ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್‌ಎಸ್‌ಎ) ಬಂಧನದಲ್ಲಿರುವ ಉತ್ತರ ಪ್ರದೇಶದ ಡಾ.ಕಫೀಲ್ ಖಾನ್ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ಅವರ ಮೇಲಿನ NSA ಪ್ರಕರಣ ಕೈಬಿಡುವಂತೆ ಇಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ಸಿಎಎ ವಿರೋಧಿ ಹೋರಾಟಗಳು ಉತ್ತುಂಗದಲ್ಲಿದ್ದಾಗ 2019 ರ ಡಿಸೆಂಬರ್ 13 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಾ.ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಮುಂಬೈನಲ್ಲಿ ಬಂಧಿಸಲಾಗಿತ್ತು.
ಕಫೀಲ್ ಖಾನ್‌ರವರ ಭಾಷಣವು ಹಿಂಸೆಯನ್ನು ಪ್ರಚೋದಿಸುವಂತಿರಲಿಲ್ಲ. ಅದು ರಾಷ್ಟ್ರೀಯ ಏಕತೆ ಮತ್ತು ಜನರ ನಡುವೆ ಭಾವೈಕ್ಯತೆಯನ್ನು ಸಾರುವಂತೆ ಕರೆ ಕೊಡುವಂತಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಡಾ.ಕಫೀಲ್ ಖಾನ್ ಈ ಹಿಂದೆ ಹಲವು ಮನವಿಗಳನ್ನು ಮಾಡಿದ್ದರು. ಕೊನೆಗೂ ಅವರ ಅರ್ಜಿಯನ್ನು ಮಾನ್ಯ ಮಾಡಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾ.ಸುಮಿತ್ರಾ ದಯಾಳ್ ಸಿಂಗ್ ಮತ್ತು ನ್ಯಾ.ಗೋವಿಂದ ಮಾಥೂರ್ ಅವರಿದ್ದ ಪೀಠವು ಅವರ ಬಿಡುಗಡೆಗೆ ಸರ್ಕಾರಕ್ಕೆ ಸೂಚಿಸಿದೆ.
“ನಾವು ಅವರನ್ನು ಮಥುರಾ ಜೈಲಿನಲ್ಲಿ ಭೇಟಿಯಾಗಲು ಹೋದೆವು. ಬಂಧನಕ್ಕೊಳಗಾದ ನಂತರ ಅವರನ್ನು ಜೈಲಿಗೆ ಕರೆತಂದಾಗ, ಐದು ದಿನಗಳ ಕಾಲ ಅವರಿಗೆ ಆಹಾರವನ್ನು ನೀಡಲ್ಲ ಎಂದು ಅವರು ನನಗೆ ಹೇಳಿದರು. ಅವರು ತಂಗಿರುವ ಬ್ಯಾರಕ್ ತುಂಬಾ ಚಿಕ್ಕದಾಗಿದ್ದು, ಸುಮಾರು 100-150 ಜನರನ್ನು ಅಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅವರ ಜೀವವು ಅಲ್ಲಿ ಅಪಾಯದಲ್ಲಿರಬಹುದು” ಎಂದು ಹಿಂದೆ ಖಾನ್ ಪತ್ನಿ ಶಬಿಸ್ಟಾ ಖಾನ್ ಹೈಕೋರ್ಟ್‌ಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಡಾ.ಕಫೀಲ್ ಖಾನ್ ಜೀವಕ್ಕೆ ಅಪಾಯವಿದೆ : ಖಾನ್ ಪತ್ನಿಯ ಆರೋಪ
ಫೆಬ್ರವರಿ 13ರಂದು ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ಹೊರಿಸಿದ್ದು ಪ್ರಸ್ತುತ ಮಥುರಾ ಜೈಲಿನಲ್ಲಿದ್ದಾರೆ. ಆಗಸ್ಟ್ 16ರಂದು NSA ಪ್ರಕರಣದಲ್ಲಿ ಇನ್ನು ಮೂರು ತಿಂಗಳ ಕಾಲ ಅವರ ಬಂಧನವನ್ನು ವಿಸ್ತರಿಸುವಂತೆ ಕೇಳಿಕೊಳ್ಳಲಾಗಿತ್ತು.
ಆದರೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಎನ್‌ಎಸ್‌ಎ ಕಾಯಿದೆಯಡಿ ಡಾ. ಕಫೀಲ್ ಖಾನ್ ಬಂಧನ ಕಾನೂನಿನಡಿ ಮಾನ್ಯವಲ್ಲ. ಹಾಗಾಗಿ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಹೇಳಿದೆ.
ಇದನ್ನೂ ಓದಿ: ಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್‌ಖಾನ್


