮಾರ್ಟಮ್‍ಗೆ ತೆಗೆದುಕೊಂಡು ಹೋಗಿದ್ದಾರೆ, ಅಲ್ಲಿಯವರೆಗೆ ಶವ ಎಲ್ಲಿತ್ತು? ಶವವನ್ನು ಬಚ್ಚಿಟ್ಟಿದ್ದು ಯಾಕೆ? ಇಷ್ಟೆಲ್ಲಾ ಆದರೂ ಪೊಲೀಸರು ಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಯಾಕೆ? ಇವೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಪೋಸ್ಟ್‍ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿಲ್ಲ.

ಈಗಲಾದರೂ ಇದನ್ನೊಂದು ಪ್ರತ್ಯೇಕ ಆಕಸ್ಮಿಕ ಘಟನೆ ಎಂದು ನೋಡದೇ, ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ, ನಿಗೂಢ ಸಾವುಗಳು ಇದರ ಕುರಿತಂತೆ ಸಮಗ್ರ ತನಿಖೆ ಹಾಗೂ ಕ್ರಮಗಳು ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...